ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಚಲು ಮರದ ಕೆಳಗೆ

೭೩

ಈ ಮಾತು ಕೇಳಿ ನನಗೇನೋ ದಿಗ್ಭ್ರಮೆ ಹಿಡಿಯಿತು. ಮಾನವನಿಗೂ ಈ ಈಚಲು ಮರಕ್ಕೂ ಇದರ ಅನುಬಂಧಿಗಳ ರಸಕ್ಕೂ ಇರುವ ಅತ್ಯಂತ ಮೋಹಕವಾದ ಸಂಬಂಧ ಈ ಸದ್ದರ್ಶನಾಪೇಕ್ಷೆಯಲ್ಲಿ ಬೇರೂರಿದಿಯೇ| ಎಂದುಕೊಂಡೆ. ಆಮೇಲೆ ಈಚಲುಗರಿಗಳ ಮೂಲಕ ಸೂರ್ಯನನ್ನು ನಿಟ್ಟಿಸುತ್ತಾ `ಎಲ ಎಲ ಮಾಯಾವಿ !' ಎಂದೆ. ಏಕಕಾಲದಲ್ಲಿ ಎಷ್ಟು ವೇಷ ಹಾಕಬಲ್ಲ ಇವ! ಈತನ ನಿಜಸ್ವರೂಪವೇನೋ. ಆದರೆ ಇವನ ಈ ಭ್ರಮೆ ಇಲ್ಲದೆ ಜಗತ್ತೇ ನಡೆಯುವ ಹಾಗಿಲ್ಲ. ಭೂಮಿ ನಿಂತಿದೆ ಎಂದೇ ನಾವು ನಡೆಯಬೇಕು. ನಮ್ಮ ತಲೆ ತಿರುಗಿದಾಗ ಮಾತ್ರ ಅದು ಅಸ್ಥಿರ. ಅದರ ಸತ್ಯಸ್ವರೂಪ ನಮಗೆ ತಿಳಿಯಬೇಕಾದರೆ ಇಂಥವಿಷಮಾವಸ್ಥೆಯಲ್ಲಿ ಮಾತ್ರ ಸಾಧ್ಯ. ಅದಕ್ಕೆಯೇ ಇದೇ ಸತ್ಯ ಎಂದು ಸ್ಥಾಪಿಸುವ ಮತಸ್ಥಾಪಕರೆಲ್ಲರೂ ತಪಶ್ಚರ್ಯೆಯಿಂದ ವಿಷಮಾವಸ್ಥೆಯನ್ನು ತಂದುಕೊಳ್ಳುತ್ತಾರೋ ಏನೋ! ಕೆಲವರಿಗೆ ಇದು ಪ್ರಕೃತಿದತ್ತವಾಗಿಯೂ ಬರುತ್ತದೆ. ಇಂಥ ವಿಷಮರಿಂದಲೇ ಜಗತ್ತು ನಡೆಯುತ್ತಿದೆ. ಸುರಾಗ್ರಹಣಮಾಡುವುದೂ ಈ ವಿಷಮಾವಸ್ಥೆಯನ್ನು ಪಡೆಯಬೇಕೆಂದೇ? ಈ ಈಚಲುಮರವೂ ಸತ್ಯನಾರಾಯಣಾಶ್ರಯವೇ? ಇದಕ್ಕೂ ನಾವು ಪೂದಕ್ಷಿಣೆ ಮಾಡಬೇಕೇ? ಎಂದುಕೊಳ್ಳುತ್ತಿರುವಾಗ ಅದು :

``ನನ್ನಲ್ಲಿಯೂ ದೇವತಾಂಶವುಂಟು ಎಂದು ಮರ್ಮರಿಸಿತು. ``ನಾನು ಅನೇಕರಿಗೆ ಮನೆದೇವರು. ನೀನು ವ್ರಾತ್ಯ, ನಿನಗೆ ಗೊತ್ತಿಲ್ಲದಿರಬಹುದು. ನನಗೂ ಪೂಜೆ ಪುರಸ್ಕಾರಗಳುಂಟು. ನೀನರಿತಿರುವಷ್ಟು ನಿಕೃಷ್ಟನಲ್ಲ ನಾನು. ನನಗೂ ನಿನಗೂ ಎಷ್ಟೋ ಬಗೆಯಲ್ಲಿ ಸಾಮರಸ್ಯವಿದೆ. ನಿನ್ನಂತೆ ನನಗೂ ಬಯಲು ಕಾಡೇ ಇಷ್ಟ. ನಿನ್ನಂತೆ ನಾನೂ ಸ್ವಪ್ನಪ್ರಚೋದಕ, ಸತ್ಯಪ್ರಿಯ. ಆದರೆ ನಿನ್ನ `ಮಡಿ' ಭಾವ ನನಗಿಲ್ಲ. ನಾನು ನಿನ್ನಷ್ಟು ಅಸಹಾಯನೂ ಅಲ್ಲ, ನನಗಿಷ್ಟಬಂದ ಕಡೆ ನಾನು ಹೋಗುತ್ತೇನೆ, ನೆಲಸುತ್ತೇನೆ. ಸಿಕ್ಕಿದ ಜಾಗದಲ್ಲಿ ಬೆಳೆಯುತ್ತೇನೆ. ನಾನು ಯೋಗಿಯಂತೆ ಸ್ವತಂತ್ರ. ಇದುವರೆಗೂ ಯಾರೂ ಎಲ್ಲೂ ನನ್ನನ್ನು ಪೋಷಿಸಿ ಬೆಳೆಸಿಲ್ಲ. ನಾನು ಸತ್ತರೆ ಅತ್ತವರೂ ಇಲ್ಲ. ಇದುವರೆಗೆ ಹೀಗೆ ನಡೆಯಿತು. ಆದರೆ ನಿಮ್ಮ ಈ ಸ್ವರಾಜ್ಯದಲ್ಲಿ ನನಗೇನಾಗುತ್ತದೊ. ಆದುದು ಆಗಲಿ. ನಾನೇನು ಪರೋಪಜೀವಿಯೇ? ನಿರ್ಭಯ ಹಾಗೂ ಉಪಕಾರಿ. ಅಂತೂ ಏನಾದರೂ ಆಗಲಿ-ಅನುಭವಿಸುವುದನ್ನು ಅನುಭವಿಸಿಯೇ ತೀರಬೇಕಲ್ಲ. ನಹುಷನಂಥ ಮಹಾರಾಜನಿಗೆ ಇಂದ್ರಪದವಿ ಬಂದಾಗ ಮಹರ್ಷಿಗಳೇ ಪಲ್ಲಕ್ಕಿ ಹೊರಬೇಕಾಯಿತಂತೆ. ಇನ್ನು ಜನಕ್ಕೇ ಇಂದ್ರಪದವಿ ಬಂದಾಗ ಕೇಳಬೇಕೆ?