ಪುಟ:ಅರಮನೆ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ವಂದೆ ಯಾಕ, ಯಿಡೀ ಪಟ್ಟಣದೊಳಗೆ ಯಾರೂ ಯಿರಲಿಲ್ಲ ಹನ್ನೊಬ್ಬರ ಕಣ್ಣೀರೊರೆಸೋದರಲ್ಲಿ, ದುಕ್ಕ ಮಣಗಿಸುವಂಥ ಚಂದನೆಯ ನಾಕು ಮಾತಾಡೋದರಲ್ಲಿ ಆತುಮ ಯಿಸುವಾಸ ತುಂಬೋದರಲ್ಲಿ ಆಸರಾಗೋದರಲ್ಲಿ ಆಕೆಗೆ ಸರಿಸಮಕ್ಕೆ ಬರೋರು ಯಾರೂ ಯಿಲ್ಲ. ಯಂಥಾಕೆಗೆ ಯಂಥ ಗತಿ ಬಂತಪ್ಪಾ ಸಿವ ಸಂಕರ ಮಾದೇವಾss...ಯಂದು ಥಳಗೇರಿಗಳೆಲ್ಲ ಮಮ್ಮಲನ ಮರುಗುತ ಸುಮ್ಮಕ ಕುಂತಿರಲಿಲ್ಲ.. ವಂದಲ್ಲಾ ಎಂದು ಮನೆಯಿಂದ ವಬ್ಬರಲ್ಲಾ ವಬ್ಬರು ಬರೋದು, ಸಮಾಧಾನದ ನಾಕು ಮಾತಾಡೋದು, ಹೋಗೋದು ಮಾಡತಲಿದ್ದರು. ನೂರೊಂದು ದಿವಸಗಳ ಪಠ್ಯಂತ ವಂದಗುಳು ಬಾನ ಮುಟ್ಟದೆ, ಎಂದು ಗುಟುಕು ನೀರು ಕುಡಿಯದೆ ವುಪಾಸಯಿದ್ದು ಮಳೆ ಸುರಿಸಿ ನೂರೆನೇ ದಿವಸದಲ್ಲಿ ಕಣ್ಣು ಮುಚ್ಚಿದ ಮಹಿಮಾನ್ವಿತೆಯಾದ ಲಚುಮವ್ವನ ತೋಪಿನ ಕಡೆಯಿಂದ ಜಡೆತಾತನು, ಕರೆಕುರಿಯಪ್ಪ, ಕೆಂಗುರಿಯಪ್ಪಾವಧೂತರೊಂದಿಗೆ ತಿಪ್ಪಯ್ಯ ಗಾದಯ್ಯ ಮೋದಯ್ಯರೇ ಮೊದಲಾದ ಸಿಸು ಮಕ್ಕಳೊಂದಿಗೆ ಯೇಕತಾರಿ ನುಡಿಸುತ್ತ, ಜಗದಂಬೆಯ ಗುಣಗಾನ ಮಾಡುತ್ತ ಬಂದು ವಸ್ತಿಯದುರು ಮಂಡೆಕಾಲೂರಿ ಕುಂತು “ಅಯ್ಯಾ ಮೋಬಯ್ಯಾ ಸಾಂಬವಿಗೆ ನೀನು ನಿನ್ನ ಸರೀರವನ್ನು ಬಿಡದಿ ಮಾಡಿಕೊಟ್ಟಿರುವಿರಿ. ನೀನು ಸಾಮಾನ್ಯನಲ್ಲ. ನೀನೇ ಸಾಂಬ ವಿ, ಸಾಂಬವಿಂದೇ ನೀನು” ಎಂದು ತಿಳಿದು ಸಣಮಾಡುತ್ತಿದ್ದೇನೆಂದು ವುದ್ದಂಡ ಪ್ರಣಾಮ ಸಲ್ಲಿಸಲು ಸಿಸುಮಕ್ಕಳು ಸಿವನಾಮ ಪಾರೊತಿ ಪತಿ ಹರ ಹರ ಮಾದೇವಾss ಯಂದು ಜಯಘೋಷ ಮಾಡಿದರು. “ದಮ್ಮಿನ ಮ್ಯಾಲ ದಮ್ಮೆಳೆದು ನಿನ್ನೊಳಗೆಯಿರೋ ತಾಯಿಗೆ ಅಮಲೇರಿಸು” ಯಂದು ನಾಕು ತೊಲಾ ತಂಬಾಕು ತುಂಬಿದ ಮೊಳಾವರೆವುದ್ದ ಯಿದ್ದ ಯಗ್ನಕುಂಡದ ಬಾಯಂತಿದ್ದ ಗುಡುಗುಡಿಯನ್ನು ವಸ್ತಿಯ ಕಮ್ಮೊಳಗಿಟ್ಟನು. “ಯಿಗಾ ಗಟಗಟಾಂತ ವಂದೇ ಗುಟುಕಿಗೆ ಕುಡುದು ತಾಯಿ ಸಾಂಬವಿಯ ಬಾಯಾರಿಕೇನ ತಣುಸು” ಯಂದಂದು ತನ್ನ ಬಗಲಿಂದ ಹೆಂಡ ತುಂಬಿದ್ದ ತತ್ರಾಣಿಯನ್ನು ತಗದು ಕೊಟ್ಟನು. ವಸ್ತಿಯು ವಂದುಸುರಿಗೆ ಚಿಲುಮೇನ ಖಾಲಿ ಮಾಡಿದ್ದು ತಡಾಗಲಿಲ್ಲ ಎಂದು ಗುಟುಕಿಗೆ ತತ್ತರಾಣೀನ ಖಾಲಿ ಮಾಡಿ ಹೋಬ್ಬ ಯಂದು ತೇಗಿದ್ದು ತಡಾಗಲಿಲ್ಲ. ಮತ್ತೆ ತಾಯಿಯ ಹಸುವು ತೀರಿಸಲಕಂತ ವಂದಗೊನೆ ಬಾಳೆಹಣ್ಣು, ವಂದು ಬಿಂದಿಗೆ ನೊರೆವಾಲು.. ...ಜಡೆತಾತನು ಚಿಂತಾಕ್ರಾಂತಳಾಗಿ ಕೂಕಂಡಿದ್ದ ಜಗಲೂರೆವ್ವನ ಬಳಿಗೆ