ಪುಟ:Putina Samagra Prabandhagalu.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪

ಪು.ತಿ.ನ.ಸಮಗ್ರ

(ನಫೆ ಎಂದು ಮನದಲ್ಲೆ ಹಿಗ್ಗಿ) ಅದನ್ನು ಕೊಂಡುಕೊಂಡೆ. ಬರುವಾಗ ದಾರಿಯಲ್ಲಿ ಯಾರೂ ನೋಡುವವರಿರಲಿಲ್ಲ. ಮನೆಯ ಬೀಗದ ಕೈ ನನ್ನಲ್ಲೆ ಇದೆ. ನಮ್ಮ ಮನೆಗೆ ಹೋಗಬೇಕಾದರೆ ಒಂದು ಓಣಿಯ ಬಾಗಿಲನ್ನು ತೆರೆದು ದಾಟಿ ಹೋಗಬೇಕು. ಆತುರದಿಂದ ನಾನು ಮನೆಗೆ ಬಂದು ಕುಡುಗೋಲಿಗೆ ಎಣ್ಣೆ ಸವರಿ ಕೈಗೂ ಸವರಿಕೊಂಡು, ಒಳಗೆ ಕತ್ತಲಾದುದರಿಂದ ಓಣಿಯಲ್ಲಿ ಹಣ್ಣನ್ನು ಹೆಚ್ಚಿ ತೊಳೆ ಬಿಡಿಸುವುದಕ್ಕೆ ಪ್ರಾರಂಭಿಸಿದೆ. ಓಣಿಯ ಬಾಗಿಲನ್ನು ಹಾಕಿಕೊಳ್ಳದೆ ಬಂದುದು ತಪ್ಪಾಯಿತು. ನಾನು ಹಣ್ಣು ಸುಲಿದು ಕೀತನ್ನು ಮಾಡುತ್ತಾ ರಸ ತೊಟ್ಟಿಕ್ಕುತ್ತಿದ್ದರೂ ಕೊಬ್ಬರಿಯ ಹಾಗೆ ಮುರುವಾಗಿದ್ದ ತೊಳೆಗಳನ್ನು ಕುಕ್ಕೆಗೆ ಹಾಕುತ್ತಿರುವಾದ ಓಣಿಯ ಬಾಗಿಲು ತೆರೆದುಕೊಂಡು ಒಳಕ್ಕೆ ಬಂದೇಬಿಟ್ಟಿದಾನೆ, ಬೀದಿಯ ಬಸವ. ಹಲಸಿನ ತೊಳೆಯ ಸ್ವಾದುತೆಯ ಸಂತೋಷದಲ್ಲಿ ನನಗೆ ಬಾಗಿಲು ಗಿರುಕೆಂದುರೂ ಬಸವ ಬಂದುದೂ ಗೊತ್ತಾಗಲಿಲ್ಲ. ಬಂದವನು ಬುಸುಗುಟ್ಟುತ್ತಾ ಹಣ್ಣಿಗೇ ಮುಸುಡಿಯನ್ನು ಹಾಕಿಬಿಟ್ಟಿದಾನೆ. ತಲೆಯನ್ನು ಮೇಲೆಕ್ಕೆತ್ತಿ ನೋಡಿದರೆ ಈ ಭೂತಾಕಾರದ ಬಸವ! ನನಗೆ ಯಾವ ಪ್ರಾಣಿಯಾದರೂ ಸರಿಯೆ, ಅಂಜಿಕೆ. ಎಳೆಯ ಕರುಗಳು ಕೂಡ ನನ್ನನ್ನು ಕಂಡರೆ ಗುದ್ದುತ್ತವೆ. ಚೀಲಿ ಸ್ವಲ್ಪ ಹೊತ್ತು ಮಡಲಿನಲ್ಲಿ ತಂಗಿದ್ದರೂ ಹ್ಹಾವಾಹ್ ಎಂದು ಇದ್ದಕ್ಕಿದ್ದ ಹಾಗೆ ಉಗುರು ಊರಿ ಹಾರಿಹೋಗುತ್ತದೆ. ಇನ್ನು ಈ ತೋರವಾದ ಹಿಳಲಿನ, ಗುಜ್ಜುಗೊಂಬಿನ, ನೆಲದವರೆಗೂ ನೇತಾಡುವ ಕೊರಳ ತೊಗಲಿನ, ಬೃಹದ್ವೃಷಣದ ಭೀಮ ವೃಷಭ ನನಗೆ ಅಂಜಿ ಹಿಂದಕ್ಕೆ ನಿಲ್ಲುತ್ತದೆಯೇ? ಆದುದರಿಂದ ನಾನೇ ಅಂಜಿ ಹಣ್ಣನ್ನಲ್ಲೆ ಬಿಟ್ಟು ಹಿಂದಕ್ಕೆ ಜಿಗಿದೆ. ಆದರೆ ಹಣ್ಣು ಅಪರೂಪವಾದದ್ದು ಹೊಟ್ಟೆಯಲ್ಲಿ ಹಸಿವು, ಎದೆಯಲ್ಲಿ ಭಯ. ದೂರದಲ್ಲೆ ಹ್ಙ ಎಂದೆ. ಬಸವ ಸ್ವಲ್ಪ ತಬ್ಬಿಬ್ಬಾಗಿ ಹಣ್ಣನ್ನು ಬಿಟ್ಟು ಸಿಪ್ಪೆಯನ್ನು ಬಾಯಲ್ಲಿ ಕಚ್ಚಿಕೊಂಡು ಮೆಲ್ಲುತ್ತಾ ನನ್ನನ್ನು ದುರುದುರನೆ ನೋಡಿ ನಿಂತುಕೊಂಡಿತು. ನಾನು ಸರಕ್ಕನೆ ಉಳಿದ ಹಲಸಿನ ಹಣ್ಣಿನ ಚೂರನ್ನೂ ಕುಕ್ಕೆಯನ್ನೂ ಎತ್ತಿಕೊಂಡು ಹಿಂದಕ್ಕೆ ಸರಿದು ನಿಂತುಕೊಂಡೆ. ಬಸವ ಆ ಸಿಪ್ಪೆಯನ್ನು ಮುಗಿಸಿ ಮತ್ತೊಂದಕ್ಕೆ ಬಾಯಿಕ್ಕಿ, ನನ್ನನ್ನು ಒಂದು ತೆರದ ಔದಾಸೀನ್ಯ ಭಾವದಿಂದ ನಿಟ್ಟಿಸುತ್ತಾ ಅಲುಗದೆ ನಿಂತುಕೊಂಡೇ ಇತ್ತು. ನನಗೂ ಅದನ್ನು ಕಂಡರೆ ಒಂದು ಕುತೂಹಲವುಂಟಾಗಿ ಅದೇನಾದರೂ ತಿವಿಯುವುದಕ್ಕೆ ಬಂದರೆ ನಾನು ಬೇಗನೆ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಳ್ಳುವಂತೆ ಅದನ್ನು ಓರೆಮಾಡಿ ಕುಕ್ಕೆಯನ್ನು ಹೊಸಿಲೋಳಕ್ಕೆ ಇಟ್ಟು, ಉಳಿದ ಹಣ್ಣನ್ನು ಕೀತುಮಾಡಿ ತೊಳೆ ಬಿಡಿಸುತ್ತಾ ಸಿಪ್ಪೆಯನ್ನು ಬಸವನೆಡೆಗೆ