ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬

ಪು.ತಿ.ನ.ಸಮಗ್ರ

ಭವ, ಅಭಯವೆಂದರೆ ವೈರಾಗ್ಯ-ಪ್ರಪಂಚದಲ್ಲಿ ವಿರಕ್ತರಂತೂ ಅಪರೂಪ. ಅಂದರೆ ಜಗತ್ತು ನಡೆಯುವುದು ಭಯಶಾಲೀನರಿಂದ. ಪ್ರಾಣಕ್ಕಿಂತಲೂ ಪ್ರಿಯವಾದುದು ಯಾವುದು, ಅದನ್ನು ನಡೆಯಗೊಡಿಸುವ ಭಯಕ್ಕಿಂತ ಉಪಕಾರವಾದ ಗುಣ ಮತ್ತಾವುದು? ಸೂರ್ಯನಿಗೆ ತೇಜಸ್ಸು ಹೇಗೆಯೋ ಹಾಗೆಯೇ ಪ್ರಾಣವಂತನಿಗೆ ಭಯ. ಯಾರಿಗೆ ಪ್ರಾಣದ ಮೇಲೆ ಆಸೆ ಇಲ್ಲವೋ ಆತನಿಗೆ ಮಾತ್ರ ಭಯವಿಲ್ಲ. ಅಂಥವನು ಏನೂ ಇಲ್ಲದವನು. ``ನಾಹಮಸ್ಮೀತಿ ಸಾಹಸಂ. ಅಂಥವರ ಮಾತು ಬಾಳಬೇಕೆಂಬ ನಮಗೇಕೆ? ಅಂಥವರಿಂದ ಲೋಕಕ್ಕೆ ತಾನೆ ಏನು ಪ್ರಯೋಜನ?

ಪ್ರಪಂಚದಲ್ಲಿ ಯಾವ ಯಾವವಕ್ಕೆ ಅಧ್ಯಾತ್ಮಿಕವಾದ ಬೆಲೆ ಇದೆಯೋ ಅವೆಲ್ಲಕ್ಕೂ ಭೀತರೇ ಆಶ್ರಯರು. `ದಯವೇ ಧರ್ಮದ ಮೂಲ' ಎಂಬ ಮಾತಿನ ತಥ್ಯ ಸಂದೇಹಾಸ್ಪದವಾಗಿದೆ. ಭಯವೇ ಧರ್ಮದ ಮೂಲ ಎಂದರೆ ಸಮಂಜಸವಾದೀತು. ಪರ್ಷಿಯಾ ದೇಶದ ಪ್ರಾಚೀನ ಮತ ಯಾರಿಂದ ಈವರೆಗೆ ಉಳಿದಿದೆ? ಭೀತರಾಗಿ ಈ ದೇಶಕ್ಕೆ ಓಡಿಬಂದ ಝರತುಷ್ಟ್ರಾನುಯಾಯಿಗಳಿಂದ ಅಲ್ಲವೇ? ಮುಸಲ್ಮಾನರ ಮತ ಯಾರಿಂದ ಅಭಿವೃದ್ಧಿಹೊಂದಿತು? ಭಯಾರ್ತರು ಅದಕ್ಕೆ ತಲೆವಾಗಿ ತಮ್ಮ ತನುಮನಗಳನ್ನು ಕೋಟಿಗಟ್ಟಲೆ ತೆತ್ತುದರಿಂದ ತಾನೆ. ಷೇಕ್ಸ್‌ಪಿಯರ್, ಷೆಲ್ಲಿ ಮುಂತಾದ ಪಾಶ್ಚಾತ್ಯ ಜನಾಂಗದ ಕವಿಗಳೂ, ಅವರ ಅಮೋಘವಾದ ಸಂಸ್ಕೃತಿಯೂ, ವಿಜ್ಞಾನವೂ ಯಾರ ಆಶ್ರಯವನ್ನು ಪಡೆದು ಈ ದೇಶದಲ್ಲಿ ಮನ್ನಣೆ ಪಡೆಯಿತು? ಆಂಗ್ಲ ಭೀತರಾದ ನಮ್ಮಿಂದಲ್ಲವೇ? ಭಕ್ತಿಗೂ ಗೌರವಕ್ಕೂ ಭಯವೇ ಅಲ್ಲವೆ ವಾಹನ? ಯುದ್ಧಗಳಾಗುತ್ತಿರುವಾಗ ಉಳಿಯುವವರಾರು? ಸೋಲನ್ನೊಪ್ಪಿಕೊಳ್ಳುವವರಾರು? ಸಂಧಿಪ್ರಿಯರಾರು? ಶಾಂತಿ ಯಾರ ಇಷ್ಟ? ನಮ್ಮ ಪುರಾತನ ಸಂಸ್ಕೃತಿಗೆ ಯಾರಿಂದ ಉಳಿವು? ಎಲ್ಲ ಅಪಾಯಕ್ಕೂ ಹೆದರಿ, ವಿಪತ್ಪರಂಪರೆಗಳನ್ನು ತಾಳಿಕೊಂಡು, ಎಡವಿದರೆ ಅಂಜುತ್ತಾ, ಸಮಯ ಬಂದಾಗ ಪಲಾಯನ ಸೂತ್ರವನ್ನು ಅವಲಂಬಿಸುತ್ತಾ, ಕ್ರೋಧ ವಶರಾಗಬೇಕಾದ ಕಾಲದಲ್ಲಿ ಸ್ಥಿತಪ್ರಜ್ಞರಾಗುತ್ತಾ, ಅಮೂಲ್ಯವಾದ ಜೀವನವನ್ನು ಸಾಹಸಕ್ಕೀಡುಮಾಡದೆ, ಸಾಮ್ರಾಜ್ಯಗಳು ಉಳಿಯಲಿ ಅಳಿಯಲಿ ಶಾಂತಚಿತ್ತರಾಗಿ, ಬಾಳುವೆಯನ್ನು ಅಂಜಲಿಪ್ರಮುಖವನ್ನಾಗಿ ಮಾಡಿ ನಡೆಯುವ ಭಯಶರಣ್ಯರಾದ ನೂರಕ್ಕೆ ತೊಂಬತ್ತೊಂಬತ್ತು ಜನ ಸತ್ಪ್ರಜೆಗಳಿಂದಲ್ಲವೇ? ``ಶತೇಷು ಜಾಯತೇ ಶೂರಃ ಎಂಬ ಸುಭಾಷಿತ ಈಗ ನೆನಪಿಗೆ ಬಂದು ನನ್ನ ಈ ವಾದಕ್ಕೆ ಪೋಷಕವಾಗಿದೆ. ಸೃಷ್ಟಿಶಕ್ತಿಗೆ ಅಂಜಿಕೆಯುಳ್ಳವರಲ್ಲಿಯೆ ಹೆಚ್ಚು ವಾತ್ಸಲ್ಯ.