ವಿಷಯಕ್ಕೆ ಹೋಗು

ಪುಟ:Putina Samagra Prabandhagalu.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೆರಳು-ನಡುನೆರಳು-ಪಡಿನೆರಳು

೭೯


ಆದರೆ ನಿಜವಾಗಿ ಇದು ಪ್ರಿಯವಸ್ತು. ನೆರಳಿಲ್ಲದ ಮನುಷ್ಯ ಮನುಷ್ಯನೇ ಅಲ್ಲ. ಒಂದುಪಕ್ಷ ಅವನು ದೇವತೆಯಾದರೂ, ಅದು ಎಲ್ಲರೂ ಬಯಸುವಂಥ ಬದುಕಲ್ಲ. ನಾವು ಬಯಸುವುದು ಸಶರೀರ ಸ್ವರ್ಗವನ್ನು-ಅಂದರೆ ಸ್ವರ್ಗದಲ್ಲಿ ನೆರಳು ಚೆಲ್ಲುವ ಬದುಕನ್ನು -ಅಲ್ಲವೇ? ದಮಯಂತಿ ವರಿಸಿದ್ದು ಯಾರನ್ನು? ನೆರಳನ್ನು ಮೆರೆಸಿದ ನಳವನ್ನೋ-ಇಲ್ಲ ಛಾಯಶೂನ್ಯರಾದ ದಿಕ್ಪಾಲಕರನ್ನೋ? ಇಂಥ ಪ್ರಣಯಿಗಳನ್ನು ಒಂದುಗೂಡಿಸಿದ ಈ ಛಾಯೆಯನ್ನು ಪ್ರೀತಿಸದಿರುವುದೆಂತು?

ಈ ನೆರಳನ್ನು ನೋಡಿ ನಾನು ಸೋಜಿಗಪಡದೆಯೂ ಇಲ್ಲ. ``ಎಷ್ಟೇ ಅಂಧಕಾರವಿದ್ದರೂ ಒಂದು ಅಲ್ಪ ದೀಪಶಿಖೆ ಅದನ್ನು ಹೇಗೆ ಎದುರಿಸುತ್ತದೆ ಎಂದು ಮುಂತಾದ ಉತ್ಪ್ರೇಕ್ಷೆಗಳ ಉದ್ಗಾರವನ್ನು ಎಷ್ಟೋ ಕವಿಗಳು ತೆಗೆದಿದ್ದಾರೆ. ಆದರೆ ಈ ಛಾಯೆಯ ದಿಟ್ಟತನವನ್ನು ಯಾರೂ ಏಕೆ ಹೋಗಳಿಲ್ಲ? ಎಷ್ಟೇ ಬೆಳಕಿರಲಿ ಇದು ಕರ್ರಗೆ ಸ್ವಲ್ಪವೂ ಸಂಕೋಚವಿಲ್ಲದೆ ಅದರೆದುರಿಗೇ ಮೆರೆಯುತ್ತದೆ ಅಲ್ಲವೆ? ಇದನ್ನು ನಿವಾರಿಸುವ ಶಕ್ತಿ ಸೂರ್ಯನಿಗೇ ಇಲ್ಲ ಎಂದಮೇಲೆ, ಮಿಕ್ಕ ಹುಲುಹಣತೆಗಳ ಪಾಡೇನು? ಈ ಧಾಷ್ಟರ್ಯ್‌ವಿರುವುದರಿಂದಲೇ ಇದು ಸೂರ್ಯನಿಗೇ ಗಂಡನನ್ನಾಗಿ ಮಾಡಿಕೊಂಡಿತು. ಎಂಥ ದೇದೀಪ್ಯಮಾನವಾದ ಹಗಲಿನಲ್ಲೂ ಇದು ಬಣ್ಣಗುಂದುವುದಿಲ್ಲ. ಬೆಳಕಿನ ಪ್ರಖರತೆಯೊಡನೆ ಇದಕ್ಕೆ ಯಾವಾಗಲೂ ಸ್ಪರ್ಧೆ. ಅದರಿಂದ ನೊಂದವರಿಗೆ ಇದು ಆಶ್ರಯ. ಆ ಪೂಜಾಸರ್ಕಾರದ ಸಭೆಯಲ್ಲಿ ಇದಕ್ಕೆ ಪ್ರತಿಪಕ್ಷಸ್ಥಾನ. ಇದರ ಗಂಡುತನಕ್ಕೆ ನಾನು ನಿಜವಾಗಿ ಮರುಳುಗೊಂಡಿದ್ದೇನೆ. ``ಬಿಸಿಲೆಂಬ ಹಾಲ್ಗಡಲಿನ ಗರಳವಿದು-ಈ ಛಾಯೆ-ಇದನ್ನು ಕುಡಿಯಬಲ್ಲ ದೇವತೆ ಇರುಳೊಂದೇ ಎಂದು ಇದರ ಮಹಾತ್ಮೆಯನ್ನು ವರ್ಣಿಸುತ್ತಾ ಒಂದು ಸುಂದರ ಕವಿತೆಯನ್ನು ಯಾರಾದರೂ ಕಟ್ಟಬಾರದೇಕೆ? ``ಹಣೆಯ ಬೆಳಕಿನ ನೆರಳು ಕೊರಳಗರಳ ಎಂದು ಬೇಕಾದರೂ ಶಿವನನ್ನು ಸ್ತೋತ್ರ ಮಾಡುವ ನೆವದಲ್ಲಿ ಇದನ್ನು ಹೊಗಳಬಹುದಲ್ಲ.

ತಮ್ಮ ನೆರಳಿನಿಂದ ತಾವು ವಿನೋದಗೊಳ್ಳದ ಭಾವುಕರಿಲ್ಲ ಎನ್ನಬಹುದು. ನಮ್ಮ ಜೀವನದ ಸರ್ಕಸ್ಸಿನಲ್ಲಿ ಇದು ಆಟಗುಳಿ ಕೋಡಂಗಿ, ನಾವು ರಾಜರಾದರೆ ಇದು ವಿದೂಷಕ, ನಾವು ಪಾತ್ರಗಳಾದರೆ ಇದು ಸಾರಥಿ. ನಾವು ಬಯಸಿದಾಗ ಅದು ಗೋಚರವಾಗುತ್ತದೆ; ನಾವು ಅಲಕ್ಷಿಸಿದರೆ ಅದೇನೂ ಕೊರಗುವುದಿಲ್ಲ. ಪ್ರತಿಬಿಂಬದಂತೆ `ನೀನೇ ನಾನು' ಎಂದು ಇದು ಎಂದಿಗೂ ಸಮಾನತೆಯ ಧಾಷ್ಟರ್ಯ್‌ವನ್ನು ತೋರದು. ಈ ಹಾಸ್ಯರಾಜ ಕಲಾಪರಿಪೂರ್ಣನಾಗಿಯೂ ಇದ್ದಾನೆ.