ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರುಷಸೂಕ್ತ

ವಿಕಿಸೋರ್ಸ್ದಿಂದ

ಪುರುಷಸೂಕ್ತ - ಋಗ್ವೇದದ ಹತ್ತನೆಯ ಮಂಡಲದ ತೊಂಬತ್ತನೆಯ ಸೂಕ್ತ. ಸೃಷ್ಟಿಕರ್ತೃವನ್ನು ಒಬ್ಬ ವಿರಾಜಪುರುಷನೆಂದು ಭಾವಿಸಿಕೊಂಡು ಆತನನ್ನೆ ಈ ಸೂತ್ರದ ದೇವತೆಯನ್ನಾಗಿ ಪರಿಗಣಿಸಲಾಗಿದೆ.

ಮಾನವನ ಬೌದ್ಧಿಕ ಬೆಳವಣಿಗೆ ಅನ್ವೇಷಣೆ ಹಾಗೂ ಸಮೀಕ್ಷೆಯ ಔನ್ಯತ್ಯವನ್ನೇರಿದಾಗ ತಾನು ಮತ್ತು ತನ್ನ ಪರಿಸರದ ಅಂತೆಯೆ ಅದರಿಂದಾಚೆಯ ಸೃಷ್ಟಿ ಇವುಗಳ ಹಿಂದೆ ರಹಸ್ಯವೇನಾದರೂ ಇದ್ದರೆ ಇದನ್ನು ತಿಳಿಯುವುದು ಹೇಗೆ ಎಂಬುದನ್ನು ವಿಚಾರಿಸತೊಡಗಿದ. ಅವನ ಆ ಪ್ರಯತ್ನ ಘನೀಭೂತವಾಗಿ ಒಂದು ನಿಶ್ಚಿತರೂಪ ತಳೆದು ಋಗ್ವೇದದಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ಅದರ ಹತ್ತನೆಯ ಮಂಡಲದ 81,82,121,129 ಈ ಸೂಕ್ತಗಳೂ ಪುರುಷಸೂಕ್ತದಂತೆ ವಿಶ್ವ ರಹಸ್ಯ ಭೇದನದ ವೈಚಾರಿಕ ಸೂಕ್ತಗಳು.

ಇಂಥ ವಿವೇಚನಗಳು ಪುರಾತನ ಗ್ರೀಸಿನ ತಾತ್ತ್ವಿಕ ಕೃತಿಗಳಲ್ಲಿ ಹಾಗೂ ಬೈಬಲಿನಂಥ ಇತ್ತೀಚಿನ ಧಾರ್ಮಿಕ ಕೃತಿಗಳಲ್ಲಿ ಕಂಡುಬಂದರೂ ಈ ಜಟಿಲ ಸಮಸ್ಯೆಯ ಪರಿಷ್ಕಾರವಾದ ವಿಶ್ಲೇಷಣೆ ಕಂಡುಬರುವುದು ಋಗ್ವೇದದಲ್ಲಿಯೆ. ಇದರಲ್ಲಿ ಗಾಯತ್ರೀ ಮಂತ್ರವನ್ನು ಬಿಟ್ಟರೆ ಪುರುಷಸೂಕ್ತ ಹೆಚ್ಚು ಧ್ಯಾನೋಪಯೋಗ್ಯ, ಶ್ರೇಷ್ಠ, ಗಹನ, ಅಲ್ಲದೆ ಪರಮಪುರುಷ ಪರಬ್ರಹ್ಮನ ಸ್ವರೂಪ ಅವನ ಶಕ್ತಿಸಾಮಥ್ರ್ಯಗಳು. ಸೃಷ್ಟಿ ಕ್ರಿಯೆಯ ವಿವರಣೆ, ವೇದಾದಿಗಳ ಉತ್ಪತ್ತಿ, ಯಜ್ಞದ ಸ್ವರೂಪ ಮೊದಲಾದ ಮಹತ್ತ್ವದ ಸಂಗತಿಗಳು ಇದರಲ್ಲಿ ಅಡಕವಾಗಿವೆ.

ಈ ಸೂಕ್ತದಲ್ಲಿ ಹದಿನಾರು ಮಂತ್ರಗಳಿವೆ. ನಾರಾಯಣ ಇದರ ಋಷಿ, ಪುರುಷನೇ ದೇವತೆ. ಮೊದಲ ಹದಿನೈದು ಮಂತ್ರಗಳು ಅನುಷ್ಟುಪ್ ಛಂದಸ್ಸಿನಲ್ಲಿದ್ದು ಕಡೆಯದು ತ್ರಿಷ್ಟುಪ್ ಛಂದಸ್ಸಿನಲ್ಲಿದೆ. ಈ ಸೂಕ್ತದ ಧ್ಯಾನ-ಜಪಗಳಿಗೆ ಫಲಶ್ರುತಿಯನ್ನೂ ಹೇಳಲಾಗಿದೆ.

ಈ ಸೂಕ್ತ ಅಲ್ಪಸ್ವಲ್ಪ ವ್ಯತ್ಯಾಸಗಳೊಡನೆ ಕೃಷ್ಣಯಜುರ್ವೇದದ ತೈತ್ತಿರೀಯ ಅರಣ್ಯಕ, ಶುಕ್ಲ ಯಜುರ್ವೇದದ ವಾಜಸನೇಯ ಸಂಹಿತೆ. ಅಥರ್ವವೇದಗಳಲ್ಲೂ ಪಠಿತವಾಗಿದೆ. ಇದಲ್ಲದೆ ಇದರ ಕೆಲವು ಭಾಗಗಳ ವಿವರಣೆ ಶತಪಥಬ್ರಾಹ್ಮಣ, ತೃತ್ತಿರೀಯ ಬ್ರಾಹ್ಮಣ, ತೃತ್ತಿರೀಯ ಅರಣ್ಯಕ, ಬೃಹದಾರಣ್ಯಕೋಪನಿಷತ್ತು, ಶ್ವೇತಾತ್ವತರೋಪನಿಷತ್ತು ಮತ್ತು ಯಾಸ್ಕನ ನಿರುಕ್ತಗಳಲ್ಲೂ ಕಂಡುಬರುತ್ತದೆ.

ಇಲ್ಲಿಯ ಹದಿನಾರು ಮಂತ್ರಗಳು ಹೀಗಿವೆ; 1. ಆದಿಪುರುಷ ಸಾವಿರ (ಅಸಂಖ್ಯಾತ) ಶಿರಸ್ಸುಳ್ಳವ, ಸಾವಿರ ಚಕ್ಷುಸ್ಸುಳ್ಳವ, ಸಾವಿರ ಪದಗಳುಳ್ಳವ. ಆತ ಬ್ರಹ್ಮಾಂಡರೂಪ ವಿಶ್ವವನ್ನು ಎಲ್ಲ ಕಡೆಯಿಂದಲೂ ಸುತ್ತುವರಿದು ಅದಕ್ಕಿಂತಲೂ ಹತ್ತು ಅಂಗುಲದಷ್ಟು ಅತಿಕ್ರಮಿಸಿ ನಿಂತಿದ್ದಾನೆ.

2. ಗೋಚರವಾಗುವ ಈ ಜಗತ್ತು ಮತ್ತು ಯಾವುದು ಹಿಂದೆಲ್ಲ ಇದ್ದಿತೊ ಮುಂದೆ ಯಾವುದು ಸಂಭವಿಸುವುದೊ ಎಲ್ಲವೂ ಆದಿಪುರುಷನೇ. ಪ್ರಾಣಿಗಳಿಗೆ ಅನ್ಯರೂಪದಿಂದ (ವಸ್ತುರೂಪ) ಆತ ಬೆಳೆಯುವಂತೆ ಭಾಸಮನನಾದರೂ ವಸ್ತುತಃ ಅಮೃತತ್ವಕ್ಕೆ ಆತನೇ ಪ್ರಭು.

3. ಇಷ್ಟು ಆತನ ಮಹಿಮೆ. (ಆದರೆ) ಪುರುಷ ಇದಕ್ಕಿಂತಲೂ ಅಧಿಕ ಸಕಲಭೂತಗಳೂ ಆತನ ಕಾಲುಭಾಗ ಮಾತ್ರ. ಮುಕ್ಕಾಲು ಭಾಗ ಸ್ವಪ್ರಕಾಶರೂಪವಾದ ಲೋಕದಲ್ಲಿ ಅಮೃತತ್ವ (ಆವಿಕೃತ) ರೂಪದಲ್ಲಿದೆ.

4. ಮುಕ್ಕಾಲು ಭಾಗವನ್ನು ಊಧ್ರ್ವಲೋಕದಲ್ಲಿ ಪುರುಷ ಸ್ಥಾಪಿಸಿರಲು ಆತನ ಕಾಲು ಭಾಗ ಮಾತ್ರ ಇಹ (ಸಂಸಾರ) ಲೋಕರೂಪದಲ್ಲಿ ಪುನಃಪುನಃ ಆವಿರ್ಭೂತವಾಗುತ್ತದೆ. ಅನಂತರ ಆತ ಅಶನಾಧಾರಿಗಳು (ಪ್ರಾಣಿಗಳು) ಮತ್ತು ಅಶನಾಧಾರಿಗಳಲ್ಲದವುಗಳನ್ನೂ (ಅಚೇತನ) ವ್ಯಾಪಿಸುತ್ತಾನೆ.

5. ಆದಿಪುರುಷನಿಂದ (ವಿವಿಧ ಪ್ರಕಾರವಾಗಿ ರಾಜಿಸುವ) ವಿರಾಟ್ ಬ್ರಹ್ಮಾಂಡ ಉತ್ಪತ್ತಿಯಾಯಿತು. ವಿರಾಟ್ ದೇಹವನ್ನಾಶ್ರಯಿಸಿ (ದೇಹಾಭಿಮಾನಿಯಾದ) ಪುರುಷ ಕಾಣಿಸಿಕೊಂಡ. (ಹೀಗೆ) ಚೇತನಾಚೇತನರೂಪದಲ್ಲಿ ಕಾಣಿಸಿಕೊಂಡು ವಿರಾಡ್ರೂಪಕ್ಕಿಂತಲೂ ಭಿನ್ನವಾದ ದೇವತಿರ್ಯಙï್ಮನುಷ್ಯಾದಿ ರೂಪಗಳನ್ನು ಧರಿಸಿದ. ಅನಂತರ ಭೂಮಿಯನ್ನೂ (ಪಾಂಚಭೌತಿಕ) ಶರೀರ (ಪುಂ)ಗಳನ್ನೂ ನಿರ್ಮಿಸಿದ.

6. ಜಗತ್ ಸೃಷ್ಟಿಯಾದ ಮೇಲೆ ದೇವತೆಗಳು ಪುರುಷಸಂಜ್ಞಕವಾದ ಹವಿಸ್ಸಿನಿಂದ ಯಜ್ಞ ಮಾಡಿದರು. ಇದಕ್ಕೆ ವಸಂತಋತು ಘೃತವಾಯಿತು. ಗ್ರೀಷ್ಮ ಸಮಿಧೆಯೂ ಶರದೃತು ಹವಿಸ್ಸೂ ಆದುವು.

7. ಜಗತ್ ಸೃಷ್ಟಿಗಿಂತಲೂ ಮೊದಲು ಉತ್ಪನ್ನನಾದವನೂ ಯಜ್ಞಕ್ಕೆ ಸಾಧನಭೂತನೂ ಆದ ವಿರಾಟ್ ಪುರುಷನನ್ನು ದರ್ಭೆಯ ಮೇಲೆ ಸ್ಥಾಪಿಸಿ ಪ್ರೋಕ್ಷಣೆ ಮಾಡಿದರು. ಪುರುಷರೂಪವಾದ ಪಶುವನ್ನು ಆಹುತಿಯಾಗಿ ಅರ್ಪಿಸಿ ದೇವತೆಗಳೂ ಸಾಧ್ಯರೂ ಋಷಿಗಳೂ ಎಲ್ಲರೂ ಯಾಗ ಮಾಡಿದರು.

8. ಜಗದ್ರೂಪಿಯಾದ ವಿರಾಟ್ ಪುರುಷನ ಆಹುತಿಯಾಗಿದ್ದ ಆ ಯಜ್ಞದಿಂದ ದಧಿಮಿಶ್ರಿತ ಬೆಣ್ಣೆ ಉತ್ಪನ್ನವಾಯಿತು. ಅನಂತರ ಪಕ್ಷ್ಯಾದಿಗಳನ್ನು ಅರಣ್ಯಕ-ಮೃಗಗಳನ್ನು ಗ್ರಾಮವಾಸಿ ಗೊ-ಅಶ್ವಾದಿಗಳನ್ನೂ ಪುರುಷ ಉತ್ಪತ್ತಿ ಮಾಡಿದ.

9. ಸರ್ವಾತ್ಮಕ ವಿರಾಟ್ ಪುರುಷನೆ ಆಹುತಿಯಾಗಿದ್ದ ಆ ಯಜ್ಞದಿಂದ ಋಕ್ ಮಂತ್ರಗಳೂ ಸಾಮಗಳೂ ಉತ್ಪನ್ನವಾದುವು. ಅದರಿಂದ ಛಂದಸ್ಸುಗಳು ಉತ್ಪನ್ನವಾದುವು. ಯಜಸ್ಸು ಅದರಿಂದ ಉತ್ಪನ್ನವಾಯಿತು.

10. ಎರಡು ಕಡೆ (ಮೇಲೆ ಮತ್ತು ಕೆಳಗೆ) ಹಲ್ಲುಗಳುಳ್ಳ ಅಶ್ವಗಳು ಅದರಿಂದ ಉತ್ಪನ್ನವಾದುವು. ಅದರಿಂದ ಗೋವುಗಳು ಉತ್ಪನ್ನವಾದುವು. ಆಡು-ಕುರಿಗಳೂ ಅದರಿಂದ ಹುಟ್ಟಿದುವು.

11. ವಿರಾಟ್‍ಪುರುಷನನ್ನು ಯಜ್ಞಾಹುತಿಯನ್ನಾಗಿ ಕಲ್ಪಿಸಿದಾಗ ಎಷ್ಟು ಪ್ರಕಾರವಾಗಿ ಅವನನ್ನು ವಿಭಾಗಿಸಿದರು ? ಆತನ ಮುಖ ಯಾವುದು ? ಆತನ ಬಾಹುಗಳು ಯಾವುವು ? ತೊಡೆಗಳೂ ಪಾದಗಳೂ ಯಾವುವು ಎನ್ನಲಾಗಿದೆ ?

12. ಬ್ರಾಹ್ಮಣ ಆತನ ಮುಖ, ಕ್ಷತ್ರಿಯ ಬಾಹು, ವೈಶ್ಯ ತೊಡೆಗಳು, ಶೂದ್ರ ಪಾದಗಳು.

13. ಮನಸ್ಸಿನಿಂದ ಚಂದ್ರ ಹುಟ್ಟಿದ. ಕಣ್ಣಿನಿಂದ ಸೂರ್ಯ ಹುಟ್ಟಿದ, ಮುಖದಿಂದ ಇಂದ್ರ ಮತ್ತು ಅಗ್ನಿ ಹುಟ್ಟಿದರು. ಪ್ರಾಣದಿಂದ ವಾಯು ಹುಟ್ಟಿದ.

14. ನಾಭಿಯಿಂದ ಅಂತರಿಕ್ಷವಾಯಿತು. ಶಿರಸ್ಸಿನಿಂದ ದ್ಯುಲೋಕವಾಯಿತು. ಪಾದಗಳಿಂದ ಭೂಮಿ, ಕಿವಿಯಿಂದ ದಿಕ್ಕುಗಳು ಆದುವು. ಈ ರೀತಿ (ದೇವತೆಗಳು) ಲೋಕಗಳನ್ನು ಕಲ್ಪಿಸಿದರು.

15. ದೇವತೆಗಳು ಯಾಗ ಮಾಡುವವರಾಗಿ ಪುರುಷರನ್ನು ಪಶುವನ್ನಾಗಿ ಕಟ್ಟಿದಾಗ ಈ ಯಜ್ಞಕ್ಕೆ ಏಳು (ಛಂದಸ್ಸುಗಳು) ಪರಿಧಿಯಾದುವು. ಇಪ್ಪತ್ತೊಂದು (ತತ್ತ್ವಗಳು) ಸಮಿಧೆಗಳಾಗಿ ಮಾಡಲ್ಪಟ್ಟುವು.

16. ದೇವತೆಗಳು ಯಜ್ಞದಿಂದ ಯಜ್ಞರೂಪ ಪ್ರಜಾಪತಿಯನ್ನು ಪೂಜಿಸಿದರು. ಆ ಯಜ್ಞಪ್ರಕಾರಗಳೆ ಮುಖ್ಯಧರ್ಮಗಳಾದುವು. ಪುರಾತನರಾದ ಸಾಧ್ಯರೂ ದೇವತೆಗಳೂ ಇರುವ ಸ್ವರ್ಗವನ್ನು ವಿರಾಟ್ ಪುರುಷನನ್ನು ಉಪಾಸಿಸುವ ಮಹಿಮಾವಂತರೂ ಪಡೆಯತ್ತಾರೆ. (ಸಿ.ಜಿ.ವಿ.)