ಪುಟ:Kannadigara Karma Kathe.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೮

ಕನ್ನಡಿಗರ ಕರ್ಮಕಥೆ

ಸಂಗೋಪವನ್ನಾದರೂ ಯಾಕೆ ಮಾಡಿಸಿದಿ ? ಆತನು ಹುಟ್ಟುತ್ತಲೇ ಸತ್ತುಹೋಗಿದ್ದರೆ ನೆಟ್ಟಗಾಗುತ್ತಿದ್ದಿಲ್ಲವೆ ? ನಾನು ಆತನ ಮಾಯಾಪಾಶದಲ್ಲಿ ಸಿಕ್ಕಿಕೊಳ್ಳದೆ ಅನನ್ಯಭಾವದಿಂದ ನಿನ್ನ ಆರಾಧನೆಯನ್ನಾದರೂ ಮಾಡುತ್ತಿದ್ದೆನು. ಪರಮೇಶ್ವರಾ ಈಗ ನಾನು ಆನನ್ಯಭಾವ ದಿಂದ ನಿನ್ನಲ್ಲಿ ಲೀನಳಾಗಿರುವುದಿಲ್ಲ. ನಿನ್ನಲ್ಲಿ ಅರ್ಧಭಾವವನ್ನೂ, ಮಗನಲ್ಲಿ ಅರ್ಧ ಭಾವವನ್ನೂ ಇಟ್ಟಿರುವೆನು. ಈ ತಪ್ಪಿಗಾಗಿಯೇ ನನ್ನನ್ನು ನೀನು ಹೀಗೆ ದಂಡಿಸಿರುವದಿಲ್ಲಷ್ಟೆ ? ಎಂಥಾ ಭಯಂಕರ ಶಿಕ್ಷೆ ಇದು ! ಹೊಟ್ಟೆಯ ಮಗನಿಂದ ಇಂಥ ಭಯಂಕರ ಶಿಕ್ಷೆಯನ್ನು ಅನುಭವಿಸುವದಕ್ಕಿಂತ ಸಾವು ಬಂದರೆ ನೆಟ್ಟಗಲ್ಲವೆ ? ಎಂದು ಆಲೋಚಿಸಹತ್ತಿದರು. ಹೀಗೆ ಆಲೋಚಿಸುವಾಗ ಅವರಿಗೆ ಅಂದು ಮುಂಜಾವಿನಲ್ಲಿ ಬಿದ್ದಿದ್ದ ಸ್ವಪ್ನದ ನೆನಪಾಯಿತು. ತಮ್ಮ ಮಗನು ತಮ್ಮನ್ನು ಪರ್ವತದ ಕೆಳಗೆ ದೂಡಿಕೊಟ್ಟಿದ್ದರ ಚಿತ್ರವು ಅವರ ಕಣ್ಣಿಗೆ ಕಟ್ಟಿತು. ಅವರು ಮನಸಿಸನಲ್ಲಿ- “ಆ ಕೆಟ್ಟ ಕನಸು ಬಿದ್ದಿದ್ದರಿಂದಲೇ ನಾನು ಇಂಥ ಅನರ್ಥದ ಸುದ್ದಿಯನ್ನು ಕೇಳಿದೆನು. ಈ ಅನರ್ಥವನ್ನು ಸೂಚಿಸುವದಕ್ಕಾಗಿಯೇ ನನಗೆ ಆ ಕನಸು ಬಿದ್ದಿರಬಹುದೋ? ಹೌದು, ಹಾಗಲ್ಲದಿದ್ದರೆ ಅಂಥ ಭಯಂಕರ ಸ್ವಪ್ನವು ಹ್ಯಾಗೆ ಬೀಳುವದು? ನಾನು ಇನ್ನು ಏನು ಮಾಡಲಿ ! ಈ ಕುಂಜವನದ ವಾಸವು ಇನ್ನು ನನಗೆ ಯಾತಕ್ಕೆ ? ಇದರ ಸಂಬಂಧವು ನನಗೆ ಏಕೆ? ಇನ್ನು ಮೇಲೆ ನನ್ನನ್ನು ಇಲ್ಲಿ ಇರಗೊಡುವವರಾದರೂ ಯಾರು? ಇರಗೊಟ್ಟರೂ ನಾನು ಇರಬೇಕೇಕೆ ? ಇನ್ನು ನಾನು ಹೋಗುವುದಾದರೂ ಎಲ್ಲಿಗೆ ? ಮಗನು ಮುಸಲ್ಮಾನರ ವೈರಿಯನ್ನು ಕೂಡಿಕೊಂಡಿದ್ದರಿಂದ ನಾನು ಯಾವ ಮೋರೆಯಿಂದ ಮುಸಲ್ಮಾನರ ರಾಜ್ಯದಲ್ಲಿ ಆಶ್ರಯವನ್ನು ಪಡೆಯಲಿ ? ವಿಜಾಪುರಕ್ಕೆ ಹೋದರೆ, ಜನರು ನನ್ನನ್ನು ಎಷ್ಟು ನಿರಾಕರಿಸಬಹುದಲ್ಲ ! ಜನರು ನನ್ನ ಕಡೆಗೆ ಬೆರಳು ಮಾಡಿ- “ಈ ಚಂಡಾಲಳ ಮಾತಿಗೆ ಮರುಳಾಗಿಯೇ ಬಾದಶಹರು ರಣಮಸ್ತಖಾನನನ್ನು ದೊಡ್ಡ ಪದವಿಗೆ ಏರಿಸಿದರು; ಮತ್ತು ಎಷ್ಟೋ ಜನರು ಅನುಭವಿಕರಿದ್ದರೂ, ಅವರನ್ನೆಲ್ಲ ಬಿಟ್ಟು ವಿಜಯನಗರದಂಥ ರಾಜ್ಯದ ದರ್ಬಾರದಲ್ಲಿ ರಣಮಸ್ತಖಾನನನ್ನು ವಕೀಲನನ್ನಾಗಿ ಬಾದಶಹರು ಕಳಿಸಿದ್ದು, ಈ ದುಷ್ಟಳ ಮಾತಿನಿಂದಲೇ, ಆದರೆ ಕಡೆಗೆ ಆ ಅಧಮ ರಣಮಸ್ತನು ತನ್ನ ಮೋರೆಗೆ ಕಪ್ಪು ಬಡಕೊಂಡದ್ದಲ್ಲದೆ ಬಾದಶಹರ ಗೌರವಕ್ಕೂ ಬಾಧೆ ತಂದನು, ಎಂದು ಜನರು ದೂರಿಕೊಳ್ಳುವರು. ಅಂದು ಬಳಿಕ ವಿಜಾಪುರಕ್ಕಂತು ನಾನು ಹೋಗುವಹಾಗಿಲ್ಲ. ಇನ್ನು ಬೇರೆ ಕಡೆಗೆ ನಾನು ಹೋಗುವದಾದರೂ ಯಾತಕ್ಕೆ ? ಈ ಪುಷ್ಕರಣಿಯಲ್ಲಿ ಹಾರಿಕೊಂಡುಬಿಟ್ಟರಾಯಿತು.