ಪುಟ:ಹಳ್ಳಿಯ ಚಿತ್ರಗಳು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ರತ್ನಳ ಮದುವೆಗೆ ಹೋದುದು

೧೫

ಒಂದು ಗಾಡಿಯ ಚಾಡು, ಗಾಡಿಯಲ್ಲಿದ್ದವರು ನಾವು ೩ ಜನ, ಗಾಡಿ ಹೊಡೆಯುತ್ತಿದ್ದವನೊಬ್ಬ; ಒಟ್ಟು ನಾಲ್ಕು ಜನ. ಆದರೆ ಗಾಡಿಗೆ ಏನಾದರೂ ಸಮತೂಕ ಬರಲಿಲ್ಲ. ನಾನು ಸ್ವಲ್ಪ ದಪ್ಪ ಆಸಾಮಿ. ನಮ್ಮ ನೆಂಟರೊಬ್ಬರು ಮುದುಕರು, ಮತ್ತೊಬ್ಬ ಹುಡುಗ; ಗಾಡಿಯವನೊಬ್ಬ ಹುಡುಗ, ಎತ್ತು ಚಂಗನೆ ಹಾರಿತು. ಹಾಗೂ ಹೀಗೂ ಸ್ವಲ್ಪ ದೂರ ಹೋದಮೇಲೆ ಸುಮ್ಮನೆ ನಿಂತು ಬಿಟ್ಟಿತು. ಎಷ್ಟು ಹೊಡೆದರೂ ಪ್ರಯೋಜನವಾಗಲಿಲ್ಲ. ಕಾಲು ಘಂಟೆಯಮೇಲೆ ತಾನೇ ಎದ್ದಿತು. ಅದು ನಮ್ಮ ಭಾವನವರ ಪ್ರೀತಿಯ ಎತ್ತು, ಅದನ್ನು ಅವರು ಹೊಸದಾಗಿ ತರುವಾಗ ನಡೆದ ವಿಷಯ ಜ್ಞಾಪಕ ಬಂದು ನನಗೆ ನಗು ಬಂದಿತು. ಎತ್ತನ್ನು ಹೊಡೆದುಕೊಂಡು ಬರುತ್ತಿದ್ದಾಗ, ದಾರಿಯಲ್ಲಿ ಬರುತ್ತಿದ್ದ ಒಬ್ಬ ಮುದುಕರು ಅವರನ್ನು ಕುರಿತು "ಏನಯ್ಯ, ಹೋರಿಗರುಗಳಿಗೆ ಏನು ಕೊಟ್ಟೆ. ಚೆನ್ನಾಗಿದೆ" ಎಂದರು. ನಮ್ಮ ಭಾವನವರು "೨೬೦ ರೂಪಾಯಿ ಕೊಟ್ಟಿ, ಚೆನ್ನಾಗಿಲ್ಲದೆ ಏನು? ನೋಡಿ ಹೇಗೆ ಮೆಲುಕು ಹಾಕುತ್ತವೆ?” ಎಂದರು. ಮುದುಕರು ನಗುತ್ತಾ “ಮೆಲಕುಹಾಕೋದೊಂದೇ ಅಲ್ಲಯ್ಯ, ಸಗಣೀನೂ ಹಾಕುತ್ತವೆ" ಎಂದರು. ನಮ್ಮ ಭಾವನವರ ಮುಖ ಪೆಚ್ಚಾಯಿತು. ಆ ಮೆಲುಕು ಮತ್ತು ಸಗಣಿ ಹಾಕುತ್ತಿದ್ದ ಜೋಡಿ ಇವು.

ದಾರಿಯಲ್ಲಿ ಬೇಕಾದಷ್ಟು ಹಳ್ಳತಿಟ್ಟುಗಳಿದ್ದುವು. ನಮ್ಮ ಮುದಿ ನೆಂಟರು ತಮ್ಮ ಬಾಲ್ಯದಲ್ಲಿ ಯಾವಾಗಲೋ ಒಂದು ಸಲ ಗಾಡಿಯಿಂದ ಬಿದ್ದು, ಬೆನ್ನು ಮೂಳೆಗೆ ಅಪಾಯವನ್ನು ತಂದುಕೊಂಡಿದ್ದರಂತೆ. ಈಚೆಗೆ ಅವರು ಗಾಡಿಯಲ್ಲಿ ಕೂರುವುದೆಂದರೆ ಒಂದು ಅಶ್ವಮೇಧವನ್ನು ಮಾಡಿದಂತೆ. ಗಾಡಿ ಸ್ವಲ್ಪ ಓರೆಯಾದರೆ ತೀರಿತು. ಲೊ ಲೋ ಲೋ ಎಂದು ಹೇಳುತ್ತಾ ಕೆಳಕ್ಕೆ ಧುಮುಕಿಯೇ ಬಿಡುತ್ತಿದ್ದರು. ನಾವು ೨ ಮೈಲು ಹೋಗುವುದರೊಳಗಾಗಿ ೫ ಸಲ ಕೆಳಕ್ಕೆ ಧುಮುಕಿದರು. ಅವರ ಅವಸ್ಥೆಯನ್ನು ನೋಡಿ ನನಗೆ ತಡೆಯಲಾರದಷ್ಟು ನಗು ಬಂದಿತು.

ಇನ್ನು ೧/೨ ಮೈಲು ಹೋಗಿದ್ದರೆ, ಹೊಳೆ ಸಿಕ್ಕುವುದರಲ್ಲಿದ್ದಿತು. ಎದುರಿಗೆ ರಸ್ತೆಯಲ್ಲಿ ಯಾರೋ ಒಬ್ಬರು ಕೆಂಪು ಶಾಲನ್ನು ಹೊದೆದುಕೊಂಡು ಕೊಡೆಯನ್ನು ಬಿಚ್ಚಿ ಹಿಡಿದುಕೊಂಡು ಬರುತ್ತಿದ್ದರು. ಅವರನ್ನು ಎತ್ತು