ಪುಟ:Vyshakha.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24

ವ್ಯೆಶಾಖ

4

ಅಡಿಕೆ ಮರಗಳಿಗೂ ವೀಳೆಯದೆಲೆ ಹಂಬುಗಳಿಗೂ ಕಟ್ಟು ಬಿಗಿಯುವ ಕಾರ್ಯ ಮುಗಿಯುತ್ತ ಬಂದಿತ್ತು. ಕೊನೆಯ ಒಂದೆರಡು ಮರಗಳಿಗೆ ಅವರನ್ನೂ ಕಟ್ಟು ಬಿಗಿಯುತ್ತಿರುವಾಗಲೆ, “ಮಾಮ, ಮಾಮ- ನಾನು ತೋಟಕ್ಕೆ ಬಂದಿದೀನಿ” ಎನ್ನು ಎಳೆ ವಯಸ್ಸಿನ ದನಿಯನ್ನು ಕೇಳಿ ಕೃಷ್ಣಶಾಸ್ತ್ರಿಗಳು ಹೊರಳಿ ನೋಡಿದರು, ಲಂಗವನ್ನು ಮೇಲೆತ್ತಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬರುತ್ತಿದ್ದ ಸರಸಿ, ಅವಳನ್ನು ಹಿಂಬಾಲಿಸಿ ತಲೆ ತುಂಬಾ ಸೆರಗು ಹೊದೆದ ರುಕ್ಮಿಣಿ- ಇಬ್ರನ್ನೂ ಗಮನಿಸಿ, “ಇವಳನ್ನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದೆ?” ಎಂದು ರುಕ್ಮಿಣಿಯನ್ನು ಪ್ರಶ್ನಿಸಿದರು. “ಹಟಮಾರಿ, ಎಷ್ಟು ತಡೆದರೂ ಕೇಳಲಿಲ್ಲ” ತಪ್ಪು ಮಾಡಿದವಳಂತೆ ರುಕ್ಮಿಣಿ ಮೆಲ್ಲನೆ ಉಸಿರಿದಳು. ಸರಸಿ ಈ ರೀತಿ ಇಚ್ಛೆ ಬಂದಾಗ ತನ್ನ ತಾಯಿಯೋಡನೆಯೂ ರುಕ್ಮಿಣಿಯೊಡನೆಯೂ ತೋಟಕ್ಕೆ ಧಾವಿಸುತ್ತಿದ್ದುದು ಇದೇ ಮೊದಲೇನಲ್ಲ. ಅವಳು ಬಂದಾಗಲೆಲ್ಲ ಶಾಸ್ತ್ರಿಗಳು ಹುಸಿ ಬೇಸರ ತೋರಿದರೂ ಅನಂತರ ಅವಳನ್ನು ಮುದ್ದಿಸುತ್ತಿದ್ದುದರಿಂದ ಸರಸಿಯು ಅವರ ಮಾತಿಗೆ ಕಿಂಚಿತ್ತೂ ಸೊಪ್ಪು ಹಾಕದೆ, ತೋಟದಲ್ಲೆಲ್ಲ ಸಡಗರದಿಂದ ಓಡಾಡುವಳು. ಆಳುಗಳ ಕೆಲಸವನ್ನು ಸರಸಿ ನೋಡುತ್ತ ನಿಂತಾಗ ಮನೆಗಾಗಿ ರುಕ್ಮಿಣಿಯು ವೀಳೆಯದೆಲೆಗಳನ್ನು ಬಿಡಿಸಲು ಪ್ರಾರಂಭಿಸಿದರು. ಶಾಸ್ತ್ರಿಗಳು ಕೊನೆಯ ಮರದ ಹಂಬಿಗೆ ಕಟ್ಟು ಬಿಗಿಯುತ್ತಿರುವಾಗ ತೋಟವನ್ನು ಪ್ರವೇಶಿಸಿದರು ವೆಂಕಟೇಶ ಜೊಯಿಸರು. “ಇನ್ನು ಮುಗೀಲಿಲ್ಲವೆ ತೋಟದ ಕೆಲಸ?” ಎಂದವರೆ “ಹಾಕಿಕೊಳ್ಳಲಿಕ್ಕೆ ಒಂದೆರಡು ಎಲೆ ಬಿಡಿಸಿಕೊಳ್ಳಲೆ?” –ಎನ್ನುತ್ತ, ಶಾಸ್ತ್ರಿಗಳ ಒಪ್ಪಿಗೆಗೆ ಕಾಯದೆ, ಸಮೀಪದ ಮರಕ್ಕೆ ಬಳಸಿದ್ದ ಹಂಬಿನಿಂದ ನಾಲ್ಕೈದು ವೀಳೆಯದೆಲೆಗಳನ್ನು ಕಿತ್ತು, ಸೊಂಟಕ್ಕೆ ಸೆಕ್ಕಿದ್ದ ಬಟ್ಟೆಯ ಚೀಲದಿಂದ ಗೋಟಡಿಕೆ ತೆಗೆದು ಬಾಯಿಗೆ ಎಸೆಯುತ್ತ, ಹಿತ್ತಾಳೆಯ ಉದ್ದನೆ ಸುಣ್ಣದ ಡಬ್ಬಿಯಿಂದ ಸುಣ್ಣವನ್ನು ಹೆಬ್ಬೆರಳಿನ ಉಗುರಿನಿಂದ ಮೀಟಿ ತೆಗೆದು ಎಲಗೆ ಹಚ್ಚುತ್ತಿರುವಂತೆಯೆ, ಶಾಸ್ತ್ರಿಗಳು ಬಿದಿರೇಣಿಯಿಂದ ಕೆಳಗಿಳಿದು ಕೊಳದತ್ತ ಹೆಜ್ಜೆ ಹಾಕುವುದನ್ನು ಗಮನಿಸಿ, ತಾವು ಅವರನ್ನು ಹಿಂಬಾಲಿಸಿದರು. ಶಾಸ್ತ್ರಿಗಳು ಕೊಳದ ಮೆಟ್ಟಿಲುಗಳನ್ನಿಳಿದು ಕೈಕಾಲಿನ ಕೆಸರು ತೊಳೆದು ಮೇಲೆ ಬರುವವರೆಗೆ ವೆಂಕಟೇಶ ಜೋಯಿಸರು ಮೇಲುಗಡೆಯ ಮೆಟ್ಟಿಲು