ಪುಟ:Rangammana Vathara.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

163

ಶ್ರೀರಾಮಪುರದವರೇ ಒಬ್ಬರು ಬಂದು ಬಾಡಿಗೆಗೆ ಗೊತ್ತುಮಾಡಿ ಹೋಗಿದ್ದರು.
ವೆಂಕಟಸುಬ್ಬಮ್ಮನ ವ್ಯಕ್ತಿತ್ವ ಇತರರ ದೃಷ್ಟಿಯಲ್ಲಿ ಸ್ವಲ್ಪ ವಿಚಿತ್ರವಾಗಿತ್ತು.
ಆಕೆ ವಠಾರದ ಹೆಂಗಸರೊಡನೆ ಬೆರೆಯುತ್ತಿರಲಿಲ್ಲ. ಹರಟೆಗೆ ಬರುತ್ತಿರಲಿಲ್ಲ. ಇನ್ನೊ
ಬ್ಬರ ವಿಷಯ ತಿಳಿದುಕೊಳ್ಳಲು ಕುತೂಹಲ ತಳೆಯುತ್ತಿರಲಿಲ್ಲ. ಒಂದು ಮಾತಿಗೆ
ಒಂದೇ ಉತ್ತರ. ಎಷ್ಟು ಬೇಕೋ ಅಷ್ಟು. ಆಕೆ ಒಂದು ದಿನವಾದರೂ ಸ್ವರವೇರಿಸಿ
ಮಾತನಾಡಿದ್ದನ್ನು ಇಲ್ಲವೆ ಗಟ್ಟಿಯಾಗಿ ನಕ್ಕುದನ್ನು ಯಾರೂ ಕಂಡಿರಲಿಲ್ಲ. ಮನೆ
ಯೋಳಗೂ ಅಷ್ಟೆ. ಮಕ್ಕಳ ಜತೆಯಲ್ಲೂ ಮೃದುವಾಗಿಯೆ ಮಾತನಾಡುತ್ತಿದ್ದಳು.
ಅಲ್ಲಿ ತಾಯಿ ಮಕ್ಕಳು ಜಗಳವಾಡುವುದನ್ನು ನೋಡಿದವರೇ ಇಲ್ಲ.
"ವೆಂಕಟಸುಬ್ಬಮ್ಮನೋರೇ, ಇದೀರೇನು?" ಎಂದು ಕೇಳುವ ಪ್ರಮೇಯವೇ
ಇರಲಿಲ್ಲ. ಆಕೆ ಯಾವಾಗಲೂ ಮನೆಯಲ್ಲೇ ಇರುತ್ತಿದ್ದಳು.
ಹೀಗಾಗಿ ಬಾಗಿಲ ಬಳಿ ನಿಂತು ಯಾವಳಾದರೂ ಹೆಂಗಸು ಕೇಳುತ್ತಿದ್ದುದಿತ್ತು:
"ಏನ್ಮಾಡ್ತಿದೀರಿ ವೆಂಕಟಸುಬ್ಬಮ್ಮ?"
ಈ ಪ್ರಶ್ನೆಯನ್ನು ಕೇಳಿದಾಗಲೆಲ್ಲ ಸಮಯಕ್ಕೆ ಅನುಸರಿಸಿ ಉತ್ತರಗಳು ಬದ
ಲಾಗುತ್ತಿದ್ದುವು.
"ಕಾಫಿಗೆ ಇಟ್ಟಿದೀನಿ. ಹುಡುಗರು ಬರೋ ಹೊತ್ತಾಯ್ತು."
ಇಲ್ಲವೆ___
"ಹುಡಗರಿಗೆ ಊಟಕ್ಕಿಡ್ತಾ ಇದೀನಮ್ಮ."
ಅಥವಾ___
"ಹುಡುಗರಿಗೆ ಹಾಸಿಗೆ ಹಾಸ್ತಾ ಇದೀನಿ, ರಂಗಮ್ನೋರೆ."
ಯಾವಾಗ ನೋಡಿದರೂ ಹುಡುಗರು-ಹುಡುಗರು. ಮಕ್ಕಳನ್ನು ಬಿಟ್ಟರೆ ಬೇರೆ
ಬದುಕೇ ಇರಲಿಲ್ಲ ಆ ಜೀವಕ್ಕೆ. ಆಕೆಯದು ಸೊರಗಿದ ಶರೀರ, ಮುಖ ಸದಾ
ಕಾಲವೂ ಬಾಡಿರುತ್ತಿತ್ತು. ಬೇರೆ ಬೇರೆ ಕಾಲೇಜುಗಳಲ್ಲಿ ಓದುತ್ತಿದ್ದರೂ ಅಣ್ಣ
ತಮ್ಮಂದಿರು ಜತೆಯಾಗಿಯೇ ಮನೆಗೆ ಮರಳುತ್ತಿದ್ದರು . ಅವರು ಹಿಂತಿರುಗಲು
ಇನ್ನೂ ಅರ್ಧ ಗಂಟೆ ಇದೆ ಎನ್ನುವಾಗಲೇ ವೆಂಕಟಸುಬ್ಬಮ್ಮ ಹೊರ ಅಂಗಳದ ಗೇಟಿಗೆ
ಆತುಕೊಂಡು ನಿಂತುಬಿಡುತ್ತಿದ್ದಳು. ದೂರದಲ್ಲಿ ಮಕ್ಕಳನ್ನು ಕಂಡೊಡನೆಯೆ ಆಕೆಯ
ಬಾಯಿಯಿಂದ ಮಾತು ಹೊರಡುತ್ತಿತ್ತು:
"ಹುಡುಗ್ರು ಬರ್ತಾ ಇದಾರೆ."
ಹತ್ತಿರ ಯಾರಾದರೂ ಇರಲಿ, ಇಲ್ಲದೆ ಇರಲಿ, ಆ ಮಾತನ್ನು ಆಕೆ ಹೇಳಿಯೇ
ಹೇಳುತ್ತಿದ್ದಳು. ಮೊದಮೊದಲು ದಿನವೂ ಅದನ್ನು ಕೇಳಿ ಇತರ ಹೆಂಗಸರಿಗೆ ತಮಾಷೆ
ಎನಿಸುತ್ತಿತ್ತು. ಕ್ರಮೇಣ ವೆಂಕಟಸುಬ್ಬಮ್ಮನ ಆ ಮಾತಿಗೆ ಲಕ್ಷ್ಯ ಕೊಡುವುದನ್ನೇ
ಹೆಂಗಸರು ಕಡಮೆ ಮಾಡಿದರು.

ಪ್ರತಿ ತಿಂಗಳೂ ಐದನೆಯ ತಾರೀಕಿಗೆ ಸರಿಯಾಗಿ ವೆಂಕಟಸುಬ್ಬಮ್ಮ ಬಾಡಿಗೆ