ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಮ್ಮಟ

ವಿಕಿಸೋರ್ಸ್ದಿಂದ

ಮಮ್ಮಟ:- ಹನ್ನೊಂದನೆಯ ಶತಮಾನದ ಸಂಸ್ಕøತ ಲಾಕ್ಷಣಿಕ ಗ್ರಂಥಕಾರರಲ್ಲಿ ಪ್ರಸಿದ್ಧನಾದವ. ಕಾವ್ಯಪ್ರಕಾಶ ಗ್ರಂಥದ ಕರ್ತೃ. ಧ್ವನಿ ವಿರೋಧಿಗಳ ಮತವನ್ನು ಸಲಕ್ಷಣವಾಗಿ ಖಂಡನೆ ಮಾಡಿರುವುದರಿಂದ ಈತನ ಅನಂತರ ಯಾರಿಗೂ ಧ್ವನಿಯನ್ನು ವಿರೋಧಿಸುವ ಧೈರ್ಯವಾಗಲಿಲ್ಲ. ಈ ಕಾರಣದಿಂದಲೇ ಈತನಿಗೆ ಧ್ವನಿ ಪ್ರಸ್ತಾಪನ ಪರಮಾಚಾರ್ಯ ಎಂಬ ಬಿರುದು ಇದೆ. ಭಾಷ್ಮಕಾರ ಉವ್ವಟ ಈತನ ಸಹೋದರರು ಎನ್ನಲಾಗಿದೆ. ಈತ ಬಹುಶ್ರುತ ಹಾಗೂ ವೈಯಾಕರಣಿ. ಕಾವ್ಯ ಪ್ರಕಾಶಕ್ಕೆ ಅನೇಕ ವ್ಯಾಖ್ಯಾನಗಳಿದ್ದರೂ ಅದು ಈಗಲೂ ಕಠಿಣವಾಗಿದೆ. ಶಬ್ದವ್ಯಾಪಾರ ವಿಚಾರವೆಂಬ ಇನ್ನೊಂದು ಗ್ರಂಥವನ್ನೂ ಈತ ಬರೆದಿದ್ದಾನೆ ಎನ್ನಲಾಗಿದೆ. ಕಾವ್ಯ ಪ್ರಕಾಶದಲ್ಲಿ ಹತ್ತು ಉಲ್ಲಾಸಗಳಿವೆ. ಇವುಗಳಲ್ಲಿ ಕ್ರಮವಾಗಿ ಕಾವ್ಯ ಸ್ವರೂಪ, ವೃತ್ತಿವಿಚಾರ, ಧ್ವನಿಭೇದ, ಗುಣಿ ಭೂತವ್ಯಂಗ್ಯ, ಚಿತ್ರಕಾವ್ಯ, ದೋಷಗುಣ, ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳ ವಿವೇಚನೆ ಇದೆ. ಗ್ರಂಥ ಅತ್ಯಂತ ಪ್ರೌಢ, ಸಾರಗರ್ಭಿತ ಹಾಗೂ ಪಾಂಡಿತ್ಯ ಪೂರ್ಣವಾಗಿದೆ. 142 ಕಾರಿಕೆಗಳನ್ನೂ ಅದರ ಮೇಲೆ ವೃತ್ತಿಯನ್ನೂ ವಿಪುಲ ಉದಾಹರಣೆಗಳನ್ನೂ ಕೊಡಲಾಗಿದೆ. ಸುಮಾರು 600 ಶ್ಲೋಕಗಳನ್ನೂ ಉದಾಹರಿಸಲಾಗಿದೆ. ಹತ್ತನೆಯ ಉಲ್ಲಾಸದಲ್ಲಿ ಪರಿಕರ ಅಲಂಕಾರದವರೆಗೆ ಮಮ್ಮಟ ಗ್ರಂಥ ರಚಿಸಿದ್ದಾನೆ. ಮುಂದಿನ ಭಾಗವನ್ನು ಅಲ್ಲಟನೆಂಬ ಕಾಶ್ಮೀರ ವಿದ್ವಾಂಸ ರಚಿಸಿ ಪೂರ್ಣಮಾಡಿದ್ದಾನೆ ಎನ್ನಲಾಗಿದೆ. (ಎ.ಎಲ್.ಎಚ್.)