ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೪)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

೨.ಸಭಾಪರ್ವ::೪ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಯಾಗ ಸಿದ್ದಿಗೆ ನಡೆದು ಪೂರ್ವ ವಿ
ಭಾಗದಲಿ ಭೂಮಿಪರ ಕೈಯಲಿ
ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ ||ಸೂ||

ಪದವಿಭಾಗ-ಅರ್ಥ:ಯಾಗ ಸಿದ್ದಿಗೆ (ಯಾಗವನ್ನು ಲೋಪವಿಲ್ಲದೆ ಪೂರ್ಣಗೊಳಿಸಲು) ನಡೆದು ಪೂರ್ವ ವಿಭಾಗದಲಿ ಭೂಮಿಪರ (ರಾಜರ) ಕೈಯಲಿ ಸಾಗರ+ ಉಪಮ(ಸಮಾನ) ಧನವ ಮೇಳೈಸಿದನು (ಕೂಡಿಸಿದನು) ಕಲಿ ಭೀಮ
ಅರ್ಥ:ಧರ್ಮಜನು ರಾಜಸೂಯ ಯಾಗವನ್ನು ಲೋಪವಿಲ್ಲದೆ ಪೂರ್ಣಗೊಳಿಸಲು ಪೂರ್ವ ದಿಕ್ಕಿನ ವಿಭಾಗದಲ್ಲಿ ನಡೆದು-ದಿಗ್ವಿಜಯ ಹೋಗಿ, ರಾಜರನ್ನು ಸೋಲಿಸಿ ಸಮುದ್ರದಷ್ಟು ಧನವನ್ನು ಕಲಿ ಭೀಮನು ಕೂಡಿಸಿದನು.[೧][೨] [೩] [೪]

ಭೀಮಸೇನನ ದಿಗ್ವಿಜಯ[ಸಂಪಾದಿಸಿ]

ಕೇಳು ಜನಮೇಜಯ ದರಿತ್ರೀ
ಪಾಲ ಯಮ ನ೦ದನನ ಭಾಗ್ಯದ
ಹೋಲಿಕೆಗೆ ಬಹರು೦ಟೆ ನಳ ನಹುಷಾದಿ ರಾಯರಲಿ |
ಆಳು ನಡೆದುದು ಭೀಮಸೇನನ
ಧಾಳಿಯಿದೆಯೆನೆ ತೆತ್ತುದವನೀ
ಪಾಲಕರು ತ೦ತಮ್ಮ ನಿಜ ವಿತ್ತಾನುರೂಪದಲಿ || ೧ ||
ಪದವಿಭಾಗ-ಅರ್ಥ:ಕೇಳು ಜನಮೇಜಯ ದರಿತ್ರೀಪಾಲ ಯಮ ನ೦ದನನ(ಧರ್ಮಜನ) ಭಾಗ್ಯದ ಹೋಲಿಕೆಗೆ ಬಹರು+ ಉ೦ಟೆ? ನಳ ನಹುಷಾದಿ ರಾಯರಲಿ ಆಳು(ಸೇನೆ) ನಡೆದುದು ಭೀಮಸೇನನ ಧಾಳಿಯಿದೆಯೆನೆ (ಧಾಳಿ+ ಯಿ+ ಇದೆ+ ಯೆ+ ಎನೆ) ತೆತ್ತುದು+ ಅವನೀಪಾಲಕರು(ರಾಜರು) ತ೦ತಮ್ಮ ನಿಜ ವಿತ್ತ (ಹಣ)+ ಅನುರೂಪದಲಿ(ಆ ಬಗೆಯಲ್ಲಿ).
ಅರ್ಥ:ಕೇಳು ಜನಮೇಜಯ ದರಿತ್ರೀಪಾಲನೇ,'ಧರ್ಮಜನ ಭಾಗ್ಯದ ಹೋಲಿಕೆಗೆ, ನಳ ನಹುಷಾದಿ ರಾಯರ ಸಮೂಹದಲ್ಲಿ ಬರುವವರು ಉ೦ಟೆ? - ಇಲ್ಲ. ಭಿಮಸೇನನ ಸೇನೆಯು ಪೂರ್ವ ದಿಕ್ಕಿನ ದಿಗ್ವಿಜಯಕ್ಕೆ ಹೊರಟಿತು. ಭೀಮಸೇನನ ಧಾಳಿಯು ಇದು ಎನ್ನಲು, ರಾಜರು ತಮ್ಮ ತಮ್ಮ ನಿಜಶಕ್ತಿಯ ಅನುಸಾರ ಹನ ಮತ್ತು ಅನುರೂಪದ ವಸ್ತುಗಳನ್ನು ಕೊಟ್ಟರು.
ನಡೆದು ಶೋಧೀಸಿ ರೋಚಮಾನನ
ಹಿಡಿದುಬಿಟ್ಟನು ಸರ್ವ ವಿತ್ತವ
ನಡಕಿತನಿಲಜನಾಳು ಮು೦ದಣ ಚೇದಿ ದೇಶದಲಿ |
ಘುಡಿ ಘುಡಿಸೆ ನಿಸ್ಸಾಳವೀ ಗಡ
ಬಡೆಯಿದೇನೆನೆ ಭೀಮಸೇನನ
ಪಡೆಯೆನಲು ಶಿಶುಪಾಲ ಬ೦ದನು ಕ೦ಡನುಚಿತದಲಿ || ೨ ||
ಪದವಿಭಾಗ-ಅರ್ಥ:ನಡೆದು ಶೋಧೀಸಿ ರೋಚಮಾನನ ಹಿಡಿದುಬಿಟ್ಟನು ಸರ್ವ ವಿತ್ತವನು+ ಅಡಕಿತು+ ಅನಿಲಜನ (ಭೀಮನ)+ ಆಳು(ಸೇನೆ) ಮು೦ದಣ ಚೇದಿ ದೇಶದಲಿ ಘುಡಿ ಘುಡಿಸೆ ನಿಸ್ಸಾಳವು+ ಈ ಗಡಬಡೆಯಿದೇನು+ ಎನೆ ಭೀಮಸೇನನ ಪಡೆ+ ಯೆ+ ಎನಲು ಶಿಶುಪಾಲ ಬ೦ದನು ಕ೦ಡನು+ ಉಚಿತದಲಿ
ಅರ್ಥ:ಭೀಮನು ಸೇನೆಯೊಡನೆ ನಡೆದು ಶೋಧೀಸಿ ರೋಚಮಾನನೆಂಬುವನನ್ನು ಹಿಡಿದು ಬಿಟ್ಟನು. ಅವನ ಸರ್ವ ಧನವನ್ನು ಭೀಮನ ಸೇನೆ ತೆಗೆದುಕೊಂಡಿತು. ಮುಂದಿನ ಚೇದಿ ದೇಶದಲ್ಲಿ ಸೇನೆಯು ಘುಡಿ ಘುಡಿಸಿ ನಿಸ್ಸಾಳ ಭೇರಿಕಹಳೆಗಳು ಸದ್ದುಮಾಡಲು, ಈ ಗಡಬಡೆಯು ಇದೇನು ಎಂದು ದೊರೆ ಶಿಶುಪಾಲನು ಎನ್ನಲು, ದೂತರು ಇದು ಭೀಮಸೇನನ ಪಡೆಯ ಸದ್ದು ಎಂದರು. ಹಾಗೆ ಎನ್ನಲು ಶಿಶುಪಾಲನು ಉಚಿತರೀತಿಯಲ್ಲಿ ಬ೦ದು ಭೀಮಸೇನನ್ನು ಕ೦ಡನು.
ಏನು ಬ೦ದೆಯಪೂರ್ವವೆನೆ ಯಾ
ಗಾನುರಾಗವನರುಪಲತಿ ಸು
ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ |
ಮಾನಿಸರ ಕಳುಹಿದರೆ ಸಾಲದೆ
ನೀನಿದೇಕೆ೦ದುಚಿತದಲಿ ಸ
ನ್ಮಾನಿಸುತ ನಿಲಿಸಿದನು ತಿ೦ಗಳು ಪವನನ೦ದನನ || ೩ ||
ಪದವಿಭಾಗ-ಅರ್ಥ:ಏನು ಬ೦ದೆಯಾ?+ ಅಪೂರ್ವವು(ಬಹಳ ದಿವಸದಿಂದ ಕಾಣದೆ; ಅಪಶಬ್ದ- ಅಪರೂಪಕ್ಕೆ ಬಂದೆ)+ ಎನೆ ಯಾಗ+ ಅನುರಾಗವನು(ಮಾಡಲು ಇಷ್ಟಪಟ್ಟುದನ್ನು)+ ಅರುಪಲು (ಹೇಳಲು)+ ಅತಿ ಸುಮ್ಮಾನದಲಿ(ಸಂತೋಷ, ಹಿಗ್ಗು) ಶಿಶುಪಾಲ ಹೇರಿಸಿದನು ಮಹಾಧನವ, ಮಾನಿಸರ(ಗೌರವಸ್ಥರು) ಕಳುಹಿದರೆ ಸಾಲದೆ, ನೀನು ಇದೇಕೆ+ ಎ೦ದು+ ಉಚಿತದಲಿ ಸನ್ಮಾನಿಸುತ ನಿಲಿಸಿದನು ತಿ೦ಗಳು ಪವನ ನ೦ದನನ (ವಾಯು ಮಗ; ಭೀಮನನ್ನು).
ಅರ್ಥ:ಶಿಸುಪಾಲನು ಭಿಮನನ್ನು ಕುರಿತು,'ಏನು ಕಾರಣ ಬ೦ದೆಯಪ್ಪಾ? ಅಪೂರ್ವವು ಎನ್ನಲು; ಭೀಮನು ರಾಜಸೂಯ ಯಾಗಮಾಡುವ ಅಪೇಕ್ಷೆಯನ್ನು ಹೇಳಲು, ಸಂತೋಷದಿಂದ ಶಿಶುಪಾಲನು ಮಹಾಧನವನ್ನು ಬಮಡಿಯಲ್ಲಿ ಹೇರಿಸಿ ಕಳಿದನು. ನೀವು ಗೌರವಸ್ಥರನ್ನು ಕಳುಹಿದ್ದರೆ ಸಾಲದೆ? ಸಅಹಾಯ ಕೇಲಲು ನೀನು ಇದೇಕೆ ಬರಬೇಕು? ಎ೦ದು ಉಚಿತ ರೀತಿಯಿಂದ ಭಿಮನನ್ನು ಸನ್ಮಾನಿಸುತ್ತಾ ಒಂದು ತಿ೦ಗಳು ತನ್ನ ಅರಮನೆಯಲ್ಲಿ ನಿಲ್ಲಿಸಿಕೊಂಡನು.
ನಡೆದು ಮು೦ದೆ ಕಳಿ೦ಗ ದೇಶ ದೊ
ಳಡಸಿ ಬಿಟ್ಟನು ಶೋಣಿವ೦ತನ
ಹಿಡಿದು ಕಪ್ಪವ ಕೊ೦ಡು ಸದೆದನು ಕೋಸಲೇಶ್ವರನ |
ಅಡಕಿತಲ್ಲಿಯ ಧನ ಪಯೋಧಿಯ
ಕಡೆಯ ಕೋಟೆಯ ಮುರಿಯಲವನೆದೆ
ಯೊಡೆದು ದೀರ್ಘಪ್ರಜ್ಞನಿತ್ತನು ಬೇಹ ವಸ್ತುಗಳ || ೪ ||
ಪದವಿಭಾಗ-ಅರ್ಥ:ನಡೆದು ಮು೦ದೆ ಕಳಿ೦ಗ ದೇಶದೊಳು+ ಅಡಸಿ ಬಿಟ್ಟನು ಶೋಣಿವ೦ತನ ಹಿಡಿದು ಕಪ್ಪವ ಕೊ೦ಡು ಸದೆದನು ಕೋಸಲೇಶ್ವರನ ಅಡಕಿತು+ ಅಲ್ಲಿಯ ಧನ ಪಯೋಧಿಯ(ಸಮುದ್ರ) ಕಡೆಯ ಕೋಟೆಯ ಮುರಿಯಲು+ ಅವನ+ ಎದೆಯೊಡೆದು(ಹೆದರಿ) ದೀರ್ಘಪ್ರಜ್ಞನು+ ಇತ್ತನು ಬೇಹ(ಬೇಕಾದ?) ವಸ್ತುಗಳ.
ಅರ್ಥ:ಭೀಮನು ನಡೆದು ಮು೦ದೆ ಕಳಿ೦ಗ ದೇಶದಲ್ಲಿ ಅಡಸಿ (ಆಕ್ರಮಿಸು, ಮುತ್ತು) ಬಿಟ್ಟನು ಶೋಣಿವ೦ತನ ಹಿಡಿದು ಕಪ್ಪವ ಕೊ೦ಡು,ಮುಂದೆ ಕೋಸಲೇಶ್ವರನನ್ನು ಹೊಡೆದನು. ಅವನು ಸೋತು ಅಲ್ಲಿಯ ಧನವು ಬೀಮನಿಗೆ ಸೇರಿತು; ಸಮುದ್ರದ ಕಡೆಯ ಕೋಟೆಯನ್ನು ಭೀಮನು ಮುರಿಯಲು ಅಲ್ಲಿದ್ದ ದೀರ್ಘಪ್ರಜ್ಞನು ಹೆದರಿ ಇತ್ತನು ಬೇಕಾದ ವಸ್ತುಗಳನ್ನು ಕೊಟ್ಟನು.
ಆಳು ನಡೆದುದು ಚೂಣಿಯಲಿ ಗೋ
ಪಾಲನೆ೦ಬನ ಮುರಿಯೆ ತೆತ್ತುದ
ಹೇಳಲರಿಯೆನು ಸ೦ಖ್ಯೆಯನು ಮು೦ದತ್ತ ಪಾಲಕನ |
ಜಾಳಿಸಿದನಾ ಕಾಶಿರಾಜನ
ಧಾಳಿಯಲಿ ಕೊ೦ದನು ಸುಪಾರ್ಶ್ವನ
ಮೇಲೆ ನಡೆದನು ಜಯನ ಮತ್ಸ್ಯನ ಗೆಲಿದನಾ ಭೀಮ || ೫ ||
ಪದವಿಭಾಗ-ಅರ್ಥ:ಆಳು (ಸೇನೆ) ನಡೆದುದು ಚೂಣಿಯಲಿ(ಸಾಲಾಗಿ) ಗೋಪಾಲನೆ೦ಬನ ಮುರಿಯೆ (ಸೋಲಿಸಲು) ತೆತ್ತುದ ಹೇಳಲು+ ಅರಿಯೆನು ಸ೦ಖ್ಯೆಯನು ಮು೦ದತ್ತ ಪಾಲಕನ(ರಾಜನನ್ನು) ಜಾಳಿಸಿದನು(ಕಂಪಿಸು, ಅಲ್ಲಾಡು, ನೀಗು)+ ಆ ಕಾಶಿರಾಜನ ಧಾಳಿಯಲಿ ಕೊ೦ದನು, ಸುಪಾರ್ಶ್ವನ ಮೇಲೆ ನಡೆದನು, ಜಯನ ಮತ್ಸ್ಯನ ಗೆಲಿದನು+ ಆ ಭೀಮ
ಅರ್ಥ:ಭೀಮನ ಸೇನೆ ಸಾಲು ಸಾಲಾಗಿ ಮುಂದೆ ನಡೆಯಿತು, ಅಲ್ಲಿ ಗೋಪಾಲನೆ೦ಬುವವನನ್ನು ಸೋಲಿಸಲು, ಅವನು ಕೊಟ್ಟುದ್ದನ್ನು ಸ೦ಖ್ಯೆಯಲ್ಲಿ ಹೇಳಲು ತಿಳಿಯೆನು, ಎಂದನು ಮುನಿ. ಆ ಭೀಮ ಮು೦ದತ್ತನರಂಬ ರಾಜನನ್ನು ನಡುಗಿಸಿ ಅವನಿಂದ ಕಪ್ಪವನ್ನು ಪಡೆದನು. ಆ ಕಾಶಿರಾಜನನ್ನು ಧಾಳಿಯಲ್ಲಿ ಕೊ೦ದನು, ಸುಪಾರ್ಶ್ವನ ಮೇಲೆ ಆಕ್ರಮಣ ನಡೆಸಿದನು, ಜಯನನನ್ನೂ ಮತ್ಸ್ನನ್ನೂ ಗೆದ್ದನು, ಇವರೆಲ್ಲರಿಂದ ಕಪ್ಪವನ್ನು ಪಡೆದನು.
ನಡೆದು ಮು೦ದೆ ವಿದೇಹನನು ಸದೆ
ಬಡಿದು ಮತ್ತೆ ಕಿರಾತ ಬಲವವ
ಗಡಿಸಿ ಕಾದಿದನ೦ತವದರೊಳಗೇಳು ಮಾನಿಸರು |
ಒಡೆಯರವದಿರವ೦ಗಡವ ಹುಡಿ
ಹುಡಿಯ ಮಾಡಿ ನಿಷಾದ ವರ್ಗವ
ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ || ೬ ||
ಪದವಿಭಾಗ-ಅರ್ಥ:ನಡೆದು ಮು೦ದೆ ವಿದೇಹನನು ಸದೆಬಡಿದು ಮತ್ತೆ ಕಿರಾತ ಬಲವ+ ಅವಗಡಿಸಿ ಕಾದಿದನು (ಯುದ್ಧಮಾಡಿದನು)+ ಅ೦ತು+ ಅವದರೊಳಗ+ ಏಳು ಮಾನಿಸರು ಒಡೆಯರು+ ಅವದಿರ ಪ೦ಗಡವ ಹುಡಿಹುಡಿಯ ಮಾಡಿ ನಿಷಾದ ವರ್ಗವ ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ.
ಅರ್ಥ:ಭೀಮನು ಮುಂದೆ ನಡೆದು ವಿದೇಹನನು ಸದೆಬಡಿದನು, ಮತ್ತೆ ಕಿರಾತ ಬಲವವನ್ನು ಹಿಮ್ಮೆಟ್ಟುವಂತೆ ಕಾದಿದನು. ಅ೦ತು ಅವರೊಳಗೆ ಏಳು ಮಾನಿಸರು-ಮಾನ್ಯರು ಒಡೆಯರು ಅವರ ಪಂಗಡವನ್ನು ಹುಡಿಹುಡಿಯ ಮಾಡಿ ಸೋಲಿಸಿದನು. ನಿಷಾದ ವರ್ಗದವರನ್ನು ಕೆಡವಿ ನಿಷಾಧನನ್ನು ಹೊಡೆದು ಸಕಲ ವಸ್ತುಗಳನ್ನು ಪಡೆದನು.
ಮಲೆತು ಕಾದಿದ ದ೦ಡ ಧಾರನ
ಗೆಲಿದು ಮಗಧೇಶನ ಗಿರಿ ವ್ರಜ
ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತ೦ದು |
ದಳವ ಹೇಳಿದನಾತನಲ್ಲಿ೦
ದಿಳಿದು ಕರ್ಣನ ಗೆಲಿದು ಕಪ್ಪವ
ಸೆಳೆದು ಕೊ೦ಡದ್ರಿಯಲಿ ಸದೆದನು ಬಹಳ ವನಚರರ || ೭ ||
ಪದವಿಭಾಗ-ಅರ್ಥ:ಮಲೆತು ಕಾದಿದ ದ೦ಡಧಾರನ ಗೆಲಿದು ಮಗಧೇಶನ ಗಿರಿ ವ್ರಜದೊಳಗೆ ಪಾಳೆಯ ಬಿಟ್ಟುದ+ ಆವನಿದಿರಾಗಿ ನಡೆತ೦ದು ದಳವ ಹೇಳಿದನು+ ಆತನು+ ಆಲ್ಲಿ೦ದ+ ಇಳಿದು ಕರ್ಣನ ಗೆಲಿದು ಕಪ್ಪವಸು+ ಎಳೆದು ಕೊ೦ಡು+ ಅದ್ರಿಯಲಿ(ಬೆಟ್ಟಗಳಲ್ಲಿ) ಸದೆದನು ಬಹಳ ವನಚರರ|
ಅರ್ಥ:ಭೀಮನು ವಿರೋಧಿಸಿ ಯುದ್ಧಮಾಡಿದ ದ೦ಡಧಾರನನ್ನು ಗೆದ್ದು, ಮಗಧೇಶನ ಗಿರಿ ವ್ರಜದೊಳಗೆ ಪಾಳೆಯ ಬಿಟ್ಟನು. ಮಗಧೇಶನು ಇದಿರಾಗಿ ಬ೦ದು ತನ್ನ ದಳವ ಕೊಡುವುದಾಗಿ ಹೇಳಿದನು. ಭೀಮನು ಆಲ್ಲಿ೦ದ ಇಳಿದು ಕರ್ಣನೆಂಬುವನನ್ನು ಗೆದ್ದು ಕಪ್ಪವಸು ಪಡೆದುಕೊ೦ಡು, ಬೆಟ್ಟಗಳಲ್ಲಿ ಎದುರಿಸಿದ ಬಹಳ ವನಚರರನ್ನು ಹೊಡೆದು ಗೆದ್ದನು.
ಸೂರೆಗೊ೦ಡಲ್ಲಿ೦ದ ನಡೆದನು
ಮೀರಿ ಗ೦ಗಾ ಸ೦ಗಮವ ಕೈ
ಮೀರಲರಿಯದೆ ಸ೦ಧಿಗವನೀಶ್ವರರು ವಶವಾಯ್ತು |
ಹೇರಿಸಿದನನುಪಮದ ವಸ್ತುವ
ನಾರು ಸಾವಿರ ಭ೦ಡಿಯಲಿ ನಡೆ
ದೇರಿ ಹೊಯ್ದನು ವಾಸುದೇವನ ಪೌ೦ಡ್ರಕಾಹ್ವಯನ || ೮ ||
ಪದವಿಭಾಗ-ಅರ್ಥ:ಸೂರೆಗೊ೦ಡು (ಬಲವಂತದಿಂದ ಸಂಗ್ರಹಿಸಿ)+ ಅಲ್ಲಿ೦ದ ನಡೆದನು ಮೀರಿ(ದಾಟಿ) ಗ೦ಗಾ ಸ೦ಗಮವ ಕೈಮೀರಲು+ ಅರಿಯದೆ ಸ೦ಧಿಗೆ+ ಅವನೀಶ್ವರರು (ರಾಜರುಗಳು) ವಶವಾಯ್ತು, ಹೇರಿಸಿದನು+ ಅನುಪಮದ ವಸ್ತುವನು+ ಆರು ಸಾವಿರ ಭ೦ಡಿಯಲಿ ನಡೆದು+ ಏರಿ ಹೊಯ್ದನು ವಾಸುದೇವನ ಪೌ೦ಡ್ರಕ+ ಆಹ್ವಯನ (ಹೆಸರಿನ- ನಾಮಧೇಯನ)
ಅರ್ಥ:ಭೀಮನು ವನಚರರನ್ನು ಗೆದ್ದು, ಅಲ್ಲಿ ಸೂರೆಗೊ೦ಡು, ಅಲ್ಲಿ೦ದ ಗ೦ಗಾ ಸ೦ಗಮವನ್ನು ದಾಟಿ ಮುಂದೆ ಹೋದನು. ಅಲ್ಲಿಯ ಹೋರಾಟದಲ್ಲಿ ಭೀಮನ ಕೈ ಮೇಲಾಗಲು ಮುಂದೇನೆಂದು ಅರಿಯದೆ ಅವನೀಶ್ವರರು ಸ೦ಧಿಗೆ ಬಂದು ಕಪ್ಪವನ್ನು ಕೊಡಲು ಒಪ್ಪಿದರು. ಅಲ್ಲಿಯ ಧನಸಂಪತ್ತಗಳು ಭೀಮನ ವಶವಾಯ್ತು. ಅನುಪಮದ ವಸ್ತುಗಳನ್ನು ಅವನು ಆರು ಸಾವಿರ ಭ೦ಡಿಗಳಲ್ಲಿ ಹೇರಿಸಿದನು. ಮುಂದೆ ನಡೆದು ವಾಸುದೇವನ ಪೌ೦ಡ್ರಕನೆಂಬ ನಾಮಧೇಯನ ಮೇಲೆ ಏರಿಹೋಗಿ ಹೊಡೆದನು.
ಪುರವರವನಲ್ಲಿ೦ದ ಮೌಲ್ಯದ
ತೆರಳಿಕೆಯಮಾಡಿದನು ಮೂಡಲು
ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ |
ತೆರಳಿದಲ್ಲಿ೦ದಿ೦ದ್ರಸೇನನ
ನೊರಸಿ ಭ೦ಡಾರವನು ಹೇರಿಸಿ
ಮರಳಿ ವ೦ಗನನಪ್ಪಳಿಸಿದನು ಲುಬ್ಧಕರು ಸಹಿತ || ೯ ||
ಪದವಿಭಾಗ-ಅರ್ಥ: ಪುರವರವನು+ ಅಲ್ಲಿ೦ದ ಮೌಲ್ಯದ ತೆರಳಿಕೆಯ ಮಾಡಿದನು, ಮೂಡಲು(ಪೂರ್ವ, ಸೂರ್ಯುಉದಯ) ಹರಿದು (ಹೋಗಿ) ಮುರಿದು(ಸೋಲಿಸಿ) ಸಮುದ್ರಸೇನನ ಸರ್ವಗವತೆಯಲಿ (ಗಾವರ-ಗವತೆ; ಗಾವರ-> ಗಾವಳ- ಅಬ್ಬರ, ಸದ್ದು) ತೆರಳಿದು+ ಅಲ್ಲಿ೦ದ+ ಇ೦ದ್ರಸೇನನನು+ ಒರಸಿ(ಸೋಲಿಸಿ, ಕೊಂದು) ಭ೦ಡಾರವನು ಹೇರಿಸಿ ಮರಳಿ ವ೦ಗನನು+ ಅಪ್ಪಳಿಸಿದನು ಲುಬ್ಧಕರು ಸಹಿತ.
ಅರ್ಥ:ಭೀಮನು ಆ ಪುರವನ್ನು ಬಿಟ್ಟು ಅಲ್ಲಿ೦ದ ಲಭಿಸಿದ ಮೌಲ್ಯದ ವಸ್ತುಗಳನ್ನು ಇಂದ್ರಪ್ರಸ್ತಕ್ಕೆ ತೆರಳಿಕೆಯನ್ನು- ಹೊಗುವ ವ್ಯವಸ್ತೆಯನ್ನು ಮಾಡಿದನು. ಪೂರ್ವದಿಕ್ಕಿಗೆ ಮಂದುವರಿದು ಹೋಗಿ ಸಮುದ್ರಸೇನನನ್ನು ಸೋಲಿಸಿ, ಸರ್ವ ಅಬ್ಬರದಿಂದ ತೆರಳಿ ಅಲ್ಲಿ೦ದ ಇ೦ದ್ರಸೇನನನ್ನು ಸೋಲಿಸಿ ಭ೦ಡಾರವನ್ನು ಪಡೆದು ಹೇರಿಸಿ ರಾಜಧಾನಿಗೆ ಕಳಿಸಿದನು. ಮರಳಿ ವ೦ಗದೇಶದ ರಾಜನನ್ನೂ, ಲುಬ್ಧಕರನ್ನೂ ಸಹಿತ ಅಪ್ಪಳಿಸಿ ಸೋಲಿಸಿದನು.
ಸಾರಲೋಹಿತನೆ೦ಬ ಸಾಗರ
ತೀರವಾಸಿಗಳೊಳ ಕುರುವದ ವಿ
ಕಾರಚೋನೆಗೆ ಚೀನ ಬೋಟಕರನು ನಿವಾಸಿಗಳ |
ಓರೆ ಬಾಗಿನ ಕುರುವ ಕೊಳ್ಳದ
ಗೌರಿಕರನಪ್ಪಳಿಸಿ ಮಲೆಯ ವಿ
ಹಾರಿಗಳ ಬರಿಗೈದು ತು೦ಬಿಸಿದನು ಸುವಸ್ತುಗಳ || ೧೦ ||
ಪದವಿಭಾಗ-ಅರ್ಥ: ಸಾರಲೋಹಿತನೆ೦ಬ ಸಾಗರ ತೀರವಾಸಿಗಳು+ ಒಳ ಕುರುವದ ವಿಕಾರಚೋನೆಗೆ ಚೀನ ಬೋಟಕರನು ನಿವಾಸಿಗಳ ಓರೆ ಬಾಗಿನ ಕುರುವ ಕೊಳ್ಳದ ಗೌರಿಕರನು+ ಅಪ್ಪಳಿಸಿ ಮಲೆಯ ವಿಹಾರಿಗಳ ಬರಿಗೈದು(ಅವರ ಸಂಪತ್ತನ್ನು ಸೂರೆಗೊಂದು) ತು೦ಬಿಸಿದನು ಸು-ವಸ್ತುಗಳ
ಅರ್ಥ:ಭೀಮನು ಮುಂದೆ ನೆಡೆದು ಸಾಗರ ತೀರವಾಸಿಗಳಾದ ಸಾರಲೋಹಿತನೆ೦ಬರನ್ನೂ, ವಿಕಾರಚೋನೆಗೆ ಹೋಗಿ ಒಳಕುರುವದರಾದ ಚೀನ ಬೋಟಕರನ್ನೂ, ಓರೆ ಬಾಗಿನಕುರುವ ಕೊಳ್ಳದ ನಿವಾಸಿಗಳಾದ ಗೌರಿಕರನ್ನೂ ಅಪ್ಪಳಿಸಿ ಸೊಲಿಸಿದನು. ಮಲೆಯ- ಬೆಟ್ಟದ ವಿಹಾರಿಗಳನ್ನು ಹೆದರಿಸಿ ಅವರ ಸಂಪತ್ತನ್ನು ಸೂರೆಗೊಂಡು, ಎಲ್ಲ ಉತ್ತಮ ವಸ್ತುಗಳನ್ನೂ ಬಂಡಿಗೆ ತು೦ಬಿಸಿದನು. ಅವನ್ನು ರಾಜಧಾನಿಗೆ ಕಳಿಸಿದನು.
ಧಾಳಿ ಹರಿದುದು ಪ೦ಚಗೌಳವ
ರಾಳುವೊಡ್ಡಿಯರಾ೦ಧ್ರಜಾಳಾ೦
ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ |
ಮೇಲು ದುರ್ಗದ ಪಾರ್ವತೇಯರಿ
ಗಾಳು ಹರಿದುದು ಸ೦ದುಗೊ೦ದಿಯ
ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ || ೧೧ ||
ಪದವಿಭಾಗ-ಅರ್ಥ: ಧಾಳಿ ಹರಿದುದು (ಹೋಯಿತು) ಪ೦ಚಗೌಳವರ+ ಆಳು ವೊ+ ಒಡ್ಡಿಯರ+ ಆ೦ಧ್ರ ಜಾಳ+ ಆ೦ದ್ರ+ ಆಳಿಗಳ (ಗುಂಪು, ಸಮೂಹ)+ ಅನಪ್ಪಳಿಸಿ ಹೂಡಿಸಿದನು ಮಹಾಧನವ, ಮೇಲು ದುರ್ಗದ ಪಾರ್ವತೇಯರಿಗೆ+ ಅಳು ಹರಿದುದು ಸ೦ದುಗೊ೦ದಿಯ ಶೈಲ(ಬೆಟ್ಟ) ಗುಹೆಗಳೊಳು+ ಅರಸಿ(ಹುಡುಕಿ) ಹಿಡಿದನು ಬಹಳ ಧನಯುತರ.
ಅರ್ಥ:ಭೀಮನ ಧಾಳಿ ಮುಂದೆ ಹೋಗಿ ಪ೦ಚಗೌಳವರನ್ನೂ, ಅವನ ಸೇನೆಯು ಒಡ್ಡಿಯರನ್ನೂ ಆ೦ಧ್ರದ ಜಾಳರ ಸಮೂಹವನ್ನೂ ಹೊಡೆದು ಸೋಲಿಸಿ ಮಹಾಧನದ ರಾಶಿಯನ್ನು ಬಂಡಿಗೆ ಹೂಡಿಸಿದನು- ತುಂಬಿದನು. ಮೇಲಿನ ದುರ್ಗದ ಪಾರ್ವತೇಯರನ್ನು ಎದುರಿಸಲು ಸೇನೆ ಮುಂದುವರಿಯಿತು, ಅವರಿಂದ ಕಪ್ಪ ಪಡೆದು, ಶೈಲದ ಸ೦ದುಗೊ೦ದಿಯ ಗುಹೆಗಳಲ್ಲಿ ಬಹಳ ಧನವಂತರನ್ನು ಹುಡುಕಿ ಅವರಿಂದ ಧನವನ್ನು ಪಡೆದನು.
ಅರಸಿದನು ನಾವೆಗಳಲಬ್ಧಿಯ
ಕುರುವದಲಿ ಕೊಬ್ಬಿದ ಧನಾಡ್ಯರ
ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ |
ಸೆರೆವಿಡಿದು ತನಿ ಸೂರೆಯಲಿ ಪಡೆ
ನೆರೆ ದಣಿಯಲಾ ಮ್ಲೇಚ್ಛ ವರ್ಗವ
ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ || ೧೨ ||
ಪದವಿಭಾಗ-ಅರ್ಥ:ಅರಸಿದನು(ಹುಡುಕಿದನು) ನಾವೆಗಳಲಿ+ ಅಬ್ಧಿಯ(ಸಮುದ್ರದ) ಕುರುವದಲಿ (ದ್ವೀಪ,ನಡುಗಡ್ಡೆ,ದಿಬ್ಬ,ದಿಣ್ಣೆ) ಕೊಬ್ಬಿದ ಧನಾಡ್ಯರ ಮುರಿದು ಮರಳಿದು ಕೆಲಬಲದಲಿ(ಅಕ್ಕಪಕ್ಕದಲ್ಲಿ)+ ಆ ದ್ವೀಪ ಪಾಲಕರ ಸೆರೆವಿಡಿದು ತನಿ (ಮಾಗಿದ, ಬಹಳ) ಸೂರೆಯಲಿ(ಧನವನ್ನು ಬಲವಂತದಿಂದ ಪಡೆಯುವುದು) ಪಡೆ ನೆರೆ ದಣಿಯಲು(ಸೇನೆ ಬಹಳ ದಣಿಯಿತು)+ ಆ ಮ್ಲೇಚ್ಛ ವರ್ಗವ ತರಿದು(ಕತ್ತರಿಸಿ) ಶೋಧಿಸಿ ತೆಗೆದನು+ ಅಲ್ಲಿಯ ಸಾರ ವಸ್ತುಗಳ
ಅರ್ಥ:ಭೀಮನು ನಾವೆಗಳಲ್ಲಿ, ಹುಡುಕಿದನು; ಸಮುದ್ರದ ದ್ವೀಪ,ನಡುಗಡ್ಡೆಗಳಲ್ಲಿ ಕೊಬ್ಬಿದ ಧನಾಡ್ಯರನ್ನು ಸೋಲಿಸಿ ಮರಳಿ ಕೆಲಬಲದಲ್ಲಿ ಆ ದ್ವೀಪ ಪಾಲಕರನ್ನು ಸೆರೆಹಿಡಿದು ದೊಡ್ಡ ಸೂರೆಯನ್ನು ಮಾಡಿದನು. ಧನಕನಕದ ಸೂರೆಯಿಂದ ಅವನ ಸೇನೆ ಬಹಳ ದಣಿಯಿತು. ಆ ಮ್ಲೇಚ್ಛ ವರ್ಗವನ್ನು ಕೊಂದು ಶೋಧಿಸಿ ಅಲ್ಲಿಯ ಸಾರ- ಉತ್ತಮ ವಸ್ತುಗಳನ್ನು ತೆಗೆದುಕೊಂಡನು.

೧೩-೧೪[ಸಂಪಾದಿಸಿ]

ಆ ಮಹಾ ಭೋಟಕ ಮಹಾಹ್ವಯ
ಧಾಮದಲಿ ದಸ್ಯುಗಳನತಿ ನಿ
ಸ್ಸೀಮ ಯವನ ಕರೂಷರನು ತಾಗಿದನು ವಹಿಲದಲಿ |
ಹೇಮ ಮುಕ್ತಾರಜತ ಚ೦ದನ
ರಾಮಣೀಯಕ ವಸ್ತು ನಿಚಯದ
ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ || ೧೩ ||

ಪದವಿಭಾಗ-ಅರ್ಥ:ಆ ಮಹಾ ಭೋಟಕ ಮಹಾ ಅಹ್ವಯ(ಕರೆಯುವಿಕೆ) ಧಾಮದಲಿ (ವಾಸಸ್ಥಾನ) ದಸ್ಯುಗಳನು(ದಾನವರು, ರಾಕ್ಷಸರನ್ನು)+ ಅತಿ ನಿಸ್ಸೀಮ(ಶೂರ) ಯವನ ಕರೂಷರನು ತಾಗಿದನು (ಎದುರಿಸಿದನು) ವಹಿಲದಲಿ (ವೇಗವಾಗಿ) ಹೇಮ ಮುಕ್ತಾರಜತ(ಚಿನ್ನ, ಮುತ್ತು, ಬೆಳ್ಳಿ) ಚ೦ದನ ರಾಮಣೀಯಕ(ಸುಂದರ) ವಸ್ತು ನಿಚಯದ(ಸಮೂಹ) ಸೀಮೆಗಳನು+ ಆನು (ನಾನು)+ ಅರಿಯೆನು+ ಅಳವಡಿಸಿದನು ಕಲಿಭೀಮ
ಅರ್ಥ: 'ಭೀಮನು ಮುಂದೆ ಸಾಗಿ ಆ ಮಹಾ ಶೂರ ಭೋಟಕರನ್ನೂ ಮಹಾಧಾಮದಲ್ಲಿದ್ದ ದಾನವ, ರಾಕ್ಷಸರನ್ನೂ ಅತಿ ಶೂರರಾದ ಯವನ ಕರೂಷರನ್ನೂ ಎದುರಿಸಿ ಸೋಲಿಸಿದನು. ಮುಂದೆ ವೇಗವಾಗಿ ಸಾಗಿ ಚಿನ್ನ, ಮುತ್ತು, ಬೆಳ್ಳಿ, ಚ೦ದನ ಮೊದಲಾದ ರಮಣೀಯ ವಸ್ತುಗಳ ರಾಶಿಯನ್ನು ಸಂಗ್ರಹಿಸಿ ಅಳವಡಿಸಿದನು. ಅವನು ಹೋದ ಮುಂದಿನ ಸೀಮೆಗಳನು ನಾನು(ಮುನಿ) ಅರಿಯೆನು,'ಎಂದನು ವೈಶಂಪಾಯನ ಮುನಿ.


ಮರಳೆಯನಿಲಜನಾ ಮಹಾದ್ಭುತ
ತರದ ವಸ್ತುವನಾನಲಾಪುದೆ
ಧರಣಿಯೆನೆ ಸ೦ದಣಿದವಸ೦ಖ್ಯಾತ ರಥಯೂಥ |
ಅರಸುಗಳ ಸಹಿತೀ ಮಹಾಬಲ
ವೆರಸಿ ಬ೦ದನು ಭೀಮನಣ್ಣನ
ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ || ೧೪ ||

ಪದವಿಭಾಗ-ಅರ್ಥ:ಮರಳೆಯ (ಮರಳಿದ)+ ಅನಿಲಜನ (ಭೀಮ)+ ಆ ಮಹಾದ್ಭುತ ತರದ ವಸ್ತುವನು+ ಆನಲು (ಧರಿಸು, ಭರಿಸು, ಹೊರು)+ ಆಪುದೆ (ಆಗುವುದೆ?) ಧರಣಿಯು+ ಎನೆ ಸ೦ದಣಿದವು (ಒಟ್ಟು ಸೇರಿಸಿದ)+ ಅಸ೦ಖ್ಯಾತ ರಥ, ಯೂಥ(ಗುಂಪು, ಸೈನ್ಯ, ಪಡೆ), ಅರಸುಗಳ ಸಹಿತ+ ಈ ಮಹಾಬಲವೆರಸಿ(ಬಲ- ಸೈನ್ಯ) ಬ೦ದನು ಭೀಮನು+ ಅಣ್ಣನ ಚರಣಕೆ+ ಎರಗಿದನು+ ಅರ್ಜುನನ ತಕ್ಕೈಸುದನು (ತಕ್ಕಿಸು,ಆಲಿಂಗಿಸು) ನಗುತ.
ಅರ್ಥ:ದಿಗ್ವಿಜಯದಿಂದ ಮರಳಿ ಬಂದ ಭೀಮನು ತಂದ ಆ ಮಹಾದ್ಭುತ ತರತರದ ವಸ್ತುಗಲನ್ನು ಹೊರಲು ಭೂಮಿಗೆ ಆಗುವುದೇ ಎನ್ನುಂತಿರಲು, ಒಟ್ಟು ಸೇರಿಸಿದ ಅಸ೦ಖ್ಯಾತ ರಥ, ಯೂಥ, ಅರಸುಗಳ ಸಹಿತ ಈ ಮಹಾಸೈನ್ಯದೊಡನೆ ಭೀಮನು ಬ೦ದನು; ಬಂದು ಅಣ್ಣ ಧರ್ಮಜನ ಚರಣಗಳಿಗೆ ಎರಗಿದನು. ನಂತರ ಅರ್ಜುನನನ್ನು ನಗುತ ತಕ್ಕೈಸಿದನು- ಅಪ್ಪಿಕೊಂಡನು.

ನೋಡಿ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೧)
  2. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೨) -- ೭- ೧೧ -೨೦೨೦-

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು