ಪುಟ:Vyshakha.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34

ವ್ಯೆಶಾಖ

ಲಕ್ಕ ಸುಮ್ಮಕೆ ಕುಂತೇ ಇದ್ದ. ಮುದುಕಿ ಅಂಗೆ ನೋಡದ್ಲು ಇಂಗೆ ನೋಡದ್ಲು... ಒಂದುದಪ ಅವಳು ಇಂಗೆ ಅವಿತು ಗುಮ್ಮ ಆಡ್ತ ಇಣಕಿ ನೋಡ್ತಿರೋನೂವೆ ಲಕ್ಕ ನ್ವಾಡೇಬುಟ್ಟ!... ಆಗ ಅವಳ ಮೊಖ ತನ್ನ ನೆರಿಗೆ ನೆರಿಗೇಲೂವೆ ನಗಾವ ಮೊಡಿಸಿ ಮುಕ್ಕುಳುಸ್ತಿತ್ತು! “ಯಾಕ್ಲಾ ನಗಾಡೀಯೆ?” – ಅಂತಾನೆ ವೊರೀಕೆ ಬಂದ್ಲು. ಕಯ್ಯಾಗೆ ಒಂದು ಮುರುಕು ರೊಟ್ಟಿಯೂ ಇತ್ತು... ಆದ್ರೆ, “ನಿಂಗ್ಯಾರೊ ಕ್ವಡಕ್ಕೆ ಬಂದಿರಾರ” ಅಂತ ಬೀದಿ ಬಾಗಿಲತ್ರ ನಡುದಾಗ, ಮುಂಬಾಗಿಲ ಅಬ್ಬುಗೆ ಮ್ಯಾಲೆ ನಾಲಿಗೆ ಇರಿದು ಕುಂತಿದ್ದ ಬೊಡ್ಡ ಚೇತರಿಸಿಕಂಡು ಬೊಗಳಕ್ಕೆ ಮುಟ್ಟುಗತ್ತು. ಅದ್ಕೆ ರೊಟ್ಟಿ ಮುರುಕ ತಿನ್ನುಸಿ, ಇಂದ್ಕೆ ತಿರುಗಿ ನ್ವಾಡಿದಾಗ, ಲಕ್ಕ ಅವಳಿಂದ ಬಂದು ತಲೆ ತಗ್ಗುಸಿ ನಿಂತಿದ್ದ. “ಅಪ್ಪಯ್ಯ- ಆಗ್ಲೆ ಎದ್ದುನಿಂತ!... ಎತ್ತಾಗಿ ವೊಂಟದೆ ಸವಾರಿ?- ಅಲ್ಲ ಕನೋ ನೀ ರೊಟ್ಟಿ ತಿನ್ನದಿದ್ರೆ ಸಮ. ಆದ್ರೆ ನಿನ್ನ ಕಯ್ಲಿ ಎಮ್ಮೆ ಕರೀನ ಅಕ್ರ ತೆಗುಸಿ, ಕೇಮೆ ಮಾಡಿಸಿಕಂಡು. ನಿಂಗೆ ಕೂಲಿ ಕ್ವಡದೆ ಕಳುಸುದ್ರೆ ಯಾವ ತಲೆಪೊಟರಾಯ ಮೆಚ್ಚಾನು?...” “ಅಯ್ಯೊ, ಬುಡಿ, ಇದ್ಕೆಲ್ಲ ಯೆಂತಾ ಕೂಲಿ?- ಕಂಡ್ತಾ ಬ್ಯಾಡಿ. ನನ್ನ ಕತ್ತು ಕೂದರೂ ತಕ್ಕಳಕ್ಕಿಲ್ಲ...” ಲಕ್ಕ ಕೂಗ್ತಾನೆ ಇದ್ದ. ಅವನ ಒಂದು ಮಾತು ಮುಕ್ಕಸ ತನ್ನ ಕಿವಿಗೆ ಬೀಳನೇ ಇಲ್ವೇನೋ ಅನ್ನೋಳಂಗೆ ಬುಂಡಮ್ಮ ಅಡುಗೆ ಕ್ವಾಣೆಗೆ ನಡದು ವೊರಬಂದಾಗ ಅವಳ ಕಯ್ಲಿ ಯೇನೋ ಇತ್ತು. “ಅಯ್ಯೊ, ಬ್ಯಾಡಿ ಬ್ಯಾಡೀಂದ್ರೂವೆ ಪುನಾ ತಂದು ಬುಟ್ರಲ್ಲ” - ಲಕ್ಕ ಪೇಚಿಕೊತ್ತ ಇರೋನೂವೆ, “ತಕ್ಕ, ತಕ್ಕ, ಇದು ನಿಂಗೇನು ಯತ್ವಾಸ ಮಾಡಕ್ಕಿಲ್ಲ ಕನಂತೆ. ಇದ್ನ ನಿ ಬಾಯಗೆ ಇಡಾದೆ ತಡ, ವಳೀಕೆ ಸಲೀಸಾಗಿ ವೊಂಟೋಯ್ತದೆ... ನಿನ್ನ ಸರೀರಕೂ ತ್ವಂದರೆ ಕ್ವಡಕ್ಕಿಲ್ಲ”- ಅಂದು, ಹಸಿ ಮುತ್ತುಗದೆಲೆ ಮ್ಯಾಲೆ ಯೇನೊ ಇದ್ದದ್ದ ಕಯ್ಯಾಗಿಟ್ಟಾಗ, ಲಕ್ಕ ನ್ವಾಡಿಕಂಡ. ಅದು ತನಗೆ ಬಾಯ್ನಲ್ಲಿ ನೀರೂರಿಸೊ ಆಲುಂಡಿಗೆ!... ಅವ್ನ ಮೊಖ ಅರಳಿಕತ್ತು... ಕುಸ್ಯಾಗಿ ಮುದುಕಿ ಮೊಖ ನ್ವಾಡಿದ. ಬುಂಡಮ್ಮ, “ಇದೂವೆ ನಿಂಗೆ ಸೆಡೀದಿದ್ರೆ, ನಿನ್ನ ಬೊಡ್ಡ ಕಾಯಿಕಂಡದೆ. ಅಕಿಬುಡು” ಅಂದ್ಲು.