ಪುಟ:Mrutyunjaya.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪ ಮೃತ್ಯುಂಜಯ

ಬಗೆಗೆ ತನ್ನ ಗಂಡನಿಗೆ ಒಲವಿಲ್ಲವೆಂಬುದು ಅವಳಿಗೆ ತಿಳಿಯದ್ದಲ್ಲ.
  "ನಡಿ. ಬೆಸ್ ಮೂರ್ತಿಯೂ ಒಂದು ಬೇಕು" ಎಂದಳು.

ತಾಯತದವನನ್ನು ಮುತ್ತಿದ್ದ ಗುಂಪನ್ನು ಸೇರದೆ, ಆ ಮೂವರೂ ಮುಂದೆ ಸರಿದರು.

          *           *        *            * 

ಮೋಡದ ಒಂದು ಗರಿಯೂ ಇಲ್ಲದ ಶುಭ್ರ ನೀಲಿ ಆಕಾಶದಲ್ಲಿ ಉರಿಯುವ ಸೂರ್ಯ. ಜನ ಉಡುತ್ತಿದ್ದುದು ಟೊಂಕದ ಸುತ್ತಲೂ ನಡುವಸ್ತ್ರ.ಮಂಡಿಯಿಂದ ಒಂದು ಗೇಣು ಮೇಲೆ, ಹೆಂಗಸರಿಗೆ ಮಂಡಿಗಿಂತ ತುಸು ಕೆಳಗೆ.ಎದೆಯ ಮೇಲೆ ವಸ್ತ್ರದ ಚೂರು ಇದ್ದುದು ಕೆಲ ಸ್ತ್ರೀಯರಿಗೆ ಮಾತ್ರ. ಗಂಡಸರ ದೆಲ್ಲ ಬರಿಮೈ. ಎಲ್ಲರದೂ ಸೂರ್ಯತಾಪದಲ್ಲಿ ಹದಗೊಂಡ ಎಣ್ಣೆಗಪ್ಪು ಚರ್ಮ.

     ಬಿಸಿಲಿನ ಝಳಕ್ಕಿಂತ ಅಂಗಡಿಯ ಆಸರೆ ಹಿತಕರವಾಗಿತ್ತು.
     ಐಸಿಸ್ ದೇವತಾ ಮೂರ್ತಿಯನ್ನು ನೆಫಿಸ್ ಕೊಂಡಳು. ಪಿಶಾಚಿಗಳನ್ನು ಓಡಿಸುವ ದೇವತೆ ಬೆಸ್.  ಸಿಂಹದ ತಲೆ. ಕುಳ್ಳು ಆಕಾರ.  ಅದನ್ನೂ ಕೊಂಡಳು.
      ಮುಂದಿನ ಅಂಗಡಿಯಲ್ಲಿ ಮರದ ಒಂದು ಚಿಕ್ಕ ಕರಂಡಕದ ಖರೀದಿ ಆಯಿತು.ಲೆಬನನ್‍ನಿಂದ ತರಿಸಿದ್ದ ಮರ. ವಿದೇಶೀ ವಸ್ತು. ಅದನ್ನು ಬಳಸಿ ಐಗುಪ್ತದ ಕುಶಲ ಕೆಲಸಗಾರನೊಬ್ಬ ಆ  ಕರಂಡಕವನ್ನು ನಿರ್ಮಿಸಿದ್ದ.
  ಮೆನೆಪ್‍ಟಾಗೆ ಕಂಚಿನ ಚೂರಿ, ರಾಮೆರಿಪ್‍ಟಾಗೆ ಅಮೃತ ಶಿಲೆಯ ತುಣುಕುಗಳನ್ನು ಕೆತ್ತಿ ಮಾಡಿದ್ದ ಗೋಲಿಗಳು, ನೆಫಿಸ್‍ಗೆ ಎಲುಬಿನ  ಹಣೆಗೆ___ದೊರೆತುವು .
  ವಿನಿಮಯಕ್ಕೆಂದು ತಂದ ಸಾಮಗ್ರಿಗಳೆಲ್ಲ ಕೈಬಿಟ್ಟಿದ್ದುವು. ಜಾತ್ರೆಯ ವ್ಯಾಪಾರ ತೃಪ್ತಿಕರವಾಗಿ ಮುಗಿಯಿತೆಂದು ಅವರಿಗೆ ಒಂದು ಬಗೆಯ ಸಂತಸ .
  ಮೆನೆಪ್‍ಟಾ ಕಣ್ಣುಗಳಿಗೆ ಅಂಗೈ ಅಡ್ಡಮಾಡಿ ಆಕಾಶದತ್ತ ನೋಡಿದ. ರಾ ನೆತ್ತಿಯಮೇಲೆ ಬರಲು ಇನ್ನೂ ಹೊತ್ತಿತ್ತು.
    ಒಬ್ಬಳು ತರುಣಿ. ಒಂದು ಕರಡಿ. ಕುಣಿತ ನಡೆದಿತ್ತು ಒಂದೆಡೆ. ರಾಮೆರಿಪ್‍ಟಾ ತಂದೆ ತಾಯಿ ಇಬ್ಬರನ್ನೂ ಆ  ದಿಕ್ಕಿಗೆ ಎಳೆದೊಯ್ದ.