ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂರು

ವಿಕಿಸೋರ್ಸ್ದಿಂದ

ಬೂರು - ಯಾವುದೇ ಅಂಗ ಅಥವಾ ಅಂಗಭಾಗ ಅದರ ಆವರಣ ಪದರದಲ್ಲಿ ಸ್ವಾಭಾವಿಕವಾಗಿ ಇಲ್ಲವೇ ಅಕಸ್ಮಾತ್ತಾಗಿ ಆದ ರಂಧ್ರದ ಮೂಲಕ ಹೊರಚಾಚಿ ಕೊಂಡಿರುವ ಸ್ಥಿತಿ (ಹರ್ನಿಯ). ಅಂತರ್ವೃದ್ಧಿ ಮತ್ತು ಅಂಡ ಪರ್ಯಾಯ ಪದಗಳು. ಬೂರುವಿನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಹುಟ್ಟಿನಿಂದಲೇ ಇದ್ದದ್ದು. ಎರಡನೆಯದು ಹುಟ್ಟಿದ ಬಳಿಕ ಬಂದದ್ದು. ಇವಲ್ಲದೆ ಬೂರು ಹೊಟ್ಟೆಯ ಒಳಗಡೆ ಕಣ್ಣಿಗೆ ಕಾಣಿಸದ ಸ್ಥಳಗಳಲ್ಲಿ ಇರಬಹುದು. ಇದಕ್ಕೆ ಒಳಬೂರು ಎಂದು ಹೆಸರು. ಹಾಗೆಯೇ ನೋಟಕ್ಕೆ ಎಟಕುವ ಸ್ಥಳಗಳಲ್ಲಿರುವುದು ಹೊರಬೂರು.

ಹೆಚ್ಚಾಗಿ ಬೂರುವಿನಿಂದ ಬಾಧಿತವಾಗುವ ಭಾಗಗಳೆಂದರೆ ಸಣ್ಣಕರುಳು, ದೊಡ್ಡಕರಳು ಅಥವಾ ಮುಸುಪರೆ. ಅಪರೂಪವಾಗಿ ಕರುಳಿನ ಸುತ್ತಳತೆಯ ಒಂದು ಭಾಗ ಮಾತ್ರ ಬೂರುವಿನಿಂದ ಬಾಧಿತವಾಗುಬಹುದು. ಇದಕ್ಕೆ ರಿಚರನ ಬೂರು ಎಂದು ಹೆಸರು. ಹೊರಗೆ ಕಾಣಿಸುವ ಉದರ ಬೂರು ಬೇರೆ ಬಗೆಯವುಗಳಿಗಿಂತ ಹೆಚ್ಚು ಸಾಮಾನ್ಯವಾಗಿದ್ದು ಇದರಲ್ಲಿ ತೊಡೆಸಂದಿನ, ಅಂಕದ ಮತ್ತು ಹೊಕ್ಕಳಿನ ಬೂರುಗಳೆಂಬ ವಿಧಗಳುಂಟು. ಬೂರುಗಳ ಪೈಕಿ 73% ತೊಡೆಸಂದಿನವು. 17% ಅಂಕದವು, 8.5% ಹೊಕ್ಕಳಿನವು ಮತ್ತು 1.5% ಉಳಿದ ಬಗೆಗಳವು. ಕೆಲವು ವರ್ಷಗಳಿಂದ ಬಂದ ಕೆಮ್ಮಲು, ಉಬ್ಬಸ ಹಾಗೂ ಮಲ ಅಥವಾ ಮೂತ್ರದ ತಡೆಗಳು ಬೂರಿನ ಹೆಚ್ಚಳಕ್ಕೆ ಕಾರಣೀಭೂತವಾಗಿರುತ್ತದೆ. ಆದ್ದರಿಂದ ಬೂರುವಿನ ಶಸ್ತ್ರಚಿಕಿತ್ಸೆಗೆ ಮೊದಲು ಇವುಗಳ ಚಿಕಿತ್ಸೆಯಾಗಬೇಕು. ಬೂರುವನ್ನು ಗುಣಪಡಿಸಲು ಶಸ್ತ್ರ ಚಿಕಿತ್ಸೆಯ ಮಾರ್ಗ. ಹಾಗೆಯೇ ಮುಂದುವರಿಯುವಂತೆ ಬಿಟ್ಟರೆ ಇದನ್ನು ಒಳಕ್ಕೆ ತಳ್ಳಲು ಸಾಧ್ಯವಾಗದೆ ಇದು ನಿರಂತರವಾಗಿ ಹೊರಗೇ ಉಳಿಯಬಹುದು ಅಥವಾ ಡೊಕ್ಕರಿಸಿಕೊಳ್ಳಬಹುದು. ಡೊಕ್ಕರಿಕೆ ಗೊಳಗಾದ ಕರುಳಿನ ಭಾಗ ಕೊಳೆತು ಹೋಗಬಹುದಾದ್ದರಿಂದ ಒಡವೆ ಅದನ್ನು ಕತ್ತರಿಸಿ ತೆಗೆಯ ಬೇಕಾಗಬಹುದು. (ಟಿ.ಎನ್.ವಿ.)