ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಳೆ

೪೯

ಅಭಿಷೇಕ ಬಹು ವಿಜೃಂಭಣೆಯಿಂದ ನಡೆಯಿತು. ಮಳೆ ಬರಲಿ ಬಾರದಿರಲಿ ದೇವರಿಗೆ ಬಲು ತಂಪಾಯಿತು; ಜನಕ್ಕೊಂದು ತೆರದ ಭಕ್ತಿಯ ಪೆಂಪಾಯಿತು; ಸಮರಾಧನೆ ಸೊಂಪೂ ಆಯಿತು. ನಾವು ಹುಡುಗರು ತಾಂಬೂಲ ಮೆಲ್ಲುತ್ತಾ ಮೇಲಿನ ಪ್ರಾಕಾರದಲ್ಲಿ ಕುಳಿತಿದ್ದೇವೆ. ಕರಿಕಲ್ ಗುಡ್ಡದ ಬಳಿ ಏನೋ ಸ್ವಲ್ಪ ಮೋಡವೆದ್ದಹಾಗಿದೆ ಎಂದು ಯಾರೋ ಹೇಳಿದರು. ನಾವು ಝಗ್ಗನೆದ್ದು ದಿಗಂತಕ್ಕೆ ದೃಷ್ಟಿಯಟ್ಟುತ್ತೇವೆ. ದಿಟ, ಬಸವನಹುಳು ತನ್ನ ಚಿಪ್ಪಿನಿಂದ ಹೊರಕ್ಕೆ ತೆವಳುವ ಹಾಗೆ ಕರಿಮೋಡವೊಂದು ಆ ಗುಡ್ಡದ ಹಿಂಬದಿಯಿಂದ ಮೆಲ್ಲನೆ ಮೇಲಕ್ಕೇಳುತ್ತಿದೆ. ಎಂದಿನಂತೆ ಈ ಮೋಡವೂ ಚೆದರೀತು, ಮೋಡಿ ಹಾಕಿ ಇತ್ತಕಡೆಗೆ ಸೆಳೆಯಪ್ಪಾ ನಾರಸಿಂಹ, ಎಂದು ಎಲ್ಲರೂ ಉದ್ಗಾರ ತೆಗೆಯುತ್ತೇವೆ. ಬೇಟೆಗಾರರಿಗೆ ಬೇಟೆ ಕಣ್ಣಿಗೆ ಬಿದ್ದಂತಾಗಿದೆ ನಮಗೆ ಈ ಮೇಘದರ್ಶನ. ನರಸಿಂಹಾ ಕಣ್ತೆರೆದು ನೋಡೊ, ಎಂದು ನಾವು ಸ್ವಲ್ಪ ಕಾಲ ಆ ಮೋಡದೆಡೆಗೆ ದೃಷ್ಟಿಯಿತ್ತು, ಅಲ್ಲಿ ಅದು ನಮ್ಮನ್ನು ಅಣಕಿಸುತ್ತಿರುವಂತೆ ಮಿಂಚಿನ ಹಲ್ಲನ್ನು ಕಿರಿಯುತ್ತಾ ಕಿರಿಮಿಂಚಿನ ಹುಬ್ಬು ಹಾರಿಸುತ್ತಾ ಆ ಗುಡ್ಡದ ಮೇಲೆಯೇ ವ್ಯರ್ಥಮಳೆಗರೆಯುವ ನಿರ್ಘೃಣತನಕ್ಕೆ ಬೇಸರಗೊಳ್ಳುತ್ತಾ, ಶಪಿಸುತ್ತಾ ನಿಲ್ಲುತ್ತೇವೆ; ನಿಂತು ಮನೆಗೆ ಮರಳುತ್ತೇವೆ.

ಆದರೆ ಈ ದಿನ ಯೋಗಾನರಸಿಂಹನಿಗೆ ನಾವು ಹೊಯ್ದ ನೂರು ಕೊಡದ ತಣ್ಣೀರಿನ ತಂಪು, ಮೈಯಿಂದ ಮನಸ್ಸಿನಿಂದ ಚಿತ್ತಕ್ಕೆ ಸೋಕಿರಬೇಕು. ವೃದ್ಧರಿಗೆ ಶೈತ್ಯವೆಂದರೆ ಸೇರದು ತಾನೆ. ಆತನ ಸಮಾಧಿ ಈ ಅಭಿಷೇಕ ಶೈತ್ಯದಿಂದ ಶಿಥಿಲವಾಗಿರಬೇಕು. ಏಕೆಂದರೆ ಮತ್ತೊಂದು ಹಿರಿಯ ಕರಿಮೋಡ ಈಗ ಈಶಾನ್ಯದಿಂದ ಮೆಲ್ಲನೆ ಗವಿಯಿಂದ ಕರಡಿಯಂತೆ ಮೇಲಕ್ಕೇರುತ್ತಾ ಬರುತ್ತಿದೆ. ನಾವೆಲ್ಲಾ ಚಾವಡಿ ಚಾವಡಿಗಳಮೇಲೆ ನೆರೆದು ಅದನ್ನು ನೋಡುತ್ತಿದ್ದೇವೆ. ಮೈ ಕಡುಕಪ್ಪು, ಮಹಿಷಾಸುರನಂತೆ ಭೀಕರ ಮನೋಹರವೀ ಮುಗಿಲು; ತನ್ನ ಅಪ್ರತಿಹತವಾದ ಇಚ್ಛೆ ಇಂದು ಪೂತಿ ಸ್ಪರ್ಧಿತವಾಗಲು ಒಂದು ತೆರೆದ ಕೋಪದಿಂದ ಮೈಯಲ್ಲಿ ಕಿಚ್ಚಾಡುವಂತೆ ಮಿಂಚು ಹೊಳೆದಾಡುತ್ತಿದೆ ಇದರೊಡಲಿನಲ್ಲಿ. ನಮ್ಮೂರಿಗೆ ಬರುವುದಕ್ಕೆ ಇದಕ್ಕೆ ಮನಸ್ಸಿಲ್ಲ-ನಮಗೆ ಗೊತ್ತು. ಕೆಳಗಣ ಅಷ್ಟಗ್ರಾಮದ ಬಯಲಿಗೆ ಹೋಗುವುದಕ್ಕೆ ಅದಕ್ಕೆ ಆಸೆ. ಆದರೆ ನರಸಿಂಹನೆಚ್ಚತ್ತು ಈ ದಿನ ಅದಕ್ಕೆ ಮೋಡಿಯ ಮಂತ್ರವನ್ನು ಹಾಕುತ್ತಿದಾನೆ. ಈ ಸ್ಪರ್ಧೆ ಮಂಗಳ ಭಯಂಕರವಾಗಿದೆ. ನಾವು ಉಸಿರುಕಟ್ಟಿ ನೋಡುತ್ತಿದೇವೆ.