ನೀನೊಲಿದರೆ ಕೊರಡು ಕೊನರುವುದಯ್ಯ

ವಿಕಿಸೋರ್ಸ್ದಿಂದ

ರಚನೆ: ಬಸವಣ್ಣ


ನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನಹುದಯ್ಯ
ನೀನೊಲಿದರೆ ವಿಷವಮೃತವಹುದಯ್ಯ
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ

ನೀರಿಂಗೆ ನೈದಿಲೆಯೇ ಶೃಂಗಾರ
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗಮನ ಶರಣರಿಗೆ
ನೊಸಲ ವಿಭೂತಿಯೇ ಶೃಂಗಾರ

ಹುತ್ತವ ಬಡಿದರೆ ಉರಗ ಸಾವುದೆ
ಘೋರತಪವ ಮಾಡಿದರೇನು
ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ
ಕೂಡಲಸಂಗಮದೇವ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದು:ಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ

ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯ ಬೇಡ
ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲು ಬೇಡ
ಇದೇ ಅಂತರಂಗಶುದ್ಧಿ
ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ

ಮಾಡುವಂತಿರಬೇಕು, ಮಾಡದಂತಿರಬೇಕು!
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!
ನೋಡುವಂತಿರಬೇಕು, ನೋಡದಂತಿರಬೇಕು!
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!!
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ,
ಕೂಡಿಕೊಂಬುವ ನಮ್ಮ ಕೂಡಲಸಂಗಮದೇವ

ಕಲ್ಲನಾಗರ ಕಂಡರೆ ಹಾಲನೆರೆ ಎಂಬರು;
ದಿಟನಾಗರ ಕಂಡರೆ ಕೊಲ್ಲು ಕೊಲ್ಲು ಎಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲತಾಗಿದ ಮಿಟ್ಟೆಯಂತಪ್ಪರಯ್ಯ!


ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?

ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ,
ವಿಚಾರಿಸಿದರೇನು ಹುರುಳಿಲ್ಲವಯ್ಯ.
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ
ನೀವಿರಿಸಿದಿರಯ್ಯ ಕೂಡಲಸಂಗಮದೇವ.

ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,
ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ!
ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ
ಅಪರಿಮಿತ ಸುಖವನೆಯ್ದದು ನೋಡಾ!

ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಸಲಹುತ್ತ, "ಶಿವಶಿವಾ" ಎಂದೋದಿಸಯ್ಯ.
ಭಕ್ತಿ ಎಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವ.

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು
ಕೂಡಲಸಂಗಮದೇವ.

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.

ಮಡಕೆಯ ಮಾಡುವಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೇ ಮೊದಲು,
ಶಿವಪಥವನರಿವಡೆ ಗುರುಪಾದವೇ ಮೊದಲು
ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು.

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ