ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಭಕೋಣಂ

ವಿಕಿಸೋರ್ಸ್ದಿಂದ

ಕುಂಭಕೋಣಂ

 ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ, ಕಾವೇರಿ ನದಿಯ ದಂಡೆಯಲ್ಲಿ, ಮದ್ರಾಸಿನಿಂದ 197 ಮೈ. ದೂರದಲ್ಲಿರುವ ಒಂದು ಪುರಾತನ ನಗರ. ಹಿಂದೆ ಇದು ಚೋಳರ ರಾಜಧಾನಿಯಾಗಿತ್ತು. ವಿಸ್ತೀರ್ಣ 12 ಚ.ಕಿಮೀ. ಜನಸಂಖ್ಯೆ 92,581 (1961). ಇಲ್ಲಿ ಕುಂಭೇಶ್ವರ ದೇವಾಲಯವಿರುವುದರಿಂದ ಇದಕ್ಕೆ ಈ ಹೆಸರು ಬಂದಿರುವುದಾಗಿ ಹೇಳಲಾಗಿದೆ. ಕಾವೇರಿಯ ಎರಡು ಶಾಖೆಗಳ ಮಧ್ಯದಲ್ಲಿ ಪೂರ್ವ ಪಶ್ಚಿಮವಾಗಿ ಹರಡಿದೆ. 3 ಮೈ. ಉದ್ದದ ತಗ್ಗು ಪ್ರದೇಶದಲ್ಲಿ ಉ. ಅ. 10 58' ಮತ್ತು ಪೂ. ರೇ. 79 25' ಮೇಲಿದೆ. ಇದರ ಪುರಾತನ ಐತಿಹಾಸಿಕ ದಾಖಲೆಗಳು ಅಪೂರ್ಣವಾಗಿವೆ. ಆದಿಶಂಕರರಿಂದ ಸ್ಧಾಪಿತವಾದುದೆಂದು ಹೇಳಲಾದ ಕಾಶೀ ಮಠ ಇಲ್ಲಿದೆ. ಇಲ್ಲಿ 12 ಶಿವದೇವಸ್ಧಾನಗಳೂ 4 ವಿಷ್ಣುದೇವಸ್ಥಾನಗಳೂ, ಒಂದು ಬ್ರಹ್ಮದೇವ ಸ್ಧಾನವೂ ಇದೆ. ಇಲ್ಲಿಯ ದೇವಾಲಯಗಳಲ್ಲಿ ಪ್ರಮುಖವಾದ್ದು ವಿಜಯನಗರ ಕಾಲದಲ್ಲಿ ನಿರ್ಮಿಸಲಾದ, 147' ಎತ್ತರದ ಸುಂದರ ಗೋಪುರವಿರುವ ಸಾರಂಗಪಾಣಿ ಸ್ವಾಮಿ (ವಿಷ್ಣು) ದೇವಸ್ಧಾನ. ಕುಂಭೇಶ್ವರ ದೇವಸ್ಧಾನದ (ಶಿವ) ಮೂರ್ತಿಗಳಿಗಾಗಿ ನಿರ್ಮಿಸಲಾಗಿರುವ ಬೆಳ್ಳಿಯ ವಾಹನಗಳು ಸೌಂದರ್ಯ ಹಾಗೂ ವೈವಿಧ್ಯಕ್ಕೆ ಹೆಸರಾಗಿವೆ. ಇಲ್ಲಿಯ ಚೋಳರ ಕಾಲದ ನಾಗೇಶ್ವರ ದೇವಾಲಯದಲ್ಲಿ ವರ್ಷದ ಕೆಲವು ದಿನಗಳಲ್ಲಿ ಲಿಂಗದ ಮೇಲೆ ಸೂರ್ಯನ ಕಿರಣಗಳು ಬೀಳುವುದರಿಂದ, ಇಲ್ಲಿ ಸೂರ್ಯನಿಗೂ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ. ಚಕ್ರಪಾಣಿಯ ದೇವಾಲಯದಲ್ಲಿ ಚಿತ್ರರೂಪದಲ್ಲಿ ವಿಷ್ಣುವನ್ನು ರೂಪಿಸಲಾಗಿದೆ. ಸುತ್ತಲೂ ದೇವಸ್ಧಾನಗಳನ್ನುಳ್ಳ ಪವಿತ್ರವಾದ ಮಹಾಮಘುಮ್ ಕೆರೆ ಸುಮಾರು 20 ಎಕರೆಗಳಷ್ಟು ವಿಸ್ತಾರವಾದ್ದು. ಇದರ ನಾಲ್ಕು ಮೂಲೆಗಳಲ್ಲೂ ಸುಂದರವಾದ ಮಂಟಪಗಳಿವೆ. ಇಲ್ಲಿ ಪ್ರತಿವರ್ಷ ಫೆಬ್ರುವರಿಯಲ್ಲಿ ನಡೆಯುವುದಾದರೂ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಘಮ್ ಉತ್ಸವ ಬಹು ಪ್ರಸಿದ್ಧ ವಾದ್ದು. ಆಗ ಸು. 5 ಲಕ್ಷ ಜನ ಯಾತ್ತಾರ್ಥಿಗಳು ಇಲ್ಲಿಗೆ ಬರುತ್ತಾರೆ.

 ಕುಂಭಕೋಣ ಪ್ರಮುಖ ಕೈಗಾರಿಕಾ ಕೇಂದ್ರವೂ ಹೌದು. ಇಲ್ಲಿ ರೇಷ್ಮೆಸೀರೆ, ಹತ್ತಿಬಟ್ಟೆ, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು, ಗಂಟೆ ಮುಂತಾದವುಗಳ ತಯಾರಿಕೆಯಾಗುತ್ತದೆ. ಅಕ್ಕಿ ಗಿರಣಿ, ತೆಂಗಿನ ಎಣ್ಣೆಯ ತಯಾರಿಕೆ ಇವು ಇಲ್ಲಿಯ ಎರಡು ದೊಡ್ಡ ಕೈಗಾರಿಕೆಗಳು. ಬತ್ತ, ತೆಂಗು, ವೀಳೆಯದೆಲೆ ಮತ್ತು ಬಾಳೇ ಹಣ್ಣು ಇಲ್ಲಿಯ ಮುಖ್ಯ ಕೃಷಿ ಉತ್ಪನ್ನಗಳು. ಸರ್ಕಾರಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಶಾಲೆಗಳೂ ಇತರ ಹಲವಾರು ಶಾಲೆಗಳೂ ಇವೆ. ಇದು ರೈಲ್ವೆ ಮತ್ತು ರಸ್ತೆಗಳ ಸಂಧಿಸ್ಧಳ.

 

(ಯು.ಜೆ.ಎಂ.ಜಿ.ಎಚ್.)