ಪುಟ:Chirasmarane-Niranjana.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚಿರಸ್ಮರಣೆ

೯೧

"ಅಪ್ಪು ತಲೆಬಾಗಿ ಗಂಜಿಯನ್ನೇ ನೋಡುತ್ತ, ಹಿರಿಯರ ಮಾತುಗಳಿಗೆ

ಕಿವಿಗೊಟ್ಟ.

"ಹೌದೆ? ಪಾಪ!"
ಅದು ತಾಯಿಯ ಉದ್ಗಾರ. ಅದರ ಜತೆಯಲ್ಲೇ ಅಜ್ಜಿಯ ಸ್ವರ:
"ಯಾರು, ಜಮೀನ್ದಾರರೇ ಹಿಡಕೊಂಡ್ಬಿಟ್ರೋ?"
"ಹೂಂ. ಸಾಲ ಬಾಕಿ ಇತ್ತು ನೋಡು."
ಇಷ್ಟು ಹೇಳಿ ತಂದೆ, ಮೌನವಾಗಿದ್ದ ಮಗನತ್ತ ನೋಡಿದ. ಆತನ ಆಪ್ತ ಸ್ನೇಹಿತನ ಮನೆಗೆ ಸಂಬಂಧಿಸಿ ಮಾತನಾಡುತ್ತಿದ್ದರೂ ಮಿಸುಕದೆ ಕುಳಿತಿದ್ದುದನ್ನು ಕಂಡು ತಂದೆಗೆ ಆಶ್ಚರ್ಯವಾಯಿತು. ಆತ ಕೇಳಿದ:
"ಏನೂಂತ ಗೊತ್ತಾಯ್ತೇನೋ?"
ತಗ್ಗಿದ ಧ್ವನಿಯಲ್ಲಿ ಅಪ್ಪು ಉತ್ತರವಿತ್ತ:
"ಹೂಂ ಆಗ್ಲೇ ಗೊತ್ತಾಯ್ತು."
"ಆಗ್ಲೇ? ಯಾರು ಹೇಳಿದ್ರು?"
"ಚಿರುಕಂಡ."
"ಚಿರುಕಂಡ..."

ತಂದೆ ಅಷ್ಟಕ್ಕೇನಿಲ್ಲಿಸಿದ. ಹುಡುಗರು ಇಂಥ ಸಂಗತಿಯನ್ನೆಲ್ಲ ಚರ್ಚಿಸಿದರೆಂಬ ವಿಷಯ ಆತನಿಗೆ ಸೋಜಿಗವನ್ನುಂಟುಮಾಡಿತು.

ತಾಯಿ ಕೇಳಿದಳು:
"ಮತ್ತೆ ನಮಗೆ ಹೇಳ್ಲೇ ಇಲ್ವಲ್ಲೋ?"

ಅಪ್ಪು ಹೇಳಿರಲಿಲ್ಲ. ಆದರೆ ನೀರೊಲೆಯ ಬೆಳಕಿನ ಮುಂದೆ ಸಪ್ಪಗೆ ದುಃಖದಿಂದ ಕುಳಿತಿದ್ದ ಮಗನ ಚಿತ್ರ ತಾಯಿಯ ಮನಸ್ಸಿನ ಮುಂದೆ ಸುಳಿಯಿತು.

ಮಾತನಾಡಲಿಲ್ಲ ಅಪ್ಪು,'ಮನೆಯಲ್ಲಿ ಹೇಳದೇ ಇರುವ ವಿಷಯಗಳು

ಎಷ್ಟೊಂದಿಲ್ಲ!' ಎಂದು ಆತನ ಮನಸ್ಸು ಸದ್ದಿಲ್ಲದೆ ಗೊಣಗಿತು.

ತಂದೆ ಯೋಚಿಸಿ, ಉತ್ತರ ಹೊಳೆಯದೆ ಸೋತವನಂತೆ ತಲೆಯಾಡಿಸಿ ಊಟ ಮುಗಿಸಿದ.,br/>

ಕಾಲ ಕಳೆಯಿತು.ಬೇಸಗೆ ಮುಗಿದು ಮಳೆ ಹನಿಯಿತು.ಮಾವಿನ ಹಣ್ಣುಗಳು ಮಾಯವಾಗಿ ಗೊರಟುಗಳಷ್ಟೇ ಉಳಿದುವು.ಅವು ತೋಯ್ದು ಹಸಿ ಮಣ್ಣಿನೊಡನೆ