ಪುಟ:Vyshakha.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

11

ಹಚ್ಚಿಕೊಂಡಿರೋದರಿಂದ, ಹೆಚ್ಚು ಕಾಲಾನ ಅವರ ಮನೇಲಿ ಕಳೀತಾಳೆ... ಮಹಾರಾಯಿತಿ ಊಟ ಮಾಡಿ ಹೊರಟುಬಿಟ್ಟರೆ, ಮತ್ತೆ ಸಂಜೆಗೇ ಅವಳು ಮನೆ ಸೇರೋದು!... ಒಂದೊಂದು ಸರ್ತಿ ತನಗೆ ಹಸಿವಿಲ್ಲ ಎಂದು ಅವನ ಮನೇಲೆ ಊಟ ಮಾಡಿ ಬರೋದೂ ಉಂಟು!” ಎಂದು ಹೇಳುತ್ತ, ಅವರು ಮನೆಯ ಮುಂದಿನ ಮೆಟ್ಟಿಲು ಇಳಿಯುವುದನ್ನೇ ನೋಡುತ್ತಿದ್ದು ರುಕ್ಮಿಣಿ ತಮ್ಮ ಮನೆಯ ಮುಂದಿನ ಬಾಗಿಲು ಮುಚ್ಚಿದಳು. ಊರೋಳಗೆ ಹೋಗುವವರೆಗೂ ಲೋಕಾಭಿರಾಮದ ಮಾತು. ಊರು ಮುಂದಿನ ಗೋಣಿಮರವನ್ನು ದಾಟುತ್ತಲೂ ಶಾಸ್ತ್ರಿಗಳು ನಿಧಾನವಾಗಿ ಮಾತೆತ್ತಿದರು: “ಏನು ನಂಜೇಗೌಡರೆ, ಆ ರುದ್ರನ ದೆಸೆಯಿಂದ ನಮ್ಮ ತೋಟಕ್ಕೆ ಉಳಿಗಾಲವಿಲ್ಲವಲ್ಲ?... ಎಳನೀರು, ಬಾಳೆಗೊನೆ ಎಲ್ಲವನ್ನೂ-ಒಂದೊಂದು ಸಲ ತನ್ನ ಪುಂಡು ಗುಂಪು ಸೇರಿಸಿಕೊಂಡು, ಒಂದೊಂದು ವೇಳೆ ತಾನೊಬ್ಬನೆ-ರುದ್ರ ಲೂಟಿ ಹೊಡೀತಾ ಇದಾನಲ್ಲ?” ಎನ್ನುತ್ತಲೂ ತನ್ನ ಬೀಡಿಯಿಂದ ಎರಡು ದಂ ಎಳೆದು ಅದನ್ನು ಬಿಸಾಡಿ, “ಒಳ್ಳೆ ಪಸಂದಾಯ್ತು. ಪಟಿಂಗ ಮುಂಡೆಯೋವಕ್ಕೆ ನಾಲ್ಕು ಬಿಗ್ದು ಬುದ್ಧಿ ಕಲಿಸೋದು ಬುಟ್ಟು; ನನ್ನ ಕುಟ್ಟೆ ವಪ್ಪುಸ್ತಾ ಇದ್ದೀರಲ್ಲ-ಏನು ಯೋಳ್ಲಿ?” ಎಂದು ತಲೆ ಚಚ್ಚಿ, ಮೀಸೆಯ ಮರೆಗೆ ನಕ್ಕ ನಂಜೇಗೌಡ. “ಸರಿಹೋಯ್ತು. ನಾನು ಶಿಕ್ಷೆ ಮಾಡಲು ಹೋದರೆ ಅವನ ಮಾವ ಗಂಗಪ್ಪ ಸುಮ್ಮನಿರಬೇಕಲ್ಲ!... ನಾಳೆ, ತನ್ನ ಸೋದರಳಿಯನ್ನು ಹೊಡೆದರು ಬಡಿದರೂಂತ ಪಂಚಾಯಿತಿ ಕಟ್ಟೆ ಹತ್ತಿಸಿದರೆ ನಾನೇನು ಮಾಡೊದು, ಗೌಡರೆ?” ಎನ್ನುತ್ತ ಆಕಾಶ ನೋಡಿದರು. ಬೇಲಿಯಲ್ಲಿ ಬೆಳೆದಿದ್ದ ಉಣ್ಣಿಯ ಹಳದಿ ಕೇಸರಿ ಹೂಗೊಂಚಲನ್ನು ಕಿತ್ತು ಮೂಸುತ್ತ. “ಸರಿಕನ ಬುಡಿ. ಆ ಗಂಗಪ್ಪ ಯಾವ ಮಹಾ ಸ್ಯಾಟ- ಅದ್ನ ಸುಟ್ಟರೆ ಇದ್ದಲೂ ಅಲ್ಲ, ಬೂದಿಯೂ ಅಲ್ಲ” ಎಂದ. ಶಾಸ್ತ್ರಿಗಳ ಮುಖ ಗಂಟಿಕ್ಕಿತು. ತನ್ನ ನೋಟವನ್ನು ಪುಂಡರಿಂದ ಕಾಪಾಡಿಕೊಳ್ಳುವ ಸಲುವಾಗಿ, ಇಂಥ ಲಫಂಗನ ನೆರವು ಬಯಸಿದೆನಲ್ಲ-ಎಂದು ಹೇಸಿಗೆಯಾಯಿತು. ತಾನು ಇಷ್ಟು ಕೀಳುಮಟ್ಟಕ್ಕೆ ಇಳಿದೆನಲ್ಲ ಎಂದು ತಮ್ಮ ಬಗ್ಗೆಯೇ ಅಸಹ್ಯಪಟ್ಟರು. ಹಾಳು ಸ್ವಾರ್ಥ ಒಬ್ಬ ವ್ಯಕ್ತಿಯನ್ನು ಇಂಥ ಇಕ್ಕಟ್ಟಿನ ಪರಿಸ್ಥಿತಿಗೆ ತಂದೊಡ್ಡುತ್ತದೆ ಎಂದೆನ್ನಿಸಿ, ದೊಡ್ಡದಾಗಿ ಉಸಿರುಬಿಟ್ಟರು. ಶಾಸ್ತ್ರಿಗಳ ವರ್ತನೆ ಗೌಡನಿಗೆ ವಿಚಿತ್ರವಾಗಿ ಕಂಡಿರಬೇಕು. ಉಣ್ಣೆಯ