ಪುಟ:Kanakadasa darshana Vol 1 Pages 561-1028.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಪದಗಳಲ್ಲಿ ಸಂಗೀತ ೬೭೫ ಜಾಯಮಾನ, ಜಾನಪದ ಸಂಸ್ಕೃತಿ ಜಾನಪದ ಕಲೆ ಎನ್ನುವಾಗ ಎಲ್ಲ ವರ್ಗದ ಎಲ್ಲ ಜನರಲ್ಲೂ ಬಳಕೆಯಲ್ಲಿರುವುದು ಎಂದೇ ಅರ್ಥ. ಈ ಮೊದಲು ಕೆಲವು ರಾಗಗಳನ್ನು ಪ್ರಚುರಪ್ರಯೋಗ' ಎಂದು ಬಣ್ಣಿಸಿದಾಗ ಜಾನಪದ ಮೂಲ ಎಂದೇ ತಾತ್ಪರ್ಯ. ಇದರಲ್ಲಿ ಎರಡು ವಿವರಗಳಿವೆ. ಒಂದು, 'ಜಾನೇನ ಜನ್ಮನಾ ಪದ್ಯತೇ ಇತಿ' ಎಂಬ ವ್ಯುತ್ಪತ್ತಿಯಂತೆ, ಕ್ರಮವಾಗಿ ಕಲಿತದ್ದಲ್ಲದೆ, ಸ್ವಭಾವದಿಂದಲೇ ಸಿದ್ಧವಾದದ್ದು ಜಾನಪದ, ಹೆಂಗಸರು ಮುಂಜಾನೆ ಉದಯರಾಗ ಹಾಡುವಾಗ, ಮಕ್ಕಳನ್ನು ತೂಗಿ ಮಲಗಿಸುವಾಗ, ಬತ್ತ ಕುಟ್ಟುವಾಗ, ರಾಗಿ ಬೀಸುವಾಗ, ಗಂಡಸರು ಹೊಲ ಉಳುವಾಗ, ಭಾರ ಎತ್ತುವಾಗ, ನೀರು ಮೊಗೆಯುವಾಗ, ಮಕ್ಕಳು ಆಟವಾಡುವಾಗ ಹೀಗೆ ಹತ್ತು ಹಲವಾರು ಸಂದರ್ಭಗಳಲ್ಲಿ ಹಾಡುವುದಾದರೆ ಅವೆಲ್ಲ ಜಾನಪದವೇ. ಭಜನೆ, ಶೋಭಾನೆ ಪದಗಳೂ, ಹಸೆಹಾಡು ಇವೂ ಈ ಗುಂಪಿಗೆ ಸೇರಿದವು. ಕಡೆಗೆ ನಾಟಕ, ಬಯಲಾಟ ಯಕ್ಷಗಾನಗಳಲ್ಲಿ ಬರುವ ಹಾಡುಗಳೂ ಹೀಗೆ ಇರುವವೇ. ಇಲ್ಲಿ ಎಲ್ಲ ವರ್ಗದವರೂ ಸೇರುತ್ತಾರೆ. ಇಲ್ಲೆಲ್ಲ ಹಾಡುವವರು ಸ್ವರಾಭ್ಯಾಸಮಾಡಿ, ಪದ್ಧತಿಯಂತೆ ಸಂಗೀತವನ್ನೇನು ಕಲಿತಿರುವುದಿಲ್ಲ. ಬಹುಮಟ್ಟಿಗೆ ಕೇಳ್ಮೆಯಿಂದಲೇ, ಅನುಕರಣೆಯಿಂದಲೇ ಅವರ ಸಂಗೀತವೆಲ್ಲ ಸಾಗುವುದು. ಜಾನಪದವೆಂಬಲ್ಲಿ ಸೇರುವ ಇನ್ನೊಂದು ವಿವರ 'ಜನಸ್ಯ ಲೋಕಸ್ಯ ಪದಂ ಆಶ್ರಯಸ್ಥಾನಂ' ಎನ್ನುವುದು. ಸಾಮಾನ್ಯ ಜನರಿಗೆಲ್ಲ ಯಾವುದು ಒಂದು ನೆಲೆಯನ್ನು ಒದಗಿಸುವುದೋ ಅದು ಜಾನಪದ, ಅದೇ ಜಾನಪದ. ಒಂದೊಂದು ಪ್ರದೇಶದಲ್ಲಿ ಒಂದೊಂದು ಜಾನಪದ ಚೌಕಟ್ಟು ಮತ್ತು ಜನರೆಲ್ಲರ ಅನಿಸಿಕೆಗಳು, ಆಶೋತ್ತರಗಳು, ಉತ್ಸಾಹ, ಧರ್ಮ-ಕರ್ಮ ಎಲ್ಲವನ್ನೂ ಸ್ಪಷ್ಟಗೊಳಿಸುವುದು ಜಾನಪದ (ನಃ ಪದಂ ವಸ್ತು ಯಸ್ಯ) ಜನರೆಲ್ಲರ ದಿನನಿತ್ಯದ ಬದುಕೇ ಜಾನಪದದ ವಸ್ತು. ದಾಸರ ಪದಗಳಲ್ಲಿ ನಾವು ಕಾಣುವುದು ಇದನ್ನೇ. ಇದನ್ನು ಜಾನಪದ ಮೂಲವೆಂದರೆ ತಪ್ಪೇನು ? ಜಾನಪದವಲ್ಲದ್ದೂ ಇದೆ ; ಅದನ್ನು 'ಶಿಷ್ಟ' ಎಂದು ಬೇರ್ಪಡಿಸುವುದೂ ಉಂಟು. ನಮ್ಮ ಸ್ಮೃತಿಗ್ರಂಥಗಳಲ್ಲಿ ಒಂದು ಮಾತು ಮತ್ತೆ ಮತ್ತೆ ಬರುತ್ತದೆ'ಜಾತಿಜಾನಪದಾನ್ ಧರ್ಮಾನ್ ಶ್ರೇಣೀಧರ್ಮಾಂಶ್ಚ ಧರ್ಮವಿತ್.' ಇಲ್ಲಿ ಜಾನಪದ ಧರ್ಮ, ಶ್ರೇಣೀಧರ್ಮ ಎಂದು ವಿಂಗಡಿಸಿ ಹೇಳಿದೆ. ಈ ಸಂದರ್ಭದಲ್ಲಿ ಶ್ರೇಣಿಯೆಂದರೆ ಕಾರ್ಮಿಕರು, ಕರಕುಶಲ ಕಲಾಕಾರರು, ಪಂಡಿತರು, ಅಧಿಕಾರಿಗಳು, ಪುರೋಹಿತರು ಮೊದಲಾಗಿ ಬೇರೆ ಬೇರೆ ವರ್ಗಗಳಿಗೆ ಸೇರಿದವರು. ಆಯಾ ವೃತ್ತಿಗೆ ಅನುಕೂಲವಾದ ಧರ್ಮ ಶ್ರೇಣೀಧರ್ಮ ; ಪಂಡಿತ ಪುರೋಹಿತರೋ ತಮ್ಮ ಮನೋವೃತ್ತಿಗೆ, ಉದ್ಯಮಕ್ಕೆ ಅನುಗುಣವಾಗಿ ಏರ್ಪಡಿಸಿಕೊಂಡದ್ದನ್ನು ಶ್ರೇಣೀ ಧರ್ಮವೆನ್ನೋಣ. ಆದರೆ ಅವರಿಗೂ ಹುಟ್ಟಿನಿಂದಲೇ ಬಂದ ಪ್ರವೃತ್ತಿಗಳಿರುವುವಷ್ಟೆ ಅವನ್ನು 'ಜಾತಿ (ಎಂದರೆ ಹುಟ್ಟಾ) ಜಾನಪದ ಧರ್ಮ'ವೆಂದು ಕರೆದಿದ್ದಾರೆ. ಕನಕದಾಸರದ್ದು ಜಾನಪದಸಂಗೀತ ಎನ್ನುವಾಗ, ಜನರ ನಡುವೆ ಸಹಜವಾಗಿ ಹರಡಿಕೊಂಡಿದ್ದ ಹಾಡುವ ಪರಿಕರಗಳನ್ನೇ ಅವರು ಬಳಸಿಕೊಂಡರು ಎಂದಷ್ಟೆ ಅರ್ಥ, ಹಸೆಹಾಡು, ಶೋಭಾನೆ ಪದ, ಭಜನೆ, ಲಾವಣಿ, ನಾಟಕ ಅಥವಾ ಬಯಲಾಟದ ಹಾಡು ಇವೆಲ್ಲ ಸಂಗೀತಪ್ರಕಾರಗಳೇ ; ಆದರೆ ಹಾಡುವವರಿಗೆ ಇದು ಈ ರಾಗ', 'ಈ ತಾಳ' ಎಂಬ ನಿಶ್ಚಿತ ತಿಳಿವಳಿಕೆ ಇರಬೇಕಾದುದಿಲ್ಲ. ಬಹುಮಟ್ಟಿಗೆ ಇರುವುದಿಲ್ಲ. ಆದರೂ ಅವರ ಹಾಡಿನಲ್ಲಿ ರಾಗ, ತಾಳಗಳು ಇದ್ದೇ ಇರುತ್ತದೆ ; ತುಂಬ ಸಂತೋಷವನ್ನೇ ತರುತ್ತವೆ. ಅವನ್ನು ನಾವು ಕೇಳುವಾಗಲೂ ಇದು ಇಂಥದೇ ರಾಗವೆಂದು ನಾವು ಗುರುತಿಸುವುದೂ ಎಷ್ಟೋವೇಳೆ ಕಷ್ಟವಾಗುತ್ತದೆ. ನನಗೆ ತಿಳಿದ ಹಲವು ರಾಗಗಳ ನೆರಳು ಒಂದರ ಮೇಲೊಂದು ಬಿದ್ದಿರುವುದೂ ಉಂಟು. ಕೆಲವು ರಾಗಗಳು ಬೆರಕೆಗೊಳ್ಳುವುದೂ ಉಂಟು. ಆದರೆ ನಮಗೆ ಹೀಗೆ ಒದಗುವ ತೊಂದರೆ ಸಾಮಾನ್ಯ ಜನರಿಗೆ ಒದಗುವುದಿಲ್ಲ. ಅವರಿಗೆ ಇದು ಯಾವ ರಾಗ, ಅದರ ಸ್ವರಸಂಚಾರ ಏನು, ಎಷ್ಟನೆಯ ಮೇಳ ಎಂಬೆಲ್ಲ ಕಳವಳವಿಲ್ಲ ! ಇಲ್ಲಿ ದೋಷ ಯಾರದ್ದು ? ನಮ್ಮದೇ ಎಂದು ನನ್ನ ಎಣಿಕೆ. ನಮ್ಮ ಮನಸ್ಸಿನಲ್ಲಿರುವ ರಾಗಲಕ್ಷಣಕ್ಕೆ, ನಾವು ಶಾಸ್ತ್ರದಿಂದಲೋ ಅಭ್ಯಾಸದಿಂದಲೋ ಗೊತ್ತುಮಾಡಿಕೊಂಡ ರಾಗಸ್ವರೂಪಕ್ಕೆ ಅನುಗುಣವಾಗಿಯೇ ದಾಸರ ಹಾಡು, ಹಸೆಯ ಹಾಡು, ಶೋಭಾನೆಯ ಪದ, ನಾಟಕದ ಹಾಡು ಇರಬೇಕೆಂದು ನಿರೀಕ್ಷಿಸುತ್ತೇವಲ್ಲ ? ನಮಗೆ ತಿಳಿದ ರಾಗಭಾವ ನಾವು ಕೇಳಿದ ಜಾನಪದ ಹಾಡಿನಲ್ಲಿ ಇದ್ದರೆ ಸರಿ; ಇಲ್ಲವಾದರೆ ಆ ಹಾಡಿನಲ್ಲಿ ರಾಗಭಾವವೇ ಇಲ್ಲ ಎಂದೋ ಹಾಡುವವರಿಗೆ ರಾಗಜ್ಞಾನವಿಲ್ಲ ಎಂದೋ ನಿಶ್ಚಯಿಸಿಬಿಡುತ್ತೇವೆ. ನಮಗೆ ತಿಳಿದ ರಾಗವೇ ರಾಗ, ಅದರ ಭಾವ ಎಂದು ನಮ್ಮ ಹಟ. ಆದರೆ ನಮ್ಮ ರಾಗದ ಕಲ್ಪನೆ ಶಾಸ್ತ್ರೀಯವಾದದ್ದು. ನಾವು ಕೇಳುವ