ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಿಲ್ಪ

ವಿಕಿಸೋರ್ಸ್ದಿಂದ

ಶಿಲ್ಪ - ಕಲ್ಲು, ಮರ, ಮಣ್ಣು ಅಥವಾ ಮೇಣದಲ್ಲಿ ಮಾಡಿಟ್ಟ ಮೂರ್ತಿಗಳು, ಪ್ರಸಂಗನಿರೂಪಣೆಗಳು ಅಥವಾ ಲತಾವಿನ್ಯಾಸಗಳು. ಶಿಲ್ಪದಲ್ಲಿ ಎರಡು ಪ್ರಮುಖ ಸಂವಿಧಾನಗಳಿವೆ; ಕಂಡರಣೆ (ಗ್ಲಿಪ್ಟಿಕ್), ಅಚ್ಚೊತ್ತುವುದು (ಪ್ಲಾಸ್ಟಿಕ್). ಕಲ್ಲಿನಲ್ಲಿ ಅಥವಾ ಮರದಲ್ಲಿ ಕೆತ್ತಿ, ಕೊರೆದು, ಕಡೆದು ರೂಪ ಮೂಡಿಸುವುದು ಮೊದಲನೆಯದು; ಮಣ್ಣನ್ನು ಕಲೆಸಿ ಕೈಯಿಂದ ರೂಪವನ್ನು ಸೃಷ್ಟಿಸುವುದು ಎರಡನೆಯದು. ಇವುಗಳ ನಡುವೆ ಸಂವಿಧಾನದ ಭೇದ ಹಾಗೂ ರಚನಾ ವಿವರದಲ್ಲೂ ಭೇದಗಳಿವೆ. ಕಡೆಯುವಾಗ ಇಡೀ ರೂಪವನ್ನು ಬಂಡೆಯಲ್ಲಿ ಅಥವಾ ಮರದ ದಿಮ್ಮಿಯಲ್ಲಿ ಮೊದಲು ಕಂಡುಕೊಂಡು ಆ ಭಾಸಕ್ಕೆ ಒಪ್ಪುವಂತೆ ಅಗತ್ಯವಿಲ್ಲದ ಕಲ್ಲನ್ನು ಅಥವಾ ಮರದ ಭಾಗವನ್ನು ತೆಗೆಯುತ್ತಾರೆ. ಇದು ರೂಪದ ಅನಾವರಣವಿದ್ದಂತೆ. ಹೊರಮೈಯಿಂದ ಒಳಸ್ವರೂಪದತ್ತ ಕಲೆಗಾರ ಬರುತ್ತಾನೆ. ಆದರೆ ಅಚ್ಚೊತ್ತುವಾಗ ಅವ್ಯಾಕೃತ ಮುದ್ದೆಯನ್ನು ಸ್ವಲ್ಪಸ್ವಲ್ಪವಾಗಿ ಜೋಡಿಸಿ ಕ್ರಮಕ್ರಮವಾಗಿ ರೂಪ ಸೃಷ್ಟಿಸುತ್ತಾನೆ. ಒಳಸ್ವರೂಪದಿಂದ ಹೊರಮೈ ಕಡೆಗೆ ಕಲೆಗಾರ ಬರುತ್ತಾನೆ.

ಶಿಲ್ಪಕ್ಕೆ ಹಲವಾರು ಬಗೆಯ ಕಲ್ಲುಗಳನ್ನು ಬಳಸಲಾಗುತ್ತದೆ. ಕಠಿಣ ಕಾಡುಗಲ್ಲು, ಮೃದು ಬಳಪದಕಲ್ಲು, ಈ ಎರಡರ ನಡುವೆ ಹಲವಾರು ಬಗೆಯ ಕಲ್ಲು ಶಿಲ್ಪ ತಳೆದು ನಿಂತಿವೆ. ಉತ್ತರ ಭಾರತದಲ್ಲಿಯೂ ಪಾಶ್ಚಾತ್ಯ ದೇಶಗಳಲ್ಲಿಯೂ ಅಮೃತಶಿಲೆ (ಹಾಲುಗಲ್ಲು) ಶಿಲ್ಪಕ್ಕೆ ಯೋಗ್ಯ ಎನಿಸಿದೆ. ಬಲುಕಾಲ ಇರುವುದೆಂಬ ನಿರೀಕ್ಷೆಯಿಲ್ಲದುದರಿಂದ ಮರದ ಕೊರಡುಗಳಿಂದ ಮೂರ್ತಿಗಳನ್ನು ಮಾಡುವುದು ಶಿಲೆಯ ಕೆಲಸದಷ್ಟು ಪ್ರಚಲಿತವಾಗಿಲ್ಲವಾದರೂ ಹಲವಾರು ದೇಶಗಳಲ್ಲಿ ಮರಕಂಡರಣೆ ಉನ್ನತಮಟ್ಟ ಮುಟ್ಟಿದೆ. ರಥನಿರ್ಮಾಣ, ದ್ವಾರಗಳು, ಮಂಟಪ ಮುಂತಾದ ಪ್ರಯೋಜನಗಳನ್ನವಲಂಬಿಸಿ ಮರಕಂಡರಣೆ ಕಾಣಬರುತ್ತದೆ. ಭಾರತದ ದೇವಾಲಯಗಳಲ್ಲಿ ಧ್ರುವಮೂರ್ತಿಗಳನ್ನು ಮರದಲ್ಲೇ ಮಾಡಿ ಇರಿಸುವ ಸಂಪ್ರದಾಯ ಪ್ರಾಚೀನ ವಾದುದು. ಪುರಿಯ ಜಗನಾಥ ದೇವ ಪ್ರಪಂಚ ಖ್ಯಾತವಾಗಿದೆ. ಆಫ್ರಿಕ, ಚೀನ, ಜರ್ಮನಿ (15-16ನೆಯ ಶತಮಾನ), ಇಂಗ್ಲೆಂಡ್ (16-17ನೆಯ ಶತಮಾನ) ದೇಶಗಳಲ್ಲಿ ಮರಗೆತ್ತನೆ ಕೆಲಸ ಉತ್ತಮವಾಗಿ ಬೆಳೆಯಿತು. ಮರ ಬಲುಕಾಲ ನಿಲ್ಲುವುದಿಲ್ಲ ಎಂಬುದು ನಿಜ; ಹುಳ ಹುಪ್ಪಟೆಗಳು ಅದನ್ನು ಹಾಳುಮಾಡುತ್ತವೆ. ಇಂಗ್ಲೆಂಡಿನಲ್ಲಿ ಮರಕೆತ್ತನೆಗೆ ಓಕ್‍ಮರವನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಬೀಟಲ್ ಹುಳಕ್ಕೆ ಓಕ್ ಎಂದರೆ ಬಲು ಪ್ರೀತಿ. ಸಾಮಾನ್ಯವಾಗಿ ಕೆತ್ತಲು ಬರುವಂತೆ ಮೃದುಮೈಯುಳ್ಳ ಸಿಡಾರ್, ಪೈನ್‍ಫರ್ ಮುಂತಾದ ಮರಗಳನ್ನೇ ಶಿಲ್ಪಕ್ಕೆ ಉಪಯೋಗಿಸುತ್ತಾರೆ ಕೆಲಕೆಲವು ಕೆಲಸಕ್ಕೆ ಓಕ್, ವಾಲ್ನಟ್ ಮಹೋಗನಿ, ತೇಗ, ಎಬನಿ, ಬೀಚ್ ಮುಂತಾದ ಗಟ್ಟಿಮರಗಳೂ ಬಳಕೆಯಲ್ಲಿವೆ. ಭಾರತದಲ್ಲಿ ಕಾಶ್ಮೀರದ ಕಡೆ ದೇವದಾರು, ದಕ್ಷಿಣದಲ್ಲಿ ಗಂಧ, ತೇಗ ಹಾಗೂ ಬೀಟೆ ಬಳಕೆಯಲ್ಲಿವೆ. ಮರದ ಲಕ್ಷಣ ಗುಣ ಪದರ ಇವನ್ನು ಅನುಸರಿಸಿ ಶಿಲ್ಪ ಕೆಲಸ ಮಾಡಬೇಕಾದುದು ಆವಶ್ಯಕ. ಶಿಲ್ಪಿಯ ಸ್ವಾತಂತ್ರ್ಯಕ್ಕೆ ಇದೊಂದು ಎಲ್ಲೆ.

ಶಿಲ್ಪಕ್ಕೆ ದಂತವನ್ನೂ ಉಪಯೋಗಿಸುತ್ತಾರೆ. ಆನೆಯ ದಂತ, ಜಿಂಕೆ ಕೊಂಬು, ವಾಲ್ರಸ್ ಮುಂತಾದ ಪ್ರಾಣಿಗಳ ಮೂಳೆ, ಹಲ್ಲು ಈ ಗುಂಪಿನಲ್ಲೇ ಸೇರುತ್ತವೆ. ತುಂಬ ಪ್ರಾಚೀನ ಶಿಲ್ಪ ದಂತದಲ್ಲೇ ಕಾಣಿಸುತ್ತದೆ. ಆ ಕಾಲಕ್ಕೆ ಆನೆಯ ಪೂರ್ವಜರಾದ ಮ್ಯಾಮತ್, ಮನ್ತೋದೊನ್ ಮುಂತಾದ ಪ್ರಾಣಿಗಳು ವಿಶೇಷವಾಗಿದ್ದುವು. ಏಷ್ಯ, ಆಫ್ರಿಕ, ಯುರೋಪ್ ಆದಿವಾಸಿ ಕಲೆ ಪ್ರಮುಖವಾಗಿ ದಂತದ್ದೇ. ಕ್ರೀಟ್‍ನ ಅರಮನೆಗಳನ್ನು ಅಲಂಕರಿಸಲು ದಂತವನ್ನು ಬಳಸುತ್ತಿದ್ದರು. ಬಿಜಾಂಟಿಯನ್ ಮತ್ತು ಮಧ್ಯಕಾಲಿಕ ಕಲೆಗಳಲ್ಲಿ ದಂತಕೆತ್ತನೆ ಬೆಳೆದು ಬಂದಿತು. ಇಟಲಿಯಲ್ಲಿ ಗಿಯೋವಾನ್ನಿಪಿಸಾನೋ ಮುಂತಾದ ಕಲಾವಿದರು ಈ ಕಲೆಯಲ್ಲಿ ನಿಷ್ಣಾತರು. ಆದರೆ ಹದಿನಾರನೆಯ ಶತಮಾನದಿಂದೀಚೆಗೆ ಪಾಶ್ಚಾತ್ಯ ದೇಶಗಳಲ್ಲಿ ದಂತದ ಕೆಲಸ ಹಿಂದೆ ಬಿದ್ದಿದೆ. ಭಾರತ, ಚೀನ, ಜಪಾನ್, ಕೊರಿಯ ಮುಂತಾದ ದೇಶಗಳಲ್ಲಿ ಪ್ರಮುಖ ಶಿಲ್ಪವೆಂದರೆ ದಂತಶಿಲ್ಪ. ತುಂಬ ಹಿಂದಿನ ಕಾಲದಿಂದ ಇಂದಿನ ತನಕವೂ ಸುಪುಷ್ಟವಾಗಿ ಬೆಳೆದು ಬಂದಿರುವ ಕಲೆ ಇದು.

ಮಣ್ಣಿನ ಶಿಲ್ಪವೂ ಪುರಾತನವಾದುದು. 1,500 ವರ್ಷಗಳ ಹಿಂದೆ ಚೀನ ದೇಶದಲ್ಲಿ ಪೋರ್ಸಿಲಿನ್ ಎಂಬ ಬಗೆಯ ಶ್ವೇತಮೃತ್ತಿಕೆಯನ್ನು ಪತ್ತೆಹಚ್ಚಿದಾಗ ಮೃಣ್ಮಯ ಶಿಲ್ಪಕ್ಕೆ ಹೊಸ ಕಳೆ ಬಂದಿತು. 18ನೆಯ ಶತಮಾನದಿಂದೀಚೆಗೆ ಜರ್ಮನಿಯ ಮೈಸ್ಸೆನ್ ಎಂಬಲ್ಲಿ ಪೋರ್ಸಿಲಿನ್ ನನ್ನು ತಯಾರಿಸುವ ಕಾರ್ಖಾನೆ ಆರಂಭವಾದ ಬಳಿಕ ಐರೋಪ್ಯ ದೇಶದ ಹಲವಾರು ಕಡೆಗಳಲ್ಲಿ ಪೋರ್ಸಿಲಿನ್ ಉದ್ಯಮ ಪ್ರಚಲಿತ ವಾಯಿತು. ಸಾಮಾನ್ಯವಾಗಿ ರಂಗಭೂಮಿಯ ಸ್ಫೂರ್ತಿಯಿಂದ ಗೊಂಬೆಗಳನ್ನು ಮಾಡುವ ಹವ್ಯಾಸ ಚೆಲ್ಸಿಯ, ಬೋ, ದೆರ್ಬಿ ಮುಂತಾದ ಇಂಗ್ಲಿಷ್ ಪ್ರದೇಶಗಳಿಗೆ ಬೆಳೆಯಿತು. ಮಣ್ಣಿನಲ್ಲಿ ಮೂರ್ತಿಗಳನ್ನು ಮಾಡಿ ಅವು ಬಲುಕಾಲ ಉಳಿಯುವಂತೆ ಮಾಡಲು ಸುಡುತ್ತಿದ್ದರು. ಈ ಪದ್ಧತಿ ಟೆರ್ರಾಕೋಟ ಎನಿಸಿಕೊಂಡಿತು. ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಲೋಹದಲ್ಲಿ ಎರಕಹೊಯ್ದು ಶಾಶ್ವತವಾಗಿರುವಂತೆ ಮಾಡುವುದು ಬಳಕೆಗೆ ಬಂದಿತು.

ಒಂದೊಂದು ದೇಶದಲ್ಲಿ ಒಂದೊಂದು ಬಗೆಯ ಶಿಲ್ಪಕ್ಕೆ ಅನುಕೂಲ ವಿರುತ್ತದೆ. ಈಜಿಪ್ಟ್‍ದೇಶದಲ್ಲಿ ಗಟ್ಟಿ ಗ್ರ್ಯಾನೈಟ್ ಜಾತಿಯ ಕಲ್ಲು, ಗ್ರೀಸ್‍ನಲ್ಲಿ ಹಾಲುಗಲ್ಲು ಅಥವಾ ಅಮೃತಶಿಲೆ (ಪೆಂಟೆಲಿಕಸ್ ಮತ್ತು ಪರೋಸ್ ಬೆಟ್ಟಗಳ), ನಾಟ್ಟಿಂಗ್‍ಹ್ಯಾಮ್ ಪ್ರದೇಶದಲ್ಲಿ ಅಲಬಾಸ್ಟರ್ ಎಂಬ ಬಗೆಯ ಕಲ್ಲು - ಹೀಗೆ ಈ ಸೌಲಭ್ಯವನ್ನು ಅವಲಂಬಿಸಿ ಶಿಲ್ಪ ಶೈಲಿಗಳು ರೂಪತಳೆದಿರುವುದನ್ನು ಕಾಣಬಹುದು.

ಪೂರ್ವಕಾಲದಿಂದ ವಾಸ್ತುವಿಗೂ ಶಿಲ್ಪಕ್ಕೂ ವಿಶೇಷ ಸಂಬಂಧ ಇರುವುದನ್ನು ಎಲ್ಲ ದೇಶಗಳಲ್ಲಿಯೂ ಕಾಣಬಹುದು. ಸ್ಮಾರಕ ಭವನಗಳಲ್ಲಿ ಅಲಂಕರಣಕ್ಕೆಂದು ಶಿಲ್ಪಗಳನ್ನು ಮೂಡಿಸುವ ಪದ್ಧತಿ ತುಂಬ ಪುರಾತನವಾದುದು. ದೇವಾಲಯಗಳಲ್ಲಂತೂ ದೇವತೆಯರ, ಸಂತರ ಮತ್ತು ಪ್ರವಾದಿಗಳ ಮೂರ್ತಿಗಳನ್ನು ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಇಸ್ಲಾಮ್ ಧರ್ಮದಲ್ಲಿ ದೇವರ ಮೂರ್ತಿಯನ್ನು ಮಾಡಬಾರದೆಂಬ ವಿಧಿ ಇರುವುದರಿಂದ ಇಸ್ಲಾಮೀ ಪ್ರಾರ್ಥನಾ ಗೃಹಗಳನ್ನು ಬಿಟ್ಟು ಉಳಿದ ಎಲ್ಲ ಧರ್ಮಗಳ ಪೂಜಾಮಂದಿರಗಳಲ್ಲೂ ಶಿಲ್ಪ ಅವಶ್ಯ ಅಂಗವಾಗಿ ಸೇರಿಕೊಂಡಿದೆ. ಪಾಶ್ಚಾತ್ಯ ದೇಶಗಳಲ್ಲಿ ಸುಪ್ರಸಿದ್ಧ ವೀರರ ಪ್ರತಿಮೆಗಳನ್ನು ಮಾಡಿಸಿ ಊರಿನ ಮುಖ್ಯಸ್ಥಳಗಳಲ್ಲಿ ಇಡುವ ಪದ್ಧತಿ ಇತ್ತು. ಗ್ರೀಕ್ ಸಂಸ್ಕøತಿಯ ಅವಶೇಷಗಳಲ್ಲಿ ಇಂಥ ಸಾವಿರಾರು ಶಿಲ್ಪಕೃತಿಗಳು ಉಳಿದು ಬಂದಿವೆ. ಇಂಥ ಸ್ಮಾರಕಶಿಲ್ಪಗಳು ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಒದಗಿಬಂದಿವೆ. ಭಾರತದಲ್ಲಿ ಕನಿಷ್ಕನ ಕಾಲದಲ್ಲಿ ಅವನದೇ ಒಂದು ಭವ್ಯ ವ್ಯಕ್ತಿಶಿಲ್ಪವಿತ್ತು; ಖಂಡಶಃ ಅದು ಉಪಲಬ್ಧವಿದೆ. ಗಾಂಧಾರ ಶಿಲ್ಪಗಳ ಆಸಕ್ತಿಯಿಂದ ಬೋಧಿಸತ್ತ್ವ ಮೂರ್ತಿಗಳು ಮೂಡಿಬಂದವು. ಇವನ್ನು ವ್ಯಕ್ತಿಚಿತ್ರಗಳೆನ್ನಲಾಗದು. ಕಲ್ಪನೆಯ ಭಾಸ ಇದರಲ್ಲಿವೆ. ಫ್ಲಾರೆನ್ಸಿನಲ್ಲಿ ಡೊನೆಟೆಲ್ಲೊ ಮಾಡಿರುವ ಪ್ರವಾದಿ ಚೆರೆಮಿಯನ ಅದ್ಭುತ ಅಮೃತಶಿಲಾ ವಿಗ್ರಹ, ಬುರ್ಗೋಸ್‍ನ ಮಿರಾಫ್ಲೋರೆಸ್‍ನ ಮಠದಲ್ಲಿ ಮ್ಯಾನ್ಯೂಯಲ್ ಪೆರೇರಾ ಮಾಡಿರುವ ಸಂತ ಬ್ರೂನೋನ ಮರದ ವಿಗ್ರಹ, ಮೈಕೆಲಂಜೆಲೋ ಮಾಡಿರುವ ಡೇವಿಡ್‍ನ ಅಮೃತಶಿಲಾವಿಗ್ರಹ ಇವೆಲ್ಲ ಇದೇ ಮಾದರಿಗೆ ಸೇರಿದ ಶಿಲ್ಪಗಳು. ವ್ಯಕ್ತಿ ಚಿತ್ರಣದಲ್ಲಿ ಕಲ್ಪನೆಯನ್ನು ಬೆರೆಸಿ ಕಲಾಕೃತಿಗೆ ಕಳಶವಿಟ್ಟಿದ್ದಾರೆ.

ಶಿಲ್ಪ ಸಂಪೂರ್ಣವಾಗಿರಬಹುದು; ಎಂದರೆ ಮುಂದೆ, ಹಿಂದೆ, ಪಕ್ಕಗಳಲ್ಲಿ ಪರಿಪೂರ್ಣವಾಗಿರಬಹುದು. ಇದಕ್ಕೆ ದುಂಡುಶಿಲ್ಪ ಎನ್ನುತ್ತಾರೆ. ಇಲ್ಲವೇ ಮುಂಭಾಗದಲ್ಲಿ ಮಾತ್ರ ಶಿಲ್ಪವಿದ್ದು ಹಿಂದೆ ಬರಿಕಲ್ಲು ಅಥವಾ ಮರ ಇರಬಹುದು. ಇದಕ್ಕೆ ಫಲಕ ಎನ್ನುತ್ತಾರೆ. ದುಂಡುಶಿಲ್ಪದಲ್ಲಿ ವಿವರಗಳ ಪ್ರಮಾಣ ಯಥಾರ್ಥವಾಗಿರುತ್ತದೆ. ಆದರೆ ಫಲಕದಲ್ಲಿ ಉದ್ದ-ಅಗಲಗಳು ಯಥಾರ್ಥವಾಗಿದ್ದರೂ ಹಿಂದೆ ಮುಂದೆ ಅಥವಾ ದಪ್ಪದ ಪ್ರಮಾಣದಲ್ಲಿ ಆಭಾಸವಿರುತ್ತದೆ. ಎಂದರೆ ವಾಸ್ತವವಾಗಿ ಇರುವುದಕ್ಕಿಂತ ಹೆಚ್ಚಿನ ಆಳವಿದ್ದಂತೆ ಕಾಣಿಸುವಂತೆ ಕಡೆದಿರುತ್ತಾರೆ. ಆಳ ಸಹಜವಾಗಿರುವಂತೆಯೇ ಅಷ್ಟಕ್ಕೆ ಸರಿಸುಮಾರಾಗಿ ಇದ್ದರೆ ಅದು ಗಂಭೀರ ಫಲಕ ಎನಿಸಿಕೊಳ್ಳುತ್ತದೆ. ಆಳ ಬಹಳ ಕಮ್ಮಿಯಿದ್ದರೆ ಅದು ಉತ್ತಾನಫಲಕ ಎನಿಸಿಕೊಳ್ಳುತ್ತದೆ. ದುಂಡುಶಿಲ್ಪ ಯಾವ ಕಡೆಯಿಂದ ನೋಡಿದರೂ ಸರಿಯೇ ಸಹಜ ವ್ಯಕ್ತಿಗಳಿಗೆ, ನೈಜ ವಸ್ತುಗಳಿಗೆ ಇರುವಂತೆ ಅವಕ್ಕೂ ಸರ್ವತೋಸಿದ್ಧ ಭಂಗಿಗಳುಂಟು. ಆದರೆ ಫಲಕವನ್ನು ಎದುರಿನಿಂದ ಮಾತ್ರ ನೋಡಬೇಕು. ಅದೂ ಅರ್ಧಮರ್ಧ ನೆರಳು ಬೆಳಕಿನ ವಿನ್ಯಾಸದಲ್ಲಿ ನೋಡಿದರೆ ಅದರ ವಿವರಗಳು ಸ್ಫುಟವಾಗುವುದು. ಪ್ರಕಾಶ ಪ್ರಬಲವಾಗಿದ್ದರೆ ಫಲಕದ ಪ್ರಯೋಜನ ಕಮ್ಮಿ. ದುಂಡು ಶಿಲ್ಪಗಳಿಗೆ ಹಾಗಲ್ಲ. ಬೆಳಕು ಎಷ್ಟಿದ್ದರೂ ಛಾಯೆಗಳು ಒಪ್ಪಾಗಿ ವ್ಯವಸ್ಥಿತವಾಗಿ ಶಿಲ್ಪಕ್ಕೆ ಶೋಭಾಯಮಾನವಾಗಿ ರುತ್ತವೆ. ದೇವಾಲಯಗ ಳಲ್ಲಿ, ಸ್ಮಾರಕಮಂದಿರಗಳಲ್ಲಿ ಪ್ರಸಂಗಗಳನ್ನು, ಉತ್ಸವಗಳನ್ನು ಶಿಲ್ಪದಲ್ಲಿ ನಿರೂಪಿಸುವ ಸಂದರ್ಭ ಬಂದಾಗ ಫಲಕಗಳಂತೆ ಮೂಡಿಸುತ್ತಾರೆ. ಪ್ರಸಂಗ ನಿರೂಪಣೆ, ಹತ್ತಾರು ಜನಗಳನ್ನು ಒಟ್ಟಿಗೆ ಚಿತ್ರಿಸಬೇಕಾದರೆ, ಫಲಕವೇ ಯಶಸ್ವಿಯಾದ ಸಾಧನ. ದೇವಸ್ಥಾನದ ಗೋಪುರಗಳಲ್ಲಿ, ವಿಮಾನಗಳಲ್ಲಿ, ಪೌಳಿಯಮೇಲೆ ಫಲಕಗಳನ್ನು ಮೂಡಿಸುವ ಪದ್ಧತಿ ಇದೆ. ಅಸ್ಸೀರಿಯ ದೇಶದ ನಿಮ್ರೂದ್, ಖೊರ್ಸಾಬಾದ್, ನಿನೇವಾ ಮುಂತಾದೆಡೆ ಇರುವ ಅರಮನೆಗಳಲ್ಲಿ ಅಷುರ್-ನಸಿರ್-ಪಾಲ್ ಮುಂತಾದ ರಾಜರ, ದೇವತೆಗಳ, ಪ್ರಾಣಿಗಳ ಶಿಲಾಫಲಕಗಳು ಪ್ರಾಚೀನವಾದವು, ವಿಖ್ಯಾತವಾದವು. ಭಾರತದ ಮಾಮಲ್ಲಪುರದ ಮತ್ತು ಹಳೆಬೀಡು-ಬೇಲೂರುಗಳ ಶಿಲಾಫಲಕಗಳು ಪ್ರಪಂಚಖ್ಯಾತವಾಗಿವೆ. 14ನೆಯ ಶತಮಾನದ ಸುಮಾರಿಗೆ ಫ್ರಾನ್ಸಿನಲ್ಲಿ ಗಾತಿಕ್ ಕಲಾಸಂಪ್ರದಾಯದ ಕಟ್ಟಡಗಳಲ್ಲಿ ಶಿಲ್ಪಫಲಕಗಳ ಬಾಹುಳ್ಯ ಒದಗಿತ್ತು.

ದುಂಡುಶಿಲ್ಪದ ಸಂಪ್ರದಾಯ ಗ್ರೀಸ್‍ನಲ್ಲಿ ವಿಶೇಷವಾಗಿ ಬೆಳೆಯಿತು. ಅತಿಪ್ರಾಚೀನ ಶಿಲ್ಪಕೃತಿಗಳಲ್ಲಿ ಒಂದು ಕರುವನ್ನು ಹೆಗಲಮೇಲೆ ಹೊತ್ತ ಮನುಷ್ಯನದು, ಇದು ಕ್ರಿ.ಪೂ. 570ರ ಕೃತಿ ಅಥೆನ್ಸ್‍ನ ಅಕ್ರೋಪೊಲಿಸ್‍ನಲ್ಲಿ ದೊರೆತದ್ದು. 330ರಲ್ಲಿ ಲಿಯೋಕೇರಸ್ ಎಂಬ ಅಥೆನ್ಸ್ ನಗರದ ಶಿಲ್ಪಿ ಮಾಡಿದ ಡಿಮಿಟರ್ ದೇವತೆಯ ಅದ್ಭುತಶಿಲ್ಪವೂ ದುಂಡುಶಿಲ್ಪದ ಸಂಪ್ರದಾಯಕ್ಕೆ ಸೇರಿದುದು. ಗ್ರೀಕರ ನೈಜಶಿಲ್ಪವನ್ನು ಅನುಕರಿಸಿ ಶ್ರೇಷ್ಠಕೃತಿಗಳನ್ನು ಮಾಡಿದ ಡೋನಟೆಲ್ಲೊ, ಅಮೃತ ಶಿಲೆಯಲ್ಲಿಯೂ ಹಿತ್ತಾಳೆಯಲ್ಲಿಯೂ ದುಂಡುಶಿಲ್ಪದ ಕೆಲಸ ಮಾಡಿದ. ಹದಿನೈದನೆಯ ಶತಮಾನದಲ್ಲಿ ಐರೋಪ್ಯದೇಶಗಳಲ್ಲಿ ಒದಗಿದ ಕಲಾ ಪುನರುಜ್ಜೀವನ ಯುಗದ ಅವತರಣದಲ್ಲೇ ಡೋನಟೆಲ್ಲೊ ತನ್ನ ಪ್ರಭಾವ ಬೀರಿದ. ದುಂಡುಶಿಲ್ಪಕ್ಕೆ ಭಾರತದಲ್ಲಿ ಉತ್ತಮ ನಿದರ್ಶನ ಎಂದರೆ ಶ್ರವಣಬೆಳ್ಗೊಳದ ಗೊಮ್ಮಟೇಶ್ವರ ಶಿಲಾಮೂರ್ತಿ.

ಶಿಲ್ಪದ ಒಂದು ಮುಖ್ಯ ಪ್ರಯೋಜನ ಎಂದರೆ ಸಮಾಧಿಸ್ಮಾರಕ. ಪ್ರಾಚೀನ ಗ್ರೀಸ್ ದೇಶದ ಸಮಾಧಿಗಳು ಆಳ ಗುಂಡಿಗಳಾಗಿದ್ದು ಅದರ ಮೇಲೆ ಸ್ಥಾಣುವಿನಂತೆ ನಿಂತ ಕಲ್ಲುಕಂಬಗಳಿರುತ್ತಿದ್ದುವು. ಕೆಳಭಾಗದಲ್ಲಿ ಶಿಲ್ಪಗಳನ್ನು ಮೂಡಿಸುತ್ತಿದ್ದರು. ಸತ್ತವನ ಮೂರ್ತಿಯನ್ನೇ ಕಡೆಯುತ್ತಿದ್ದ ಪದ್ಧತಿಯೂ ಇದ್ದಿತು. ಇದಕ್ಕೆ ಸ್ಟೀಲ್ ಎನ್ನುತ್ತಿದ್ದರು. ಕ್ರಿ.ಪೂ. 353ರಲ್ಲಿ ತೀರಿಕೊಂಡ ಮೌಸೋಲಸ್ ಎಂಬಾತನಿಗೆ ಹಲಿಕರ್ನಾಸ್ಸಸ್ ಎಂಬೆಡೆ ಕಟ್ಟಿದ ಸಮಾಧಿ ದೇವಾಲಯದಂತೆ ಅದ್ಭುತ ವಾಗಿದ್ದಿತಲ್ಲದೆ ಈ ಮಾದರಿಯ ಸಮಾಧಿಗಳಿಗೆ ಮೌಸೋಲಿಯಮ್ ಎಂಬ ಹೆಸರೇ ಬಂದಿತು. ಇಲ್ಲಿ ಕೆಳಪಟ್ಟಿಗಳನ್ನು ಶಿಲ್ಪದಿಂದ ಅಲಂಕರಿಸುತ್ತಿದ್ದರು. ಸುತ್ತಲೂ ಕಂಬಗಳಿದ್ದು ಅವುಗಳ ಮೇಲೂ ಶಿಲ್ಪವಿನ್ಯಾಸಗಳಿರುತ್ತಿದ್ದುವು. ಸಮಾಧಿಗಳು ಕಲ್ಲು ಪೆಟ್ಟಿಗೆಗಳಂತೆ ಇರುತ್ತಿದ್ದುದೂ ಉಂಟು. ಅಮೃತ ಶಿಲೆಯಲ್ಲೋ ಬಂಡೆಕಲ್ಲಿನಲ್ಲೋ ಸಮಾಧಿ ಕಡೆದು ಅದರ ಮುಚ್ಚಳದ ಮೇಲೆ ನಾಲ್ಕೂ ಕಡೆಗಳಲ್ಲೂ ಶಿಲ್ಪ ಮೂಡಿಸುತ್ತಿದ್ದರು. ಇದಕ್ಕೆ ಸೆರ್ಕೋಫಾಗಸ್ ಎಂದು ಹೆಸರು. ಬಹುವೇಳೆ ಸತ್ತವನ ಮೂರ್ತಿಯನ್ನು ಪುರುಷಪ್ರಮಾಣದಲ್ಲಿ ಮುಚ್ಚಳದ ಮೇಲೆ ಶಯ್ಯಾಸ್ಥಿತಿಯಲ್ಲಿ ಕಡೆದಿಡುತ್ತಿದ್ದರು. ಸಾಮಾನ್ಯಜನರ ಪಾಲಿಗೆ ಇಂಥ ಶಿಲ್ಪಸಮಾಧಿಗಳು ಲಭ್ಯವಾಗುತ್ತಿರಲಿಲ್ಲ. ರಾಜರು, ರಾಣಿಯರು, ಶ್ರೀಮಂತರು, ಮಠಾಧಿಕಾರಿಗಳು ಇಂಥ ವೈಭವದ ಸಮಾಧಿಮಂದಿರ ಪಡೆಯುತ್ತಿದ್ದರು. ಫ್ಲಾರೆನ್ಸಿನಲ್ಲಿ ಮೈಕೆಲಂಜೆಲೋ ಕಟ್ಟಿದ ಲೊರೆನ್ಜೊ ಡಿ ಮೆಡಿಸಿಯ ಸಮಾಧಿಸ್ಮಾರಕ ಪ್ರಪಂಚಖ್ಯಾತವಾಗಿದೆ. ಪೋಪ್ ಆಗಿದ್ದ ಎಂಟನೆಯ ಇನೊಸೆಂಟ್‍ನಿಗೆ ಕಟ್ಟಿದ ಸಮಾಧಿಯಲ್ಲಿ ಸರ್ಕೋ ಫಾಗಸ್‍ನ ಭಾಗದಲ್ಲಿ ಮಲಗಿದಂತೆ ಇವನ ವಿಗ್ರಹ, ಮೇಲ್ಭಾಗದಲ್ಲಿ ತನ್ನ ಸಿಂಹಾಸನದಲ್ಲಿ ಕುಳಿತಿರುವಂತೆ ಕಂಚುವಿಗ್ರಹ-ಹೀಗೆ ಎರಡು ವಿಗ್ರಹಗಳಿವೆ.

ಸ್ಮಾರಕಕ್ಕೆ ಸಮಾಧಿಯೇ ಆಗಿರಬೇಕೆಂಬ ನಿಯಮವಿಲ್ಲ. ಜಯ ಸ್ತಂಭಗಳೂ, ಜನ್ಮಸ್ಮಾರಕಗಳೂ ಇರುತ್ತವೆ. ಇವುಗಳಲ್ಲಿ ಕೂಡ ಶಿಲ್ಪದ ಪ್ರಯೋಜನವುಂಟು. ಲಂಡನ್ನಿನ ಟ್ರಫಾಲ್ಗರ್ ಚೌಕದಲ್ಲಿರುವ ಒಂದನೆಯ ಚಾಲ್ರ್ಸ್ ದೊರೆ ಅಶ್ವಾರೂಢನಾಗಿ ಕುಳಿತಿರುವ ಸೊಗಸಾದ ಶಿಲ್ಪವನ್ನು 1595-1650ರ ಸುಮಾರಿಗೆ ಹ್ಯೂಬರ್ಟ್ ಲ ಸಾಯುವರ್ ಎಂಬಾತ ನಿರ್ಮಿಸಿದ. ಅಶ್ವಾರೂಢ ವೀರರ ಶಿಲ್ಪಗಳು ಒಂದು ಕಾಲಕ್ಕೆ ತುಂಬ ಜನಪ್ರಿಯವಾಗಿದ್ದುವು.

ಪೂರ್ವಕಾಲದಲ್ಲಿ ಶಿಲ್ಪವನ್ನು ಬಣ್ಣಗಳಿಂದ ಅಲಂಕರಿಸುತ್ತಿದ್ದರು. ಗ್ರೀಸ್ ಮತ್ತು ರೋಮ್‍ದೇಶಗಳಲ್ಲಿ ಈ ಪದ್ಧತಿಯಿದ್ದಿತು. ಗಾತಿಕ್ ಶಿಲ್ಪಗಳ ಮೇಲೆ ದಟ್ಟವಾಗಿ ಬಣ್ಣಗಳನ್ನು ಬಳಿಯುತ್ತಿದ್ದರು. ಸ್ಪೇನ್‍ದೇಶದ ಶಿಲ್ಪಿಗಳು ಶಿಲ್ಪಕೃತಿಗಳನ್ನು ಮಾಡಿ ಸಹಜ ಬಣ್ಣಗಳಿಂದ ಅವನ್ನು ಅಲಂಕರಿಸಿದಾಗ ನಿಜ ಮನುಷ್ಯರಂತೆ ಭಾಸವಾಗುತ್ತಿದ್ದುವು. ಭಾರತದಲ್ಲಿ ಕೂಡ ಶಿಲ್ಪಗಳ ಮೇಲೆ ಬಣ್ಣ ಬಳಿಯುವ ಪದ್ಧತಿಯಿದ್ದಿತು. ದೇವಾಲಯದಲ್ಲಿ ಧ್ರುವಬೇರಮೂರ್ತಿಗಳಿಗೆ ಹೀಗೆ ಬಣ್ಣದ ಲೇಪನ ವಿರುತ್ತಿತ್ತು. ಪ್ರಪಂಚದಲ್ಲಿ ಈ ಪದ್ಧತಿ ಸುಮಾರು ನಾಲ್ಕುನೂರುವರ್ಷಗಳ ಹಿಂದಿನ ತನಕವೂ ಉಳಿದುಬಂದಿತ್ತೆನ್ನಲು ಆಧಾರವುಂಟು.

    (ಎಸ್.ಕೆ.ಆರ್.)