ವಿಷಯಕ್ಕೆ ಹೋಗು

ಪುಟ:Kedage.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ತಾಳಮದ್ದಲೆಯ ಮಾತುಗಾರಿಕೆ /45

ಎಂಬುದನ್ನು ಪರಿಭಾವಿಸಿದರೆ ಈ ವಿಚಾರ ಸ್ಪಷ್ಟವಾಗುತ್ತದೆ. ಹಾಡುವುದಕ್ಕೆಂದೇ ರಚಿತವಾದ ಗೀತಗಳು, ಗೇಯ ರಚನೆಗಳು, ವಿಶಿಷ್ಟ ರಾಗಗಳಲ್ಲಿ,ಮಟ್ಟುಗಳಲ್ಲಿ, ವಿಶಿಷ್ಟ ಲಯಗಳೊಂದಿಗೆ ಹಾಡಲ್ಪಡುವಾಗ ಅವು ಕಾಣಿಸುವ ರೂಪವು ಅದರ ಸಾಹಿತ್ಯಕ ರೂಪಕ್ಕಿಂತ ತೀರ ಭಿನ್ನವಾಗಿ ಎಷ್ಟೋ ಹೆಚ್ಚು ಸಶಕ್ತವಾಗಿ ಇರುವುದು ಎಲ್ಲರ ಅನುಭವ. ಇದೇ ತತ್ವ ಯಕ್ಷಗಾನದ - ವಿಶೇಷತಃ ತಾಳ ಮದ್ದಲೆಯ ಮಾತುಗಾರಿಕೆಯ ಸಂದರ್ಭದಲ್ಲಿ ಮತ್ತೊಂದು ನೆಲೆಯಲ್ಲಿ ಅನ್ವಯವಾಗುತ್ತದೆ. ಇಲ್ಲಿ ನಿರ್ಮಿತವಾಗುವ ಸಾಹಿತ್ಯ ಮಾತಿಗಾಗಿ ರಚಿತವಾಗಿರುವುದು ಮಾತ್ರವಲ್ಲ ಅದು ಮಾತಾಗಿಯೇ ರಚಿತವಾಗಿ ತತ್ಕಾಲದಲ್ಲಿ ಪ್ರದರ್ಶಿತವೂ ಆಗುತ್ತದೆ. ಹೀಗಾಗಿ ಗೀತ ಮತ್ತು ಅದರ ಗಾಯನಗಳಿರುವುದಕ್ಕಿಂತಲೂ ನಿಕಟವಾದ, ಘನಿಷ್ಠವಾದ ಏಕೀಭೂತಸಂಬಂಧ ಇಲ್ಲಿನ ಅರ್ಥಸಾಹಿತ್ಯಕ್ಕೂ, ಅದರ ಮಾತುಗಾರಿಕೆಯೆಂಬ ಸ್ವರೂಪಕ್ಕೂ ಇದೆ. ಆದುದರಿಂದ ಮಾತಾಗಿ ಅಂದರೆ ಮಾತಿನ ಶಕ್ತಿ, ಸ್ವಭಾವಗಳ ಪರಿಜ್ಞಾನದಿಂದ ಅವುಗಳನ್ನು ರಚಿಸುವ ಪ್ರತಿಭೆಯಿಂದ ಮೂಡುವ ಅರ್ಥಗಳೇ ಯಶಸ್ವಿಗಳಾಗುತ್ತವೆ. ಬರಿಯ ಸಾಹಿತ್ಯಕ ಶಕ್ತಿಯ ತಿಳಿವಿನಿಂದ ಬಂದವುಗಳಲ್ಲ. ಅಂದರೆ ಅರ್ಥಧಾರಿಯು ವಾಕ್ ಗೇಯಗಳನ್ನು ಕಲ್ಪಿಸಿ ಸಂಯೋಜಿಸಬಲ್ಲ ವಾಗ್ಗೇಯಕಾರನ ಹಾಗೆ 'ವಾಕ್ ಸಾಹಿತ್ಯಕಾರ' ನಾಗಬೇಕಾಗುತ್ತದೆ.

ಲಿಖಿತ ನಾಟಕವೊಂದು, ಮಾತಾಗುವುದು ಹೇಗೆ. ಎಷ್ಟು ಸಶಕ್ತವಾಗಿ ಅದು ಆಗಬೇಕು, ಹಾಗೆ ಮಾತಾಗಿಸುವಲ್ಲಿ ನಿರ್ದೇಶಕನು ಹೇಗೆ ಕೆಲಸ ಮಾಡಬೇಕು ಎಂಬುದು ಆಧುನಿಕ ನಾಟಕ ಮಂಚದಲ್ಲಿ ಆಳವಾದ ಅಭ್ಯಾಸದ ವಿಷಯಗಳು. ಒಳ್ಳೆಯ ರೀತಿಯಲ್ಲಿ ಮಾತಾಗಬಲ್ಲ ನಾಟಕ, ಮಾತಿನ ತತ್ತ್ವ, ಸತ್ಯಗಳಿಗೆ ಒದಗಬಲ್ಲ ನಾಟಕರಚನೆಯೇ ರಂಗದೃಷ್ಟಿಯಿಂದ ಸಫಲ ಕೃತಿ ಎನಿಸುತ್ತದೆ. ಇದೇ ತತ್ತ್ವವನ್ನು ವ್ಯಾಪಕವಾಗಿ ಅರ್ಥಗಾರಿಕೆಗೆ ಅಳವಡಿಸಬಹುದು. ಏಕೆಂದರೆ ಇಲ್ಲಿನ ಸಾಹಿತ್ಯ ಮಾತಾಗಿಯೇ ಸೃಷ್ಟಿಗೊಂಡು ಪ್ರಕಟವಾಗುತ್ತಿರುತ್ತದೆ. ಭಾಷೆಯ ಬಳಕೆಯನ್ನು, ಪ್ರಸಂಗದ ಪದ್ಯಗಳ ಸೀಮೆಗೆ ಹೊಂದಿಸಿ ಅಳವಡಿಸಿರುವುದು ಸಿದ್ಧ ಅರ್ಥಧಾರಿಗೆ ಇರಬೇಕಾದ ಮುಖ್ಯವಾದ ಗುಣ.

ಅರ್ಥಗಾರಿಕೆಯ ಭಾಷೆಯನ್ನೂ ಈಗ ಪರಿಶೀಲಿಸಬಹುದು. ಅರ್ಥಗಾರಿಕೆಗೆ ಪರಂಪರೆಯಿಂದ ಸಿದ್ಧವಾಗಿರುವ ಒಂದು ಬಗೆಯ ಭಾಷಾಶೈಲಿ ಇದೆ. ಇದನ್ನು ಸಿದ್ದ ಭಾಷೆ ಎನ್ನಬಹುದು. ಆ ಸಿದ್ದ ಭಾಷೆಯ ಪ್ರೇರಣೆಯೂ, ಸ್ವರೂಪವೂ ಸ್ವಾರಸ್ಯಕರ ರಹಸ್ಯಗಳಿಂದ ಕೂಡಿದೆ. ತಾಳಮದ್ದಲೆ ಎಂಬ ಕಲಾಪ್ರಕಾರ ಪ್ರಚಲಿತವಾಗಿರುವ ಕರ್ನಾಟಕದ ಕರಾವಳಿಯ ಜಿಲ್ಲೆಗಳ ಭಾಷಾಸ್ವರೂಪವು. ಯಕ್ಷಗಾನ ಪ್ರದರ್ಶನದ ಅಪೇಕ್ಷಿತ ಭಾಷಾರೂಪಕ್ಕೆ ಅನುಕೂಲವಾಗಿ ಒದಗಿರುವುದು