ಪುಟ:Putina Samagra Prabandhagalu.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦

ಪು.ತಿ.ನ.ಸಮಗ್ರ

ಸ್ವರ್ಣ ಸಪ್ತಾಶ್ವಸಾರಥಿಗಳು, ಅದೇ ಚೆಲುವರಾಯನ ಉತ್ಸವ! ಆದರೆ ಊರ ಮಾತೆಯರಿಗೆ ಅಂದಿನ ಉತ್ಸಾಹವಿಲ್ಲ, ಉಲ್ಲಾಸವಿಲ್ಲ, ಕುತೂಹಲವಿಲ್ಲ, ಎತ್ತಿನ ನಗಾರಿಯಿಲ್ಲ, ಭಜನೆಯ ಕುಣಿತವಿಲ್ಲ, ಧೂಪದ ಸೇವೆಯಿಲ್ಲ, ಪರಿಸೆಯ ತುತೂರಿಯಿಲ್ಲ, ಕುದುರೆಗಳ ರೆಕ್ಕೆಗಳು ಮುರಿದಿವೆ, ಸಾರಥಿಯ ಮೀಸೆ ಇಂದು ಅಷ್ಟು ಕಪ್ಪಾಗಿಲ್ಲ, ಹುರಿಯಾಗಿಯೂ ಇಲ್ಲ. ಇಂದಿವರು ಮಾನವರ ಆಟದ ಗೊಂಬೆಗಳ ದರ್ಜೆಗಿಳಿದಿದ್ದಾರೆ. ಇಂದು ಚೆಲುವರಾಯನು ಅಂತರ್ಮುಖನಾಗಿದಾನೆ. ದೃಷ್ಟಿನಿಮೀಲಿತವಾಗಿದೆ. ಇಂದವನು ಭೋಗಿಯಲ್ಲ, ಯೋಗಿ! ಇಂದಿನ ರಥಸಪ್ತಮಿಯೂ ಅಂದಿನ ಉತ್ಸವದ ನೆಳಲು. ಇಂದಿನ ಎಲ್ಲಾ ಹಬ್ಬಗಳಂತೆ, ವ್ರತಗಳಂತೆ, ನೇಮಗಳಂತೆ, ಉತ್ಸವಗಳಂತೆ ಆತ್ಮವಳಿದು, ಪೂಭೆಗುಂದಿ, ಮುಪ್ಪು ಮೂಡಿ, ಸಾವು ಸೋಕಿ, ಉಸಿರು ಮಾತ್ರ ಹೊಯ್ಯುವ ಶ್ರದ್ಧೆಯ ಶವ!- ಬ್ರೌನಿಂಗ್ ಮಹಾ ಕವಿಯು ಉಲ್ಲೇಖಿಸಿರುವ ನಂಬಿಕೆಗೆಟ್ಟ ಸಾಲ್ ಮಹಾ ಚಕ್ರವರ್ತಿಯ ಪೂತಿಬಿಂಬ!

ಹೀಗೆ ನಾನು ಅಂದು ಇಂದುಗಳನ್ನು ತುಲನಮಾಡಿ ಮುಂದಿನ ಕಲ್ಯಾಣದಲ್ಲಿ ನಂಬಿಕೆಗೆಟ್ಟು, ಖೇದಗೊಂಡು ಸಾಲ್ ಚಕ್ರವರ್ತಿಯಂತೆ ಕುಳಿತಿರುವಾಗ ಮೃದುಮಂಜುಳವಾದ ನಗೆಯೊಂದು ಕಿವಿಗೆ ಬಿತ್ತು. ವಿಚಿತ್ರವಾದ ನಗು ಅದು. ಭಾವ್ಯವ್ಯಂಜಕವಾದ ನಗು ಅದು.

``ಅಯ್ಯೊ ಮಂಕೆ, ಇದೇನು ನಿನಗೀ ಹುಚ್ಚು, ದೇವರು ಸಾಯುವುದುಂಟೇನೋ, ಶ್ರದ್ಧೆ ಸಾಯುವುದುಂಟೇನೋ, ಈ ಮುವ್ವತ್ತು ಮೂರು ಕೋಟಿ ಜೀವಗಳಲ್ಲಿ ಹುದುಗಿರುವ ಅಂತರ್ಯಾಮಿಗೆ ಕುಂದುಂಟೇನೋ? ಹಹ್ಹಹ್ಹಾ- ಮಂಕೆ, ಹುಚ್ಚೆ, ಹೊಸ ನೆರೆಗೆ ಇಂಬುಗೊಡುವುದಕ್ಕೆ ಹಳೆಯ ನೀರಿಳಿದು ಹೋಗಿ ಹೊಳೆ ಈಗ ಕೃಶವಾಗಿದೆ ಅಷ್ಟೆ. ಇದಕ್ಕೇಕೆ ತಲ್ಲಣ? ಅಂದು ಸಾಗಿ ಹೋದ ಮೆರವಣಿಗೆ ಹಿಂದಿರುಗುತ್ತದೆ, ಮಗು. ಸಂದೇಹಬೇಡ-ಆದರೆ ಇನ್ನೊಂದು ತೆರೆದ ಠೀವಿಯಲ್ಲಿ, ರೀತಿಯಲ್ಲಿ, ಬೆಡಗಿನಲ್ಲಿ, ವಿಜೃಂಭಣೆಯಲ್ಲಿ, ಇತೋಪ್ಯತಿಶಯವಾದ ವೈಭವದೊಡನೆ!-ಏಳು, ಮಂಕೆ ಏಳು.!!

ನನ್ನ ಅಪ್ಸರೆಯ ನಗು ಅದು.