ವಟ ಸಾವಿತ್ರಿ ಕಥೆ

ವಿಕಿಸೋರ್ಸ್ದಿಂದ

ಮದ್ರ ದೇಶದ ದೊರೆ ಅಶ್ವಪತಿಗೆ ಹೇರಳವಾದ ಧನಧಾನ್ಯ ಸಂಪತ್ತು, ಸುಭಿಕ್ಷವಾದ ರಾಜ್ಯ, ಸುಖಜೀವಿ ಪ್ರಜಾವರ್ಗ -ಹೀಗೆ ಎಲ್ಲವೂ ಚೆನ್ನಾಗಿಯೇ ಇತ್ತು; ಆದರೂ ಅವನನ್ನು ಕಾಡುತ್ತಿದ್ದ ಒಂದೇಒಂದು ಮತ್ತು ಬಹುದೊಡ್ಡ ಚಿಂತೆಯೆಂದರೆ ಸಂತಾನಹೀನನಾಗಿದ್ದುದು. ಅದಕ್ಕಾಗಿ ಅವನು ಹದಿನೆಂಟು ವರ್ಷಗಳ ಕಾಲ ಕಠೋರ ತಪಸ್ಸನ್ನಾಚರಿಸಿದ ಮೇಲೆ ಸರಸ್ವತಿದೇವಿಯ ಅನುಗ್ರಹವಾಗಿ ಅವನ ರಾಣಿಯು ` ಸಾವಿತ್ರಿ' ಎಂಬ ಮುದ್ದಾದ ಹೆಣ್ಣುಮಗುವಿಗೆ ಜನ್ಮವಿತ್ತಳು. ಅರಮನೆಯ ಅಂದ ಆನಂದಗಳನ್ನು ನೂರುಪಟ್ಟು ಹೆಚ್ಚಿಸಿದ ಬಾಲೆ ಸಾವಿತ್ರಿ, ಆಟವಾಡುತ್ತ ವಿದ್ಯೆಕಲಿಯುತ್ತ ನೋಡುನೋಡುತ್ತಿದ್ದಂತೆ ದೊಡ್ಡವಳಾಗಿಯೇಬಿಟ್ಟಳು, ಅಶ್ವಪತಿಯು ಅವಳ ಸ್ವಯಂವರವನ್ನೂ ಏರ್ಪಡಿಸಿದ. ಪಕ್ಕದರಾಜ್ಯದ ದ್ಯುಮತ್ಸೇನ ಎಂಬ ಅರಸನ ಮಗ ಸ್ಫುರದ್ರೂಪಿ ತರುಣ ಸತ್ಯವಾನನನ್ನು ವರಿಸಿದಳು ಸಾವಿತ್ರಿ.

ವಿವಾಹದ ತಯಾರಿಗಳೆಲ್ಲ ನಡೆದಿರಲು ಅಲ್ಲಿಗೆ ಬಂದ ತ್ರಿಲೋಕಸಂಚಾರಿ ನಾರದಮಹರ್ಷಿಗಳು ಘೋರವಾದ ಮತ್ತು ಆತಂಕಕಾರಿಯಾದ ಸುದ್ದಿಯೊಂದನ್ನು ಸಾವಿತ್ರಿಯ ಬಳಿ ಹೇಳಿದರು - ಅದೇನೆಂದರೆ, ಮದುವೆಯಾಗಿ ಸರಿಯಾಗಿ ಒಂದು ವರ್ಷ ಪೂರ್ತಿಯಾಗುವ ದಿನವೇ ಸತ್ಯವಾನ ಅಸುನೀಗಲಿದ್ದಾನೆ ಎಂಬುದಾಗಿ. ಇದನ್ನು ಕೇಳಿದ ಅಶ್ವಪತಿಗೋ ದಿಗ್ಭ್ರಮೆ, ಕಳವಳ. ಸತ್ಯವಾನನನ್ನು ಬಿಟ್ಟು ಬೇರೆಯಾರನ್ನಾದರೂ ವರಿಸುವಂತೆ ಸಾವಿತ್ರಿಯನ್ನು ವಿಧವಿಧದಲ್ಲಿ ತಿಳಿಯಹೇಳುವ ಪ್ರಯತ್ನವನ್ನವನು ಮಾಡಿದ, ಆದರೆ ಸಾವಿತ್ರಿಯದು ಅಚಲನಿರ್ಧಾರ. ಏನೇ ಆದರೂ ತಾನು ಸತ್ಯವಾನನನ್ನೇ ಮದುವೆಯಾಗುವವಳು ಎಂಬುದೊಂದೇ ಮಾತು. ಕೊನೆಗೂ ಬೇರೆ ಉಪಾಯವಿಲ್ಲದೆ ಮಗಳ ವಿವಾಹಸಮಾರಂಭವನ್ನು ನೆರವೇರಿಸಿದ ಅಶ್ವಪತಿ ಗಂಡನ ಮನೆಗೆ ಅವಳನ್ನು ಬೀಳ್ಕೊಟ್ಟ.

ಸಾವಿತ್ರಿಯ ದುರಾದೃಷ್ಟ ಆವಾಗಲೇ ಆರಂಭವಾಯಿತೇನೊ ಎನ್ನುವಂತೆ ಸತ್ಯವಾನನ ತಂದೆ ದ್ಯುಮತ್ಸೇನನ ರಾಜ್ಯವನ್ನು ಶತ್ರುಗಳು ವಶಪಡಿಸಿಕೊಂಡರು. ಮೊದಲೆಲ್ಲ ಅಶ್ವಪತಿಯಷ್ಟೇ ಬಲಶಾಲಿ ಮತ್ತು ಪರಾಕ್ರಮಿಯಾಗಿದ್ದವನಾದರೂ ಇದೀಗ ಅವನಿಗೆ ಪ್ರಾಯ ಸಂದಿತ್ತು ಮಾತ್ರವಲ್ಲದೆ ಅಂಧತ್ವವೂ ಇತ್ತು. ರಾಜ್ಯಕಳೆದುಕೊಂಡು ಒಂದು ಕಾಡಿನಲ್ಲಿ ಆ ಮುದಿ ತಂದೆ-ತಾಯಿ ಮತ್ತು ಈ ನವವಿವಾಹಿತ ಜೋಡಿ ಸೇರಿ ಬದುಕನ್ನು ಸಾಗಿಸಬೇಕಾಯಿತು. ಅಷ್ಟಾದರೂ ಸಾವಿತ್ರಿ ಮಾತ್ರ ನಗುಮುಖದಿಂದಲೇ ಗಂಡ ಮತ್ತು ಅತ್ತೆ-ಮಾವಂದಿರ ಸೇವೆ ಮಾಡಿಕೊಂಡು, ಒಂದು ವರ್ಷದಲ್ಲಿ ಗಂಡ ಸಾಯಲಿದ್ದಾನೆ ಎಂಬ ಕಠೋರಸತ್ಯವನ್ನು ತನ್ನ ಹೊಟ್ಟೆಯಲ್ಲಿ ಹಾಕಿಕೊಂಡು ಸಂತೃಪ್ತಭಾವದಿಂದಲೇ ದಿನ ಕಳೆಯುತ್ತಿದ್ದಳು. ದುಗುಡ, ಪಶ್ಚಾತ್ತಾಪಗಳನ್ನೆಂದೂ ಅವಳು ಯಾರೆದುರೂ ತೋರಿಕೊಳ್ಳುತ್ತಿರಲಿಲ್ಲ.

ದಿನಗಳು ಉರುಳಿ ತಿಂಗಳುಗಳು ಕಳೆದು ಇನ್ನೇನು ನಾರದರು ಹೇಳಿದ್ದ ಗಡುವಿಗೆ ಮೂರೇ ದಿನ ಬಾಕಿ ಉಳಿದಿದ್ದುವು. ಆಗಲೂ ಧೃತಿಗೆಡಲಿಲ್ಲ ಸಾವಿತ್ರಿ. ಮೂರು ದಿನವೂ ಅನ್ನಾಹಾರ ನಿದ್ರೆಯಿಲ್ಲದೆ ಕಟ್ಟೆಚ್ಚರದಿಂದ ಸತ್ಯವಾನನ ಜತೆಯಲ್ಲೇ ಇರುತ್ತೇನೆಂದು ಪಣತೊಟ್ಟಳು. ದೇವರ ಮೇಲೆ ಭಾರಹಾಕಿ ಪ್ರಾರ್ಥನೆ ಸಲ್ಲಿಸಿದಳು. ಕೊನೆಗೂ ಬಂದೇ ಬಿಟ್ಟಿತು ಆ ದಿನ. ಸತ್ಯವಾನ ಎಂದಿನಂತೆ ಅವತ್ತೂ ಕಟ್ಟಿಗೆ ತರಲು ಕೊಡಲಿಯನ್ನು ಹಿಡಿದು ಹೊರಟ. ತಾನೂ ಜತೆಯಲ್ಲಿ ಬರುವೆನೆಂದು ಅವನನ್ನು ಹಿಂಬಾಲಿಸಿದಳು ಸಾವಿತ್ರಿ.

ಒಂದಿಷ್ಟು ಕಟ್ಟಿಗೆ ಒಟ್ಟುಮಾಡಿ ಆಗಿತ್ತಷ್ಟೆ, ಆಗಲೇ ಸತ್ಯವಾನ ತನಗೇಕೋ ಸಂಕಟವಾಗುತ್ತಿದೆ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಆಮೇಲೆ ಕೆಲಸ ಮುಂದುವರೆಸುತ್ತೇನೆಂದ. ಆ ಸತಿ-ಪತಿಯರು ಆಗ ಒಂದು ದೊಡ್ಡ ಆಲದಮರದ ಕೆಳಗಡೆಗೆ ಬಂದಿದ್ದರು. ಅಲ್ಲೇ ಕುಳಿತ ಸಾವಿತ್ರಿ ತನ್ನ ತೊಡೆಯ ಮೇಲೆ ತಲೆಯನ್ನಿಟ್ಟು ಮಲಗುವಂತೆ ಸತ್ಯವಾನನಿಗೆ ಹೇಳಿದಳು. ಏಕಾಏಕಿ ನಿಸ್ತೇಜನಾದ ಸತ್ಯವಾನ ಒಂದುರೀತಿ ನರಳಲಾರಂಭಿಸಿದ. ನಿಗದಿತ ವೇಳೆಗೆ ಅವನ ಪ್ರಾಣಪಕ್ಷಿ ಹಾರಿಹೋಗುವುದಕ್ಕೂ ಆಗ ಅಲ್ಲೊಂದು ಕರಾಳ ಆಕೃತಿ ಗೋಚರಿಸುವುದಕ್ಕೂ ಸರಿಯಾಯಿತು. ಅದು ಬೇರಾರೂ ಅಲ್ಲ, ಸಾಕ್ಷಾತ್ ಯಮಧರ್ಮರಾಯ!


ತನ್ನ ಕೈಯಲ್ಲಿನ ಪಾಶದಿಂದ ಸತ್ಯವಾನನ ಆತ್ಮವನ್ನು ಎಳೆದುಕೊಂಡು ದಕ್ಷಿಣದಿಕ್ಕಿಗೆ ಹೊರಟೇಬಿಟ್ಟ ಯಮ. ಇದೆಲ್ಲ ಕಣ್ಮುಚ್ಚಿತೆರೆಯುವುದರೊಳಗೆ ಘಟಿಸಿದ ಅನುಭವ ಸಾವಿತ್ರಿಗೆ. ಅವಳು ಎದ್ದುನಿಂತು ಆರ್ತನಾದಗೈಯುತ್ತ ಯಮಧರ್ಮರಾಯನನ್ನೇ ಹಿಂಬಾಲಿಸತೊಡಗಿದಳು. ತನ್ನ ಹಿಂದೆಯೇ ಬರುತ್ತಿರುವ ಈ ನಾರಿಯನ್ನು ಕಂಡು ಯಮನಿಗೆ ಆಶ್ಚರ್ಯ! ` ನೀನು ಬರುವಂತಿಲ್ಲ, ನಿನ್ನ ಪತಿಯ ಪ್ರಾಣವನ್ನಷ್ಟೆ ತೆಗೆದುಕೊಂಡು ಹೋಗಲು ನಾನು ಬಂದವನು, ನೀನು ಹಿಂದಿರುಗು' ಎಂದು ಅವನು ಸಾವಿತ್ರಿಯನ್ನು ಎಚ್ಚರಿಸಿದ. ಆಕೆ ಅದಾವುದನ್ನೂ ಕಿವಿಗೆಹಾಕಿಕೊಳ್ಳದೆ ಯಮನಿಗೇ ಸವಾಲೆಸೆದಳು, ಒಂದೋ ತನ್ನ ಪತಿಯ ಪ್ರಾಣವನ್ನು ಹಿಂದಿರುಗಿಸು ಇಲ್ಲ ಪತಿಯೊಟ್ಟಿಗೆ ತನ್ನನ್ನೂ ಕರೆದೊಯ್ಯು ಎಂದು. ಅವಳನ್ನು ಅದೆಷ್ಟು ಸಮಾಧಾನಿಸಿದರೂ ಗದರಿಸಿದರೂ ಉಪಯೋಗವಾಗಲಿಲ್ಲ. ಏನೇನೋ ವರಗಳ ಆಮಿಷ ತೋರಿಸಿದರೂ ಸಾವಿತ್ರಿ ಕೇಳುತ್ತಿದ್ದದ್ದು ಒಂದೇ - ಸತ್ಯವಾನ ಮತ್ತೆ ಬದುಕಬೇಕು, ಇಲ್ಲವಾದಲ್ಲಿ ತಾನೂ ಸತ್ತು ಅವನ ಸಹಭಾಗಿಯಾಗಿ ಸ್ವರ್ಗಸೇರಬೇಕು.

ಸಾವಿತ್ರಿಯ ನಿರ್ಮಲ ನಿಸ್ಪೃಹ ನಿರ್ವ್ಯಾಜ ಪತಿಭಕ್ತಿಯೆದುರು ಯಮ ಕುಬ್ಜನಾದ. ಆಕೆಯ ಅಚಲಪ್ರೇಮವನ್ನು ಕಂಡು ಮಮ್ಮಲಮರುಗಿದ. ಯಾವ ಆಲದ ಮರದ ಬುಡದಿಂದ ಸತ್ಯವಾನನ ಪ್ರಾಣವನ್ನು ಕಸಿದುಕೊಂಡುಹೋಗಿದ್ದನೋ ಅಲ್ಲಿಗೇ ಮರಳಿ ಅವನ ಮೃತಶರೀರದಲ್ಲಿ ಮತ್ತೆ ಪ್ರಾಣವಾಯು ಸಂಚರಿಸುವಂತೆ ಮಾಡಿದ. ಪತಿಯೇ ಪರದೈವವೆಂದು ನಂಬಿದ ಸಾವಿತ್ರಿಯನ್ನು ಮನಸಾರೆ ಹರಸಿದ ಯಮ ನೂರುಕಾಲ ಬಾಳುವಂತೆ ಅವರಿಬ್ಬರನ್ನು ಅನುಗ್ರಹಿಸಿ ಅಲ್ಲಿಂದ ಕಣ್ಮರೆಯಾದ.

ನಿದ್ದೆಯಿಂದ ಎಚ್ಚರಗೊಂಡವನಂತೆ ಎದ್ದು ಕುಳಿತ ಸತ್ಯವಾನ, ಇದೆಲ್ಲ ತನ್ನ ಕನಸಿನಲ್ಲಿ ನಡೆಯಿತೋ ಎಂದು ಸಾವಿತ್ರಿಯನ್ನು ಕೇಳಿದ. ಮುಸ್ಸಂಜೆ ಕಳೆದು ಹುಣ್ಣಿಮೆಯ ಚಂದಿರ ಪೂರ್ವದಂಚಿನಲ್ಲಿ ಇಣುಕಿ ಈ ಅಪೂರ್ವಚಮತ್ಕಾರಕ್ಕೆ ಮಂಗಳ ಹಾಡಲು ಬಂದಿದ್ದ. ಕಟ್ಟಿಗೆ ಒಯ್ಯುವುದು ತಡವಾಯಿತೆಂದು ಲಗುಬಗೆಯಿಂದ ಮನೆಯತ್ತ ಮರಳಿದ ಸತ್ಯವಾನ-ಸಾವಿತ್ರಿ ಅಲ್ಲಿ ನೋಡುವುದೇನು, ತಂದೆ-ತಾಯಿಯರು ಸಂತಸದಲ್ಲಿದ್ದಾರೆ, ರಾಜ್ಯವನ್ನು ಕಸಿದುಕೊಂಡಿದ್ದ ಶತ್ರುಗಳು ಪರಾರಿಯಾಗಿ ಮತ್ತೆ ರಾಜ್ಯಭಾರಕ್ಕೆ ಬರಬೇಕೆಂದು ಅದಾಗಲೇ ದೂತನೊಬ್ಬ ಅವರನ್ನು ಕರೆದಾಗಿತ್ತು! ಸಾವಿನಮನೆಯನ್ನು ಹೊಕ್ಕು ಮರಳಿದ ಮಗ ಸತ್ಯವಾನ, ಸಾವನ್ನೇ ಜಯಿಸಿದ ಸೊಸೆ ಸಾವಿತ್ರಿ; ದ್ಯುಮತ್ಸೇನನ ಆನಂದಕ್ಕೆ ಪಾರವೇ ಇಲ್ಲ. ಮತ್ತೆ ಎಲ್ಲರೂ ರಾಜ್ಯಕ್ಕೆ ಮರಳಿ ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹಿಂಮಹೀಷಾಂ ಗೋಬ್ರಾಹ್ಮಣೇಭ್ಯಃ ಶುಭಮಸ್ತುನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು... ಎಂದು ಆನಂದವಾಗಿ ರಾಜ್ಯಭಾರ ಮುಂದುವರೆಸಿದರು.

|| ಶ್ರೀರಸ್ತು ಶುಭಮಸ್ತು ಐಶ್ವರ್ಯಮಸ್ತು ||