ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೧)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಅರಣ್ಯಪರ್ವ: ೧ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸಕಲ ರಾಜ್ಯವನುಳಿದಿವರು ಕಾ
ಮ್ಯಕ ಮಹಾಕಾನನ​ದೊಳಗೆ ಕೀ
ಚಕ ಕುಲಾಂತಕ ಕೆಡಹಿದನು ಕಿಮ್ಮೀರ ದಾನವನ ||ಸೂ||

ಪದವಿಭಾಗ-ಅರ್ಥ: ಸಕಲ ರಾಜ್ಯವನು+ ಉಳಿದ(ಬಿಟ್ಟ, ಬಿಟ್ಟುಕೊಟ್ಟ)+ ಇವರು ಕಾಮ್ಯಕ ಮಹಾಕಾನನ​ದೊಳಗೆ ಕೀಚಕ ಕುಲಾಂತಕ(ಈ ನಂತರ-- ಕೀಚಕಕುಲಕ್ಕೆ ಅಂತಕ - ಯಮನಾದ ಭೀಮನು) ಕೆಡಹಿದನು(ಯುದ್ಧದಲ್ಲಿ ಸೋಲಿಸು - ಕೊಲ್ಲು.) ಕಿಮ್ಮೀರ ದಾನವನ.
ಅರ್ಥ:ಸಕಲ ರಾಜ್ಯವನ್ನೂ ಪಗಡೆಯಾಟದಲ್ಲಿ ಸೋತ ನಂತರ ರಾಜ್ಯವನ್ನು ಬಿಟ್ಟ ಇವರು ಕಾಮ್ಯಕ ಮಹಾಕಾನನ​ದೊಳಗೆ ಪ್ರವೇಶಿಸಿದರು. ಅಲ್ಲಿ ಭೀಮನು ಕಿಮ್ಮೀರನೆಂಬ ದಾನವನನ್ನು ಕೊಂದನು.[೧][೨] [೩] [೪]

ಹಸ್ತಿನಾವತಿಯಿಂದ ಪಾಂಡವರ ನಿರ್ಗಮನ[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಗಂಗಾತೀರದಲಿ ಭೂ
ಪಾಲಕರು ಗುರು ಭೀಷ್ಮ ವಿದುರಾದ್ಯಖಿಳ ಬಾಂಧವರ |
ಬೀಳುಗೊಟ್ಟರು ಗಜಪುರದ ಜನ
ಜಾಲವನು ಕಳುಹಿದರು ಗಂಗಾ
ಕೂಲದುತ್ತರ ಭಾಗದಲಿ ಮಾಡಿದರು ವಿಕ್ರಮವ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ(ಧರಿತ್ರಿ- ಭೂಮಿಯ ಪಾಲ- ಪಾಲಿಸುವವ- ರಾಜ) ಗಂಗಾತೀರದಲಿ ಭೂಪಾಲಕರು ಗುರು ಭೀಷ್ಮ ವಿದುರ+ ಆದ್ಯ+ ಅಖಿಳ ಬಾಂಧವರ ಬೀಳುಗೊಟ್ಟರು, ಗಜಪುರದ ಜನಜಾಲವನು ಕಳುಹಿದರು, ಗಂಗಾಕೂಲದ+ ಉತ್ತರ ಭಾಗದಲಿ(ಕೂಲ-ಸಂ:ತೀರವನ್ನು ಅನುಸರಿಸಿದ) ಮಾಡಿದರು ವಿಕ್ರಮವ (ಅನುಕೂಲ, ನದಿಯನ್ನು ದಾಟುವುದು).
ಅರ್ಥ:ವೈಶಂಪಾಯನ ಮುನಿಯು ಜನಮೇಜಯ ರಾಜನನ್ನು ಕುರಿತು,'ರಾಜನೇ ಕೇಳು,ಪಗಡೆಯಾಟದಲ್ಲಿ ರಾಜ್ಯವನ್ನು ಸೋತ ಪಾಂಡವ ಭೂಪಾಲಕರು ಹಸ್ತಿನಾವತಿಯಿಂದ ಅರಣ್ಯವಾಸಕ್ಕೆ ಹೊರಟು ಗಂಗಾತೀರದಲ್ಲಿ, ಗುರುದ್ರೋಣ, ಭೀಷ್ಮ, ವಿದುರ, ಮೊದಲಾದ ಎಲ್ಲಾ ಬಾಂಧವರನನ್ನೂ ಬೀಳ್ಕೊಂಡು, ತಮ್ಮೊಡನೆ ಬಂದ ಹಸ್ತಿನಾವತಿಯ ಜನರಸಮೂಹವನ್ನೂ ಹಿಂದಕ್ಕೆ ಕಳುಹಿದರು, ಗಂಗಾತೀರವನ್ನು ಅನುಸರಿಸಿ ಮುಂದೆ ಅದರ ಉತ್ತರ ಭಾಗದಲ್ಲಿ ನದಿಯನ್ನು ದಾಟಿದರು.
ನಿಲಿಸೆ ನಿಲ್ಲದೆ ಬಂದರರಸನ
ಬಳಿಯಲಗ್ಗದ ಮಂಡಲೇಶ್ವರ
ರೊಲಿದು ಸಾಕಿದ ರಾಜಪುತ್ರರು ಹಲವು ಮನ್ನಣೆಯ |
ಬಲುಭಟರು ಬಾಹತ್ತರದ ನಿ
ಶ್ಚಲ ನಿಯೋಗಿಗಳಾಶ್ರಮಿಗಳ
ಗ್ಗಳೆಯ ವಿಪ್ರಸ್ತೋಮ ಬಂದುದು ಕೋಟಿ ಸಂಖ್ಯೆಯಲಿ || ೨ ||
ಪದವಿಭಾಗ-ಅರ್ಥ:ನಿಲಿಸೆ ನಿಲ್ಲದೆ ಬಂದರು+ ಅರಸನ ಬಳಿಯಲಿ + ಅಗ್ಗದ(ಶ್ರೇಷ್ಠರಾದ) ಮಂಡಲೇಶ್ವರರು+ ಒಲಿದು ಸಾಕಿದ ರಾಜಪುತ್ರರು ಹಲವು ಮನ್ನಣೆಯ(ಗೌರವಪಡೆದ) ಬಲುಭಟರು ಬಾಹತ್ತರದ( ಎಪ್ಪತ್ತೆರಡು; ನಿಯೋಗ ರಾಜರಾಣಿಯರಿಗೆ (ಸಂಚಿ, ಕನ್ನಡಿ ಹಿಡಿಯುವುದೇ ಮುಂ.) ಎಪ್ಪತ್ತೆರಡು ಬಗೆಯ ಸೇವೆ ಮಾಡುವವರ ಸಮೂಹ) ನಿಶ್ಚಲ ನಿಯೋಗಿಗಳು+ ಆಶ್ರಮಿಗಳು+ ಅಗ್ಗಳೆಯ(ಶ್ರೇಷ್ಠ) ವಿಪ್ರಸ್ತೋಮ ಬಂದುದು ಕೋಟಿ ಸಂಖ್ಯೆಯಲಿ.
ಅರ್ಥ:ಧರ್ಮಜನು ಜನರನ್ನು ನಿಲ್ಲುಲು ಹೇಳಿದರೂ ನಿಲ್ಲದೆ ಅರಸನ ಜೊತೆಯಲ್ಲೇ ಶ್ರೇಷ್ಠರಾದ ಮಂಡಲೇಶ್ವರರು ಬಂದರು. ಪ್ರೀತಿಯಿಂದ ಕಾಪಾಡಿದದ ರಾಜಪುತ್ರರು, ಅನೇಕ ಮನ್ನಣೆಪಡೆದ ವೀರಭಟರು, ಸೇವೆಮಾಡುವ ಎಪ್ಪತ್ತೆರಡು ನಿಶ್ಚಲ ಸೇವಕರು, ಆಶ್ರಮದ ತಪಸ್ವಿಗಳು. ಶ್ರೇಷ್ಠ ವಿಪ್ರರ ಸಮೂಹ, ಇವರೆಲ್ಲಾ ಅಸಂಖ್ಯಾತ ಜನ ಧರ್ಮಜನ ಹಿಂದೆಯೇ(ಕೋಟಿ ಸಂಖ್ಯೆಯಲ್ಲಿ) ಬಂದರು.
ತಿರುಗಿ ಕಂಡನು ಭೂಮಿ ಭಾರದ
ನೆರವಿಯನು ಗಲ್ಲದಲಿ ಕರವಿ
ಟ್ಟರಸ ತಲೆದೂಗಿದನು ಸುಯ್ದನು ಬೈದು ದುಷ್ಕೃತವ ||
ಧರಣಿ ಸೇರಿದುದಹಿತರಿಗೆ ಕರಿ
ತುರಗ ರಥವೆಮಗಿಲ್ಲ ವಿಪಿನದ
ಪರಿಭವಣೆಗಿವರೇಕೆ ಬೆಸಗೊಳು ಭೀಮ ನೀನೆಂದ || ೩ ||
ಪದವಿಭಾಗ-ಅರ್ಥ: ತಿರುಗಿ ಕಂಡನು ಭೂಮಿ ಭಾರದ ನೆರವಿಯನು(ಜನಸಮೂಹ) ಗಲ್ಲದಲಿ ಕರವಿಟ್ಟು+ ಅರಸ ತಲೆದೂಗಿದನು ಸುಯ್ದನು ಬೈದು ದುಷ್ಕೃತವ ಧರಣಿ ಸೇರಿದುದು+ ಅಹಿತರಿಗೆ(ಭೂಮಿಯು ಶತ್ರುಗಳಿಗೆ) ಕರಿತುರಗ ರಥವು+ ಎಮಗೆ+ ಇಲ್ಲ ವಿಪಿನದ(ಕಾಡು) ಪರಿಭವಣೆಗೆ+ ಇವರೇಕೆ ಬೆಸಗೊಳು(ಹೇಳು) ಭೀಮ ನೀನೆಂದ.
ಅರ್ಥ:ಧರ್ಮಜನು ತನ್ನನ್ನು ಅನುಸರಿಸಿ ಬರುತ್ತಿರುವ ಜನಸಮೂಹವನ್ನು ಹಿಂತಿರುಗಿ ನೋಡಿದಾಗ ಕಂಡನು.ಅವನು ಭೂಮಿ ಭಾರದಷ್ಟು ಜನರ ನೆರವಿಯನ್ನು ಅಚ್ಚರಿ ಮತ್ತು ಚಿಂತೆಯಿಂದ ಗಲ್ಲದಲ್ಲಿ ಕೈಯಿಟ್ಟು ನೋಡಿದನು. ಅರಸ ಧರ್ಮಜನು ಇದೊಂದು ಸಮಸ್ಯೆಯಾಯಿತಲ್ಲಾ ಎಂದು ತಲೆದೂಗಿದನು. ಅವನು ಇವರ ಯೋಗಕ್ಷೇಮವನ್ನು ತಾನು ಹೇಗೆ ನೋಡಿಕೊಳ್ಳುವುದೆಂದು ಚಿಂತೆಯಿಂದ ನಿಟ್ಟುಸಿರು ಬಿಟ್ಟನು. ತನ್ನ ದುಷ್ಕೃತವನ್ನೂ (ಪಗಡೆಯಾಡಿದ್ದನ್ನೂ ಸೋಲನ್ನು ತಂದ ವಿಧಿಯನ್ನೂ) ಬೈದು, ಭೂಮಿಯು ಶತ್ರುಗಳಿಗೆ ಸೇರಿತು. 'ನಮಗೆ ರಥ ಆನೆ ಕುದುರೆಗಳಿಲ್ಲ ಇಲ್ಲ; ಕಾಡಿನ ಕಷ್ಟಕೋಟಲೆಗಳನ್ನು ನನ್ನೊಡನೆ ಬಂದು ಇವರೇಕೆ ಅನುಭವಿಸಬೇಕು?,' ಭೀಮಾ ನೀನು ಇದರ ರಹಸ್ಯವೇನು ಹೇಳು ಎಂದ ಧರ್ಮಜ.
ನಿಲ್ಲಿರೈ ದ್ವಿಜನಿಕರ ಕಳುಹಿಸಿ
ಕೊಳ್ಳಿರೈ ಪುರವರ್ಗ ನೇಮವ
ಕೊಳ್ಳಿರೈ ಪರಿವಾರ ಮಕ್ಕಳತಂದೆ ಮೊದಲಾಗಿ |
ಎಲ್ಲಿ ಮೆಳೆ ಮರಗಾಡು ಪಲ್ಲವ
ಫುಲ್ಲಫಲ ಪಾನೀಯಪೂರಿತ
ವಲ್ಲಿ ರಾಯನ ಸೆಜ್ಜೆಯರಮನೆಯೆಂದನಾ ಭೀಮ || ೪ ||
ಪದವಿಭಾಗ-ಅರ್ಥ: ನಿಲ್ಲಿರೈ ದ್ವಿಜನಿಕರ(ಬ್ರಾಹ್ಮಣರ ಸಮೂಹ) ಕಳುಹಿಸಿಕೊಳ್ಳಿರೈ ಪುರವರ್ಗ, ನೇಮವಕೊಳ್ಳಿರೈ(ಮಾತನ್ನು ನರವೇರಿಸಿ) ಪರಿವಾರ ಮಕ್ಕಳತಂದೆ ಮೊದಲಾಗಿ, ಎಲ್ಲಿ ಮೆಳೆ ಮರಗ+ ಕಾಡು ಪಲ್ಲವ(ಚಿಗುರು) ಫುಲ್ಲಫಲ ಪಾನೀಯಪೂರಿತು+ ಅಲ್ಲಿ ರಾಯನ ಸೆಜ್ಜೆಯ+ ಅರಮನೆ+ ಯೆಂದನು+ ಆ ಭೀಮ.
ಅರ್ಥ:ಧರ್ಮಜನು ತನ್ನನ್ನು ಹಿಂಬಾಲಿಸಿ ಬರುತ್ತಿರುವ ಜನರಿಗೆ,'ಬ್ರಾಹ್ಮಣೇ ನಿಲ್ಲಿನಿಲ್ಲಿರಪ್ಪಾ, ಹಿಂದಕ್ಕೆ ಹೋಗಿ ಎಂದನು. ಪುರಜನರೇ ನನ್ನನ್ನು ಕಳುಹಿಸಿಕೊಇರಪ್ಪಾ, ಪರಿವಾರದವರೇ, ಮಕ್ಕಳತಂದೆಯರೇ, ನನ್ನ ಮಾತನ್ನು ನರವೇರಿಸಿರಿ ಎಂದು ಕೇಳಿಕೊಂಡನು.ಆದರೆ ಅವರು ಹಾಗಲಿಲ್ಲ, ಅದಕ್ಕೆ ಭೀಮನು ಕಾರಣವನ್ನು ಹೇಳಿದನು; ಆ ಭೀಮನು,'ಎಲ್ಲಿ ಮೆಳೆ ಮರಗಳ ನರಳು, ಕಾಡು, ಚಿಗುರು ಫುಲ್ಲವಿಸುವಿಕೆ, ಫಲ, ಪಾನೀಯ ಮೊದಲಾದವುಗಳಿಂದ ತುಂಬಿದೆಯೋ, ಅಲ್ಲಿ ಧರ್ಮರಾಯನ ಸೆಜ್ಜೆಯ ಅರಮನೆ(ವಾಸ),' ಎಂದನು. (ಧರ್ಮರಾಯನು ಇದ್ದಲ್ಲಿ ಅವೆಲ್ಲ ಇರುತ್ತವೆ, ಅದಕ್ಕಾಗಿ ಜನರು ಅವನನ್ನು ಪ್ರಿತಿಸುತ್ತಾರೆ ಎಂದು ಭಾವ).
ಆವನಿಪತಿ ಚಿತ್ತವಿಸು ಬಹಳಾ
ರ್ಣವವ ಹೊಗು ಹಿಮಗಿರಿಯಲಿರು ಭೂ
ವಿವರ ಗತಿಯಲಿ ಗಮಿಸು ಗಾಹಿಸು ಗಹನ ಗಹ್ವರವ |
ಎವಗೆ ನೀನೇ ಜೀವ ನೀನೇ
ವಿವಿಧ ಧನ ಗತಿ ನೀನೆ ಮತಿ ನೀ
ನವಗಡಿಸಬೇಡಕಟ ಕೃಪೆ ಮಾಡೆಂದುದಖಿಳಜನ || ೫ ||
ಪದವಿಭಾಗ-ಅರ್ಥ: ಆವನಿಪತಿ ಚಿತ್ತವಿಸು ಬಹಳ ಆರ್ಣವವ(ಸಮುದ್ರವ) ಹೊಗು, ಹಿಮಗಿರಿಯಲಿ+ ಇರು, ಭೂವಿವರ ಗತಿಯಲಿ ಗಮಿಸು(ಹೋಗು), ಗಾಹಿಸು(ಓಡಿಹೋಗು) ಗಹನ ಗಹ್ವರವ(ಕಣಿವೆ, ಗುಹೆ), ಎವಗೆ (ನಮಗೆ) ನೀನೇ ಜೀವ ನೀನೇ ವಿವಿಧ ಧನ ಗತಿ ನೀನೆ ಮತಿ ನೀನು+ ಅವಗಡಿಸಬೇಡ+ ಅಕಟ ಕೃಪೆ ಮಾಡು+ ಎಂದುದು+ ಅಖಿಳ ಜನ(ಎಲ್ಲಾ ಜನ).
ಅರ್ಥ:ಧರ್ಮಜನ ಕೊರಿಕಗೆ ಎಲ್ಲಾ ಜನರು,'ರಾಜನೇ ಚಿತ್ತವಿಸಿ ಕೇಳು, ಬಹಳ ಆಳವಾದ ಸಮುದ್ರವನ್ನು ಹೊಗು, ಹಿಮಗಿರಿಯಲ್ಲಿ ಇರು, ಭೂಮಿಯ ಯಾವುದೇ ಭಾಗಕ್ಕೆ ವೇಗವಾಗಿ ಹೋಗು, ಅಥವಾ ಓಡಿ ಗಹನವಾದ ಗುಹೆಯನ್ನು ಸೇರು ನಾವು ಹಿಂಬಾಲಿಸುತ್ತೇವೆ. ನಮಗೆ ನೀನೇ ಜೀವ, ನೀನೇ ವಿವಿಧ ಧನ, ನೀನೇ ಗತಿ- ಮತಿ. ನೀನು ನಮ್ಮನ್ನು ತಡೆಯಬೇಡ, ಅಕಟ! ಕೃಪೆ ಮಾಡು,' ಎಂದರು.
ತುಂಬಿದನು ಕಂಬನಿಯನಕಟ ವಿ
ಡಂಬಿಸಿತೆ ವಿಧಿಯೆನ್ನನಿನಿಬರ
ನಂಬಿಸುವ ಪರಿಯೆಂತು ವಸನ ಗ್ರಾಸವಾಸದಲಿ |
ತುಂಬಿ ಸಿರಿಗೆಡಹಿಯೊಳ ಲಕುಮಿಯ
ಮುಂಬಿಗನೊಳಪದೆಸೆಯ ಕುಂತದ
ಚುಂಬಿಗನೊಳೇನುಂಟು ಫಲವೆಂದರಸ ಬಿಸುಸುಯ್ದ || ೬ ||
ಪದವಿಭಾಗ-ಅರ್ಥ: ತುಂಬಿದನು ಕಂಬನಿಯನು+ ಅಕಟ ವಿಡಂಬಿಸಿತೆ(ವಿಧಿ ತನ್ನನ್ನು ಅಪಹಾಸ್ಯ ಮಾದುತ್ತಿದೆಯೇ? ವಿಧಿಯು+ ಎನ್ನನು+ ಇನಿಬರ(ಇವರನ್ನು)+ ನಂಬಿಸುವ ಪರಿಯೆಂತು(ಹೇಗೆ); ವಸನ (ಬಟ್ಟೆ) ಗ್ರಾಸ(ಊಟ, ಆಹಾರ)ವಾಸದಲಿ(ವಸತಿ) ತುಂಬಿ ಸಿರಿ+ ಗೆ+ ಕೆಡಹಿಯೊಳು+ ಅಲಕುಮಿಯ(ಅಲಕ್ಷ್ಮಿ- ಸಂಪತ್ತುಹೀನನ) ಮುಂಬಿಗನೊಳು(ಮುಂಬಿಗ - ಮುಂದಿರುವವ)+ ಅಪದೆಸೆಯ ಕುಂತದ (ನಡುವೆ ಇರುವ,) ಚುಂಬಿಗನೊಳು(ಅಪದೆಸೆಯನ್ನು ಚುಂಬಿಸಿದವನು, ಅಪ್ಪಿದವನು)+ ಏನುಂಟು ಫಲವು+ ಎಂದು+ ಅರಸ ಬಿಸುಸುಯ್ದ(ನಿಟ್ಟುಸುರುಬಿಟ್ಟನು)
ಅರ್ಥ:ಜನರ ಅಭಿಮಾನದ ಮಾತಿಗೆ ಧರ್ಮಜನು, 'ಕಣ್ಣಲ್ಲಿ ನೀರು ತುಂಬಿದನು; ಅಕಟ! ವಿಧಿಯು ತನ್ನನ್ನು ಅಪಹಾಸ್ಯ ಮಾಡುತ್ತಿದೆಯೇ? ಇವರನ್ನು ನಂಬಿಸುವ ಪರಿ ಹೇಗೆ?; ಬಟ್ಟೆ, ಊಟ, ವಸತಿಯವ್ಯವಸ್ಥೆ ಹೇಗೆ ಮಾಡಲಿ. ಕಾಡಿನಲ್ಲಿ ಮುಂದೆ ಸಂಪತ್ತುಹೀನತೆಯ ನಡುವೆ ಇರುವವನೂ ಅಪದೆಸೆಯನ್ನು ಆಶ್ರಯಿಸಿರುವವನೂ ಆದ ತನ್ನನ್ನು ನಂಬಿ ಇವರು ಬಂದರೆ ಏನು ಫಲ?' ಎಂದು ನಿಟ್ಟುಸುರು ಬಿಟ್ಟನು.
ಖೇದವೇಕೆಲೆ ನೃಪತಿ ಹರುಷ ವಿ
ಷಾದದಲಿ ಸುಖ ದು
ಖದಲಿ ನುತಿ
ವಾದ ಪರಿವಾದದಲಿ ಸಮಬುದ್ಧಿಗಳಲಾ ದ್ವಿಜರು |
ಈ ದುರಂತದ ಚಿಂತೆ ಬೇಡೆಲೆ
ದ್ವಾದಶಾತ್ಮನ ಭಜಿಸಿದರೆ ಭ
ಕ್ಷ್ಯಾದಿ ಬಹುವಿಧದನ್ನ ಸಿದ್ಧಿಪುದೆಂದನಾ ಧೌಮ್ಯ || ೭ ||
ಪದವಿಭಾಗ-ಅರ್ಥ: ಖೇದವು(ದಃಖ)+ ಏಕೆ+ ಎಲೆ ನೃಪತಿ ಹರುಷ ವಿಷಾದದಲಿ ಸುಖ ದು:ಖದಲಿ ನುತಿವಾದ(ನುತಿ -ನುತಿಸು- ಭಜಿಸು, ಹೊಗಳು) ಪರಿವಾದದಲಿ(ವಾದ- ತರ್ಕ) ಸಮಬುದ್ಧಿಗಳಲಿ+ ಆ ದ್ವಿಜರು ಈ ದುರಂತದ ಚಿಂತೆ ಬೇಡೆ+ ಎಲೆ ದ್ವಾದಶಾತ್ಮನ ಭಜಿಸಿದರೆ ಭಕ್ಷ್ಯಾದಿ ಬಹುವಿಧದ+ ಅನ್ನ ಸಿದ್ಧಿಪುದು+ ಎಂದನು ಆ ಧೌಮ್ಯ.
ಅರ್ಥ:ಪಾಂಡವರ ಗುರುವೂ, ಪುರೋಹಿತನೂ ಆದ ಧೌಮ್ಯ ಮಹರ್ಷಿಯು ಧರ್ಮಜನನ್ನು ಕುರಿತು,'ದುಃಖಪಡುವುದು ಏಕೆ? ಎಲೆ ನೃಪತಿ ಹರ್ಷ ಮತ್ತು ವಿಷಾದದಲ್ಲಿ, ಸುಖ ಮತ್ತು ದು:ಖದಲ್ಲಿ, ಹೊಗಳಿಕೆಯಲ್ಲಿ, ತರ್ಕದಲ್ಲಿ, ಪರಿವಾದ ಮಂಡನೆಯಲ್ಲಿ, ಸಮಬುದ್ಧಿಗಳಲ್ಲಿ ಆ ದ್ವಿಜರು ಪರಿಣತರು. ಅವರಿಗೆ ನಿನ್ನ ಕಷ್ಟ, ಚಿಂತೆ ತಿಳಿಯದು. ನಿನಗೆ ಈ ದುರಂತದ ಚಿಂತೆ ಬೇಡ. ಎಲೆ ರಾಜನೇ, ದ್ವಾದಶಾತ್ಮನಾದ ಸೂರ್ಯನನ್ನು ಭಜಿಸಿದರೆ ನಾನಾ ವಿಧದ ಭಕ್ಷ್ಯ ಭೋಜ್ಯಗಳು, ಬಹುವಿಧದ ಅನ್ನ, ಪಾನಿಯಗಳು ಸಿದ್ಧಿಸುವುದು.' ಎಂದನು.

ಅಕ್ಷಯಪಾತ್ರೆಯ ಅನುಗ್ರಹ[ಸಂಪಾದಿಸಿ]

ಧರಣಿಪತಿ ಕೇಳ್ ಧೌಮ್ಯ ವಚನಾ೦
ತರದೊಳಮರನದೀ ವಿಗಾಹನ
ಪರಮಪಾವನ ಕರಣನೀಕ್ಷಿಸಿ ತರಣಿಮಂಡಲವ |
ಮುರುಹಿ ಮೂಲಾಧಾರ ಪವನನ
ನುರು ಸುಷುಮ್ನೆಗೆ ನೆಗಹಿ ನಿಚ್ಚಟ
ವರ ಸಮಾಧಿಯಲಿನನ ಮೆಚ್ಚಿಸಿದನು ಮಹೀಪಾಲ || ೮ ||
ಪದವಿಭಾಗ-ಅರ್ಥ: ಧರಣಿಪತಿ ಕೇಳ್ ಧೌಮ್ಯ ವಚನ+ ಅಂ೦ತರದೊಳು+ ಅಮರನದೀ ವಿಗಾಹನ(ಗರುಡ ವಾಹನನ) ಪರಮಪಾವನ ಕರಣನ+ ಈಕ್ಷಿಸಿ(ನೋಡಿ) ತರಣಿಮಂಡಲವ ಮುರುಹಿ (ಧಾನ್ಯಗಳನ್ನು ಒಟ್ಟುಗೂಡಿಸಿದ ಪಶು ಆಹಾರ- ಮುರುಹು, ಅಡಗು) ಮೂಲಾಧಾರ (ರಾಜಯೋಗದಲ್ಲಿ ಹೇಳಿದ, ಬೆನ್ನು ಮೂಳೆಯ ಕೆಳಗಿನ ಮೊದಲ ನಾಡಿ-ಚಕ್ರ.) ಪವನನನು(ಪವನ- ವಾಯು, ಪ್ರಾಣ)+ ಉರು(ಹೆಚ್ಚು - ಮೇಲೆ) ಸುಷುಮ್ನೆಗೆ ನೆಗಹಿ(ಹುಬ್ಬುಗಳ ಮಧ್ಯ ಇರುವ ರಾಜ ಯೋಗದಲ್ಲಿ ಹೇಳಿದ ನಾಡಿ ಸುಷುಮ್ನಾ ನಾಡಿ- ಕೇಂದ್ರ; ಮೇಲೆ ಎತ್ತಿ), ನಿಚ್ಚಟ(ನಿಶ್ಚಲ) ವರ ಸಮಾಧಿಯಲಿ+ ಇನನ(ಇನ= ಸೂರ್ಯ) ಮೆಚ್ಚಿಸಿದನು ಮಹೀಪಾಲ.
ಅರ್ಥ:ವೈಶಂಪಾಯನು ಹೇಳಿದ,ಧರಣಿಪತಿ ಜನಮೇಜಯನೇ ಕೇಳು, ಧೌಮ್ಯರ ಮಾತನ್ನು ಗ್ರಹಿಸಿ,ಧರ್ಮಜನು ಅಂ೦ತರಂಗದಲ್ಲಿ ಅಮರನದಿಯಾದ ಗಂಗೆಯ ಜನಕನನೂ,ಗರುಡವಾಹನನೂ, ಪರಮಪಾವನನೂ, ಕರಣಾಳುವೂ ಆದ ಕೃಷ್ಣನನ್ನು / ವಿಷ್ಣುವನ್ನು ಮನಸ್ಸಿನಲ್ಲಿ ನೋಡಿ ವಂದಿಸಿ, ಸೂರ್ಯಮಂಡಲವನ್ನು ಮನಸ್ಸಿನಲ್ಲಿ ಅಡಗಿಸಿಕೊಂಡು, ಮೂಲಾಧಾರದಲ್ಲಿದ್ದ ಪ್ರಾಣವಾಯವನ್ನು ಹೆಚ್ಚಿಸಿ- ಉದ್ದೀಪಿಸಿ, ಅದನ್ನು ಮೇಲೆ ಸುಷುಮ್ನಾ ನಾಡಿಗೆ ಎತ್ತಿತಂದು, ನಿಶ್ಚಲವಾದ ಚಂಚಲತೆ ಇಲ್ಲದ ಶ್ರೇಷ್ಠವಾದ ಸಮಾಧಿಯಲ್ಲಿ ನೆಲೆನಿಂತು ಸೂರ್ಯನನ್ನು ಮೆಚ್ಚಿಸಿದನು.
ವರವ ಕೊಟ್ಟೆನು ನಿನಗೆ ಹೇಮದ
ಚರುಕವಿದೆ ವಿವಿಧಾನ್ನ ಪಾನೋ
ತ್ಕರದ ತವನಿಧಿ ನಿನ್ನ ವಧು ಬಾಣಸನ ಕರಣದಲಿ |
ವಿರಚಿಸಲಿ ಬಳಿಕುಣಲಿ ಶತ ಸಾ
ವಿರವನಂತವು ನೀವು ಬಳಿಕಂ
ಬುರುಹಮುಖಿ ಮರುದಿವಸವೀ ಪರಿಯೆಂದನಾ ದ್ಯುಮಣಿ || ೯ ||
ಪದವಿಭಾಗ-ಅರ್ಥ: ವರವ ಕೊಟ್ಟೆನು ನಿನಗೆ ಹೇಮದ(ಚಿನ್ನದ) ಚರುಕವಿದೆ(ಚುಕ- ಅಗಲಬಾಯಿಯ ಪಾತ್ರೆ) ವಿವಿಧ+ ಅನ್ನ ಪಾನ+ ಉತ್ಕರದ(ರಾಶಿ, ಸಮೂಹ) ತವನಿಧಿ ನಿನ್ನ ವಧು ಬಾಣಸನ ಕರಣದಲಿ ವಿರಚಿಸಲಿ(ಅಡಿಗೆಯವನಂತೆ ಮನಸ್ಸಿನಲ್ಲಿ ವಿರಚಿಸಲಿ- ಭಾವಿಸಲಿ ) ಬಳಿಕ+ ಉಣಲಿ ಶತ ಸಾವಿರವ+ ಅನಂತವು(ಮಿತಿಇಲ್ಲದಷ್ಟು) ನೀವು ಬಳಿಕ+ ಅಂಬುರುಹಮುಖಿ(ವನಿತೆ- ದ್ರೌಪದಿ), ಮರುದಿವಸವು + ಈ ಪರಿ+ ಯೆ+ ಎಂದನಾ ದ್ಯುಮಣಿ(ಸೂರ್ಯ).
ಅರ್ಥ:ಸೂರ್ಯನು ಧರ್ಮಜನಿಗೆ,'ನೀನು ಬಯಸಿದ ವರವನ್ನು ಕೊಟ್ಟ್ಟಿದ್ದೇನೆ. ನಿನಗೆ ಈ ಚಿನ್ನದ ಅಗಲಬಾಯಿಯ ಪಾತ್ರೆಯನ್ನು ನೀಡಿದ್ದೇನೆ. ಅಗತ್ಯವಾದ ವಿವಿಧ ಅನ್ನ ಪಾನಗಳ ರಾಶಿಯನ್ನು ನಿನ್ನಭಾಗ್ಯದ ನಿನ್ನ ವಧು- ಪತ್ನಿಯು ಅಡಿಗೆಯವಳಾಗಿ ಮನಸ್ಸಿನಲ್ಲಿ ಭಾವಿಸಲಿ. ಅದು ಶತ ಸಾವಿರವ ಮಿತಿಇಲ್ಲದಷ್ಟು ಕೊಡುವುದು. ಬಳಿಕ ನೀವು, ಅನಂತರ ವನಿತೆ- ದ್ರೌಪದಿ ಉಣಲಿ. ಮರುದಿವಸವೂ, ದಿನ ನಿತ್ಯವೂ ಈ ಪರಿಯಲ್ಲಿ ನೆಡೆಯುವುದು.'ಎಂದನು.
ಭೂಮಿಪತಿ ಭುಲ್ಲವಿಸಿದನು
ಸ್ಸೀಮ ಸಂತೋಷದಲಿ ಸುಜನ
ಸ್ತೋಮ ರಕ್ಷಣಕಾದ ನಿರ್ವಾಹದ ನಿರೂಢಿಯಲಿ |
ಆ ಮುನೀಂದ್ರಂಗೆರಗಿ ಬಳಿಕೀ
ಭಾಮಿನಿಯ ಕರೆದೀ ಹದನ ಸು
ಪ್ರೇಮದಿಂದರುಹಿದನು ತನ್ನ ಸಹೋದರವ್ರಜಕೆ || ೧೦ ||
ಪದವಿಭಾಗ-ಅರ್ಥ:ಭೂಮಿಪತಿ ಭುಲ್ಲವಿಸಿದನು+ ಉಸ್ಸೀಮ(ಉತ್ಸಾಹಗೊಳ್ಳು,ಹುಮ್ಮಸ್ಸಿನಿಂದ ಕೂಡಿರು ಸಡಗರಪಡು,ಸಂಭ್ರಮ ಪಡು) ಸಂತೋಷದಲಿ ಸುಜನಸ್ತೋಮ ರಕ್ಷಣಕೆ+ ಆದ ನಿರ್ವಾಹದ ನಿರೂಢಿಯಲಿ(ರೂಢಿಯಂತೆ, ಕ್ರಮಬದ್ಧವಾಗಿ, ಆದರ್ಶ ನಿರೂಪಕ ಕ್ರಮದಲ್ಲಿ) ಆ ಮುನೀಂದ್ರಂಗೆ+ ಎರಗಿ ಬಳಿಕ+ ಈ ಭಾಮಿನಿಯ(ಪತ್ನಿ ದ್ರೌಪದಿ.) ಕರೆದು+ ಈ ಹದನ(ವಿಚಾರವನ್ನು) ಸುಪ್ರೇಮದಿಂದ+ ಅರುಹಿದನು(ಅರುಹು- ಹೇಳು) ತನ್ನ ಸಹೋದರವ್ರಜಕೆ
ಅರ್ಥ:ಸೂರ್ಯನಿಂದ ಅಕ್ಷಯ ಪಾತ್ರೆಯನ್ನು ಪಡೆದ ರಾಜ ಧರ್ಮಜನು ಸಂತಸದಿಂದ ಸಂಭ್ರಮಪಟ್ಟನು. ಅವನು ಸಂತೋಷದಿಂದ ಸುಜನರ ಸಮೂಹದ ರಕ್ಷಣೆಗೆ ಆದ ಪರಿಹಾರದ ಮಾರ್ಗ ದೊರಕಲು ದಾರಿ ತೋರಿದ ಆ ಮುನೀಂದ್ರಂಗೆ ರೂಢಿಯಂತೆ ನಮಸ್ಕರಿಸಿ, ಬಳಿಕ ಈ ಅಕ್ಷಯ ಪಾತ್ರೆಯ ವಿಚಾರವನ್ನು ಪತ್ನಿ ದ್ರೌಪದಿಯನ್ನು ಕರೆದು, ತನ್ನ ಸಹೋದರರ ಸಮ್ಮುಖಲ್ಲಿ ಸುಪ್ರೇಮದಿಂದ ಹೇಳಿದನು.

ಕೌರವನಿಗೆ ಮೈತ್ರೇಯ ಮುನಿಯ ಶಾಫ[ಸಂಪಾದಿಸಿ]

ಇವರು ತಿರುಗಿದರಿತ್ತಲಡವಿಯ
ಬವಣಿಗೆಯ ಭಾರಾಂಕ ಭಾಷೆಯ
ಲವಿರಳಿತ ಜನಜಾಲ ಸಹಿತಾರಣ್ಯ ಮಾರ್ಗದಲಿ |
ಆವನಿಪತಿ ಕೇಳತ್ತಲಾ ಕೌ
ರವನ ನಗರಿಗೆ ಪಾರಿಕಾಂಕ್ಷಿ
ಪ್ರವರನೊಬ್ಬನು ಬಂದು ಹೊಕ್ಕನು ರಾಜಮಂದಿರವ || ೧೧ ||
ಪದವಿಭಾಗ-ಅರ್ಥ: ಇವರು ತಿರುಗಿದರು+ ಇತ್ತಲು+ ಅಡವಿಯ ಬವಣಿಗೆಯ(ಬವಣೆ- ಕಷ್ಟ) ಭಾರಾಂಕ ಭಾಷೆಯಲಿ+ ಅವಿರಳಿತ(ವಿರಳವಲ್ಲದ) ಜನಜಾಲ ಸಹಿತ+ ಅರಣ್ಯ ಮಾರ್ಗದಲಿ ಆವನಿಪತಿ ಕೇಳು+ ಅತ್ತಲಾ ಕೌರವನ ನಗರಿಗೆ ಪಾರಿಕಾಂಕ್ಷಿ(ಸನ್ಯಾಸಿ, ಯತಿ) ಪ್ರವರನು(ಗುರು, ಪುರೋಹಿತ)+ ಒಬ್ಬನು ಬಂದು ಹೊಕ್ಕನು ರಾಜಮಂದಿರವ.
ಅರ್ಥ:ಪಾಂಡವರು ಅಡವಿಯ ಕಷ್ಟವನ್ನು ಅನುಭವಿಸಲು ಮುಂದಿನ ಯುದ್ಧದ ವಿಷಯದ ಮಾತನಾಡುತ್ತಾ, ತುಂಬಿದ ಜನಜಾಲದ ಸಹಿತ ಅತ್ತ ಅರಣ್ಯ ಮಾರ್ಗದಲಿ ನೆಡೆದರು. ಆವನಿಪತಿ ಕೇಳು ಇತ್ತ ಕೌರವನ ಹಸ್ತಿನಾವತಿ ನಗರಕ್ಕೆ ಒಬ್ಬ ಯತಿಯೂ ಗುರುವೂ ಆದ ಒಬ್ಬನು ಬಂದು ರಾಜಮಂದಿರವನ್ನು ಪ್ರವೇಶಮಾಡಿದನು.
ಮುನಿಯ ಸತ್ಕರಿಸಿದನು ಕೌರವ
ಜನಪನಾ ಋಷಿಮುಖ್ಯನೀತನ
ವಿನಯ ರಚನೆಗೆ ಮೆಚ್ಚಿ ನುಡಿದನು ರಾಜಕಾರಿಯವ |
ನಿನಗದೊಂದೇ ಕೊರತೆ ಪಾಂಡವ
ಜನಪರನು ಜೂಜಿನಲಿ ಸೋಲಿಸಿ
ಕನಲಿಸಿದೆಯದರಿಂದ ಬಲುಗೇಡಹುದು ನಿನಗೆಂದ || ೧೨ ||
ಪದವಿಭಾಗ-ಅರ್ಥ: ಮುನಿಯ ಸತ್ಕರಿಸಿದನು ಕೌರವಜನಪನು+ ಆ ಋಷಿಮುಖ್ಯನ,+ ಈತನ ವಿನಯ ರಚನೆಗೆ(ಕಪಟ ನೆಡೆ) ಮೆಚ್ಚಿ ನುಡಿದನು ರಾಜಕಾರಿಯವ ನಿನಗೆಅದು+ ಒಂದೇ ಕೊರತೆ, ಪಾಂಡವ ಜನಪರನು(ರಾಜಕುಮಾರರನ್ನು) ಜೂಜಿನಲಿ ಸೋಲಿಸಿ ಕನಲಿಸಿದೆ (ಕೋಪಗಳ್ಳವಂತೆ ಮಾಡಿರುವೆ)+ಯ+ ಅದರಿಂದ ಬಲು+ಗೇ+ ಕೇಡಹುದು ನಿನಗೆಂದ.
ಅರ್ಥ:ಕೌರವಜನಪನು ಆ ಋಷಿಮುಖ್ಯನಾದ ಮುನಿಯನ್ನು ಸತ್ಕರಿಸಿದನು. ಈತನ ವಿನಯದ (ಕಪಟ) ನೆಡತೆಗೆ ಮೆಚ್ಚಿ ರಾಜಕಾರ್ಯದ ವಿಚಾರವನ್ನು ಹೇಳಿದನು; 'ನೀನು ಉತ್ತಮನು ಆದರೆ ನಿನಗೆ ಅದು ಒಂದೇ ಕೊರತೆ; ಸೋದರರಾದ ಪಾಂಡವ ಜನಪರನ್ನು ಜೂಜಿನಲ್ಲಿ ಸೋಲಿಸಿ ಅವರ ಕೋಪಕ್ಕೆ ಗುರಿಯಾಗಿರುವೆ. ಅದರಿಂದ ಮುಂದೆ ನಿನಗೆ ದೊಡ್ಡ ಕೇಡು ಆಗುವುದು,' ಎಂದ.
ಹೋದ ಕೃತಿಯಂತಿರಲಿ ಸಾಕಿ
ನ್ನಾದರೆಯು ಕೌಂತೇಯರನು ಕರೆ
ದಾದರಿಸಿ ಕೊಡು ಧರೆಯನೆನೆ ಖೊಪ್ಪರಿಸಿ ಖಾತಿಯಲಿ |
ಹೊಯ್ದು ತೊಡೆಯನು ಹಗೆಗೆ ಕೊಡುವೆನೆ
ಮೇದಿನಿಯನೆನೆ ರೋಷ ಶಿಖಿಯಲಿ
ಕಾದುದೀತನ ಹೃದಯ ಶಪಿಸಿದನಂದು ಮೈತ್ರೇಯ || ೧೩ ||
ಪದವಿಭಾಗ-ಅರ್ಥ:ಹೋದ ಕೃತಿಯು+ ಅಂತು+ ಇರಲಿ ಸಾಕು+ ಇನ್ನಾದರೆಯು ಕೌಂತೇಯರನು(ಕುಂತಿಯ ಮಕ್ಕಳನ್ನು) ಕರೆದು+ ಆದರಿಸಿ ಕೊಡು ಧರೆಯನು+ ಎನೆ ಖೊಪ್ಪರಿಸಿ(ಕೊಪ್ಪರಿಸು-ಕುಪ್ಪಳಿಸಿ; ಕೂಂಕು,ನೆಗೆ/ಹಾರು,ಮಿಡಿ,ಕುಪ್ಪರಿಸು, ಕುಪ್ಪಳಿಸು) ಖಾತಿಯಲಿ ಹೊಯ್ದು ತೊಡೆಯನು, ಹಗೆಗೆ ()ಹಗೆ- ಶತ್ರು ಕೊಡುವೆನೆ ಮೇದಿನಿಯನು(ಮೇದಿನಿಯನು- ಭೂಮಿಯನ್ನು, ರಾಜ್ಯವನ್ನು)+ ಎನೆ ರೋಷ ಶಿಖಿಯಲಿ ಕಾದುದು+ ಈತನ ಹೃದಯ ಶಪಿಸಿದನು+ ಅಂದು ಮೈತ್ರೇಯ.
ಅರ್ಥ:ಮೈತ್ರೇಯನು,'ಆಗಿಹೋದ ಕಾರ್ಯ ಆಗಿಹೋಯಿತು; ಅದು ಅಂತು ಹಾಗಿರಲಿ; ವಿರೋಧ ಸಾಕು. ಇನ್ನಾದರೂ ಕುಂತಿಯ ಮಕ್ಕಳನ್ನು ಕರೆದು, ಆದರಿಸಿ ಅವರ ರಾಜ್ಯವನ್ನು ಅವರಿಗೆ ಕೊಡು,' ಎನ್ನಲು, ಕೌರವನು ಸಿಟ್ಟಿನಿಂದ ನೆಗೆದು, ತೊಡೆಯನ್ನು ಹೊಯ್ದು/ತಟ್ಟಿಕೊಂಡು, 'ಶತ್ರುವಿಗೆ ರಾಜ್ಯವನ್ನು ಕೊಡುವೆನೆ?'ಎನ್ನಲು, ಮುನಿಗೆ ರೋಷ ನೆತ್ತಿಗೆ ಏರಿತು (ಶಿಖಿಯಲಿ)- ಈತನ ಹೃದಯ ಕಾದು ಬಿಸಿಯಾಯಿತು. ಅಂದು ಮೈತ್ರೇಯಮುನಿಯು ಕೌರವನನ್ನು ಶಪಿಸಿದನು.
ತೊಡೆಗಳನು ಕಲಿಭೀಮ ಬವರದೊ
ಳುಡಿದು ಕೆಡಹಲಿಯೆಂದು ಶಾಪವ
ಕೊಡಲು ಮುನಿಪನ ಸಂತವಿಟ್ಟನು ಬಂದು ಧೃತರಾಷ್ಟ್ರ |
ತೊಡೆಗೆ ಬಂದುದು ತೋಟಿ ಸಾಕಿ
ನ್ನೊಡಬಡಿಸಿ ಫಲವಿಲ್ಲ ನಮ್ಮಯ
ನುಡಿಗೆ ಮರುಮಾತಿಲ್ಲೆನುತ ಮುನಿ ಸರಿದನಾಶ್ರಮಕೆ || ೧೪ ||
ಪದವಿಭಾಗ-ಅರ್ಥ: ತೊಡೆಗಳನು ಕಲಿಭೀಮ ಬವರದೊಳು+ ಉಡಿದು(ಮುರಿದು, ಪುಡಿಮಾಡಿ) ಕೆಡಹಲಿಯೆಂದು ಶಾಪವ ಕೊಡಲು, ಮುನಿಪನ ಸಂತವಿಟ್ಟನು ಬಂದು ಧೃತರಾಷ್ಟ್ರ, ತೊಡೆಗೆ ಬಂದುದು ತೋಟಿ(ಕಷ್ಟ) ಸಾಕಿನ್ನು+ ಒಡಬಡಿಸಿ(ಒಡಂಬಡಿಸು, ಸಮಾಧಾನ ಪಡಿಸಿ) ಫಲವಿಲ್ಲ, ನಮ್ಮಯ ನುಡಿಗೆ ಮರುಮಾತಿಲ್ಲ+ ಎನುತ ಮುನಿ ಸರಿದನು+ ಆಶ್ರಮಕೆ
ಅರ್ಥ:ಕೌರವನ ಸೊಕ್ಕಿನ ನುಡಿಗೆ ಮೈತ್ರೇಯ ಮುನಿಯು ಸಿಟ್ಟಿನಿಂದ,'ಕಲಿಭೀಮನು ಯುದ್ಧದಲ್ಲಿ ನಿನ್ನ ತೊಡೆಗಳನ್ನು ಉಡಿದು/ಮುರಿದು ಕೆಡಗಲಿ',ಎಂದು ಶಾಪವನ್ನು ಕೊಡಲು, ಧೃತರಾಷ್ಟ್ರನು ಬಂದು ಮುನಿಪನನ್ನು ಸಂತವಿಸಿದನು, ಆದರೆ ಮುನಿಯು,'ಕೌರವನ ತೊಡೆಗೆ ಕಂಟಕ ಬಂದಿತು, ಮಾತು ಇನ್ನು ಸಾಕು; ತನ್ನನ್ನು ಸಮಾಧಾನ ಪಡಿಸಿ ಫಲವಿಲ್ಲ; ನಮ್ಮ ಆಡಿದ ನುಡಿಗೆ ಮರುಮಾತಿಲ್ಲ,' ಎನ್ನುತ್ತಾ ಆಶ್ರಮಕ್ಕೆ ಹೊರಟುಹೋದನು.
ಆ ಮಹಾಮುನಿ ಶಾಪಭಯವನು
ಭೀಮಸೇನನ ಬಲುಹ ನೆನೆ ನೆನೆ
ದಾ ಮನಸ್ಸಿನ ಬೇಗೆಯಲಿ ಬೆದೆಬೆಂದು ಬೇಸರಲಿ |
ಭೂಮಿಪತಿ ಕರೆಸಿದನು ವಿದುರನ
ನಾ ಮಹಾಜ್ಞಾನಿಯನು ಮುನಿಪನ
ತಾಮಸವನರುಹಿದೊಡೆ ಬಳಿಕಿಂತೆಂದನಾ ವಿದುರ || ೧೫ ||
ಪದವಿಭಾಗ-ಅರ್ಥ: ಆ ಮಹಾಮುನಿ ಶಾಪಭಯವನು, ಭೀಮಸೇನನ ಬಲುಹ, ನೆನೆ ನೆನೆದು+ ಆ ಮನಸ್ಸಿನ ಬೇಗೆಯಲಿ(ಬೆಂಕಿಯ ಶಾಖ) ಬೆದೆಬೆಂದು ಬೇಸರಲಿ ಭೂಮಿಪತಿ ಕರೆಸಿದನು ವಿದುರನನು+ ಆ ಮಹಾಜ್ಞಾನಿಯನು ಮುನಿಪನ ತಾಮಸವನು(ಕೋಪ)+ ಅರುಹಿದೊಡೆ(ಅರುಹು - ಹೇಳು) ಬಳಿಕ+ ಇಂತೆಂದನು+ ಆ ವಿದುರ
ಅರ್ಥ:ಧೃತರಾಷ್ಟ್ರನು ಆ ಮಹಾಮುನಿಯು ಕೊಟ್ಟ ಶಾಪಭಯವನ್ನೂ, ಭೀಮಸೇನನ ಬಲಾಢ್ಯತೆಯನ್ನೂ, ನೆನೆ-ನೆನೆದು ಆ ಮನಸ್ಸಿನ ಬೇಗೆಯಲ್ಲ್ಲಿ ಬೆದೆಬೆಂದು ಬೇಸರದಿಂದ ಆ ಭೂಮಿಪತಿಯು ಆ ಮಹಾಜ್ಞಾನಿಯಾದ ವಿದುರನನ್ನು ಕರೆಸಿದನು. ಅವನಿಗೆ ಮೈತ್ರೇಯ ಮುನಿಪನ ಸಿಟ್ಟಿನ ಶಾಪವನ್ನು ಹೇಳಿದಾಗ ಆ ವಿದುರನು ಅದನ್ನು ಕೇಳಿದ ಬಳಿಕ ಹೀಗೆ ಹೇಳಿದನು.

ವಿದುರನು ಪಾಂಡವರ ಬಳಿಗೆ ಹೋದನು[ಸಂಪಾದಿಸಿ]

ತಪ್ಪದಿದು ನಿನ್ನಾತಗಳ ಭುಜ
ದರ್ಪ ತೀವ್ರ ಜ್ವರದ ವಿಕಳರ
ನೊಪ್ಪಿತಾದೆ ಸುಯೋಧನಾದ್ಯರು ಜನಿಸಲೀ ಧರೆಗೆ |
ತಪ್ಪುವುದೆ ಋಷಿವಾಕ್ಯ ಸಂಧಿಯೊ
ಳಪ್ಪಿಗೊಳು ಪಾಂಡವರನಲ್ಲದ
ರಪ್ಪಿಕೊಂಬಳು ಮೃತ್ಯು ನಿನ್ನನು(ಪಾ.ಬೇಧ- ನಿನ್ನ) ಕುಮಾರಕರನೆಂದ || ೧೬ ||
ಪದವಿಭಾಗ-ಅರ್ಥ:ತಪ್ಪದು+ ಇದು ನಿನ್ನಾತಗಳ(ನಿನ್ನವರ) ಭುಜದರ್ಪ ತೀವ್ರ ಜ್ವರದ ವಿಕಳರನು(ಭ್ರಮೆ, ಭ್ರಾಂತಿ)+ ಒಪ್ಪಿತಾದೆ(ಒಪ್ಪಿದವನಾದೆ) ಸುಯೋಧನ+ ಆದ್ಯರು(ಮೊದಲಾದವರು) ಜನಿಸಲು+ ಈ ಧರೆಗೆ ತಪ್ಪುವುದೆ ಋಷಿವಾಕ್ಯ, ಸಂಧಿಯೊಳು+ ಒಪ್ಪಿಗೊಳು(ಒಪ್ಪಿಕೊ) ಪಾಂಡವರನು+ ಅಲ್ಲದರೆ(ಅಲ್ಲವಾದರೆ)+ ಅಪ್ಪಿಕೊಂಬಳು ಮೃತ್ಯು ನಿನ್ನನು ಕುಮಾರಕರನ+ ಎಂದ.
ಅರ್ಥ:ವಿದುರನು ರಾಜನಿಗೆ,'ಈ ಶಾಪ ತಪ್ಪದು; ನಿನ್ನವರ(ನಿನ್ನ ಮಕ್ಕಳ) ಭುಜದರ್ಪದ ತೀವ್ರ ಜ್ವರದ ಭ್ರಮೆಯನ್ನು ಒಪ್ಪಿಕೊಂಡೆ. ಸುಯೋಧನ ಮೊದಲಾದ (ದುಷ್ಟರು)ವರು ಜನಿಸಿರುವಾಗ ಈ ಭೂಮಿಗೆ ಋಷಿವಾಕ್ಯ ತಪ್ಪುವುದೆ? ಇಲ್ಲ!. ಅದರಿಂದ ಸಂಧಿಯನ್ನು ಮಾಡಿಕೊಂಡು ಪಾಂಡವರನ್ನು ಒಪ್ಪಿಕೊ. ಅಲ್ಲವಾದರೆ ಮೃತ್ಯುದೇವತೆ (ನಿನ್ನನ್ನೂ ಮತ್ತು) ನಿನ್ನ ಕುಮಾರಕರನ್ನೂ ಅಪ್ಪಿಕೊಳ್ಳುವಳು,' ಎಂದ.
ಎನಲು ಕಿಡಿಕಿಡಿಯಾ(ಪಾ- ಯೋ)ಗಿ ಕೌರವ
ಜನಪನೀತನ ಬೈದು ಕುಂತೀ
ತನುಜರಲಿ ಬಾಂಧವನಲಾ ಹೋಗವರ ಹೊರೆಗೆಂದು |
ಮುನಿದು ಗರ್ಜಿಸೆ ಜೀಯ ಕರ ಲೇ
ಸೆನುತ ಮನದುಬ್ಬಿನಲಿ ಪಾಂಡವ
ಜನಪರಿಹ ಕಾಮ್ಯಕ ವನಾಂತರಕೈದಿದನು ವಿದುರ || ೧೭ ||
ಪದವಿಭಾಗ-ಅರ್ಥ: ಎನಲು ಕಿಡಿಕಿಡಿಯೋಗಿ ಕೌರವಜನಪನು+ ಈತನ ಬೈದು ಕುಂತೀ ತನುಜರಲಿ ಬಾಂಧವನಲಾ, ಹೋಗು+ ಅವರ ಹೊರೆಗೆ+ ಎಂದು ಮುನಿದು ಗರ್ಜಿಸೆ ಜೀಯ ಕರ(ಬಹಳ) ಲೇಸು+ ಎನುತ ಮನದ+ ಉಬ್ಬಿನಲಿ ಪಾಂಡವಜನಪರು+ ಇಹ(ಇರುವ) ಕಾಮ್ಯಕ ವನಾಂತರಕೆ+ ಐದಿದನು ವಿದುರ.
ಅರ್ಥ:ವಿದುರನು ಯುದ್ಧವಾದರೆ ಮುನಿವಾಕ್ಯ ತಪ್ಪುವುದಿಲ್ಲ, ಪಾಂಡವರನ್ನು ಕರೆದು ಸಂಧಿಮಾಡಿಕೋ, ಎನ್ನಲು, ಕೌರವಜನಪನು ಕೋಪದಿಂದ ಬೆಂಕಿಯ ಕಿಡಿಕಿಡಿಯಂತೆ ಸಿಟ್ಟಾಗಿ, ಕೌರವನು- ತನ್ನ ತಂದೆಯ ತಮ್ಮ - ಮತ್ತು ಮಂತ್ರಿ ವಿದುರನನ್ನು ಬೈದು, 'ಈತನು ಕುಂತೀ ಮಕ್ಕಳಲ್ಲಿ ಬಾಂಧವ ಪ್ರೇಮ ಹೊಂದಿದ್ದಾನೆ ಎಂದು ದೂರಿ, ಅವನಿಗೆ,' ನೀನು ಅವರ ಕಡೆಗೇ ಹೋಗು,' ಎಂದು ಕೋಪದಿಂದ ಗರ್ಜಿಸಲು, ವಿದುರನು ಧೃತರಾಷ್ಟ್ರನಿಗೆ 'ಜೀಯ, ಬಹಳ ಒಳ್ಳಯದು, ನಿಮ್ಮ ಮಗನ ಸಲಹೆ,' ಎಂದು ಹೇಳುತ್ತಾ, ಮನದಲ್ಲಿ ಸಂತಸದಿಂದ ಉಬ್ಬಿ ಪಾಂಡವರಾಜಕುಮಾರರು ಇರುವ ಕಾಮ್ಯಕವನ ಪ್ರದೇಶಕ್ಕೆ ಹೋದನು.
ಇದಿರುಗೊಂಡರು ಹಿರಿದು ಮನ್ನಿಸಿ
ವಿದುರನನು ಕೊಂಡಾಡಿ ಗುರು ನೃಪ
ನದಿಜ ಧೃತರಾಷ್ಟ್ರಾದಿಗಳ ಸುಕ್ಷೇಮ ಕುಶಲಗಳ |
ವಿದುರನಾಗಮನ ಪ್ರಪಂಚದ
ಹದನನೆಲ್ಲವ ಕೇಳಿದರು ಹೇ
ಳಿದನು ನಿಜ ವೃತ್ತಾಂತವನು ವಿದುರಂಗೆ ಯಮಸೂನು || ೧೮ ||
ಪದವಿಭಾಗ-ಅರ್ಥ:ಇದಿರುಗೊಂಡರು(ಸ್ವಾದತಿಸಿದರು) ಹಿರಿದು ಮನ್ನಿಸಿ ವಿದುರನನು ಕೊಂಡಾಡಿ, ಗುರು ನೃಪ ನದಿಜ ಧೃತರಾಷ್ಟ್ರಾದಿಗಳ ಸುಕ್ಷೇಮ ಕುಶಲಗಳ, ವಿದುರನ+ ಆಗಮನ ಪ್ರಪಂಚದ(ಘಟನೆಯ ವಿವರವಾದ ಸುದ್ದಿ) ಹದನನು+ ಎಲ್ಲವ ಕೇಳಿದರು, ಹೇಳಿದನು ನಿಜ (ತನ್ನ) ವೃತ್ತಾಂತವನು ವಿದುರಂಗೆ ಯಮಸೂನು.
ಅರ್ಥ:ಪಾಂಡವರು ವಿದುರನನ್ನು ಕೊಂಡಾಡಿ- ಹೊಗಳಿ ಇದಿರುಗೊಂಡು- ಸ್ವಾದತಿಸಿದರು. ಅವನನ್ನು ಬಹಳವಾಗಿ ಮನ್ನಿಸಿ- ಗೌರವಿಸಿದರು. ನಂತರ ಅವರು ಗುರುದ್ರೋಣ, ನೃಪಕೌರವ, ನದಿಜ ಭೀಷ್ಮ ಮತ್ತು ಧೃತರಾಷ್ಟ್ರ ಮೊದಲಾದವರ ಸುಕ್ಷೇಮ ಕುಶಲಗಳನ್ನು ವಿಚಾರಿಸಿದರು. ಆನಂತರ ವಿದುರನು ಕಾಡಿಗೆ ಬಂದ ಪ್ರಪಂಚದ ವಿಚಾರವಾಗಿ ಎಲ್ಲವನ್ನೂ ಕೇಳಿ ತಿಳಿದರು. ಧರ್ಮಜನು ವಿದುರನಿಗೆ ತನ್ನಕಡೆಯ ವೃತ್ತಾಂತವನ್ನು ಹೇಳಿದನು.

ಧೃತರಾಷ್ಟ್ರ ವಿದುರನನ್ನು ಮತ್ತೆ ಕರೆಸಿದ[ಸಂಪಾದಿಸಿ]

ಇತ್ತಲೀ ವಿದುರನ ವಿಯೋಗದ
ಚಿತ್ತದಂತಸ್ತಾಪದಲಿ ನೃಪ
ಮತ್ತೆ ದೂತರ ಕಳುಹಿ ಕರೆಸಿದಾತನನು ಪುರಕೆ |
ಹೆತ್ತಮಕ್ಕಳ ಬಿಡು ಪೃಥಾಸುತ
ರತ್ತ ತಿರುಗೆನೆ ಖಾತಿಗೊಂಡೆನು
ಮತ್ತೆ ಮುನಿಯದಿರೆಂದು ವಿದುರನನಪ್ಪಿದನು ನೃಪತಿ || ೧೯||
ಪದವಿಭಾಗ-ಅರ್ಥ: ಇತ್ತಲು+ ಈ ವಿದುರನ ವಿಯೋಗದ ಚಿತ್ತದ(ಮನಸ್ಸಿನ)+ ಅಂತಸ್ತಾಪದಲಿ ನೃಪ ಮತ್ತೆ ದೂತರ ಕಳುಹಿ ಕರೆಸಿದ+ ಆತನನು ಪುರಕೆ, ಹೆತ್ತಮಕ್ಕಳ ಬಿಡು ಪೃಥಾ ಸುತರತ್ತ ತಿರುಗೆ+ ಎನೆ ಖಾತಿಗೊಂಡೆನು(ಸಿಟ್ಟುಮಾಡಿದೆನು) ಮತ್ತೆ ಮುನಿಯದಿರು+ ಎಂದು ವಿದುರನನು+ ಅಪ್ಪಿದನು ನೃಪತಿ.
ಅರ್ಥ:ಇತ್ತ ಹಸತಿನಾವತಿಯಲ್ಲಿ ಈ ವಿದುರನ ವಿಯೋಗದಿಂದ ಧೃಥರಾಷ್ಟ್ರನು ಮನಸ್ಸಿನ ಒಳತಾಪದಲ್ಲಿ ಬೆಂದು ಮತ್ತೆ ದೂತರನ್ನು ಕಳುಹಿಸಿ ವಿದುರನನ್ನು ಹಸ್ತಿನಾಪುರಕ್ಕೆ ಕರೆಸಿದನು. ಅವನು ವಿದುರನಿಗೆ,'ನಾನು ಹೆತ್ತ ಆ ಮಕ್ಕಳ ಮಾತನ್ನು ಬಿಡು. ನಾನು ಪೃಥಾ ಮಕ್ಕಳ ಕಡೆಗೆ ತಿರುಗಿ ಅವರ ಪಕ್ಷವಹಿಸುವುದಿಲ್ಲ. ನನ್ನನ್ನು ಬಿಟ್ಟು ಹೋಗಬೇಡ,'ಎಂದಾಗ, ವಿದುರನು,'ನಿನ್ನ ಮೇಲೆ ಸಿಟ್ಟುಬಂತು,' ಎಂದನು; ಅದಕ್ಕೆ ನೃಪತಿ ಧೃತರಾಷ್ಟ್ರನು,'ಮತ್ತೆ ನನ್ನ ಮೇಲೆ ಸಿಟ್ಟುಮಾಡಬೇಡ,'ಎಂದು ವಿದುರನನ್ನು ಪ್ರೀತಿಯಿಂದ ಅಪ್ಪಿಕೊಂಡನು.
ಆವ ವನದಲಿ ಪಾಂಡುಸುತರಿಗೆ
ತಾವು ನಿನಗೇನೆಂದರನಿಬರ
ನಾವ ವನದಲಿ ಕಂಡೆ ಕೂಡೆನಿತುಂಟು ಪರಿವಾರ |
ಆವುದಭಿಮತ ಭೀಮಸೇನನ
ಭಾವವೇನು ಯುಧಿಷ್ಠಿರಾರ್ಜುನ
ರಾವ ಭಂಗಿಯಲಿದ್ದರೆಂದನು ನಗುತ ಧೃತರಾಷ್ಟ್ರ || ೨೦ ||
ಪದವಿಭಾಗ-ಅರ್ಥ:ಆವ ವನದಲಿ ಪಾಂಡುಸುತರಿಗೆ ತಾವು(ಪ್ರದೇಶ, ವಸತಿ, ಸ್ಥಳ) ನಿನಗೆ+ ಏನೆಂದರು,+ ಅನಿಬರನು+ ಆವ ವನದಲಿ ಕಂಡೆ, ಕೂಡೆ+ ಎನಿತು+ ಉಂಟು ಪರಿವಾರ ಆವುದು+ ಅಭಿಮತ, ಭೀಮಸೇನನ ಭಾವವೇನು, ಯುಧಿಷ್ಠಿರ+ ಅರ್ಜುನರು+ ಆವ ಭಂಗಿಯಲಿದ್ದರು+ ಎಂದನು ನಗುತ ಧೃತರಾಷ್ಟ್ರ
ಅರ್ಥ:ಧೃತರಾಷ್ಟ್ರನು ವಿದುರನನ್ನು ಕುರಿತು,'ಪಾಂಡವರು ಯಾವ ವನದಲ್ಲಿ ಇದ್ದಾರೆ, ಪಾಂಡುಸುತರಿಗೆ ವಾಸತಿ ಎಲ್ಲಿ? ಅವರು ನಿನಗೆ ಏನೆಂದರು? ಅವರೆಲ್ಲರನ್ನೂ ಯಾವ ವನದಲಿ ಕಂಡೆ? ಅವನ ಕೂಡೆ ಎಷ್ಟು ದೊಡ್ಡ ಪರಿವಾರ ಉಂಟು? ಅವರ ಅಭಿಮತ - ಅಭಿಪ್ರಾಯ ಏನು? ಭೀಮಸೇನನ ಭಾವವೇನು?, ಯುಧಿಷ್ಠಿರ ಮತ್ತು ಅರ್ಜುನರು ಆವ ಭಂಗಿಯಲಿದ್ದರು?' ಎಂದು ನಗ್ಗುತಾ ವಿಚಾರಿಸಿದನು.
ಟಿಪ್ಪಣಿ: ಧೃತರಾಷ್ಟ್ರನಿಗೆ ತಾನು ಪಾಂಡವರನ್ನು ಬರಿಗೈಯಲ್ಲಿ ಕಾಡಿಗೆ ಅಟ್ಟಿದ ಬಗ್ಗೆ ಸ್ವಲ್ಪವೂ ಅಳುಕು ನಾಚಿಕೆ ಇಲ್ಲ.
ಅರಸ ಕೇಳ್ ಗಂಗಾನದಿಯನು
ತ್ತರಿಸಿದವರಿಗೆ ಕಮಲ ಮಿತ್ರನ
ಕರುಣವಾಯಿತು ಕನಕ ಪಾತ್ರೆಯೊಳಕ್ಷಯಾನ್ನದಲಿ |
ಪರಿಕರದ ಪರುಟವಣೆಯಲಿ ಸಾ
ವಿರದ ಶತಸಂಖ್ಯಾತ ಧರಣೀ
ಸುರನಿಯೋಗಿಗಳಾಪ್ತಜನ ಸಹಿತೈದಿದರು ವನವ || ೨೧ ||
ಪದವಿಭಾಗ-ಅರ್ಥ: ಅರಸ ಕೇಳ್ ಗಂಗಾನದಿಯನು+ ಉತ್ತರಿಸಿದ(ದಾಟಿದ)+ ಅವರಿಗೆ ಕಮಲಮಿತ್ರನ(ಸೂರ್ಯನ) ಕರುಣವಾಯಿತು, ಕನಕಪಾತ್ರೆಯೊಳು+ ಅಕ್ಷಯಾನ್ನದಲಿ ಪರಿಕರದ ಪರುಟವಣೆಯಲಿ(ಹರಡುವಿಕೆ: ಸಾಮೀಪ್ಯ- ಹತ್ತಿರ ಇರುವುದು) ಸಾವಿರದ ಶತಸಂಖ್ಯಾತ ಧರಣೀಸುರ(ವಿಪ್ರರ) ನಿಯೋಗಿಗಳ+ ಆಪ್ತಜನಸಹಿತ+ ಐದಿದರು(ಬಂದರು, ಹೋದರು) ವನವ
ಅರ್ಥ:ವಿದುರ ಹೇಳಿದ, 'ಅರಸ ಧೃತರಾಷ್ಟ್ರನೇ ಕೇಳು, ಗಂಗಾನದಿಯನ್ನು ದಾಟಿದ ನಂತರ ಅವರಿಗೆ ಸೂರ್ಯನ ಕರುಣೆ ಲಭಿಸಿತು. ಅವನು ಕರಣಿಸಿದ ಕನಕಪಾತ್ರೆಯ ಅಕ್ಷಯಾನ್ನದಲ್ಲಿ ನಾನಾ ಪರಿಕರದ ಒದಗುವಿಕೆಯಿಂದ ಸಾವಿರದ ಶತಸಂಖ್ಯೆಗಳ ವಿಪ್ರರ, ನಿಯೋಗಿಗಳ, ಆಪ್ತಜನರನ್ನು ತೃಪ್ತಿಪಡಿಸಿ ಅವರ ಸಹಿತ ವನವನ್ನು ಸೇರಿದರು.

ಹಿಡಿಂಬಕನ ಬಂಧು ಕಿಮ್ಮೀರನ ಆಕ್ರಮಣ[ಸಂಪಾದಿಸಿ]

ಜನಪ ಕೇಳ್ ಕಿಮ್ಮೀರನೆಂಬವ
ನನಿಮಿಷರಿಗುಬ್ಬಸದ ಖಳನಾ
ತನ ವಿಭಾಡಿಸಿ ಹೊಕ್ಕರವರಾರಣ್ಯ ಮಂದಿರವ |
ದನುಜನೇ ಕಿಮ್ಮೀರನಾತನ
ನನಿಲಜನೊ ಫಲುಗುಣನೊ ಕೊಂದಾ
ತನು ಯುಧಿಷ್ಠಿರನೋ ಸವಿಸ್ತರವಾಗಿ ಹೇಳೆಂದ || ೨೨ ||
ಪದವಿಭಾಗ-ಅರ್ಥ: ಜನಪ ಕೇಳ್ ಕಿಮ್ಮೀರನೆಂಬವನು+ ಅನಿಮಿಷರಿಗೆ(ದೇವತೆಗಳಿಗೆ)+ ಉಬ್ಬಸದ(ತೊಂದರೆ ಕೊಡುವ) ಖಳನು+ ಆತನ ವಿಭಾಡಿಸಿ ಹೊಕ್ಕರು+ ಅವರು+ ಆರಣ್ಯ ಮಂದಿರವ; ದನುಜನೇ ಕಿಮ್ಮೀರನು+ ಆತನನು+ ಅನಿಲಜನೊ ಫಲುಗುಣನೊ ಕೊಂದಾತನು ಯುಧಿಷ್ಠಿರನೋ ಸವಿಸ್ತರವಾಗಿ ಹೇಳೆಂದ.
ಅರ್ಥ:ವಿದುರನು,'ಜನಪನೇ ಕೇಳು, ಕಿಮ್ಮೀರನೆಂಬುವವನು ದೇವತೆಗಳಿಗೆ ತೊಂದರೆ ಕೊಡುವ ದುಷ್ಟ ದೈತ್ಯನು. ಆತನನ್ನು ಹೊಡೆದುಹಾಕಿ, ಅವರು ಆರಣ್ಯ ನಿವಾಸ ಪ್ರದೇಶವನ್ನು ಹೊಕ್ಕರು, ಎಂದನು. ಆಗ ಧೃತರಾಷ್ಟ್ರನು,'ಕಿಮ್ಮೀರನು ದನುಜನೇ- ರಾಕ್ಷಸನೇ? ಆತನನ್ನು ಕೊಂದಾತನು ಅನಿಲಜ ಭೀಮನೋ, ಫಲ್ಗುಣನೊ, ಯುಧಿಷ್ಠಿರನೋ, ಅದನ್ನು ಸವಿಸ್ತಾರವಾಗಿ ಹೇಳು,' ಎಂದ.
ಅರಸ ಕೇಳಂದೇಕ ಚಕ್ರದೊ
ಳೊರಸಿದನಲಾ ಭೀಮನಾತಗೆ
ಹಿರಿಯನೀ ಕಿಮ್ಮೀರ ಬಾಂಧವನಾ ಹಿಡಂಬಕಗೆ |
ಧರಣಿಪಾಲನ ಸಪರಿವಾರದ
ಬರವ ಕಂಡನು ತನ್ನ ತಮ್ಮನ
ಹರಿಬವನು ಮರಳಿಚುವೆನೆನುತಿದಿರಾದನಮರಾರಿ || ೨೩ ||
ಪದವಿಭಾಗ-ಅರ್ಥ: ಅರಸ ಕೇಳು+ ಅಂದು+ ಏಕಚಕ್ರದೊಳು+ ಒರಸಿದನಲಾ(ಕೊಂದರಲ್ಲಾ) ಭೀಮನು+ ಆತಗೆ ಹಿರಿಯನು+ ಈ ಕಿಮ್ಮೀರ ಬಾಂಧವನು+ ಆ ಹಿಡಂಬಕಗೆ ಧರಣಿಪಾಲನ ಸಪರಿವಾರದ ಬರವ ಕಂಡನು, ತನ್ನ ತಮ್ಮನ ಹರಿಬವನು(ಹೊಣೆಗಾರಿಕೆ, ಯುದ್ಧ, ಮುಯ್ಯಿ, ಸೇಡು) ಮರಳಿಚುವೆನು+ ಎನುತತ+ ಇದಿರಾದನು+ ಅಮರಾರಿ(ಅಮರರಿಗೆ ಅರಿ- ದೇವತೆಗಳಿಗೆ ಶತ್ರು).
ಅರ್ಥ:ವಿದುರ ಹೇಳಿದ,'ಅರಸನೇ ಕೇಳು, ಅಂದು ಅರಗಿನ ಮೆನೆಯಿಂದ ತಪ್ಪಸಿಕೊಂಡು ಹೋದ ಪಾಂಡವರು ಏಕಚಕ್ರ ನಗರದಲ್ಲಿದ್ದಾಗ ಭೀಮನು ಕೊಂದನಲ್ಲಾ, ಆ ಬಕಾಸುರನನೆಂಬ ಆತನಿಗೆ ಈ ಕಿಮ್ಮೀರ ಹಿರಿಯ ಬಂಧು. ಆ ಹಿಡಂಬಕನು, ಧರಣಿಪಾಲ ಯುಧಿಷ್ಠಿರನು ಸಪರಿವಾರ ಸಮೇತ ಬರವುದನ್ನು ಕಂಡನು. ತನ್ನ ತಮ್ಮನನ್ನು ಕೊಂದ ಸೇಡುನ್ನು ಮರಳಿಸುವೆನು, ಎನ್ನುತ್ತಾ ಆ ದಾನವನು ಇವರಿಗೆ ಎದುರಾಗಿ ಯುದ್ಧಕ್ಕೆ ನಿಂತನು.
ಇವರು ಮೂರೇ ದಿನಕೆ ಕಾಮ್ಯಕ
ವನ ಮಹಾಶ್ರಮಕಾಗಿ ಬರೆ ದಾ
ನವನು ದಾರಿಯ ಕಟ್ಟಿ ನಿಂದನು ಕೈಯ ಮುಷ್ಟಿಯಲಿ |
ಅವನ ಕಂಗಳ ಕೆಂಪಿನಲಿ ಮೇ
ಣವನ ದಾಡೆಯ ಬೆಳಗಿನಲಿ ಖಳ
ನವಯವವ ಕಂಡಳುಕಿ ನಿಂದರು ಮುಂಗುಡಿಯ ಭಟರು || ೨೪ ||
ಪದವಿಭಾಗ-ಅರ್ಥ: ಇವರು ಮೂರೇ ದಿನಕೆ ಕಾಮ್ಯಕವನ ಮಹಾಶ್ರಮಕಾಗಿ ಬರೆ(ಬರಲು), ದಾನವನು ದಾರಿಯ ಕಟ್ಟಿ ನಿಂದನು ಕೈಯ ಮುಷ್ಟಿಯಲಿ, ಅವನ ಕಂಗಳ ಕೆಂಪಿನಲಿ ಮೇಣ್+ ಅವನ ದಾಡೆಯ ಬೆಳಗಿನಲಿ ಖಳನ+ ಅವಯವವ ಕಂಡು+ ಅಳುಕಿ(ಹೆದರಿ) ನಿಂದರು ಮುಂಗುಡಿಯ(ಮುಂದಿನ) ಭಟರು.
ಅರ್ಥ:ಪಾಂಡವರು ಮೂರೇ ದಿನದಲ್ಲಿ ಕಾಮ್ಯಕವನದಲ್ಲಿರುವ ಮಹಾ ಆಶ್ರಮಕ್ಕೆ ಬರುತ್ತಿರಲು, ಆ ದಾನವ ಕಿಮ್ಮೀರನು ಅವರನ್ನು ದಾರಿಯಲ್ಲಿ ಅಡ್ಡಕಟ್ಟಿ ನಿಂತನು. ಆ ಕಿಮ್ಮೀರನ ಕೈಯ ಮುಷ್ಟಿಯ ಬಲವನ್ನೂ, ಅವನ ಕಣ್ಣುಗಳ ಕೆಂಪಿನ ಕೋಪವನ್ನೂ, ಮತ್ತೆ ಅವನ ಹೊಳೆಯುವ ಕೋರೆದಾಡೆಯ ಬೆಳಕನ್ನೂ, ಆ ದುಷ್ಟನ ಗಟ್ಟಿಮುಟ್ಟಾದ ಅವಯವದನ್ನೂ ಕಂಡು ಮುಂದಿದ್ದ ಭಟರು ಹೆದರಿ ನಿಂತರು.
ಮುಂದೆ ಘೋರಾರಣ್ಯವಿದೆ ಸುರ
ಬಂದಿಕಾರನ ಕಾಹಿನಲಿ ಕಾ
ಲಿಂದಿಯುದರದ ಮೊಬ್ಬಿನಂತಿದೆ ತೀವ್ರತರ ತಿಮಿರ |
ಇಂದಿನಿರುಳಲ್ಲಿ ಬದುಕಿದೊಡೆ ಸಾ
ವೆಂದಿಗೆಮಗಿಲ್ಲೆನುತ ಭಯದಲಿ
ನಿಂದುದಲ್ಲಿಯದಲ್ಲಿ ಪಾಂಡುಕುಮಾರ ಪರಿವಾರ || ೨೫ ||
ಪದವಿಭಾಗ-ಅರ್ಥ: ಮುಂದೆ ಘೋರಾರಣ್ಯವಿದೆ, ಸುರಬಂದಿಕಾರನ(ರಾಕ್ಷಸನ) ಕಾಹಿನಲಿ(ಕಾವಲಿನಲ್ಲಿ) ಕಾಲಿಂದಿಯ(ಯಮುನಾ ನದಿ)+ ಉದರದ ಮೊಬ್ಬಿನಂತಿದೆ(ಯಮುನಾನದಿಯ ನೀರು ತುಸು ಕಪ್ಪು) ತೀವ್ರತರ ತಿಮಿರ(ಕತ್ತಲೆ), ಇಂದಿನ+ ಇರುಳಲ್ಲಿ ಬದುಕಿದೊಡೆ ಸಾವೆಂದಿಗೂ+ ಎಮಗಿಲ್ಲ+ ಎನುತ ಭಯದಲಿ ನಿಂದುದು+ ಅಲ್ಲಿಯದಲ್ಲಿ ಪಾಂಡುಕುಮಾರ ಪರಿವಾರ.
ಅರ್ಥ:ಪಾಂಡವರು ಹೋಗುವ ಮಾರ್ಗದಲ್ಲಿ ಮುಂದೆ ಘೋರವಾದ ಅರಣ್ಯವಿದೆ, ರಾಕ್ಷಸನ ಕಾವಲಿನಲ್ಲಿ ಯಮುನಾನದಿಯ ಹರಿವಿನ ಮೊಬ್ಬಿನ ಹಾಗಿದೆ. ತೀವ್ರವಾದ ದಟ್ಟಕತ್ತಲೆ; ಇದರಲ್ಲಿ ಬಂದ ಪಾಂಡುಕುಮಾರರ ಪರಿವಾರ, ಇಂದಿನ ರಾತ್ರಿಯಲ್ಲಿ ಬದುಕಿ ಉಳಿದರೆ ನಮಗೆ ಎಂದಿಗೂ ಸಾವಿಲ್ಲ, ಎನ್ನುತ್ತಾ ಭಯದಿಂದ ಅಲ್ಲಿಯವರಲ್ಲಿಯೇ ನಿಂತರು.
ಅಡಿಗಡಿಗೆ ಮಾನಿಸರ ಸೊಗಡವ
ಗಡಿಸುತಿದೆ ಬರಹೇಳು ನೆತ್ತರ
ಗುಡಿಹಿಗೈನೆಯರೆಲ್ಲಿ ಶಾಕಿನಿ ಡಾಕಿನೀ ನಿಕರ |
ತಡೆಯಬೇಡೋ ತಿನ್ನೆನುತ ಬೊ
ಬ್ಬಿಡುತ ಖಳನುರುಬಿದನು ರಾಯನ
ಮಡದಿ ಹೊಕ್ಕಳು ಮರೆಯನರ್ಜುನ ಭೀಮ ಧರ್ಮಜರ || ೨೬ ||
ಪದವಿಭಾಗ-ಅರ್ಥ: ಅಡಿಗಡಿಗೆ ಮಾನಿಸರ ಸೊಗಡ(ಕಂಪು, ವಾಸನೆ ೨ ಕಟುವಾದ ವಾಸನೆ,) + ಅವಗಡಿಸುತಿದೆ(ಚೋದಿಸು, ಸೋಲಿಸು, ವಿರೋಧಿಸು, ಹರಡು) ಬರಹೇಳು ನೆತ್ತರ (ರಕ್ತವನ್ನು)+ಗು+ ಕುಡಿ-ಹಿ+ ಗೈ+ ಕೈನೆಯರು(ಕೈನೆ= ದಾಸಿ,ಪರಿಚಾರಿಕೆ ಕ್ಷುದ್ರಹೆಂಗಸು,ದುಷ್ಟೆ) + ಎಲ್ಲಿ ಶಾಕಿನಿ ಡಾಕಿನೀ ನಿಕರ ತಡೆಯಬೇಡೋ ತಿನ್ನು+ ಎನುತ ಬೊಬ್ಬಿಡುತ ಖಳನು+ ಉರುಬಿದನು(ಮೇಲೆ ಬೀಳು) ರಾಯನ ಮಡದಿ ಹೊಕ್ಕಳು ಮರೆಯನು+ ಅರ್ಜುನ ಭೀಮ ಧರ್ಮಜರ.
ಅರ್ಥ:ಕಾಮ್ಯಕ ವನಕ್ಕೆ ಪಾಂಡವರು ಮತ್ತು ಅವರ ಅಭಿಮಾನಿಗಳು ಬಂದಾಗ ಕಿಮ್ಮೀರನು ಅಡಿಗಡಿಗೆ- ಮತ್ತೆಮತ್ತೆ, ಪದೇ ಪದೇ ಮನುಷ್ಯರ ವಾಸನೆ ಬಡಿಯುತ್ತಿದೆ; ನೆತ್ತರನ್ನು ಕುಡಿಯುವ ಕೈನೆಯರನ್ನು ಬರಹೇಳು; ಎಲ್ಲಿ ಶಾಕಿನಿ ಡಾಕಿನೀ ಸಮೂಹ; ತಡೆಯಬೇಡೋ ತಿನ್ನು ಎನ್ನುತ್ತಾ ಆರ್ಭಟಿಸುತ್ತಾ ದುಷ್ಟ ಕಿಮ್ಮೀರನು ಪಾಂಡವರ ಸಮೂಹದ ಮೇಲೆ ಆಕ್ರಮಣ ಮಾಡಿದನು. ಧರ್ಮರಾಯನ ಮಡದಿ ದ್ರೌಪದಿ ಅರ್ಜುನ, ಭೀಮ, ಧರ್ಮಜರ ಮರೆಯನ್ನು ಹೊಕ್ಕಳು.
ಎಲೆಲೆ ರಾಕ್ಷಸ ಭೀತಿ ಹೋಗದೆ
ನಿಲು ನಿಲೆಲವೋ ನಿಮಿಷ ಮಾತ್ರಕೆ
ಗೆಲುವರರಸುಗಳೆನುತ ಮುನಿ ರಕ್ಷೋಘ್ನ ಸೂಕ್ತವನು ||
ಹಲವು ವಿಧದಲಿ ಜಪಿಸಿ ದಿಗು ಮಂ
ಡಲದ ಬಂಧವ ರಚಿಸಿ ಜನ ಸಂ
ಕುಲವ ಸಂತೈಸಿದನು ಧೌಮ್ಯನು ಮುಂದೆ ಭೂಪತಿಯ || ೨೭ ||
ಪದವಿಭಾಗ-ಅರ್ಥ: ಎಲೆಲೆ ರಾಕ್ಷಸ ಭೀತಿ ಹೋಗದೆ ನಿಲು ನಿಲು+ ಎಲವೋ, ನಿಮಿಷ ಮಾತ್ರಕೆ ಗೆಲುವರು+ ಅರಸುಗಳು+ ಎನುತ ಮುನಿ ರಕ್ಷೋಘ್ನ ಸೂಕ್ತವನು ಹಲವು ವಿಧದಲಿ ಜಪಿಸಿ ದಿಗು ಮಂಡಲದ ಬಂಧವ ರಚಿಸಿ ಜನ ಸಂಕುಲವ ಸಂತೈಸಿದನು ಧೌಮ್ಯನು ಮುಂದೆ ಭೂಪತಿಯ.
ಅರ್ಥ:ಧೌಮ್ಯರು ರಾಕ್ಷಸನಿಗೆ,'ಎಲೆಲೆ ರಾಕ್ಷಸ ಹೆದರದೆ ನಿಲ್ಲು ನಿಲ್ಲು, ಎಲವೋ, ನಿಮಿಷ ಮಾತ್ರದಲ್ಲಿ ಪಾಂಡವ ಅರಸುಗಳು ನಿನ್ನನ್ನು ಗೆಲ್ಲುವರು, ಎನ್ನುತ್ತಾ, ಧೌಮ್ಯಮುನಿ ರಕ್ಷೋಘ್ನ ಸೂಕ್ತವನ್ನು ಹಲವು ವಿಧದಲ್ಲಿ ಜಪಿಸಿ, ದಿಕ್ಕುಗಳ ಮಂಡಲದ ಬಂಧವವನ್ನು ರಚಿಸಿದರು. ಧೌಮ್ಯಮುನಿ ಅಲ್ಲಿದ್ದ ಜನರ ಸಮೂಹವನ್ನು ಸಂತೈಸಿದನು. ನಂತರ ಮುನಿಯು ಭೂಪತಿ ಧರ್ಮಜನನ್ನೂ ಸಮಾಧಾನಪಡಿಸಿದನು.
ಆರು ನೀವ್ ನಡುವಿರುಳು ಪಾಂಡು ಕು
ಮಾರರಾವೆನಲಿತ್ತಲೇನು ವಿ
ಚಾರ ಬಂದಿರಿ ಹೇಳಿ ನೀವಾ ಬಕ ಹಿಡಿಂಬಕರ |
ವೈರಿಗಳಲಾ ಹೊಲ್ಲೆಹೇನು ವಿ
ಕಾರಿಗಳನೊಡಹೊಯ್ದು ಶೋಣಿತ
ವಾರಿಯೋಕುಳಿಯಾಡ ಬೇಹುದೆನುತ್ತ ಖಳ ಜರೆದ || ೨೮ ||
ಪದವಿಭಾಗ-ಅರ್ಥ: ಆರು(ಯಾರು) ನೀವ್ ನಡುವಿರುಳು, ಪಾಂಡು ಕುಮಾರರು+ ಆವು(ನಾವು)+ ಎನಲು+ ಇತ್ತಲೇನು ವಿಚಾರ ಬಂದಿರಿ ಹೇಳಿ, ನೀವು+ ಆ ಬಕ ಹಿಡಿಂಬಕರ ವೈರಿಗಳಲಾ, ಹೊಲ್ಲೆಹ (ಕೆಡುಕು, ಕೆಟ್ಟದು, ತೊಂದರೆ)+ ಏನು ವಿಕಾರಿಗಳನು+ ಒಡಹೊಯ್ದು(ಕೊಂದು) ಶೋಣಿತವಾರಿಯ(ರಕ್ತದ)+ ಓಕುಳಿಯಾಡಬೇಹುದು+ ಎನುತ್ತ ಖಳ ಜರೆದ.
ಅರ್ಥ:ಅಡ್ಡಗಟ್ಟಿದ ಕಿಮ್ಮೀರನು,'ಯಾರು ನೀವು? ನಡುರಅತ್ರಿ ಬಂದಿರುವುದೇಕೆ?' ಎಂದು ಕೇಳಿದನು. ಅದಕ್ಕೆ ಇವರು,'ನಾವು ಪಾಂಡುಕುಮಾರರು,' ಎನ್ನಲು, ಅವನು,'ಇತ್ತಕಡೆ ಕಾಡಿಗೆ ಏಕೆ ಬಂದಿರಿ ವಿಚಾರ ಹೇಳಿ,'ಎಂದನು. ಮತ್ತೆ,'ನೀವು ಆ ಬಕ ಮತ್ತು ಹಿಡಿಂಬಕರ ವೈರಿಗಳಲ್ಲವೇ, ಕೆಟ್ಟ ವಿಚಾರ ಏನು ನಿಮ್ಮದು,' ಎಂದು ಹೇಳಿ,'ಕಡುಕಿಗಳೂ ವಿಕಾರಿಗಳಾದ ನಿಮ್ಮನ್ನು ಕೊಂದು ರಕ್ತದ ಓಕುಳಿಯಾಡಬೇಕಾಗುವುದು,'ಎನುತ್ತ ಅವನು ತೆಗಳಿದನು.
ಮಿಡಿದನರ್ಜುನ ಧನುವನಾತನ
ಜಡಿದು ನಿಂದನು ಭೀಮನಸುರನ
ಕೆಡಹಿ ಕಾಮ್ಯಕ ವನದ ಭೂಮಿಯ ಭೂತ ಸಂತತಿಗೆ |
ಬಡಿಸುವೆನು ನೀ ಸೈರಿಸೆನುತವ
ಗಡಿಸಿದನು ಕಲಿ ಭೀಮನಂತ್ಯದ
ಸಿಡಿಲು ಸೆರೆ ಬಿಟ್ಟಂತೆ ಬೊಬ್ಬಿಡುತೆದ್ದನಮರಾರಿ || ೨೯ ||
ಪದವಿಭಾಗ-ಅರ್ಥ: ಮಿಡಿದನು+ ಅರ್ಜುನ ಧನುವನು+ ಆತನ ಜಡಿದು ನಿಂದನು ಭೀಮನು+ ಅಸುರನ ಕೆಡಹಿ ಕಾಮ್ಯಕ ವನದ ಭೂಮಿಯ ಭೂತ ಸಂತತಿಗೆ ಬಡಿಸುವೆನು, ನೀ ಸೈರಿಸು+ ಎನುತ+ ಅವಗಡಿಸಿದನು ಕಲಿ ಭೀಮನು+ ಅಂತ್ಯದ ಸಿಡಿಲು ಸೆರೆ ಬಿಟ್ಟಂತೆ ಬೊಬ್ಬಿಡುತ+ ಎದ್ದನು+ ಅಮರಾರಿ(ಅಮರರಿಗೆ+ ಅರಿ- ಶತ್ರು= ರಾಕ್ಷಸ)
ಅರ್ಥ:ಕಿಮ್ಮೀರನ ಬೆದರಿಕೆ ಕೇಳಿ, ಅರ್ಜುನನು ಧನುವನ್ನು ಹೆದೆಏರಿಸಿ ಠೇಂಕಾರ ಮಾಡಿದನು. ಆಗ ಆತನನ್ನು ಭೀಮನು ತಡೆದು ಮುಂದೆ ನಿಂತನು. ಭೀಮನು,'ಈ ಕಿಮ್ಮೀರ ಅಸುರನನ್ನು ಕೆಡಹಿ ಕೊಂದು ಕಾಮ್ಯಕವನದ ಭೂಮಿಯ ಭೂತಗಳ ಸಂತತಿಗೆ ಊಟ ಬಡಿಸುವೆನು. ಅರ್ಜುನಾ ನೀನು ಸೈರಿಸು- ತಡೆ,' ಎನ್ನುತ್ತಾ ಕಲಿ ಭೀಮನು ರಾಕ್ಷಸನನ್ನು ಆಕ್ರಮಿಸಿದನು. ಆಗ ಅಂತ್ಯಕಾಲದ ಸಿಡಿಲು ಸೆರೆಯಿಂದ ಹೊರಬಿದ್ದಂತ ಬೊಬ್ಬಿಡುತ್ತಾ ರಾಕ್ಷಸ ಕಿಮ್ಮೀರನು ಹೋರಾಡಲು ಸಿದ್ಧನಾದನು. (ಎದ್ದನು- ಕಿಮ್ಮೀರ ನಿಂತೇ ಇದ್ದನು- ಇಲ್ಲಿ 'ಸಿದ್ಧನಾದನು' ಎನ್ನುವುದು ಹೊಂದುತ್ತದೆ.)

ಭೀಮನಿಂದ ಕಿಮ್ಮೀರನ ವಧೆ[ಸಂಪಾದಿಸಿ]

ಎಂಬೆನೇನನು ಪವನಜನ ಕೈ
ಕೊಂಬ ದೈತ್ಯನೆ ಹೆಮ್ಮರನ ಹೆ
ಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ |
ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾ
ನಂಬಿದುದು ನೆರೆ ದೈವವೆನುತಿದಿರಾದನಮರಾರಿ || ೩೦ ||
ಪದವಿಭಾಗ-ಅರ್ಥ: ಎಂಬೆನು+ ಏನನು ಪವನಜನ(ಭೀಮನ) ಕೈಕೊಂಬ(ಎದುರಿಸುವ) ದೈತ್ಯ+ ಎನೆ(ದೈತ್ಯನ ಹಾಗೆಯೇ ಇರುವ) ಹೆಮ್ಮರನ(ದೊಡ್ಡಮರ) ಹೆಗ್ಗೊಂಬ(ಹಿರಿದು ಕೊಂಬೆ-ದೊಡ್ಡ ಕೊಂಬೆಯ) ಮುರಿದನು ಸವರಿದನು ಶಾಖೋಪಶಾಖೆಗಳ ತಿಂಬೆನು+ ಇವನನು(ಭೀಮನನ್ನು) ತಂದು, ತನ್ನ ಹಿಡಿಂಬಕನ ಹಗೆ ಸಿಲುಕಿತೇ ತಾ ನಂಬಿದುದು ನೆರೆ(ಹೆಚ್ಚಿನ) ದೈವವೆನುತ+ ಇದಿರಾದನು+ ಅಮರಾರಿ.
ಅರ್ಥ:ವಿದುರ ಹೇಳಿದ,'ರಾಜನೇ ಏನನ್ನು ಹೇಳಲಿ, ಭೀಮನು ದೈತ್ಯನನ್ನು ಕೊಲ್ಲವೆನು ಎನ್ನಲು, ದೈತ್ಯನು ಹೆಸರಿಗೆ ತಕ್ಕಂತೆ ದೈತ್ಯನೇ ಸರಿ ಎನ್ನುವಂತೆ ದೊಡ್ಡಮರದ ದೊಡ್ಡ ಕೊಂಬೆಯನ್ನು ಮುರಿದು ಅದರ ಶಾಖೋಪಶಾಖೆಗಳನ್ನು ಸವರಿದನು. ಅವನು 'ಇವನನ್ನು ತಂದು ತಿಂದುಬಿಡುವೆನು; ಹಾಗೆ ತನ್ನ ಬಂಧು ಹಿಡಿಂಬಕನ ಶತ್ರುವು ನನಗೆ ತಿನ್ನಲು ಸಿಕ್ಕಿತೇ! - ಸಿಕ್ಕಿತಲ್ಲಾ ಇದು ಸುದೈವ! ತಾ ನಂಬಿದ್ದು ದೊಡ್ಡ ದೈವವೇ ಸರಿ ಎನ್ನುತ್ತಾ,' ದಾನವನು ಭೀಮನಿಗೆ ಎದುರಾದನು.
ಹೊಯಿದನವನುರವಣಿಸಿ ಮುರಿದೊಳ
ಹೊಯಿದು ಹೊಕ್ಕನು ಭೀಮನೆಲವೋ
ಕಯಿದು ಮರನೇ ಸೆಳೆಗೆ ಸೆಡೆವುದೆ ಭದ್ರಮದದಂತಿ |
ಕಯಿದುವಿಲ್ಲಾ ತರಿಸಿಕೊಡುವೆನ
ಡಾಯುಧವ ಬಿಡು ಸರಳನೆನುತವ
ಹೊಯಿದು ಹುರಿಯೋ ಹುರಿಯೆನುತ ಗಹಗಹಿಸಿದನು ಭೀಮ || ೩೧ ||
ಪದವಿಭಾಗ-ಅರ್ಥ: ಹೊಯಿದನು(ಹೊಯ್- ಹೊಡೆದನು)+ ಅವನು+ ಉರವಣಿಸಿ(ಪರಾಕ್ರಮದಿಂದ ಆಕ್ರಮಿಸಿ) ಮುರಿದು+ ಒಳಹೊಯಿದು ಹೊಕ್ಕನು ಭೀಮನು+ ಎಲವೋ ಕಯಿದು(ಆಯುಧ) ಮರನೇ ಸೆಳೆಗೆ(ಸಣ್ಣ ಕೋಲು) ಸೆಡೆವುದೆ(ಸೆಡೆ-ಕಳವಳ) ಭದ್ರ(ಗಟ್ಟಿ) ಮದದಂತಿ ಕಯಿದುವಿಲ್ಲಾ ತರಿಸಿಕೊಡುವೆನು+ ಅಡಾಯುಧವ ಬಿಡು ಸರಳನು+ ಎನುತ+ ಅವ ಹೊಯಿದು(ಹೊಯ್- ಹೊಡೆ), ಹುರಿಯೋ ಹುರಿಯೆನುತ((ಕುದಿಸು, ಬೇಯಿಸು, ಹುರಿದುಂಬು ೨ ರೇಗು )) ಗಹಗಹಿಸಿದನು ಭೀಮ
ಅರ್ಥ:ದೈತ್ಯನು ಪರಾಕ್ರಮದಿಂದ ಹೊಡದಾಗ ಭೀಮನು ಅದನ್ನು ಮುರಿದು ಒಳಹೊಕ್ಕು ಹೊಡೆದು, ಭೀಮನು,'ಎಲವೋ ನಿನಗೆ ಮರವೇ ಆಯುಧವೋ? ಬಲಾಢ್ಯ ಮದವೇರಿದ ಆನೆ ಕೋಲಿಗೆ ಹೆದರುವುದೆ? ಬೇರೆ ಆಯುಧವಲಲ್ಲವೇ? ನಾನು ತರಿಸಿಕೊಡುವೆನು- ಕತ್ತಿಯನ್ನು, ಬಿಡು ದೊಣ್ಣೆಯನ್ನು ಎನ್ನುತ್ತಾ ಭೀಮನು ದೈತ್ಯನಿಗೆ ಹೊಡೆದು, ಹುರಿದುಂಬು, ರೇಗು, ಆರ್ಭಟಿಸು,' ಎಂದು ಹೇಳಿ ಭೀಮನು ಗಹಗಹಿಸಿ ನಕ್ಕನು.
ಮುರುಕಿಸುವ ಪವನಜನ ನೆತ್ತಿಯ
ನೆರಗಿದನು ಬಳಿಕವನ ಹೊಯ್ಲಿನ
ಬಿರುಸಿನಯ್ಯನೊ ಸಿಡಿಲ ಶಿಷ್ಯನೊ ವಜ್ರಕರ ಹತಿಯೊ |
ಕರಗಿದಾ ಮಯಣಾಮದಿಗಳಿಂ
ದೆರದ ಕಾಹಿನ ಕರುವೆನಲು ಕು
ಕ್ಕುರಿಸಲಸುರನನಿಕ್ಕಿದನು ಚಾಪಲ ಚಪೇಟದಲಿ || ೩೨ ||
ಪದವಿಭಾಗ-ಅರ್ಥ: ಮುರುಕಿಸುವ(ನುಣಿಚಿಕೊಳ್ಳು,ತಪ್ಪಿಸಿಕೊಳ್ಳು,ತಿರುಚು,ತಿರುಗಿಸು) ಪವನಜನ(ಭೀಮನ) ನೆತ್ತಿಯನು+ ಎರಗಿದನು(ಎರಗು ಮೇಲೆಬೀಳು) ಬಳಿಕ+ ಅವನ ಹೊಯ್ಲಿನ(ಹೊಡೆತದ) ಬಿರುಸಿನ+ ಅಯ್ಯನೊ(ಅಪ್ಪ) ಸಿಡಿಲ ಶಿಷ್ಯನೊ ವಜ್ರಕರ ಹತಿಯೊ(ಹೊಡೆತ) ಕರಗಿದ+ ಆ ಮಯಣ+ ಆಮದಿಗಳಿಂದ (ಗಟ್ಟಿರಸ-ಚಟ್ನಿಯ, ಗೊಜ್ಜು)+ ಎರದ ಕಾಹಿನ(ಬೆಂದ, ಕಾಹು, ಕಾವಲು) ಕರುವು+ ಎನಲು ಕುಕ್ಕುರಿಸಲು+ ಅಸುರನನು+ ಇಕ್ಕಿದನು(ಹೊಡೆದನು) ಚಾಪಲ(ಚಪಲ ವೇಗದ) ಚಪೇಟದಲಿ(ಬಿಚ್ಚಿದ ಅಂಗೈ)
ಅರ್ಥ:ಕಿಮ್ಮೀರನು ನುಣಿಚಿಕೊಂಡು ತಪ್ಪಿಸಿಕೊಳ್ಳುವ ಭೀಮನ ನೆತ್ತಿಯನ್ನು ಎರಗಿ ಹೊಡೆದನು; ಬಳಿಕ ಅವನ ಹೊಡೆತದ ಬಿರುಸಿನ ಅಪ್ಪ ಎನ್ನುವಂತೆ, ಸಿಡಿಲ ಶಿಷ್ಯನೊ ಎನ್ನುವಂತೆ ವಜ್ರದಕೈಯಿನ ಹೊಡೆತವೊ ಕರಗಿಸಿ ಮಾಡಿದ ಆ ಮಯಣ ಆಮದಿಗಳಿಂದ ಎರಕಹೊಯ್ದ ಬಿಸಿಯಾದ ಕರುವು ಎನ್ನುವಂತೆ ಕುಕ್ಕುರಿಸಲು, ಕುಕ್ಕುಬಡಿಯುವಂತೆ ಕಿಮ್ಮೀರನನ್ನು ಚುರುಕಾಗಿ ಬಿಚ್ಚಿದ ಅಂಗೈಯಿಂದ ಹೊಡೆದನು.
ಡೆಂಡಣಿಸಿ ಸುರವೈರಿ ಧೊಪ್ಪನೆ
ದಿಂಡುಗೆಡೆದನು ನೀಲಶೈಲದ
ದಂಡಿಗಾರನ ದೇಹ ಗರ್ತದ ರಕ್ತನಿರ್ಜರದ |
ದೊಂಡೆಗರುಳಿನ ಬಾಯ ಜೋಲಿನ
ಕುಂಡಲಿತ ಕರ ಜಂಘೆಗಳ ಬಿಡು
ಮಂಡೆಗೆದರಿದ ಖಳನ ಕಂಡುದು ಭೂಸುರವ್ರಾತ || ೩೩ ||
ಪದವಿಭಾಗ-ಅರ್ಥ: ಡೆಂಡಣಿಸಿ(ಪೂರ್ಣಬಳಲಿ) ಸುರವೈರಿ(ರಾಕ್ಷಸನು) ಧೊಪ್ಪನೆ ದಿಂಡುಗೆಡೆದನು(ಉದ್ದಕ್ಕೆ ನೆಲಕ್ಕೆ ಬೀಳು), ನೀಲಶೈಲದ ದಂಡಿಗಾರನ(ದಾಂಡಿಗ, ದಡಿಗ, ಗಟ್ಟಿ ದೊಡ್ಡದೇಹದವನು) ದೇಹ ಗರ್ತದ(ನೀರಿನ ಸುಳಿ, ಕುಳಿ, ಹಳ್ಳ) ರಕ್ತನಿರ್ಜರದ(ಗಂಗೆ), ದೊಂಡೆ+ಗ+ ಕರುಳಿನ ಬಾಯ ಜೋಲಿನ ಕುಂಡಲಿತ(ವರ್ತುಲಾಕಾರವಾದ ಕುಂಡಲಗಳ) ಕರ ಜಂಘೆಗಳ(ಜಂಘಾ ಕೆಳದೊಡೆ, ಕಿರುದೊಡೆ ಮೀನಖಂಡ, ಕಣಕಾಲು,) ಬಿಡುಮಂಡೆ+ ಗೆ+ ಕೆದರಿದ ಖಳನ ಕಂಡುದು ಭೂಸುರವ್ರಾತ(ಬ್ರಾಹ್ಮಣರ ಸಮೂಹ).
ಅರ್ಥ:ಭೀಮನ ಬಲವಾದ ಹೊಡೆತಕ್ಕೆ ರಾಕ್ಷಸ ಕಿಮ್ಮೀರನು ಪೂರ್ಣಬಳಲಿ ಧೊಪ್ಪನೆ ಉದ್ದಕ್ಕೆ ನೆಲಕ್ಕೆ ಬಿದ್ದನು. ಆಗ ನೀಲಬೆಟ್ಟದಂತಿದ್ದ ದಾಂಡಿಗನ ದೇಹದಿಂದ ರಕ್ತದಹೊಳೆ ಹಳ್ಳವಾಗಿ ಹರಿಯಿತು; ದೊಂಡೆಯಾಗಿ ಹೊರಬಿದ್ದ ಕರುಳಿನ, ಜೋತುಬಿದ್ದ ಬಾಯಿಯ ಕೊಕ್ಕೆಯಾಗಿ ಸುತ್ತಿಬಿದ್ದ ಕೈ ಮೊಣಕಾಲುಗಳ, ಬಿಡುಮಂಡೆಯ- ಕೆದರಿದ ತಲೆಯ ಕಿಮ್ಮೀರ ಖಳನನ್ನು ಬ್ರಾಹ್ಮಣರ ಸಮೂಹ ಕಂಡಿತು.
ಅರಸ ಹೇಳುವುದೇನು ಹೋರಿದ
ನರೆಗಳಿಗೆ ಕೊಂಡಾಡಿ ಬಳಿಕಿ
ಟ್ಟೊರೆಸಿ ಹುಡಿಯಲಿ ಹೂಳಿದನು ಕಿಮ್ಮೀರ ದಾನವನ |
ಬೆರೆಸಿತೀ ವಿಪ್ರೌಘವೀ ಮುನಿ
ವರಿಯರೀ ಕಾಮಿನಿಯರೀ ನೃಪ
ವರನ ಪರಿಕರವಾ ಮಹಾಕಾಮ್ಯಕ ವನಾಂತರವ || ೩೪ ||
ಪದವಿಭಾಗ-ಅರ್ಥ: ಅರಸ ಹೇಳುವುದು+ ಏನು, ಹೋರಿದನು+ ಅರೆಗಳಿಗೆ, ಕೊಂಡಾಡಿ ಬಳಿಕ+ ಇಟ್ಟು+ ಒರೆಸಿ ಹುಡಿಯಲಿ ಹೂಳಿದನು ಕಿಮ್ಮೀರ ದಾನವನ; ಬೆರೆಸಿತು(ಸೇರಿತು)+ ಈ ವಿಪ್ರೌಘವು+ ಈ ಮುನಿವರಿಯರು+ ಈ ಕಾಮಿನಿಯರು(ಹೆಂಗಸರು)+ ಈ ನೃಪವರನ ಪರಿಕರವು+ ಆ ಮಹಾಕಾಮ್ಯಕ ವನಾಂತರವ.
ಅರ್ಥ:ಅರಸ ಧೃತರಾಷ್ಟ್ರನೇ ಮುಂದೆ ಹೇಳುವುದು ಏನಿದೆ! ಭೀಮನು ರಾಕ್ಷಸನ ಜೊತೆ ಕೇವಲ ಅರೆಗಳಿಗೆ ಹೋರಾಡಿದನು. ಬಳಿಕ ಜನರು ಅವನನ್ನು ಕೊಂಡಾಡಿದರು ಭೀಮನು ಕಿಮ್ಮೀರ ದಾನವನನ್ನು ಒರೆಸಿ ಮಣ್ಣು ಹುಡಿಯಲ್ಲಿ ಇಟ್ಟು ಹೂಳಿದನು. ನಂತರ ಬ್ರಾಹ್ಮಣರ ಸಮೂಹ ಜೊತೆಯಲ್ಲಿದ್ದ ಈ ಮುನಿವರ್ಯರು, ಈ ಕಾಮಿನಿಯರು, ಈ ನೃಪವರನ ಪರಿವಾರದವರುಆ ಮಹಾಕಾಮ್ಯಕ ವನಾಂತರವನ್ನು ಸೇರಿತು.

ಧರ್ಮಜನ ಅರಣ್ಯವಾಸದ ವೈಭವ[ಸಂಪಾದಿಸಿ]

ತಳಿರು ಬಿಟ್ಟುದು ಕೂಡೆ ಹರಹಿನ
ಹಳುವದೊಳ್ ದ್ವಿಜವರ್ಗ ರಚಿಸಿದ
ತಳಿರ ಗುಡಿಗಳ ಪರ್ಣಶಾಲೆಯ ಭದ್ರಭವನಿಕೆಯ |
ಮೆಳೆಯ ಮಂಟಪ ಹೊದರುದುರುಗಲು
ನೆಳಲ ಚೌಕಿಗೆ ವಿಪುಳ ವಟ ಸಂ
ಕುಲದೊಳೋಲಗ ಶಾಲೆ ಮೆರೆದುದು ಧರ್ಮನಂದನನ || ೩೫ ||
ಪದವಿಭಾಗ-ಅರ್ಥ:ತಳಿರು (ಸಂ: ಚಿಗುರು, ತಳಿರು, ಹೆಬ್ಬಾಗಿಲು, ಹೊರಬಾಗಿಲು, ಹಬ್ಬ, ಉತ್ಸವ) ಬಿಟ್ಟುದು ಕೂಡೆ(ಕೂಡಲೆ) ಹರಹಿನ(ವಿಶಾಲ) ಹಳುವದೊಳ್(ದಟ್ಟ ಗಿಡಮರಗಳ ನೆರಳು) ದ್ವಿಜವರ್ಗ ರಚಿಸಿದ ತಳಿರ ಗುಡಿಗಳ, ಪರ್ಣಶಾಲೆಯ. ಭದ್ರಭವನಿಕೆಯ ಮೆಳೆಯ ಮಂಟಪ, ಹೊದರು- ದುರುಗಲು (ಗಿಡಗಳ ಪೊದೆ) ನೆಳಲ, ಚೌಕಿಗೆ ವಿಪುಳ ವಟ ಸಂಕುಲದೊಳು+ ಓಲಗ ಶಾಲೆ ಮೆರೆದುದು ಧರ್ಮನಂದನನ.
ಅರ್ಥ:ಪಾಂಡವರು ಜನಸಮೂಹದೊಡನೆ ಕಾಮ್ಯಕ ವನದೊಳಗೆ ಹೋದ ನಂತರ ಅಲ್ಲಿ ವಿಶಾಲವಾದ ತಳಿರಿನ-ಚಿಗುರಿದ ಗಿಡಮರಗಳ ನೆರಳಿನಲ್ಲಿ ಬೀಡು ಬಿಟ್ಟರು. ಕೂಡಲೆ ವಿಶಾಲ ಗಿಡಮರಗಳ ನೆರಳಿನ ಪ್ರದೇಶದಲ್ಲಿ ದ್ವಿಜವರ್ಗ- ಬ್ರಾಹ್ಮಣರು ರಚಿಸಿದ ಹಚಿರು ಎಲೆಗಳ ಗುಡಿಗಳು, ಪರ್ಣಶಾಲೆಯು ತಲೆ ಎತ್ತಿದವು. ಭದ್ರವಾದ ಬಿದಿರು ಮೆಳೆಯ ಮನೆ, ಮಂಟಪಗಳನ್ನು ನಿರ್ಮಿಸಿದರು.ಗಿಡಗಳ ಪೊದೆಯ ಹಸಿರು ಎಲೆಗಳ ಮತ್ತು ದುರುಗಲು/ದರಕು -ಒಣಗಿದ ಎಲೆಗಳು ಹುಲ್ಲಿನ ನೆಳಲು ಇರುವ ಮನೆ ಮಂಟಪಗಳನ್ನು ನಿರ್ಮಿಸಸಿದರು. ಚಚ್ಚೌಕವಾದ ಮಂಟಪದ ಚೌಕಿಗೆ-(ಹಜಾರ) ದೊಡ್ಡ ವಟ- ಆಲದಮರ ಅರಳಿಮರಗಳ ಸಂಕುಲದಲ್ಲಿ ಧರ್ಮಜನ ಓಲಗ ಶಾಲೆ ಮೆರೆದುದು- ಶೋಭಿಸಿತು.
ಆ ಸಕಲ ಸಾಮ್ರಾಜ್ಯಲಕ್ಷ್ಮಿ (ಪಾ- ಲಕ್ಷ್ಮೀ) ವಿ
ಳಾಸದರಮನೆಗಳನು ಮರೆಸಿದು
ದೀ ಶರಭ ಶಾರ್ದೂಲ ಸೇವಿತ ಘೋರ ಕಾಂತಾರ |
ಆ ಸುಧಾಕಲಿತಾನ್ನವೇ ಫಲ
ರಾಸಿಯಾದುದು ಗೇಯರಸ ವಿ
ನ್ಯಾಸವೇ ಮಧು ಮಕ್ಷಿಕವ್ರಜ ಜಂಬುಕಧ್ವಾನ || ೩೬ ||
ಪದವಿಭಾಗ-ಅರ್ಥ: ಆ ಸಕಲ ಸಾಮ್ರಾಜ್ಯಲಕ್ಷ್ಮೀ ವಿಳಾಸದ+ ಅರಮನೆಗಳನು ಮರೆಸಿದುದು,+ ಈ ಶರಭ ಶಾರ್ದೂಲ ಸೇವಿತ ಘೋರ ಕಾಂತಾರ, ಆ ಸುಧಾ+ಕಲಿತ(ಹಾಲುಮಿಶ್ರಿತ)+ ಅನ್ನವೇ ಫಲರಾಸಿಯಾದುದು ಗೇಯರಸ(ಸಂಗೀತ ಗಾನರಸ) ವಿನ್ಯಾಸವೇ ಮಧು ಮಕ್ಷಿಕವ್ರಜ(ಜೇನು ಹುಳುಗಳು) ಜಂಬುಕಧ್ವಾನ()ಜಂಬುಕ- ನರಿ.
ಅರ್ಥ:ಧರ್ಮಜನು ಕಾಮ್ಯಕವನದಲ್ಲಿ ವಾಸ ಮಾಡುವಾಗ ಈ ಶರಭ, ಶಾರ್ದೂಲಗಳಿಂದ ಸೇವೆಮಾಡಲ್ಪಟ್ಟ ಘೋರ ವನವು ಮತ್ತು ಅಲ್ಲಿ ಸಿಗುವ ಫಲರಾಸಿಗಳು ಅವರಿಗೆಗೆ ಆ ಹಾಲುಮಿಶ್ರಿತ ಅನ್ನವಾಗಿತ್ತು. ಜೇನುಹುಳುಗಳ ಗೇಯ- ಜೇಂಕಾರದ ವಿನ್ಯಾಸವೇ ಹಾಡು ಸಂಗೀತ ಗಾನರಸವಾಗಿತ್ತು. ನರಿಗಳ ಮತ್ತು ಪ್ರಾಣಿಗಳ ಕೂಗು, ಆ ಧರ್ಮಜನ ಹಿಂದಿನ ಸಕಲ ಸಾಮ್ರಾಜ್ಯಲಕ್ಷ್ಮೀ ವಿಲಾಸದ ವೈಭವವನ್ನೂ ಅರಮನೆಗಳನೂ ಮರೆಸಿತ್ತು.
ದಿನಪ ಕೃಪೆ ಮಾಡಿದನಲೇ ಕಾಂ
ಚನಮಯದ ಭಾಂಡವನು ಬಳಿಕಾ
ವನಜಮುಖಿ ಮಾಡಿದ ಸುಪಾಕದ ಷಡುರಸಾನ್ನದಲಿ |
ಮುನಿಜನಕೆ ಪರಿಜನಕೆ ಭೂಸುರ
ಜನಕೆ ತುಷ್ಟಿಯ ಮಾಡಿ ಭೂಪತಿ
ವನದೊಳಿದ್ದನು ವೀರ ನಾರಾಯಣನ ಕರುಣದಲಿ || ೩೭ ||
ಪದವಿಭಾಗ-ಅರ್ಥ: ದಿನಪ(ಸೂರ್ಯ) ಕೃಪೆ ಮಾಡಿದನಲೇ ಕಾಂಚನಮಯದ ಭಾಂಡವನು, ಬಳಿಕ+ ಆ ವನಜಮುಖಿ ಮಾಡಿದ ಸುಪಾಕದ ಷಡುರಸ+ ಅನ್ನದಲಿ ಮುನಿಜನಕೆ ಪರಿಜನಕೆ ಭೂಸುರಜನಕೆ ತುಷ್ಟಿಯ(ಹೆಚ್ಚು) ಮಾಡಿ ಭೂಪತಿ ವನದೊಳಿದ್ದನು ವೀರ ನಾರಾಯಣನ ಕರುಣದಲಿ.
ಷಡ್ರಸ :-ಸಂ- ೧.ಮಧುರ, ೨ ಆಮ್ಲ, .೩ ತಿಕ್ತ, .೪.ಕಟು, ೫.ಕಷಾಚಿi, ೬.ಲವಣ.(ಕನ್ನಡ:- ಸಿಹಿ, ಹುಳಿ, ಉಪ್ಪು, ಖಾರ, ಒಗರು, ಕಹಿ) ಇವೇ ಆರು ರಸಗಳು.
ಅರ್ಥ:ಸೂರ್ಯನು ಕೃಪೆ ಮಾಡಿ ಧರ್ಮಜನಿಗೆ ಚಿನ್ನಮಯದ ಭಾಂಡದಪಾತ್ರೆಯನ್ನು ಕೊಟ್ಟಿರುವನಲ್ಲಾ. ಆನಂತರ ಆ ವನಜಮುಖಿ ದ್ರೌಪದಿಯು ಅದರಿಂದ ಮಾಡಿದುತ್ತಮ ಪಾಕದ ಷಡ್ರಸದಿಂದ ಕೂಡಿದ ಅನ್ನದಿಂದ ಮುನಿಜನರಿಗೆ, ಪರಿವಾರದ ಜನರಿಗೆ, ಬ್ರಾಹ್ಮಣ ಜನರಿಗೆ ಹೊಟ್ಟೆತುಂಬಿದಮೇಲೂ ಹೆಚ್ಚು ಮಾಡಿ ಬಡಿಸಿ ನಂತರ ತಾನು ಉಂಡು ಭೂಪತಿ ಧರ್ಮಜನು ಆ ವೀರ ನಾರಾಯಣನ ಕರುಣದಿಂದ- ಅವನ ಕೃಪೆಯಿಂದ ವನದಲ್ಲಿ ಸುಖವಾಗಿ ಇದ್ದನು.
♠♠♠

ನೋಡಿ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೧)()
  2. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೨)
  3. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೩)
  4. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೪)
  5. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೫)
  6. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೬)
  7. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು