ಪುಟ:Chirasmarane-Niranjana.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಾಣಿಸಿತು.

ಅರ್ಧ ಕೆಲಸವಾದಾಗ ಏನೋ ಅಡ್ಡಿ ಯಾದಂತೆ ಅಪ್ಪು ಇಳಿದನಿಯಲ್ಲಿ ಕೇಳಿದ:

"ಮೀನು ಹಿಡಿಯೋದಕ್ಕೆ ಬಲೆ ಎಲ್ಲಿ-ಗಾಳ ಎಲ್ಲಿ-ಅಂತ ಆತ ಕೇಳಿದರೆ?"

"ಕೈಲಿದೆ ಅನ್ನೋದು!"

"ಏನು ಕೈಲಿದೆ?"

"ಮುದುಕನಿಗೆ ಕಣ್ಣು ಕಾಣಿಸೋದಿಲ್ಲ ಕಣೋ!"

ಇಬ್ಬರೂ ಸಣ್ಣಗೆ ನಕ್ಕರು. ಆದರೆ ಅಪ್ಪುವಿಗೆ ಬೇರೆಯೂ ಒಂದು ಸಂದೇಹ ಇತ್ತು.

"ದೋಣಿ ಕೊಡೋದಿಲ್ಲಾಂತ ಮುದುಕ ಅಂದರೆ?"

"ಬೇಡ ಅನ್ನೋದು."

"ಮತ್ತೆ?"

"ಆಗಲೇ ಅನ್ಲಿಲ್ವೆ, ಮುದುಕನಿಗೆ ಕಣ್ಣು ಕಾಣಿಸೋದಿಲ್ಲಾಂತ ? ಕಿವೀನೂ ಸರಿಯಾಗಿ ಕೇಳಿಸೋದು ಸಂಶಯವೇ!ಅವನೆದುರಲ್ಲೇ ದೋಣೀನೆತ್ತಿ ನೀರಿಗಿಳಿಸಿ ಹೊರಟೇಬಿಡೋದು!"

ಯಾವ ಸಾಹಸಕ್ಕೂ ಸಿದ್ದನಾಗಿದ್ದ ಅಪ್ಪುವಿಗೆ, ಸಾಮಾನ್ಯವಾಗಿ ಸಪ್ಪಗಿರುತ್ತಿದ್ದ ಚಿರುಕಂಡನೇ ಉತ್ಸಾಹದಿಂದ ಹಾಗೆ ಆಡಿದುದನ್ನು ಕಂಡು, ತುoಬಾ ಸಂತೋಷವಾಯಿತು.

....ಮಗನನ್ನೂ ಸೊಸೆಯನ್ನೂ ಹೊಲಕ್ಕೆ ಕಳುಹಿಸಿದ್ದ ಮುದುಕ, ಆ ಹುಡುಗರಿಗೆ ಅಡ್ಡಿ ಮಾಡಲಿಲ್ಲ. ಆದರೆ, ದೋಣಿಯ ತೂತು ಮುಚ್ಚಿ ಸರಿ ಪಡಿಸಿಕೊಂಡೇ ನೀರಿಗಿಳಿಯಬೇಕೆಂದು ಹಟ ಹಿಡಿದ. ಮೊಮ್ಮಕ್ಕಳಿಲ್ಲದ ತನ್ನನ್ನು ಆ ಎಳೆಯರು "ಅಜ್ಜಾ" ಎಂದಾಗ ಮುದುಕನ ಮನಸ್ಸು ಉಲ್ಲಾಸಗೊಂಡಿತ್ತು.ದೃಷ್ಟಿ ಮಂದವಾಗಿದ್ದರೂ ಆತ ಎಲ್ಲವೂ ಕಾಣಿಸುತ್ತಿದ್ದವನಂತೆ ಮೀನು ಹಿಡಿಯಬೇಕಾದ ಜಾಗಗಳ ಬಗೆಗೆ ನಿರ್ದೇಶನವನ್ನಿತ್ತ.

"ಮರೀದೆ ಮೀನು ಕೊಟ್ಟಿಟ್ಟು ಹೋಗಿ" ಎಂದು ಆತ ಎರಡು ಬಾರಿ ಎಚ್ಚರಿಸಿ ಹೇಳಿದ.

ಅಪ್ಪು ಮತ್ತು ಚಿರುಕಂಡ ದುರಸ್ತಿಯ ನಾಟಕ ಮುಗಿಸಿ ದೋಣಿಯೊಡನ ನೀರಿಗಿಳಿದು ಹೊರಟೇಹೋದರು.

ನುರಿತ ಅಂಬಿಗನಾದ ಅಪ್ಪುವಿನ ಕೈಯಲ್ಲಿ ದೋಣಿ ಬಾಣವಾಯಿತು. ಚಿರುಕಂಡ ಒಳಕ್ಕೆ ನುಗ್ಗುತ್ತಿದ್ದ ನೀರನ್ನು ಬೇಗಬೇಗನೆ ಎತ್ತಿ ನದಿಗೆ ಸುರಿಯುತ್ತ