ವಿಷಯಕ್ಕೆ ಹೋಗು

ಪುಟ:Kedage.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಕಲೆ ಮತ್ತು ವ್ಯವಸಾಯ 27

ಈ ನಿಟ್ಟಿನಲ್ಲಿ, ವ್ಯಾವಹಾರಿಕ ಸೆಳವಿನ ಮಧ್ಯೆಯೂ ಬಡಗುತಿಟ್ಟಿನ ಮೇಳಗಳೂ - ತೆಂಕುತಿಟ್ಟಿನ ಕೆಲವು ಮೇಳಗಳೂ - ಒಂದು ಪ್ರಮಾಣದ ತೂಕ ಉಳಿಸಿಕೊಂಡಿರುವುದೂ, ನೆಮ್ಮದಿಯ ಸಂಗತಿಯಾಗಿದೆ. ಇಂತಹ ಒಂದು ಹಟದ ಸಾಧನೆಯ ಉದಾಹರಣೆ ಒಂದು ದಶಕಕಾಲ ಯಕ್ಷಗಾನದ ಸ್ವರೂಪವನ್ನು ಉಳಿಸಿಕೊಂಡು ವ್ಯವಸಾಯಿ ಮೇಳವನ್ನು ನಡೆಸಿದ ಕೆರೆಮನೆ ಶಂಭು ಹೆಗಡೆಯವರದು. ಅವರ ಸಾಹಸ, ಅನ್ಯಕಾರಣಗಳಿಂದ ಸ್ಥಗಿತಗೊಂಡಿರುವುದು ಯಕ್ಷಗಾನ ಪರಂಪರೆಗಾದ ಒಂದು ದೊಡ್ಡ ನಷ್ಟ.

ವ್ಯವಸಾಯವಾಗಿ ಯಕ್ಷಗಾನ ಉಳಿಯಬೇಕು. ಅದು ಯಕ್ಷಗಾನವಾಗಿ ಉಳಿಯಬೇಕು. ಅಲ್ಲವಾದರೆ ಬೇಡ. ಇದಕ್ಕೆ, ಕಲಾನಿಷ್ಟೆಯನ್ನು ತೋರುವ ಸ್ಥಿತಿ ಕಲಾವಿದನಿಗೆ ಬರಬೇಕು, ಅವನ ಸ್ಥಿತಿ ಉತ್ತಮಗೊಳ್ಳಬೇಕು. ಅವನಲ್ಲಿ ಅಂತಹ ಪ್ರಜ್ಞೆ ಜಾಗೃತವಾಗಿ, ಜೀವಂತವಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಯೋಚನೆ ಹರಿಯಬೇಕು.

ಯಕ್ಷಗಾನವೆಂಬುದು ಇಂದು ವ್ಯವಸಾಯವಾಗಿ ಬಿಸಿನೆಸ್ ಆಗಿ ಬೆಳೆದಿದೆ. ಇನ್ನೂ ಹಾಗೇ ಮುಂದುವರಿಯುತ್ತದೆ. ಇದೊಂದು ವಾಸ್ತವ ಸ್ಥಿತಿ. ಈ ವಾಸ್ತವವನ್ನೊಪ್ಪಿದಾಗ ಇನ್ನೂ ಕೆಲವು ಅಂಶಗಳನ್ನು ಗಮನಿಸಬೇಕಾದುದಿದೆ. ಮುಖ್ಯವಾಗಿ ಕಲಾವಿದರ ಹಿತರಕ್ಷಣೆಯ ಪ್ರಶ್ನೆ, ಕಲಾವಿದರ ಸಂಬಳ, ಸಾರಿಗೆ ಸೌಲಭ್ಯ, ನಿವೃತ್ತಿ ಜೀವನ ಇವುಗಳ ಬಗೆಗೆ ಸಮಗ್ರವಾದೊಂದು ಅಧ್ಯಯನದಿಂದ ರೂಪುಗೊಳ್ಳುವ ಸಾರ್ವತ್ರಿಕ ನಿಯಮಾವಳಿ ಜಾರಿಗೆ ಬರಬೇಕಾಗಿದೆ. ಕಲಾವಿದನ ಬದುಕು ಹೆಚ್ಚು ಭದ್ರವಾಗುವ, ಅವನ ಸೇವಾಸ್ಥಿತಿ (Working Conditions) ವ್ಯವಸ್ಥಿತವಾಗುವ ಸನ್ನಿವೇಶ ನಿರ್ಮಾಣ ಆಗಬೇಕು. ಕಲಾವಿದರ ಹಾಗೂ ರಂಗಕಾರ್ಮಿಕರ ಸಿಬಂದಿಗಳ ವೇತನ ಮುಂತಾದವುಗಳಿಗೆ ನಿಶ್ಚಿತ ವೇತನ ಶ್ರೇಣಿಗಳು ತರ್ಕಶುದ್ಧ ಆಧಾರದ ಮೇಲೆ ರೂಪಿತವಾಗಬೇಕು. ಈಗ ಇರುವ ಕಂಟ್ರಾಕ್ಟ್ ಪದ್ಧತಿಯ ಸಂಬಳದಲ್ಲಿ ವೇತನಗಳ ಅಸಮಾನತೆ ಇದೆ. ಹಿರಿತನ, ಅರ್ಹತೆಗಳಿಗೂ, ವೇತನಗಳಿಗೂ ಏನೇನೂ ಸಂಬಂಧವಿಲ್ಲದ ಸಂದರ್ಭಗಳಿವೆ, ಇದು ನಿವಾರಣೆ ಆಗಬೇಕು.

ಇದಕ್ಕೆ ಕಲಾವಿದರ ಸಂಘಟನೆಯೊಂದು ನಿರ್ಮಿತವಾಗಬೇಕು. ಅದು ಕಲಾವಿದರ ಸಮಸ್ಯೆಗಳನ್ನು ಚರ್ಚಿಸಿ ಬೇಡಿಕೆಗಳಿಗಾಗಿ ಕಾರ್ಯನಿರತವಾಗಬೇಕು. ಇಂತಹದೊಂದು ಒತ್ತಡದಿಂದ ಮಾತ್ರ ಕಲಾವಿದರ ಸ್ಥಿತಿಗತಿ ಸುಧಾರಣೆ ಆಗಬಹುದು.

ಯಕ್ಷಗಾನರಂಗಭೂಮಿ ಎಂಬುದು ಜಗತ್ತಿನ ಸಾಂಪ್ರದಾಯಿಕ ರಂಗಭೂಮಿಗಳ ಪೈಕಿ ಅತ್ಯಂತ ಜೀವಂತವಾಗಿ ಬೃಹತ್ ಪ್ರಮಾಣದಲ್ಲಿ ಕಾರನಿರತವಾಗಿರುವ