ಪುಟ:Kalyaand-asvaami.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಆಗಲಿ ಕರ್ತು,"ಎಂದ ಪುಟ್ಟ ಬಸವ.

ಆತನೂ ಉಡುಪು ಕಳಚಿ ಕೈಕಾಲು ತೊಳೆದು ಬಂದ.ತೇಗು ತೊಂದರೆಕೊಡುತ್ತಿತ್ತೆಂದು ಒಂದು ಲೋಟ ನೀರು ಕುಡಿದ.

"ದೀಪ ಆರಿಸ್ಲಾ?"ಎಂದು ಗಿರಿಜವ್ವ ಕೇಳಿದಳು.

"ಹೂಂ."

ಗಿರಿಜಾ 'ಫೂ'ಎಂದು ಉಸಿರುಬಿಟ್ಟಳು.ದೀಪ ಆರಿ ಹೋಯಿತು.ಆ ಕತ್ತಲೆಯಲ್ಲಿ ಪುಟ್ಟಬಸವ ಮೈಮುರಿದು 'ಶಿವಾ'ಎಂದು ದಿಂಬಿನ ಮೇಲೆ ತಲೆ ಇರಿಸಿದ.

ಆತನ ಮಗ್ಗುಲಲ್ಲೇ ಮಲಗಿಕೊಂಡ ಗಿರಿಜಾ,ಗಂಡನ ಎದೆಯ ವಿಸ್ತಾರದ ಮೇಲೆ ತನ್ನ ಅಂಗೈ ಇರಿಸಿದಳು.

ಆಕೆ ಕೇಳಿದಳು:

"ಭಾರೀ ದಣಿವಾಗೈತಾ?"

"ದಣಿವು?ಏನು ಕಡಿದಿದೀನಿ ಅಂತ?ಸೋಮಯ್ಯನ ಮನೆವರೆಗೆ ಒಂದ್ಸಲ ಹೋಗ್ಬಂದ್ರೆ ಸುಸ್ತಾಗ್ತದಾ?"

"ಸಾವಿರ ಹರದಾರಿ ಸವಾರಿ ಮಾಡಿದ್ರೂ ನನ್ನ ರಾಜರಿಗೆ ಸುಸ್ತಾಗಾಕಿಲ್ಲ,ಅಲ್ವಾ?"

ರಾಜರು.ಪುಟ್ಟಬಸವ ಸಣ್ಣನೆ ನಕ್ಕ.ಹೆಂಡತಿಗೆ ಹೇಳಬೇಕು ತಾನು.ಆ ಜನರೆಲ್ಲ ತನ್ನಲ್ಲಿಟ್ಟಿದ್ದ ವಿಶ್ವಾಸ,ಕೈಗೊಳ್ಳಲಾದ ತೀರ್ಪು,ತಾನು ಹೊರಡಬೇಕಾದ ಪ್ರಮೇಯ...

ಹೇಗೆ ಆರಂಭಿಸಲೆಂದು ಆತ ಯೋಚಿಸುತ್ತಿದ್ದಂತೆ,ಒಳಗಿನಿಂದ ಗಂಗವ್ವನ ಸ್ವರ ಕೇಳಿಸಿತು:

"ಬಂದಿಯಾ ಪುಟ್ಟಬಸ್ಯಾ?ಬಂದಿಯಾ ಮಗನೇ?"

ನಿದ್ದೆಯಿಂದ ಮಸಕಾಗಿದ್ದ ಸ್ವರ

"ಹೂನವ್ವಾ.ನೀನು ಮಲಕೋ."

"ಹೂಂ"

ಸ್ವಲ್ಪ ಹೊತ್ತು ಮೌನ ನೆಲೆಸಿತು.ಬಳಿಕ ಗಿರಿಜಾ ಹೇಳಿದಳು:

"ಈಚೀಚೆಗೆ ಅತ್ತೆಯವರಿಗೆ ನಿಮ್ಮ ನೆನಪು ಜಾಸ್ತಿಯಾಗೇತೆ"