ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಣಿಗಲ ತೋರ

ವಿಕಿಸೋರ್ಸ್ದಿಂದ

ಗಣಿಗಲ ತೋರ : ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದ ಬ್ಯಾರಿಂಗ್ಟೋನಿಯ ರೇಸಿಮೋಸ ಎಂಬ ಶಾಸ್ತ್ರೀಯ ಹೆಸರಿನ ಮರ. ನೀವಾರ ಎಂಬುದು ಇದರ ಪರ್ಯಾಯ ನಾಮ. ಭಾರತ, ಮಲಯ, ಪಾಲಿನೇಷ್ಯ ದ್ವೀಪಸ್ತೋಮಗಳು, ಅಂಡಮಾನ್ ದ್ವೀಪಗಳು - ಇಲ್ಲೆಲ್ಲ ಇದರ ವ್ಯಾಪ್ತಿಯಿದೆ. ಸ್ವಾಭಾವಿಕವಾಗಿ ನದೀದಂಡೆಗಳಲ್ಲಿ ತಾನೇತಾನಾಗಿ ಬೆಳೆಯುತ್ತದೆ. ಭಾರತದಲ್ಲಿ ಹೆಚ್ಚು ಕಡಿಮೆ ಎಲ್ಲ ಕಡೆಗಳಲ್ಲೂ ಇದನ್ನು ಕಾಣಬಹುದು. ಸದಾ ಹಸುರಾಗಿರುವ ಜೋಲುರೆಂಬೆಗಳು ಈ ಮರದ ವೈಶಿಷ್ಟ್ಯ. ನಸುಗೆಂಪು ಬಣ್ಣದ ಹೂ ಬಿಡುತ್ತದೆ. ಬೀಜಗಳಲ್ಲಿರುವ ಪಿಷ್ಟದ ಪರಿಣಾಮ ಹೆಚ್ಚು. ಈ ಪಿಷ್ಟವನ್ನು ಸಂಗ್ರಹಿಸಿ ಆಹಾರ ಪದಾರ್ಥವಾಗಿ ಬಳಸುವ ಪದ್ಧತಿ ಮಲಯದಲ್ಲಿ ಉಂಟು. ಅಲ್ಲದೆ ಮರದ ಎಳೆ ಎಲೆಗಳನ್ನು ಸಹ ತಿನ್ನುವುದಿದೆ. ಗಣಿಗಲ ತೋರ ಸಾಧಾರಣ ಗಾತ್ರದ ಸುಂದರ ಮರ. ಇದನ್ನು ಉದ್ಯಾನರಸ್ತೆಗಳ ಅಕ್ಕ ಪಕ್ಕಗಳಲ್ಲಿ ಬೆಳೆಸುತ್ತಾರೆ. ಇದರ ವೃದ್ಧಿ ಬೀಜಗಳ ಮೂಲಕ. ಬೀಜ, ಕಾಯಿ ಮತ್ತು ಬೇರುಗಳಿಗೆ ಔಷಧೀಯ ಗುಣಗಳಿವೆ. ಕಾಯಿಯನ್ನು ಕೆಮ್ಮು, ಉಬ್ಬಸ, ಅತಿಸಾರ ಮುಂತಾದ ಕಾಯಿಲೆಗಳ ನಿವಾರಣೆಗೂ ಬೀಜಗಳನ್ನು ಹಸುವಿನ ತುಪ್ಪದೊಂದಿಗೆ ಸೇರಿಸಿ ಅರೆದು ಕಾಡಿಗೆಯ ರೂಪದಲ್ಲಿ ಹಲವು ಬಗೆಯ ಕಣ್ಣುಬೇನೆಗಳಿಗೂ ಬಳಸುವುದಿದೆ. ಇದರ ಬೀಜ, ತೊಗಟೆಗಳಲ್ಲಿ ಮೀನು ಮತ್ತು ಕಾಡುಹಂದಿಗಳಿಗೆ ಮಾರಕವಾದ ವಿಷವಿರುವುದರಿಂದ ಆ ಪ್ರಾಣಿಗಳನ್ನು ಕೊಲ್ಲಲು ಇವನ್ನು ಉಪಯೋಗಿಸುತ್ತಾರೆ.