ಪುಟ:Chirasmarane-Niranjana.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಯಾರಿಗೂ ತಿಳೀದ ಹಾಗೆ ಬನ್ನೀಂತ ಹೇಳಿಲ್ವೆ ಮಾಸ್ತರು."

ಚಿರುಕಂಡನ ಮುಖ ಮುಂದಿನ ದಾರಿ ಹೊಳೆಯದೆ ಸಪ್ಪಗಾದಂತೆ, ಅಪ್ಪುವಿನ ಮುಖ ಅದೇ ಕಾರಣಕ್ಕಾಗಿ ಸಿಡುಕಿನಿಂದ ಕೆಂಪೇರಿತು.

"ಹ್ಯಾಗೆ ಬರಬೇಕೂಂತಲೂ ಮಾಸ್ತರೇ ಹೇಳ್ಬೇಕಾಗಿತ್ತು."

ಮಾಸ್ತರ ಮೇಲಿನ ಟೀಕೆ ಚಿರುಕಂಡನಿಗೆ ಸಹನೆಯಾಗಲಿಲ್ಲ.

"ಅವಸರದಲ್ಲಲ್ಪ ಅವರು ಹೋದದ್ದು? ಹಾಗೆಲ್ಲ ಯೋಚಿಸಿ ಹೇಳೋದಕ್ಕೆ ಅವರಿಗೆ ಪುರುಸೊತ್ತೆಲ್ಲಿತ್ತು?"

ಅದು ನಿಜವೆಂಬುದನ್ನು ಮನಗಂಡ ಅಪ್ಪು,ಒಂದು ಕ್ಷಣ ಸುಮ್ಮನಿದ್ದು ಹೇಳಿದ:

"ಈಗೇನ್ಮಾಡೋಣ ಹಾಗಾದರೆ?"

ಚಿರುಕಂಡ ತನಗೆ ಹೊಳೆದ ಉಪಾಯವನ್ನು ತನ್ನೊಳಗೇ ತೂಗಿ ನೋಡಿ ಅಪ್ಪುಗೆ ತಿಳಿಸಿದ:

"ಮೇಲಿನ ತೋಟದ ಮುದುಕ ಇಲ್ವ? ಅವನದೊಂದು ಹಳೇ ದೋಣಿ ತೂತಾಗಿ ಬಿದ್ದಿದೆ. ದುರಸ್ತಿ ಮಾಡೇ ಇಲ್ಲ...."

ಆ ಸಲಹೆಯನ್ನು ಆಗಲೇ ಸ್ವೀಕರಿಸಿದವನಂತೆ ಅಪ್ಪು ಹೇಳಿದ: "ದೊಡ್ಡದಾ ತೂತು?"

"ಚಿಕ್ಕದು, ನೀನು ಹುಟ್ಟು ಹಾಕೋ ಹಾಗಿದ್ರೆ ನಾನು ನೀರು ಎತ್ತುತ್ತಾ ಇರ್ತ್ತೇನೆ.

"ಮುದುಕಪ್ಪ ಕೊಡ್ತಾನೋ ಇಲ್ವೋ?"

"ಕೊಡದೇ ಏನು? ಮೀನು ಹಿಡಿಯೋಕೆ ಹೋಗ್ತೇವೆ-ನಿನಗೂ ಮೀನು ಕೊಡ್ತೇವೆ ಅನ್ನೋದು."

"ಅದೇನೋ ಸರೀನೆ. ಆದರೆ ಅವನಿಗೆ ಕೊಡೋದಕ್ಕೆ ಮೀನು ಎಲ್ಲಿಂದ ತರೋಣ?"

"ಇವತ್ತು ಸಿಗಲಿಲ್ಲ ನಾಳೆ ಕೊಡ್ತೇವೆ, ಅಂದರಾಯ್ತು,"

ಅಪ್ಪು ಸಂತೋಷದಿಂದ ಮೌನವಾಗಿ ಹುಬ್ಬು ಕುಣಿಸುತ್ತ ತಲೆಯಾಡಿಸಿದ. ನಿಮಿಷವೂ, ತಡಮಾಡದೆ ಮುಂದಕ್ಕೆ ಬೇಗಬೇಗನೆ ಹೆಜ್ಜೆ ಇಟ್ಟ. ಅವನಷ್ಟು ಶಕ್ತಿವಂತನಲ್ಲದ ಚಿರುಕಂಡ ಸ್ವಲ್ಪ ಪ್ರಯಾಸಪಡುತ್ತಲೇ ಅಪ್ಪುವನ್ನು ಹಿಂಬಾಲಿಸಿದ.

ನದಿಯ ದಂಡೆಯದ್ದಕ್ಕೂ ಮೇಲೆ ಸಾಗಿದಾಗ ಆ ಹೊಲ ಹಿತ್ತಿಲು ಕಣ್ಣಿಗೆ ಬಿದ್ದವು. ನದಿಯಿಂದ ಮೇಲಕ್ಕೆಳೆದು ಮಗುಚಿಹಾಕಿದ್ದ ಪುಟ್ಟ ದೋಣಿಯೂ