ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦

ಪು.ತಿ.ನ.ಸಮಗ್ರ

ಬೆಟ್ಟ. ಆಕಾಶ ಚಿಕ್ಕದು. ಅದರ ತುಂಬ ನಕ್ಷತ್ರ ಕಾಡುಮೊಲ್ಲೆಯ ಬಳ್ಳಿ ತುರುಗಲು ತುಂಬ ಹೂ ಬಿಟ್ಟಂತೆ. ತಂಗಾಳಿಯ ನಡುಗಂಪು ಈ ನಕ್ಷತ್ರಗಳದೋ ಎಂಬಂತೆ ಒಂದೊಂದು ಸಲ ತೋರಿಬರುತ್ತದೆ, ಗುಡಿಯ ಮೇಲಿನ ಪ್ರಾಕಾರಕ್ಕೆ ನಾವೇರಿದಾಗ.

ಈ ಉತ್ಸವ ಜರುಗುವುದು ಗುಡಿಯ ಮೇಲಿನ ಬಿಸಿಲು ಮಾಳಿಗೆಯ ಪ್ರಾಕಾರಗಳಲ್ಲಿ. ಅದು ಇದರ ವೈಶಿಷ್ಟ್ಯ. ಸಾಮಾನ್ಯರಿಗೆ ವರ್ಷಕ್ಕೊಂದೇ ಸಲ ಇಲ್ಲಿಗೆ ಪ್ರವೇಶ. ದೇವರು ಬಿಜಯಮಾಡುವುದು ಇಲ್ಲಿಗೆ ಗುಟ್ಟಿನಲ್ಲಿ. ಏಕೋ ಕಾಣೆ. ಚಿನ್ನದ ಬಾಗಿಲಿನಲ್ಲಿ ದೀವಟಿಗೆ ಛತ್ರಿ ಚಾಮರ ಬಿರುದು ಬಾವಲಿಗಳನ್ನು ಹಿಡಿದುಕೊಂಡು ಮೇಳ ಮೊಳಗುತ್ತಿರಲು, ಭಕ್ತಜನ ಕಾದಿರುವಾಗ, ಬೇರೊಂದು ಬಾಗಿಲಿನಿಂದ ಒಂಟಿ ದೀವಟಿಗೆ ಮುಖವೀಣೆಯೊಡನೆ ಚೆಲುವರಾಯ ವೈಲುಮಾಳಿಗೆಗೆ ರಹಸ್ಯವಾಗಿ ಬಿಜಯ ಮಾಡಿಸುತ್ತಾನೆ. ಹಾಗೆ ಆತ ಬಿಸಿಲು ಮಾಳಿಗೆ ಸೇರಿದ ಮೇಲೆ ಕಹಳೆಯ ಸನ್ನೆಯಾಗುತ್ತದೆ. ಆಗ ಈ ಛತ್ರಿ ಚಾಮರ ತಾಳಮೇಳದವರ ಸಂಭ್ರಮದ ಓಟವನ್ನು ನೀನು ನೋಡಬೇಕು. ಬಿದ್ದಬೀಳ ಓಡುತ್ತಾರೆ. ಹರೆಯದವರಿಗೆ ಈ ಗುಂಪಿನೊಡನೆ ಓಡುವುದಕ್ಕೆ ಬಲು ಉತ್ಸಾಹ. ನಾನು ಅಂಥ ಸಾಹಸ ಮಾಡಲಿಲ್ಲ-ಅದೇ ನಾಚಿಕೆ. ನಾಣು ಓಡಿದ. ಮತ್ತೆ ಹಿಂದಕ್ಕೆ ಬಂದು ನನ್ನ ಬೈದ. ರಟ್ಟೆಯೆಳೆದುಕೊಂಡು ಜನದ ಮಧ್ಯೆ ನುಗ್ಗಿಸುತ್ತಾ ನನಗೆ ಬಹುತೊಂದರೆ ಕೊಟ್ಟ.

ಊರಿನ ಎಲ್ಲ ಜನ ಅಂದು ಗುಡಿ ತುಂಬ, ಮೇಲಿನ ಬಯಲು ತುಂಬ ನೆರೆಯುತ್ತದೆ. ವೈಲುಮಾಳಿಗೆಗೆ ಹೋಗುವ ದಾರಿ ಒಂದು ಕೊಠಡಿಯ ಮೂಲಕ. ಇದಕ್ಕೆ ಕೆಳಗೊಂದು ಬಾಗಿಲು, ಮೇಲೆ ಮಾಳಿಗೆಗೆ ತೆರೆವ ಮತ್ತೊಂದು ಬಾಗಿಲು. ಮಧ್ಯೆ ಅಳೆತ್ತರಕ್ಕೆ ಒಂದು ಚಾವಡಿ. ಈ ಚಾವಡಿಗೆ ಎರಡು ಕಡೆ ಮೆಟ್ಟಿಲು. ಕತ್ತಲು ಬಾಗಿಲುಗಳಿಂದ ಪಾರಾಗಿ ಮಾಳಿಗೆಯನ್ನು ಸೇರುವುದಿದೆಯಲ್ಲಾ ಅದು ಅತ್ಯಂತ ವಿನೋದಕರವಾದದ್ದು. ಈ ಕತ್ತಲೆ ಬಲು ತುಂಟ ಕತ್ತಲೆ. ಕಣ್ಣನ್ನು ಎಷ್ಟು ಅರಳಿಸಿದರೂ ಇದು ಕಾಣದು. ದಟ್ಟವಾಗಿದೆ, ಆದರೆ ಎಲ್ಲಿ ಮುಟ್ಟಿದರೆ ಅಲ್ಲಿ ಪೊಳ್ಳು. ಸರ್ವಾಂಗವನ್ನು ವ್ಯಾಪಿಸುವಷ್ಟು ನಯ, ನುಣುಪು. ಆದರೆ, ಅಂಟಿಲ್ಲದೆ ಬಲು ವಿಚಿತ್ರವಾಗಿದೆ. ಈ ಕತ್ತಲು ತುಂಬ ಜನ-ಇದರ ತುಂಬ ಗಜಬಿಜದ ಮಾತು. ಅವಭೃಥದ ದಿನ ಕೊಳದ ತುಂಬ ಜನ ಸ್ನಾನ ಮಾಡುವಾಗ ನೀರು ಕಾಣದೆ ತಲೆ ಮಾತ್ರ ತೆರೆತೆರೆಯಾಗಿ ಕಾಣುವಂತೆ ಈ ಮಾತು ಆ ಕತ್ತಲಲ್ಲಿ ಕೇಳಿ ಬರುತ್ತದೆ. ಈಜು ಬಾರದಿದ್ದವರು ನೀರಿನಲ್ಲಿ ಮುಳುಗುಹಾಕುವಂತೆ ಅರಿಯದ ಹರೆಯದ ಜನ ಇದರಲ್ಲಿ ಒಂದ ತೆರದ ಬೆರ್ಚಿನಿಂದ ಮುಳುಗು ಹಾಕಿ