ಪುಟ:Chirasmarane-Niranjana.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಚಿರಸ್ಮರಣೆ

    ಮಾಸ್ತರಿಗೆ.
         ಆದರೂ ಅವರು ನಿರಾಶರಾಗಲಿಲ್ಲ.ನಿರಾಶರಾಗುವುದು ಹೇಗೆಂಬುದು ಅವರಿಗೆ ತಿಳಿದೇ ಇರಲಿಲ್ಲ.ಸ್ವಲ್ಪ ಕಾಲದ ಬಳಿಕ ಅವರು ಮತ್ತೊಮ್ಮೆ ಯತ್ನಿಸಿ ನೋಡಿದರು.ಆಗಲೂ ಜಾಗ ಸಿಗಲಿಲ್ಲ.ರೈತರು ಆಸಕ್ತಿಯನ್ನೂ ತೋರಲಿಲ್ಲ.
             "ಯಾರು, ಚಿರುಕಂಡನೇ ಅಲ್ಪ ಓದೋದು?" ಎಂದು ಒಬ್ಬ ತಾತ್ಸಾರದಿಂದಲೇ ಅಂದುಬಿಟ್ಟ.ತಮ್ಮವನೇ ಆದ ಚೋಟುದ್ದದ ಹುಡುಗನೊಬ್ಬ ತಮಗೆ ಪತ್ರಿಕೆ ಓದಿ ಹೇಳುವುದು ಅಭಾಸಕರವಾಗಿ ರೈತರಿಗೆ ತೋರಿತು.
               ಮಾಸ್ತರ ವಿಷಯದಲ್ಲಿ, ಅವರು ಕಲಿತವರು ಎಂಬ ಒಂದೇ ಕಾರಣಕ್ಕಾಗಿ ಮೊದಲು ಅಭಿಮಾನವಿರಿಸಿದ್ದ ಒಬ್ಬ ರೈತನಿದ್ದ.ಅವನ ಹೆಸರು ಕೋರ.ಆತನ ತಂದೆಯ ಕಾಲದಲ್ಲೇ ಹೊಲ ಕೈಬಿಟ್ಟಿತ್ತು.ಸದಾಕಾಲವೂ ಕಾಯಿಲೆಯಿಂದ ನರಳುತ್ತಿದ್ದ ಹೆಂಡತಿ ಸತ್ತಿದ್ದಳು;ಬಂಜೆಯಾಗಿಯೇ ಸತ್ತಿದ್ದಳು--ಪುಣ್ಯವಂತೆ! ಆತ ಒಂದು ರೀತಿಯ ಕೂಲಿಕಾರ, ಕೃಷಿ-ಕೂಲಿಕಾರ.ಬಿತ್ತನೆಯ ಕುಯ್ಲಿನ ದಿನಗಳಲ್ಲಿ ಇನ್ನೊಬ್ಬರ ಹೊಲದಲ್ಲಿ ದಿನಗೂಲಿಯಾಗಿ ದುಡಿಯುತ್ತಿದ್ದ.ಆಗೊಮ್ಮೆ ಈಗೊಮ್ಮೆ ಚರ್ವತ್ತೊರಿನ ರೈಲು ನಿಲ್ದಾಣಕ್ಕೆ ಯಾವುದಾದರೂ ಸಾಮಾನು ಹೊರುವ ಕೆಲಸವಿದ್ದಾಗ,ಅದನ್ನೂ ಮಾಡುತ್ತಿದ್ದ. ದುಡಿಮೆ ಇಲ್ಲದ ವೇಳೆ ಹೋಟೆಲಿನಲ್ಲಿ ಕುಳಿತು ಕಾಲಹರಣ,ತುಂಡು ಬೀಡಿಗೋ 'ಅಪ್ಪು' ಚಹಾಕ್ಕೋ ಕೈ ಒಡ್ಡುವುದು;ಮೂರು ಕಾಸು ಆರು ಕಾಸು ಸಾಲ ಕೇಳುವುದು;ಎಷ್ಟೋ ಸಂಜೆ ಯಾರ ಜತೆಯಲ್ಲಾದರೂ ಒಂದಿಷ್ಟು ಕುಡಿದು ಹಟ್ಟಿಗೆ ಬಂದು ಮಲಗುವುದು......ಒಮ್ಮೆ ಆತ ಕಾಯಿಲೆಬಿದ್ದ.ಬಡ ದೇಹವನ್ನು ನಡುಗಿಸುತ್ತ ಬಂದ ಮಲೆಜ್ವರ.ಆ ಸಮಯದಲ್ಲಿ ನೀಲೇಶ್ವರಕ್ಕೆ ಹೊರಟಿದ್ದ ಮಾಸ್ತರು ಆ ಕಂಗಾಲ ಸ್ಥಿತಿಯಲ್ಲಿ ಆತನನ್ನು ಕಂಡರು.ಹಿಂತಿರುಗಿ ಬಂದಾಗ ಔಷಧಿ ತಂದರು.ಕೋರ ಗುಣಮುಖವಾಗಿ  ಓಡಾಡಿದ.ಈಗ ವಿದ್ಯೆಗೆ ಆತ ಕೂಡುತ್ತಿದ್ದ ಗೌರವದ ಜತೆಗೆ ವ್ಯಕ್ತಿಯ ವಿಷಯದಲ್ಲಿ ಪ್ರೀತಿಯೂ ಬೆರೆಯಿತು.ಇದರ ಫಲವಾಗಿ,ಕುಡಿಯದೆ ಇದ್ದ ಬಿಡುವಿನ ಸಮಯದಲ್ಲಿ ಅತ ಮಾಸ್ತರನ್ನು ಹಿಂಬಾಲಿಸಿದ.ಒಂದು ಪ್ರಶ್ನೆಯನ್ನೂ ಕೇಳುತ್ತಿರಲಿಲ್ಲ.ಆದರೆ ಮಾಸ್ತರ ಮಾತುಗಳಿಗೆಲ್ಲ ---ಅವು ಅರ್ಥವಾಗದೆ ಇದ್ದಾಗಲೂ--ಕಿವಿಕೊಡುತ್ತಿದ್ದ.ಕುರುಚಲು ಗಡ್ಡ ತುಂಬಿದ ಅವನ ಮುಖದಿಂದ ಎರಡು ಕಣ್ಣುಗಳು ಅರಳಿಕೊಂಡು ಮಾಸ್ತರನ್ನು ನೋಡುತ್ತಿದ್ದುವು.

"ಪತ್ರಿಕೆ ಓದೋಕೆ,ನಾಲ್ಕು ಜನ ಸೇರೋಕೆ,ಒಂದು ಜಾಗವೂ ಇಲ್ಲದೆ ಹೋಯಿತಲ್ಲಾ !" ಎಂದು ಮಾಸ್ತರು ಒಂದು ದಿನ ತೆಗೆದ ಉದ್ಗಾರವನ್ನು ಕೇಳಿ