ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಟಕಟೆ

ವಿಕಿಸೋರ್ಸ್ದಿಂದ

ಕಟಕಟೆ : ಮೆಟ್ಟಲುಸಾಲಿನ ಒಂದು ಪಕ್ಕದಲ್ಲಿ ಅಥವಾ ಎರಡೂ ಪಕ್ಕಗಳಲ್ಲಿ, ಉಪ್ಪರಿಗೆ, ಮೊಗಸಾಲೆಯ (ಬಾಲ್ಕನಿ) ಹೊರಾಂಗಣ ಮುಂತಾದ ಕಡೆಗಳಲ್ಲಿ ರಕ್ಷಣೆ ಹಾಗೂ ಅಲಂಕಾರಕ್ಕೋಸ್ಕರ ನಿರ್ಮಿಸುವ ರಚನೆ (ಬ್ಯಾಲಸ್ಟ್ರೇಡ್). ಇದನ್ನೇ ಕಿಟಿಕಿಯಲ್ಲಿ ಕಂಬಿಗಳ ಬದಲು ಅಳವಡಿಸಿದಾಗ ಕಟಾಂಜನ ಎಂದು ಕರೆಯುತ್ತಾರೆ.

ಸಮಾಂತರವಾಗಿ ಸರಳರೇಖೆಯಲ್ಲೋ ತುಂಡಾದ ರೇಖೆಯಲ್ಲೋ ವಕ್ರರೇಖೆಯಲ್ಲೋ ಸಾಗುವ ಒಂದು ಜೊತೆ ಚೌಕಟ್ಟು, ಇವನ್ನು ಪರಸ್ಪರ ಬಂಧಿಸುವ ಮತ್ತು ನಿಲ್ಲಿಸುವ ಅಡ್ಡಕಂಬಗಳು (ಬ್ಯಾಲುಸ್ಟರ್ಸ್‌)-ಇವಿಷ್ಟು ಕಟಕಟೆಯ ಪ್ರಧಾನ ಅಂಗಗಳು. ಚೌಕಟ್ಟಿನ ತಳಭಾಗದ ಹೆಸರು ಆಧಾರಪಟ್ಟಿ. ಮಿಕ್ಕಂತೆ ಕಟಕಟೆ ಕಟಾಂಜನಗಳ ವಿನ್ಯಾಸ ಶಿಲ್ಪಿಯ ಹಾಗೂ ಮಾಲೀಕನ ಅಭಿರುಚಿಗಳಿಗೆ ತಕ್ಕಂತೆ ವಿವಿಧ ಆಕಾರ, ಅಲಂಕರಣಗಳಲ್ಲಿರುತ್ತವೆ. ಕಟಕಟೆಯನ್ನು ಕಲ್ಲುಚಪ್ಪಡಿ, ಮರ, ಕಬ್ಬಿಣ, ಇಟ್ಟಿಗೆ, ಕಾಂಕ್ರೀಟು, ಕಬ್ಬಿಣದ ಪ್ರಬಲಿತ ಕಾಂಕ್ರೀಟು ಇವುಗಳಿಂದ ಕಟ್ಟಬಹುದು. ಕೆಲವು ಸಲ ಕಬ್ಬಿಣದ ಪಟ್ಟಿ ಮತ್ತು ಚಚ್ಚೌಕ ಗಾತ್ರದ ಕಬ್ಬಿಣದ ಕಂಬಿಗಳಿಂದ ಕಟಕಟೆಯನ್ನು ತಯಾರಿಸಿ ಮೆಟ್ಟಲುಗಳ ಇಕ್ಕೆಲಗಳಲ್ಲೂ ಜೋಡಿಸಿರುತ್ತಾರೆ. ಕಟಕಟೆಯ ಮೇಲ್ಭಾಗ ನುಣುಪು ಮತ್ತು ಗುಂಡಗಿದ್ದು ಅದರ ಮೇಲೆ ಸರಾಗವಾಗಿ ಕೈಗಳನ್ನು ಚಲಿಸುವಂತೆ ಸೌಕರ್ಯವಿದೆ. ಕಟಕಟೆಯ ಎತ್ತರ 0.75ಮೀ-0.91ಮೀ ಮೆಟ್ಟಲು ಹತ್ತುವವರಿಗೆ ಅಂತಸ್ತಿನ ಎರಡು ಕಡೆಗಳಲ್ಲೂ ಇದು ಊರುಗೋಲಿನಂತಿದ್ದು ಸಾಗುವವರು ಕೆಳಗೆ ಬೀಳದಂತೆ ರಕ್ಷಣೆ ಒದಗಿಸುತ್ತದೆ. ಕಟೆಕಟೆಗಳಲ್ಲಿ ವಿವಿಧ ರೀತಿಯ ಅಲಂಕರಣಗಳನ್ನು ಅಳವಡಿಸುವುದರಿಂದ ಕಟ್ಟಡಕ್ಕೆ ಸೌಂದರ್ಯದ ಒಪ್ಪ ದೊರೆಯುವುದು. (ಎಂ.ಜಿ.ಎಸ್.)