ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿವಿಯ ರೋಗಗಳು
ಕಿವಿಯ ರೋಗಗಳು
ಕಿವಿಯ ರೋಗಗಳನ್ನು ಉಲ್ಲೇಖಿಸುವಾಗ ಕಿವಿಯನ್ನು ಹೊರಗಿವಿ (ಕರ್ಣ), ಒಳಗಿವಿ ಮತ್ತು ಇವೆರಡರ ಮಧ್ಯದ ನಡುಗಿವಿ-ಎಂಬ ಭಾಗಮಾಡಿಕೊಂಡು ಆಯಾ ಭಾಗಕ್ಕೆ ಸಂಬಂಧಿಸಿದ ರೋಗಗಳನ್ನು ಪರಿಶೀಲಿಸುವುದು ವಾಡಿಕೆ.
ಹೊರಗಿವಿಯ ರೋಗಗಳು: ತಲೆಯ ಪಕ್ಕದಲ್ಲಿ ಅಂಟಿಕೊಂಡಂತೆ ಕಾಣುವ ಉಪವರ್ಣ (ಪಿನ್ನ ಅಥವಾ ಆರಿಕಲ್) ಮತ್ತು ಒಳಗೆ ಹೋಗುವ ಶ್ರವಣನಾಳ ಎರಡೂ ಸೇರಿ ಹೊರಗಿವಿ ಎನ್ನಿಸಿಕೊಳ್ಳುತ್ತವೆ. ಉಪವರ್ಣದೊಳಗಿರುವ ಮೃದ್ವಸ್ಥಿ ಅದನ್ನು ನೆಟ್ಟಗೆ ನಿಲ್ಲುವಂತೆ ಮಾಡುತ್ತದೆ. ನಾಳದ ಸ್ವಲ್ಪ ಭಾಗ ಮೃದ್ವಸ್ಥಿಯಿಂದಲೂ ಉಳಿದ ಭಾಗ ಗಟ್ಟಿಯಾದ ಎಲುಬಿನಿಂದಲೂ ರೂಪಗೊಂಡಿವೆ.
ಉಪವರ್ಣದ ಹುಟ್ಟು ವಿಕಾರಗಳು: ಉಪವರ್ಣವೇ ಇಲ್ಲದಿರುವುದು ಅಥವಾ ಇದ್ದರೂ ಅಖಂಡವಾಗಿರದೆ ಸ್ವಲ್ಪಭಾಗ ಮಾತ್ರ ಇರುವುದು, ಚರ್ಮದ ಭಾಗವಿದ್ದು ಮೃದ್ವಸ್ಥಿಯ ಭಾಗ ರೂಪಗೊಳ್ಳದಿರುವುದು ಒಂದು ರೀತಿಯ ವಿಕಾರವೇ. ಇನ್ನೂ ಕೆಲವು ವೇಳೆ ಹೊರಗಿವಿಯ ಶ್ರವಣನಾಳಗಳೇ ರೂಪುಗೊಳ್ಳದಿರುವುದೂ ಅಥವಾ ನಾಳವಿದ್ದರೂ ತೂತಿಲ್ಲದಿರುವುದೂ ಉಂಟು. ಶ್ರವಣನಾಳದಲ್ಲಿ ಅಡ್ಡಪೊರೆ ಬಂದು ನಾಳವನ್ನು ಎರಡು ಭಾಗಗಳಾಗಿ ಮಾಡಿರಬಹುದು. ಈ ವಿಕಾರಗಳಿಂದ ಕಿವುಡು ಸಂಭವಿಸುವುದುಂಟು. ಹೊರಗಿನ ವಿಕಾರಗಳನ್ನು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲು ಸಾಧ್ಯ. ಶ್ರವಣನಾಳದ ತೂತು ಮುಚ್ಚಿಕೊಂಡಿದ್ದರೆ ಶಸ್ತ್ರಚಿಕಿತ್ಸೆಯಿಂದದನ್ನು ಸರಿಪಡಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟಸಾಧ್ಯ.
ಉಪಪರ್ಣಗಳಿಗೆ ಪೆಟ್ಟು : ಉಪಪರ್ಣಗಳಿಗೆ ಪೆಟ್ಟು ಬಿದ್ದು ರಕ್ತಗಟ್ಟಿ ಊದಿಕೊಳ್ಳಬಹುದು (ಹ್ಯಾಮಟೋಮ). ಇದನ್ನು ಚಿಕಿತ್ಸೆಗೊಳಪಡಿಸದೆ ಹಾಗೇ ಬಿಟ್ಟರೆ ಉಪಪರ್ಣಗಳು ವಿಕಾರವಾಗಿ ಕಾಲಿಫ್ಲವರ್ ರೀತಿಯಾಗಬಹುದು. ವಿಂಡೋ ಆಪರೇಷನ್ ಮೂಲಕ ಸರಿಪಡಿಸಬಹುದು. ಸ್ವಾಭಾವಿಕ ಸ್ಥಿತಿಗೆ ಬರುವಂತೆ ಚಿಕಿತ್ಸೆ ಮಾಡಿ ಸರಿಪಡಿಸಬಹುದು.
ಉಪಪರ್ಣಗಳ ಸೋಂಕು: ಏಟು ಬಿದ್ದ ಅನಂತರ ರಕ್ತ ಕಟ್ಟಿರುವಾಗ ಅದರ ಮೂಲಕ ಮೃದ್ವಸ್ಥಿಗೆ ಸೋಂಕು ಆಂಟಬಹುದು. ಕಿವಿಯ ಹಿಂಬದಿಯಲ್ಲಿರುವ ತಲೆ ಬುರುಡೆಯ ಮ್ಯಾಸ್ಪಾಯಿಡ್ ಎಲುಬಿನ ಶಸ್ತ್ರಚಿಕಿತ್ಸೆ ನಡೆಸಿದಾಗಲೂ ಮೃದ್ವಸ್ಥಿಗೆ ಸೋಂಕುಂಟುವ ಸಾಧ್ಯತೆ ಇದೆ. ಉಪಪರ್ಣದ ಊತ, ಕೆಂಪೇರುವುದು, ನೋವು ಜೊತೆಗೆ ಜ್ವರ-ಇವು ಸೋಂಕಿನ ಲಕ್ಷಣಗಳು, ಬಿಸಿಬಿಸಿ ಶಾಖ, ಬೆಚ್ಚಾರ, ಕೀವುಗಟ್ಟಿದರೆ ಹೊರತೆಗೆಯುವುದು.-ಇವು ಚಿಕಿತ್ಸೆಯ ಕ್ರಮಗಳು. ಪೆರಿಕ್‍ಬಾಂಡ್ರೈಟಿಸ್ ತುಂಬಾ ನೋವಿನಿಂದ ನರಳುತ್ತಾರೆ. ಇದಕ್ಕೆ ಆಂಟಿಬಯೋಟಿಕ್ಸ್ ಇಂಜೆಕ್ಷನ್ ಸಾಕಷ್ಟು ದಿವಸ ನೀಡಿ ಸರಿಪಡಿಸಬೇಕಾಗುತ್ತದೆ. ಮತ್ತು ಉಪಪರ್ಣ ವಿಕಾರವಾಗುವ ಸಾಧ್ಯತೆಗಳು ಹೆಚ್ಚು.
ಕರ್ಣಕುರು: ತಡೆಯಲಸಾಧ್ಯವಾದ ನೋವು ಇಂಥ ಕುರುಗಳ (ಫರಂಕು ಲೋಸಿಸ್) ಮುಖ್ಯಲಕ್ಷಣ, ಮೊದಲಲ್ಲಿ ಶಾಖ ಕೊಟ್ಟು ಕೀವು ತುಂಬಿದ ಅನಂತರ ಶಸ್ತ್ರ ಚಿಕಿತ್ಸೆಯಿಂದ ಅದನ್ನು ನಿವಾರಿಸಬೇಕಾಗಬಹುದು. ಕಿವಿಯನ್ನು ಬಡ್ಸ್ ಕಡ್ಡಿ ಮೂಲಕ ಸ್ವಚ್ಛ ಮಾಡುವುದರಿಂದ ಸಮಾನ್ಯವಾಗಿ ಉಂಟಾಗುವ ಕಾಯಿಲೆ.
ಕರ್ಣಚರ್ಮದ ಉರಿಯೂತ : ಸ್ಟ್ರೆಪ್ಟೊಕಕೈ ಎಂಬ ಏಕಾಣುಜೀವಿಯಿಂದ ಈ ರೋಗ (ಡರ್ಮಟೈಟಿಸ್) ಪ್ರಾಪ್ತವಾಗುತ್ತದೆ. ಹೊಟ್ಟಿನಂತಿರುವ ಸಿಪ್ಪೆ ಮೇಲೆದ್ದು ಅದರಿಂದ ದ್ರವ ಒಸರುತ್ತದೆ. ದ್ರವ ಒಣಗಿ ಹಳದಿ ಬಣ್ಣದ ಹೆಕ್ಕಳಿಕೆಗಳೂ ಆಗುತ್ತವೆ. ಸೋಂಕು ಕತ್ತಿಗೂ ಮತ್ತು ಮುಖಕ್ಕೂ ಹರಡಬಹುದು. ಮೊದಲು ಗಾಯವಾದರೆ ಅದಕ್ಕೆ ಸೊಂಕು ತಗುಲಿ ರೋಗ ಪ್ರಾರಂಭವಾದದ್ದು ಒಬ್ಬರಿಂದೊಬ್ಬರಿಗೆ ನೇರ ಸಂಪರ್ಕದಿಂದ ಅಥವಾ ಸೋಂಕಿನಿಂದ ಮಲಿನವಾದ ಅಂಗವಸ್ತ್ರದಿಂದ ಹರಡುತ್ತದೆ. ಕಿವಿ ಸೋರುವ ಮಕ್ಕಳಲ್ಲಿ ಕೀವು ಚರ್ಮದ ಮೇಲೆ ಹರಿಯದಂತೆ ಸದಾ ಶುಭ್ರವಾಗಿಟ್ಟುಕೊಳ್ಳದಿದ್ದರೂ ಈ ರೋಗ ಪ್ರಾರಂಭವಾಗಬಹುದು. ಇತರೆಡೆಗಳಲ್ಲಿ ಚರ್ಮದ ಉರಿಯೂತದ ಚಿಕಿತ್ಸೆಯೇ ಈ ರೋಗಕ್ಕೂ ಅನ್ವಯಿಸುತ್ತದೆ.
ಇಸಬು: ಕಿವಿಯ ಶಸ್ತ್ರಚಿಕಿತ್ಸೆಯ ಅನಂತರ ಈ ರೋಗ ಹೊರ ಚರ್ಮದಡಿಯಲ್ಲೇ ಸ್ಟ್ರೆಪ್ಟೋಕಾಕೈ ಸೊಂಕಿನಿಂದ ಹರಡುತ್ತದೆ. ಕಿವಿ ಊದಿ ಕೆಂಪಗಾಗುತ್ತದೆ; ಅನಂತರ ಬೊಬ್ಬೆಗಳು ಕಾಣಿಸಿಕೊಳ್ಳುತ್ತವೆ. ಅತಿಯಾದ ಜ್ವರವೂ ಈ ರೋಗದ ಲಕ್ಷಣ. ಕಿವಿಯಿಂದ ತಲೆ ಹಾಗೂ ಮುಖಕ್ಕೂ ಸೋಂಕು ಹರಡುವುದು. ವೈದ್ಯರಿಗೆ ತಕ್ಷಣ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯುವುದಗತ್ಯ.
ಕರ್ಣಗಳ ಹರ್ಪಿಸ್ : ಗುಳ್ಳೆಗಳು ತಂಡ ತಂಡವಾಗಿ ಏಳುವ ಒಂದು ಬಗೆಯ ರೋಗ. ಇತರ ಕಡೆ ಹರ್ಪಿಸ್ ರೋಗ ಕಂಡಾಗ ಕರ್ಣ ಚರ್ಮದ ಮೇಲೂ ಕಾಣಬಹುದು. ಶ್ರವಣನಾಳಕ್ಕೂ ಈ ಗುಳ್ಳೆಗಳು ಹರಡಿರಬಹುದು. ನಿರ್ದಿಷ್ಟ ಚಿಕಿತ್ಸೆ ಇಲ್ಲ. ಕೆಲವೊಮ್ಮೆ ಫೇಷಿಯಲ್ ನರ್ವ್ ಪೆರಾಲಿಸಿಸ್ ಆಗುವ ಸಾಧ್ಯತೆ ಹೆಚ್ಚು.
ಕಣಚರ್ಮ ಕ್ಷಯ: ಸಾಮಾನ್ಯವಾಗಿ ಮುಖ ಚÀರ್ಮ ಅಥವಾ ಲೋಳೆ ಪೊರೆಯಲ್ಲಿ ಕ್ಷಯಕ್ರಿಮಿ ಸೊಂಕಿನ ಗಾಯಗಳಾದಾಗಲೇ ಕರ್ಣಚರ್ಮಕ್ಕೂ ಸೋಂಕು ಹಾಯುತ್ತದೆ. ಈ ರೋಗದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ಗಾಯದ ಕೆಲವು ಭಾಗ ಒಣಗಿ ಕಲೆ ನಿಂತಿರುವಂತೆಯೇ ಮತ್ತೊಂದೆಡೆ ಹರಡುವ ಲಕ್ಷಣವೂ ಕಂಡುಬರುತ್ತದೆ. ಗಾಯ ಹುಣ್ಣಾಗಿ ಒಳಗಿರುವ ಮೃದ್ವಸ್ಥಿ ನಾಶವಾಗುತ್ತದೆ.
ಶ್ರವಣನಾಳದ ರೋಗಗಳು: ನಾಳದಲ್ಲೇಳುವ ಕುರುಗಳು: ಈ ಕುರುಗಳೂ ಕರ್ಣಕುರುಗಳಂತೆಯೇ. ತಡೆಯಲಾಗದ ನೋವೇ ಮುಖ್ಯ ಲಕ್ಷಣ. ಈ ನೋವು ತಲೆಗೂ ದವಡೆಗಳಿಗೂ ಹರಡಬಹುದು. ಹೊರೆಗೆ ಊತ ಕಾಣಿಸಿಕೊಳ್ಳುತ್ತದೆ. ಉಪಪರ್ಣವನ್ನಲ್ಲಾಡಿಸಿದರೆ ನೋವು ಹೆಚ್ಚಾಗುತ್ತದೆ. ಕುರು ದೊಡ್ಡದಾಗಿ ಶ್ರವಣನಾಳವನ್ನು ಮುಚ್ಚಿದರೆ ಕಿವಿ ಕಿವುಡಾಗುತ್ತದೆ. ಕುರು ಒಡೆದರೆ ಕೀವು. ರಕ್ತ ಹೊರ ಹರಿದು ನೋವು ಕಡಿಮೆಯಾಗುತ್ತದೆ. ಪ್ರಾರಂಭದಲ್ಲಿ ಶಾಖ ಕೊಡಬೇಕು. ಪೂತಿ ನಾಶಕಗಳಿಂದ ಚಿಕಿತ್ಸೆ ಕೊಡಬೇಕು. ಸ್ವಲ್ಪ ಅಥವಾ ಪ್ರತಿಜೀವಕಗಳನ್ನು ವೈದ್ಯರ ಸಲಹೆಯ ಮೇರೆಗೆ ಕೊಡಬೇಕಾಗುತ್ತದೆ. ಶಸ್ತ್ರ ಚಿಕಿತ್ಸೆ ಮಾಡಿ ಕೀವನ್ನು ತೆಗೆಯ ಬೇಕಾಗಬಹುದು.
ಶ್ರವಣನಾಳದ ಉರಿಯೂತ : ನಾಳ ಹಾಗೂ ಕಿವಿಯ ಒಳಪೊರೆ ಈ ಉರಿಯೂತಕ್ಕೊಳಗಾಗುತ್ತದೆ. ರೋಗ ಸೌಮ್ಯವಾಗಿ ಇರಬಹುದು ಅಥವಾ ಉಲ್ಬಣಿಸಬಹುದು. ಕಿವಿಯೊಳಗೆ ಕಡ್ಡಿ ಹಾಕುವುದು, ಬೆರಳುಗಳಲ್ಲಿ ಕೆರೆದುಕೊಳ್ಳುವುದು ಇತ್ಯಾದಿ ಚೇಷ್ಟೆಗಳಿಂದ ಗಾಯವಾದಾಗ ಗಾಯದ ಮೂಲಕ ಸೊಂಕು ಅಂಟುತ್ತದೆ. ಸ್ಟ್ರೆಪ್ಟೊಕಾಕೈ ಹೀಮೊಲೆಟಿಕಸ್, ಸ್ಟೆಫೆಲೋಕಾಕೈ ಅರಿಯಸ್ ಹಾಗೂ ಸ್ಯೂಡೋಮೋನಾಸ್ ಪಯೋಪಯನಿಯಸ್ ರೋಗಕಾರಕ ಏಕಾಣುಜೀವಿಗಳು ಈ ರೋಗಕ್ಕೆ ಕಾರಣ. ಕೆಲವೊಂದು ವಸ್ತುಗಳು ಒಗ್ಗದಿಕೆ ಹಾಗೂ ಮಾನಸಿಕ ಅಂಶಗಳೂ ಈ ರೋಗಗಳಿಗೆ ಕಾರಣವಾಗಬಹುದು. ಕರ್ಣಕುರುವಿನ ಚಿಕಿತ್ಸೆಯೇ ಈ ವ್ಯಾಧಿಗೂ ಅನ್ವಯಿಸುತ್ತದೆ.
ಶ್ರವಣನಾಳದಲ್ಲಿ ಗುಗ್ಗೆ: ನಾಳದ ಚರ್ಮದಲ್ಲಿರುವ ಗ್ರಂಥಿಗಳು ಗುಗ್ಗೆಯನ್ನು ಉತ್ಪತ್ತಿಮಾಡುತ್ತವೆ. ನಾಳದಲ್ಲಿ ದೂಳು, ಕೊಳೆ ಇತ್ಯಾದಿಯನ್ನು ಹಿಡಿದು ಹೊರಗೆ ಹಾಕಲು ಗುಗ್ಗೆ ಸಹಾಯ ಮಾಡುತ್ತದೆ. ಗುಗ್ಗೆ ಉತ್ಪತ್ತಿ ಕೆಲವರಲ್ಲಿ ಅಷ್ಟಿಲ್ಲ ಮತ್ತೆ ಕೆಲವರಲ್ಲಿ ಅಧಿಕ. ಗಣಿ ಕೆಲಸಗಾರರಲ್ಲಿ, ಬೆಂಕಿ ಉರಿಯೊಂದಿಗೆ ಕೆಲಸ ಮಾಡುವವರಲ್ಲಿ ಹಾಗೂ ಕಸ ಗುಡಿಸುವವರಲ್ಲಿ ಗುಗ್ಗೆ ಉತ್ಪತ್ತಿ ಅಧಿಕ.
ಗುಗ್ಗೆ ಕಿವಿಯಲ್ಲಿ ತುಂಬಿಕೊಂಡಾಗ ವ್ಯಕ್ತಿ ಕಿವುಡನ್ನು ಅನುಭವಿಸಬೇಕಾಗುತ್ತದೆ. ಗುಗ್ಗೆ ತುಂಬಿದ್ದಾಗ ಧ್ವನಿ ತರಂಗಗಳು ಕಿವಿಯ ಒಳಪೊರೆಯ ವರೆಗೆ ಹಾಯುವುದಕ್ಕೆ ಅಡಚಣೆಯುಂಟಾಗಿ ಕಿವುಡಾಗುತ್ತದೆ. ಶ್ರವಣ ನಾಳದಲ್ಲಿ ತುರಿ, ನೋವು, ಶಬ್ದ ಇತ್ಯಾದಿ ಚಿಹ್ನೆಗಳೂ ಕಾಣಿಸಿಕೊಳ್ಳುವುದು ಸ್ನಾನದ ಅನಂತರ ಅಥವಾ ಈಜಿ ಹೊರಬಂದೊಡನೆ ಕಿವುಡು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಗುಗ್ಗೆಯಿಂದ ಗುಗ್ಗೆಯನ್ನು ಪಿಚಕಾರಿಯಿಂದಾಗಲೀ ಇತರ ಸಾಧನದಿಂದಲಾಗಲಿ ಸುಲಭವಾಗಿ ತೆಗೆಯಬಹುದು. ಗುಗ್ಗೆ ಗಟ್ಟಿ ಕಟ್ಟಿದ್ದರೆ ಎರಡು ಮೂರು ದಿನಗಳು ಅದನ್ನು ಔಷಧಗಳಿಂದ ನೆನಸಿ ಮೆದುವಾಗುವಂತೆ ಮಾಡಿ ಅನಂತರ ತೆಗೆಯಬೇಕು. ಶ್ರವಣೇಂದ್ರಿಯ ಬಹಳ ಸೂಕ್ಷ್ಮ. ಗುಗ್ಗೆ ತೆಗೆಯುತ್ತೇನೆಂದು ನಟನೆ ಮಾಡುವ ದಾರಿಗರಿಂದ ಗುಗ್ಗೆ ತೆಗೆಸುವುದ ಅಪಾಯಕರವೆಂದು ಬೇರೆ ಹೇಳಬೇಕಾಗಿಲ್ಲ. ಗುಗ್ಗೆ ಕೆಲವೊಮ್ಮೆ ಚರ್ಮ ಮತ್ತು ಮೂಳೆಯನ್ನು ಕೊರೆದು ಮಿದುಳಿನವರೆಗೂ ತಲಪಿ ಶಾಶ್ವತ ಕಿವುಡತನ ಮತ್ತು ಫೇಷಿಯಲ್ ನರ್ವ್ ಪೆರಾಲಿಸಿಸ್ ಆಗುವ ಸಾಧ್ಯತೆಗಳು ಇರುತ್ತವೆ.
ಶ್ರವಣನಾಳದ ಅಣಬೆರೋಗ: ರೋಗಕಾರಕ ಅಣಬೆಯ ಸೋಂಕು ಶ್ರವಣನಾಳದ ಚರ್ಮಕ್ಕಂಟಿದಾಗ ಈ ರೋಗ ಪ್ರಾರಂಭವಾಗುತ್ತದೆ. ನಾಳರಂಧ್ರದಲ್ಲಿ ಬಿಳಿ, ಕಪ್ಪು ಅಥವಾ ಕಂದು ಬಣ್ಣದ ಒದ್ದೆಯಾದ ಒತ್ತುಕಾಗದದಂತಿರುವ ಹೊಟ್ಟು ಏಳುವುದು. ಈ ರೋಗದ ಮುಖ್ಯ ಲಕ್ಷಣ. ನೈಸ್ಟಾಟಿನ್ ಎಂಬ ಅಣಬೆ ನಾಶಕ ಔಷಧದಿಂದ ಈ ರೋಗ ಪೂರ್ಣ ಗುಣವಾಗುತ್ತದೆ. ಮುಖ್ಯ ಕಾರಣಗಳು ಎಣ್ಣೆ ಹಾಗೂ ನೀರು ಕಿವಿಯ ಒಳಗೆ ಹಾಕುವುದು.
ಶ್ರವಣನಾಳದಲ್ಲಿ ಅನ್ಯವಸ್ತುಗಳು: ಮಕ್ಕಳು ಸಾಮಾನ್ಯವಾಗಿ ಕಿವಿಯೊಳಗೆ ಕಡ್ಡಿ. ಬಳಪ, ಬೀಜ ಇತ್ಯಾದಿ ಹಾಕಿಕೊಳ್ಳವುದನ್ನು ಎಲ್ಲರೂ ನೋಡಿರುತ್ತಾರೆ. ಇವನ್ನು ಹೊರಗೆ ತೆಗೆಯಬೇಕು. ಬಟಾಣಿ, ಕಡಲೆಕಾಳು ಇತ್ಯಾದಿ ಬೀಜಗಳನ್ನು ತೆಗೆಯಲು ಪಿಚಕಾರಿ ಹೊಡೆಯಬಾರದು. ಅವು ನೀರಿನಿಂದ ಉಬ್ಬಿ ಕಿವಿಗೆ ಅಪಾಯ ತರಬಹುದು. ಕಲ್ಲುಗಳು, ರಬ್ಬರ್ ಇತ್ಯಾದಿ ಉಬ್ಬದಿರುವ ವಸ್ತುಗಳನ್ನು ತಜ್ಞರು ಪಿಚಕಾರಿಯಿಂದ ತೆಗೆಯುತ್ತಾರೆ. ಇದರಿಂದ ಸಾಧ್ಯವಿಲ್ಲದಿದ್ದರೆ ಮಗುವಿಗೆ ಪ್ರಜ್ಞೆ ತಪ್ಪಿಸಿ, ವಸ್ತುವನ್ನು ಹೊರಗೆ ತೆಗೆಯುವ ವಿಶಿಷ್ಟ ಸಾಧನದಿಂದ ತೆಗೆಸುವುದು ಒಳಿತು. ಕೆಲವೊಮ್ಮೆ ಅನ್ಯ ವಸ್ತುಗಳನ್ನು ಸರಿಯಾಗಿ ತೆಗೆಯಲು ಬರದಿದ್ದರೆ ಇವುಗಳನ್ನು ತಮಟೆಯ ಮೂಲಕ ಮಧ್ಯ ಕಿವಿಗೆ ದೂಡುವ ಸಾಧ್ಯತೆಗಳುಂಟು. ಇದರಿಂದ ಕೆಲವೊಮ್ಮೆ ಕಿವುಡಾಗುವ ಸಾಧ್ಯತೆಗಳು ಇರುತ್ತವೆ.
ಶ್ರವಣನಾಳದಲ್ಲಿ ಎಲುಬಿನ ಮೊಳಕೆ : ಈ ಮೊಳಕೆಗಳು ಶ್ರವಣನಾಳದ ಗೋಡೆಯೊಳಗಿಂದ ಹೊರಬರುತ್ತದೆ. ಸಾಮಾನ್ಯವಾಗಿ ಒಂದಕ್ಕೂ ಹೆಚ್ಚಿಗೆ ಮೊಳಕೆಗಳು ಬರುತ್ತವೆ. ಈಜುಗಾರರಲ್ಲಿ ಇದು ಸಾಮಾನ್ಯ. ಅವರಿಗೆ ಅದು ಇರುವ ಅರಿವೂ ಇಲ್ಲದಿರಬಹುದು. ಅಥವಾ ಕಿವುಡಿಗಾಗಿ ವೈದ್ಯರ ಹತ್ತಿರ ಬರಬಹುದು. ಪರೀಕ್ಷಿಸಿದಾಗ ಶ್ರವಣನಾಳ ಮೊಳಕೆಗಳಿಂದ ಪೂರ್ಣ ಮುಚ್ಚಿಕೊಂಡಿರುವುದನ್ನು ಕಾಣಬಹುದು. ಇದರೊಂದಿಗೆ ಸೋಂಕಿನಿಂದ ಉರಿಯೂತವೂ ಇರಬಹುದು. ಈ ಹೊರ ಹೊರಟಿರುವ ಎಲುಬಿನ ಮೊಳಕೆಗಳನ್ನು ಶಸ್ತ್ರಕ್ರಿಯೆಯಿಂದ ಡ್ರಿಲ್ ಮಾಡಿ ತೆಗೆಯಬಹುದು.
ಕಿವಿಯ ಏಡಿಗಂತಿ : ಈ ವ್ರಣ (ರಾಡೆಂಟ್ ಅಲ್ಸರ್) ಏಡಿಗಂತಿ ಲಕ್ಷಣವನ್ನು ಹೊಂದಿರುತ್ತದೆ. ಇದಕ್ಕೆ ಶಸ್ತ್ರಚಿಕಿತ್ಸೆ ಅಥವಾ ರೇಡಿಯಂ ಚಿಕಿತ್ಸೆ ಕೊಡುವುದು ವಾಡಿಕೆ.
ಕಿವಿಯೊಳಪೊರೆ ರೊಗಗಳು : ಒಳಪೊರೆ, ಹೊರಕಿಗಿವಿಯನ್ನು ನಡುಗಿವಿಯಿಂದ ಬೇರ್ಪಡಿಸುತ್ತದೆ. ಇದು ಸೂಕ್ಷ್ಮವಾಗಿ, ತೆಳ್ಳಗೆ, ನುಣುಪಾಗಿ ಮುತ್ತಿನಂತೆ ಹೊಳೆಯುತ್ತಿರುವಂತೆ ಕಾಣುತ್ತದೆ. ಹೊರಗಿವಿಯಿಂದ ಸಾಗಿಬಂದ ಧ್ವನಿತರಂಗಗಳು ಈ ಪೊರೆಗೆ ಅಪ್ಪಳಿಸಿದ ಕೂಡಲೇ ಅದು ಅದಿರಿ ಧ್ವನಿಯನ್ನು ನಡುಗಿವಿಗೆ ಸಾಗಿಸುತ್ತದೆ.
ಶ್ರವಣನಾಳದ ಉರಿಯೂತದ ಫಲವಾಗಿ ಈ ಪೊರೆಗೂ ಸೋಂಕುಂಟಬಹುದು. ಅಂಟಿದರೆ ಪೊರೆಯ ಹೊಳಪು ಮಾಯವಾಗಿ ತೆಳ್ಳಗಿರುವ ಪೊರೆ ದಪ್ಪನಾಗಿ ಕಡುಗೆಂಪಿನ ಬಣ್ಣಕ್ಕೆ ತಿರುಗಿ ಅದರಿಂದ ಹೊಟ್ಟು ಬೀಳಲು ಪ್ರಾರಂಭವಾಗುತ್ತದೆ. ಪೊರೆಯ ಹೊರಪದರದ ಕೋಶಗಳು ಚಕ್ಕೆ ಚಕ್ಕೆಯಾಗಿ ಉದುರುತ್ತವೆ. ಒಂದು ಸಲ ಸೋಂಕಂಟಿ ಪೊರೆ ದಪ್ಪಗಾಗಿ ಬಣ್ನ ಬದಲಾದರೆ ಪುನಃ ಸ್ವಾಭಾವಿಕ ಸ್ಥಿತಿಗೆ ಹಿಂತಿರುಗುವುದು ಅಪೂರ್ವ.
ಪೊರೆಯ ಉರಿಯೂತದ ಬೊಕ್ಕೆಗಳು: ಸಾಮಾನ್ಯವಾಗಿ ಈ ರೋಗಕ್ಕೆ ವೈರಸ್ ಕಾರಣ. ಈ ರೋಗದಿಂದ ಮಿದುಳಿನ ಒಳಗೂ ಪರಿಣಾಮಗಳುಂಟಾಗಬಹುದು. ಇನ್‍ಫ್ಲುಎನ್‍ಜಾó ಸಾಂಕ್ರಾಮಿಕದ ಕಾಲದಲ್ಲಿ ಈ ಗಂಭೀರ ಪರಿಸ್ಥಿತಿ ಒಬ್ಬೊಬ್ಬರಲ್ಲಿ ಕಂಡುಬರುತ್ತದೆ. ಪೊರೆಯ ಮೇಲೆ ರಕ್ತಕುರು ಕಾಣಿಸಿಕೊಂಡು ಶ್ರವಣನಾಳಕ್ಕೂ ಹರಡುತ್ತದೆ. ಮೊದಲಲ್ಲಿ ಕಿವಿ ಕಿವುಡು ಕಾಣುವುದಿಲ್ಲ. ತೀವ್ರತರ ನೋವು ನಿದ್ರೆಗೂ ಕೆಲಸಗಳಿಗೂ ಅವಕಾಶ ಕೊಡುವುದಿಲ್ಲ ಬೊಕ್ಕೆಗಳೊಡೆಯಬಹುದು ಅಥವಾ ಹಾಗೇ ಒಣಗಿ ಹೆಕ್ಕಳಿಗಿಯಾಗಬಹುದು. ಈ ಸ್ಥಿತಿ ಅನೇಕ ಸಲ ಉಲ್ಬಣಗೊಂಡು ನಡುವಿಗೂ ಹರಡುತ್ತದೆ. ಕೆಲವು ವೇಳೆ ರೋಗಾಣು-ಸಂಕೀರ್ಣ ಕುಹರದ ಉರಿಯೂ ಮತ್ತು ಮಿದುಳಿನ ಮತ್ತದರ ಹೊರ ಪೊರೆಗಳುರಿಯೂ ಇದರಿಂದುಟಾಗಬಹುದು. ಪ್ರತಿಜೀಕವಗಳಿಂದ ಯಶಸ್ವಿ ಚಿಕಿತ್ಸೆ ಕೊಡಬಹುದು.
ಪೊರೆಯ ಹರ್ಪಿಸ್: ಕರ್ಣಗಳ ಪೊರೆಗೂ ಹರಡಬಹುದು. ಒಳಗಿವಿಯ ರೋಗಗಳು ವಿಷಯವನ್ನು ಪರಿಶೀಲಿಸುವಾಗ ಹೆಚ್ಚು ವಿವರಗಳನ್ನು ತಿಳಿಯಬಹುದು.
ಕಿವಿ ಒಳಪೊರೆಗೆ ಪೆಟ್ಟು: ಹೊರಗಿನ ಹಾಗೂ ಒಳಗಿನ ಪೆಟ್ಟುಗಳಿಂದಲೂ ಪೊರೆಗೆ ಅಪಾಯವಾಗಬಹುದು. ಗುಗ್ಗೆ, ಕಡ್ಡಿ, ಹೇರ್‍ಪಿನ್, ಸೇಫ್ಟಿಪಿನ್, ಬೆಂಕಿಕಡ್ಡಿ ಮತ್ತಿತರ ಕಿವಿ ಒಳಗೆ ಹಾಕುವ ವಸ್ತುಗಳಿಂದ ಪೊರೆಗೆ ಅಪಾಯ ಸಂಭವಿಸಬಹುದು. ಮಕ್ಕಳು ಆಡುವಾಗ ಕಡ್ಡಿ ತೂರಿಸಿ ಪೊರೆಗೆ ಚುಚ್ಚಿಕೊಳ್ಳಬಹುದು. ಬಲವಾಗಿ ಪೆಟ್ಟು ಬಿದ್ದಾಗ ಶ್ರವಣನಾಳದಲ್ಲಿರುವ ಗಾಳಿ ಪೊರೆಗೆ ಅಪ್ಪಳಿಸಿ ಅಘಾತವಾಗಬಹುದು. ಫಿರಂಗಿ ಮದ್ದುಗುಂಡುಗಳ ಧ್ವನಿತರಂಗಳಿಂದಲೂ ಪೊರೆ ಒಡೆಯುವುದು ಸಾಧ್ಯ. ಶ್ರವಣನಾಳದಲ್ಲಿರುವ ಪಾಳಿಯನ್ನು ಅಕಸ್ಮಾತ್ತಾಗಿ ಹೊರಗೆ ಸೆಳೆದಾಗಲೂ ಇದೇ ರೀತಿಯ ಅಪಾಯ ಸಂಭವಿಸಬಹುದು ನಡುಗಿವಿಯ ಚಾವಣಿಯಲ್ಲಿ ಹಾಯುವ ಪೀಟ್ರಸ್ ಎಲುಬಿನ ಭಾಗ ಏಟಿನಿಂದ ಒಡೆದರೆ ಪೊರೆಯ ಮೇಲ್ಭಾಗ ಹರಿಯಬಹುದು. ಹೀಗೆ ಯಾವುದೇ ಕಾರಣದಿಂದಾಗಲೀ ಪೊರೆ ಒಡೆದರೆ ತತ್‍ಕ್ಷಣ ಕಿವಿಗೆ ಹತ್ತಿ ತುರುಕಿ, ವ್ಯಕ್ತಿ ವಿಶ್ರಾಂತಿ ಪಡೆಯಬೇಕು, ಕಾರಣ ಏನೇ ಇರಲಿ ಪಿಚಕಾರಿ ಹಾಕಬಾರದು. ವೈದ್ಯರಿಗೆ ತಿಳಿಸಿ ಮುಂದೆ ಸೋಂಕು ತಗಲದಂತೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಒಳಪೊರೆ ಹಾನಿಯಾದಾಗ 24 ರಿಂದ 45 ಗಂಟೆಯೊಳಗೆ ಛಿದ್ರಗೊಂಡ ಪೊರೆಯನ್ನು ಮೈಕ್ರೋಸ್ಕೋಪ್ ಮೂಲಕ ಹತ್ತಿರಗೂಡಿಸಿ ಪ್ಯಾಚ್ ಮಾಡಿದಲ್ಲಿ ಬಹತೇಕ ಪೊರೆ ಮುಚ್ಚಿಕೊಳ್ಳುವ ಸಂಭವವಿರುತ್ತದೆ. ಹಾಗೆ ಪೊರೆ ಮುಚ್ಚಿಕೊಳ್ಳದಿದ್ದಲ್ಲಿ ಆಪರೇಷನ್ ಮೂಲಕ ಪೊರೆ ಕಸಿ ಮಾಡಿ ಮುಚ್ಚಬೇಕಾಗುವ ಸಂಭವವಿರುತ್ತದೆ.
ಒಳಪೊರೆ ಮೂರು ಕಡೆಗಳಲ್ಲಿ ಹರಿಯಬಹುದು. ಮಧ್ಯಭಾಗದಲ್ಲಿ, ಅಂಚಿನಲ್ಲಿ ಅಥವಾ ಮೇಲ್ಭಾಗದಲ್ಲಿರುವ ಗೂಡಿನಲ್ಲಿ (ಆಟಿಕ್). ಪೊರೆ ಒಡೆದರೆ ಯಾವ ತೊಂದರೆಯೂ ಅನುಭವವಾಗದಿರಬಹುದು. ಹಾಗೂ ವ್ಯಕ್ತಿಗೆ ಅದು ಒಡೆದಿದೆ ಎಂಬುದೇ ಗಮನಕ್ಕೆ ಬಾರದಿರಬಹುದು.
ಯೂಸ್ಟೇಕಿಯನ್ ನಾಳದ ರೋಗಗಳು : ಶ್ರವಣ ಕ್ತಿಯೆಯಲ್ಲಿ ಯೂಸ್ಟೇಕಿಯನ್ ನಾಳ ಬಹಳ ಮುಖ್ಯಪಾತ್ರವನ್ನು ವಹಿಸುತ್ತದೆ. ಈ ನಾಳ ಕಿವಿರೋಗಗಳಿಗೆ ಅನೇಕ ವೇಳೆ ಮೂಲವೆಂದು ಹೇಳಬಹುದು. ನಾಳದ ತೀವ್ರ ಕೊರತೆ ಕಿವುಡಿಗೆ ಮುಖ್ಯ ಕಾರಣ. ನೆಗಡಿ ಅಥವಾ ನಡುಗಿವಿಯ ತೀವ್ರ ಉರಿಯೂತಗಳಿಂದ ಈ ರೋಗ ಪ್ರಾಪ್ತವಾಗುವುದು ಸಾಮಾನ್ಯ. ನೋವು ಕೆಲವು ವೇಳೆ ಇರುತ್ತದೆ. ಈ ಕೊರತೆ ತೀವ್ರರೀತಿಯಲ್ಲಿ ಕಾಣಿಸಿಕೊಂಡು ಗುಣವಾಗದೇ ಇರಬಹುದು. ಈ ದೀರ್ಘಾವದಿ ಕೊರತೆಯಿಂದ ಅಗಾಗ್ಗೆ ವ್ಯಕ್ತಿ ಕಿವುಡನ್ನು ಅನುಭವಿಸಬೇಕಾಗಬಹುದು. ದೀರ್ಘಾವಧಿ ಕೊರತೆ ಮೂಗಿನಿಂದ ಅಥವಾ ಅದಕ್ಕೆ ಸಂಬಂಧಪಟ್ಟ ಕುಳಿಗಳ ಅಥವಾ ಗಂಟಲ ಕುಹರ, ಮೂಗಿನ ದುಗ್ಧ ಗ್ರಂಥಿಗಳ ಸೋಂಕಿನಿಂದ ಮುಂದುವರಿಯಬಹುದು. ಒಗ್ಗದಿಕೆಯೂ ಈ ನಾಳದ ದೀರ್ಘಾವಧಿ ಕೊರತೆಗೆ ಕಾರಣವಾಗಬಹುದು.
ನಡುಗಿವಿಯ ರೋಗಗಳು : ನಡುಗಿವಿಯನ್ನು ಒಂದು ಎಲುಬಿನ ಕೊಠಡಿ ಎಂದು ಹೇಳಬಹುದು. ಒಂದು ಕಡೆ ಕರ್ಣಪೊರೆ ಇದೆ. ಈ ಪೊರೆಯ ಒಳಭಾಗಕ್ಕೆ ನಡುಗಿವಿಯಲ್ಲಿ ಮೂರು ಪುಟಾಣಿ ಮೊಳೆಗಳು ಮಣಿಗಳಂತೆ ಕೂಡಿಕೊಂಡಿವೆ. ಇವಕ್ಕೆ ಅಡಿಗಲ್ಲು. ಸುತ್ತಿಗೆ ಮತ್ತು ರಿಕಾಬು ಎಂದು ಕರೆಯುತ್ತಾರೆ. ಧ್ವನಿತರಂಗಗಳು ಕರ್ಣಪೊರೆಗೆ ಅಪ್ಪಳಿಸಿದಾಗ ಅದು ಅದಿರಿ ಆ ತರಂಗಗಳನ್ನು ಈ ಮೂರು ಪುಟಾಣಿ ಮೂಳೆಗಳ ಮೂಲಕ ದ್ರವ ತುಂಬಿರುವ ಒಳಗಿವಿಗೆ ಹಾಯಿಸುತ್ತದೆ. ಧ್ವನಿ ತರಂಗಗಳು ಒಳಗಿವಿಯ ದ್ರವದಲ್ಲಿ ಅಲೆಗಳನ್ನುಂಟುಮಾಡಿ ಶ್ರವಣನರದ ಮೂಲಕ ಧ್ವನಿಯನ್ನು ಮಿದುಳಿಗೆ ಕೊಂಡೊಯ್ದು ಮುಟ್ಟಿಸುತ್ತದೆ.
ನಡುಗಿವಿಗೂ ಗಂಟಲಿಗೂ ಯೂಸ್ಟೇಕಿಯನ್ ನಾಳದ ಮೂಲಕ ನೇರ ಸಂಪರ್ಕವಿದೆ. ನಡುಗಿವಿಯೊಳಗೆ ಗಾಳಿಯ ಒತ್ತಡ ಇದ್ದಕ್ಕಿದ್ದಂತೆ ಏರು ಪೇರಾದರೆ ಪೊರೆ ಹರಿಯುತ್ತದೆ. ಇದೇ ನಾಳದ ಮೂಲಕ ನೆಗಡಿ, ಕೆಮ್ಮು ಇತ್ಯಾದಿ ರೋಗಗಳಲ್ಲಿ ಸೋಂಕು ಹಾದು ನಡುಗಿವಿಯನ್ನು ಮುಟ್ಟಬಹುದು. ಇದರಿಂದ ನಡುಗಿವಿಯ ಉರಿಯೂತ ಪ್ರಾರಂಭವಾಗುತ್ತದೆ. ಹೀಗಾದಾಗ ವ್ಯಕ್ತಿ ತಡೆಯಲಾಗದ ಕಿವಿ ನೋವನ್ನು ಅನುಭವಿಸುತ್ತಾನೆ. ತಂತಿ ಮೀಟಿದಂತಿರುವ ನೋವು ಜೊತೆಗೆ ಜ್ವರ ಹಾಗೂ ಕಿವಿ ಮಾಂದ್ಯ- ಈ ರೋಗದ ಲಕ್ಷಣಗಳು. ಅನೇಕ ವೇಳೆ ನಡುಗಿವಿಯಲ್ಲಿ ಕೀವು ತುಂಬಿ ಕರ್ಣಪೊರೆ ಒಡೆಯಬಹುದು. ಈ ರೋಗದಿಂದ ಸ್ರವಿಸಿ ಒತ್ತಡ ಕಡಿಮೆಯಾಗಿ ನೋವು ಶಮನವಾಗಬಹುದು. ಈ ರೋಗದಿಂದ ಇತರ ಗಂಭೀರ ಪರಿಣಾಮಗಳೂ ಸಾಧ್ಯ. ನಡುಗಿವಿಯ ಸೋಂಕು ಮಿದುಳು, ಮಿದುಳಿನ ಚಿಪ್ಪು, ಒಳಗಿವಿ, ಮ್ಯಾಸ್ಟಾಯಿಡ್ ಎಂಬ ಕಿವಿಯ ಹಿಂಬದಿಯಿರುವ ತಲೆಬುರುಡೆಯ ಮೂಳೆ, ಮುಖದ ಮಾಂಸಖಂಡಗಳ ನೆರವಾದ ಮುಖನರ-ಈ ಸ್ಥಳಗಳಿಗೂ ಹರಡಬಹುದು. ಇವು ಯಾವುದಕ್ಕೆ ಸೋಂಕುಂಟಾದರೂ ಯಶಸ್ವಿ ಶಸ್ತ್ರಚಿಕಿತ್ಸೆ ಇಲ್ಲದಿದ್ದರೆ ಪ್ರಾಣಾಪಾಯ ಒದಗಬಹುದು. ಅದೃಷ್ಟವಶಾತ್ ಸಲ್ಫ ಮತ್ತು ಪ್ರತಿಜೀವಕಗಳಂಥ ಅದ್ಭುತ ಔಷಧಿಗಳಿಂದ ಈ ಜಟಿಲ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹರವಾಗಿದೆ ಎಂದು ಹೇಳಬಹುದು.
ಅನೇಕ ವೇಳೆ ಕಿವಿ ಸೋರುವುದು ಚಿಕಿತ್ಸೆಯಿಂದ ಗುಣವಾಗದೆ ಕೀವು ಸೋರುತ್ತಲೇ ಇರುತ್ತದೆ. ಈ ದೀರ್ಘಾವಧಿ ಉರಿಯೂತಕ್ಕೆ ಶಸ್ತ್ರಚಿಕಿತ್ಸೆಯೇ ಮದ್ದು. ಇಲ್ಲದಿದ್ದರೆ ಸೋಂಕು ಸುತ್ತಮುತ್ತಲಿರುವ ಮೂಳೆ, ನರ ಮಿದುಳು, ಮಿದುಳಿನ ಭಾಗಗಳಿಗೆ ಹರಡಿ ಗಂಭೀರ ಪರಿಸ್ಥಿತಿ ಎಡೆ ಗೊಡಬಹುದು.
ನಡುಗಿವಿಯ ಉರಿಯೂತದಲ್ಲಿ ಪರಿಣಾಮವಾಗಿ ಕಿವಿ ಕಿವುಡಾಗಬಹುದು ದೀರ್ಘಾವಧಿ ಉರಿಯೂತದಲ್ಲಿ ಮುಖ್ಯವಾಗಿ ಎರಡು ವಿಧ: ಒಂದು-ನಾಳ ಮತ್ತು ಕರ್ಣಪೊರೆಗಳ ರೋಗ ; ಮೇಲಟ್ಟ ಮತ್ತು ಎಲುಬು ಕುಹರ ರೋಗ ಮತ್ತೊಂದು.
ನಾಳ ಮತ್ತು ಕರ್ಣಪೊರೆಗಳ ರೋಗ : ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ರೋಗ. ದೊಡ್ಡವರಲ್ಲಿಯೂ ಕಾಣಿಸಬಹುದು. ತೀವ್ರರೀತಿಯ ನಡುಗಿವಿಯ ಉರಿಯೂತದ ಪರಿಣಾಮವಾಗಿ ಈ ರೋಗ ಬರಬಹುದು. ಮೂಗಿನ ರೋಗ, ಗಂಟಲ ಕುಹರ ಹಾಗೂ ಅಸ್ಥಿಕುಳಿಯ ರೋಗಗಳು ಈ ರೋಗದಿಂದ ಒದಗಿರಬಹುದು. ಕಿವಿಯಿಂದ ಕೀವು ಆಗಾಗ್ಗೆ ಸೋರುವುದು, ಮಿಕ್ಕ ಸಮಯಗಳಲ್ಲಿ ಕೀವು ಇಲ್ಲದೆ ಒಣಗಿ, ನೆಗಡಿ, ಕೆಮ್ಮು ಶೀತವಾದಾಗಲೆಲ್ಲ ಉಲ್ಬಣಿಸಿ ಪುನಃ ಪುನಃ ಕೀವು ಕಾಣಿಸಿಕೊಳ್ಳಬಹುದು. ಕರ್ಣಪೊರೆಯನ್ನು ಪರೀಕ್ಷಿಸಿದರೆ ಅದು ಹರಿದು ತೂತಾಗಿರುವುದನ್ನು ಕಾಣಬಹುದು. ಕೆಲವು ವೇಳೆ ನಡುಗಿವಿಯ ಲೋಳೆಪೊರೆ ಊದಿ ಪಾಲಿಪೈ ಎಂಬ ದುರ್ಮಾಂಸದ ಗಂಟುಗಳು ಕಾಣತ್ತವೆ. ಸಾಮಾನ್ಯವಾಗಿ ಕಿವಿ ಮಂದವಾಗುವುದಾದರೂ ಕೇಳುವುದರಲ್ಲಿ ವ್ಯತ್ಯಾಸವೇನೂ ಇಲ್ಲದೆಯೂ ಇರಬಹುದು. ಚಿಕಿತ್ಸೆ ಪಡೆಯದಿದ್ದರೆ ಕಿವುಡು ಖಂಡಿತವಾದರೂ ಪ್ರಾಣಾಪಾಯವೇನಿಲ್ಲ.
ಮೇಲಟ್ಟ ಮತ್ತು ಎಲುಬು ಕುಹರ ರೋಗ: ಈ ರೋಗಕ್ಕೂ ಹಿಂದೆ ಹೇಳಿದ ನಾಳ ಮತ್ತು ಕರ್ಣಪೊರೆ ರೋಗಕ್ಕೂ ಮುಖ್ಯ ವ್ಯತ್ಯಾಸವೆಂದರೆ-ಈ ರೊಗದಲ್ಲಿ ಪ್ರಾಣಾಪಾಯವಿದೆ ಹಾಗೂ ರೋಗ ಪೂರ್ಣ ಮುಂದುವರಿದು ತೊಡಕುಗಳು ಉದ್ಭವಿಸುವ ವರೆಗೆ ರೋಗದ ಅರಿವೇ ಆಗದಿರಬಹುದು. ಈ ರೋಗದಲ್ಲಿ ಎರಡು ವಿಧ. ಒಂದು ಕೀವು ತುಂಬುವುದು; ಮತ್ತೊಂದು ಕೀವಿಲ್ಲದೆ ಒಂದು ರೀತಿಯ ಕೆನೆಯಂಥ, ದುರ್ನಾತ ಬಡಿಯುವ ದ್ರಾವಕ ಹೊರಬರುವುದು.
ಈ ರೋಗಗಳೂ ನಡುಗಿವಿಯ ಉರಿಯೂತದ ಪರಿಣಾಮವಿರಬಹುದು. ಕಿವಿ ಕೇಳಿಸುವುದೇ ಇಲ್ಲವೆ ಇತ್ಯರ್ಥ ಮಾಡಿಕೊಂಡು ವೈದ್ಯ ಜಾಗರೂಕತೆಯಿಂದ ಸಂಪೂರ್ಣ ಪರಿಶೀಲನೆ ನಡೆಸಿ ಚಿಕಿತ್ಸೆ ಮಾಡಬೇಕಾದದ್ದು ಅಗತ್ಯ. ಎಕ್ಸ್‍ಕಿರಣಗಳಿಂದ ಕಿವಿ ಎಲುಬುಗಳನ್ನೂ ಯೂಸ್ಟೇಕಿಯನ್ ನಾಳವನ್ನೂ ಪರೀಕ್ಷಿಸಬೇಕು. ರೋಗ ಹರಡಿರುವ ಅಂಗಾಂಶಗಳನ್ನು ಸೂಕ್ತ ಸಲಕರಣೆಗಳನ್ನು ಉಪಯೋಗಿಸಿ ಒಳಗಿಂದ ಹೀರಿ ಹೊರಹಾಕಬೇಕು. ಕಿವಿಗೆ ಪ್ರತಿಜೀವಕ ತೊಟ್ಟುಗಳನ್ನು ಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದರ ಅನಂತರ ಉಳಿದಿರುವುದು. ಶಸ್ತ್ರಚಿಕಿತ್ಸೆಯೊಂದೇ ಕಿವಿ ಕಿವುಡಾಗದಂತೆ ತಡೆಹಾಕುವುದೂ ಸೋಂಕಿನಿಂದ ಪ್ರಾಣಾಪಾಯವಿಲ್ಲದಂತೆ ನೋಡಿಕೊಳ್ಳುವುದೂ ಶಸ್ತ್ರಚಿಕಿತ್ಸೆಯ ಮೂಲ ಉದ್ದೇಶ.
ನಡುಗಿವಿಯ ತೀವ್ರತರದ ಉರಿಯೂತದ ಪರಿಣಾಮವಾಗಿ ಮ್ಯಾಸ್ಟಾಯಿಡ್ ಎಲುಬಿನ ಉರಿಯೂತ, ಮಿದುಳು ರಕ್ತನಾಳಗಳಲ್ಲಿ ರಕ್ತ ಕರಣೆಗಟ್ಟುವುದು, ಒಳಗಿವಿಯ ಸಂಕೀರ್ಣ ಕುಹರದ ಉರಿಯೂತ, ಮಿದುಳು ಹಾಲೆಗಳಲ್ಲಿ ಕೀವು ತುಂಬುವುದು, ಮಿದುಳನ್ನು ಮುಚ್ಚಿರುವ ಹೊರಪದರಗಳ ಉರಿಯೂತ-ಇತ್ಯಾದಿ ರೋಗಗಳು ಸಮಸ್ಯೆಗಳಾಗಬಹುದು.
ಒಳಗಿವಿಯ ಸಂಕಿರ್ಣ ಕುಹರದ ಉರಿಯೂತ : ಈ ರೋಗ ವಿರಳವಾದರೂ ಅಪಾಯಕರ. ನಡುಗಿವಿಯ ಉರಿಯೂತದ ಪರಿಣಾಮವೇ ಸಾಮಾನ್ಯವಾಗಿ ಈ ರೋಗಕ್ಕೆ ಕಾರಣ. ಸೋಂಕು ಅನೇಕ ಮಾರ್ಗಗಳಿಂದ ಈ ಅಂಗಕ್ಕೆ ಬಂದು ಸೇರಿ ಪ್ರಾರಂಭದಲ್ಲಿ ಮಿತಿಗೊಳಪಟ್ಟಿದ್ದರೂ ಸೂಕ್ತ ಚಿಕಿತ್ಸೆ ಇಲ್ಲದಿದ್ದರೆ ಕ್ರಮೇಣ ಎಲ್ಲೆಡೆಗೂ ಹಬ್ಬುತ್ತದೆ. ತಲೆ ಸುತ್ತುವುದು. ಆಗಾಗ್ಗೆ ವಾಂತಿ, ಕಣ್ನುಗುಡ್ಡೆಗಳು ಆದಿವುದು, ಇದ್ದಕ್ಕಿದ್ದಂತೆ ರೋಗಿ ಬಿದ್ದುಬಿಡುವುದು-ಈ ರೋಗದ ಲಕ್ಷಣ. ಕಿವಿ ಮಂದವಾಗಿರುವುದು ಸಾಮಾನ್ಯವಾದರೂ ಕೇಳುವುದರಲ್ಲಿ ಹೆಚ್ಚು ವ್ಯತ್ಯಾಸವಿಲ್ಲದೆಯೂ ಇರಬಹುದು. ಈ ರೋಗಿಗಳಿಗೆ ಪೂರ್ಣ ವಿಶ್ರಾಂತಿ ಆವಶ್ಯಕ. ರೋಗಿಗಳನ್ನು ತಜ್ಞರು ಸಂಪೂರ್ಣ ಪರೀಕ್ಷೆಗೊಳಪಡಿಸಿ ಅನಂತರ ಚಿಕಿತ್ಸೆ ಏನೆಂಬುದನ್ನು ನಿರ್ಧರಿಸಬೇಕಾಗುತ್ತದೆ. ಪ್ರತಿಜೀವಕಗಳನ್ನು ಪೂರ್ಣವಾಗಿ ಉಪಯೋಗಿಸಬೇಕಾಗಬಹುದು. ಅನಂತರ ಸೋಂಕನ್ನು ಹೋಗಲಾಡಿಸಲು ಮ್ಯಾಸ್ಟಾಯಿಡ್ ಎಲುಬಿನ ಶಸ್ತ್ರಕ್ರಿಯೆ ನಡೆಸುವುದು ವಾಡಿಕೆ.
ಕೀವು ಸೋಂಕಿಲ್ಲದ ಕಿವಿಯ ಇತರ ರೋಗಗಳು: ನಡುಗಿವಿಯೊಳಗಿರುವ ಧ್ವನಿ ವಾಹಕಗಳು ಅಂದರೆ ಮುಖ್ಯವಾಗಿ ಅಡಿಗಲ್ಲು, ಸುತ್ತಿಗೆ ಮತ್ತು ರಿಕಾಬು ಎಲುಬುಗಳು, ಸ್ನಾಯುಗಳು, ಲೋಳೆಪೊರೆ ಇತ್ಯಾದಿ ಅಂಗಾಂಶಗಳು ದೀರ್ಘಾವಧಿ ಉರಿಯೂತದಿಂದ ನಾಶ ಹೊಂದುತ್ತವೆ. ಅನಂತರ ಈ ಅಗಾಂಶಗಳ ಪುನಾರಚನೆ ಸಾಧ್ಯವಿಲ್ಲ. ಇವುಗಳ ಬದಲಿ ನಾರಿನಂತಿರುವ ಅಂಗಾಂಶ ಉತ್ಪತ್ತಿಯಾಗಿ ಈ ನಾರುಗಳು ಒಂದಕ್ಕೊಂದು ಅಂಟಿ, ತೊಡಕಿನಿಂದ ನಡುಗಿವಿ ತನ್ನ ಧ್ವನಿವಾಹಕ ಶಕ್ತಿಯನ್ನು ಪೂರ್ಣವಾಗಿ ಕಳೆದುಕೊಂಡು ವ್ಯಕ್ತಿ ಕಿವುಡಾಗುವಂತೆ ಮಾಡುತ್ತದೆ. ಈ ಕಿವುಡಿಗೆ ಅಂಟು ಕಿವುಡು ಎನ್ನುತ್ತಾರೆ. ಸಾಮಾನ್ಯವಾಗಿ ವ್ಯಕ್ತಿಯ ಗಮನಕ್ಕೆ ಬಾರದೇ ಅಲ್ಪಸಲ್ಪ ಸೋಂಕು ಅಂಟಿ ಅದರ ಪರಿಣಾಮವಾಗಿ ರೀತಿಯ ಕಿವುಡು ಉಂಟಾಗುತ್ತದೆ. ಸೋಂಕು ತೀವ್ರಗೊಂಡು, ರೋಗ ಉಲ್ಬಣವಾಗುವುದನ್ನು ಪ್ರತಿಜೀವಕ ಚಿಕಿತ್ಸೆ ತಡೆಹಿಡಿದು ಪೂರ್ಣ ಗುಣ ಹೊಂದಲು ಅವಕಾಶ ಕಲ್ಪ್ಪಿಸದೆಯೂ ಈ ಸ್ಥಿತಿ ಒದಗಬಹುದು. ಕೆಲವು ರೋಗಿಗಳಲ್ಲಿ ಹಿಂದೆಂದೂ ನಡುಗಿವಿಯ ರೋಗವೇ ಇಲ್ಲದೆಯೂ ಅಂಟು ಕಿವುಡು ಕಾಣಿಸಿಕೊಳ್ಳಬಹುದು. ಈ ಸಂದರ್ಭಗಳಲ್ಲಿ ಮೂಗು ಗಂಟಲ ಕುಹರಗಳಿಂದ ಸೋಂಕು ಹರಡಿ ಆಗಾಗ್ಗೆ ನಾಳ ಕರ್ಣಪೊರೆಗಳ ಉರಿಯೂತ ಮೂಲವಾಗಿ ಕಿವುಡಿಗೆ ಕಾರಣವಾಗುತ್ತದೆ. ಈ ರೋಗಕ್ಕೆ ಕೆಲವು ಶಸ್ತ್ರಚಿಕಿತ್ಸೆಗಳಿದ್ದರೂ ಅವುಗಳ ಫಲ ಆಶಾದಯಕವೆಂದು ಹೇಳಲಾಗುವುದಿಲ್ಲ. ಕಿವುಡು ಬಹಳವಾಗಿದ್ದರೆ ಶ್ರವಣಸಾಧನದ ಉಪಯೋಗವನ್ನು ಪರಿಶೀಲಿಸಬೇಕಾಗುವುದು.
ನಡುಗಿವಿಯ ಗಾಳಿ ಒತ್ತಡದಿಂದುಂಟಾಗುವ ಆಘಾತ (ಬಾರೋ ಟ್ರೋಮ) : ಕರ್ಣ ಪೊರೆಯ ಎರಡೂ ಪಾಶ್ರ್ವಗಳಲ್ಲಿ ಗಾಳಿಯೊತ್ತಡ ಒಂದೇ ಸಮವಾಗಿರಲು ಗಂಟಲಿನಿಂದ ನಡುಗಿವಿಗೆ ಸಂಪರ್ಕ ಕಲ್ಪಿಸುವುದು ಯೂಸ್ಟೇಕಿನ್ ನಾಳ. ಯಾವ ಕಾರಣದಿಂದಲೇ ಆಗಲಿ ಈ ನಾಳ ಗಾಳಿಯ ಸಂಪರ್ಕವಿಲ್ಲದೆ ಶ್ರವಣನಾಳದ ಮೂಲಕ ಹೊರಗಾಳಿಯ ಒತ್ತಡ ಅಧಿಕವಾದರೆ ಈ ಆಘಾತ ಸಂಭವಿಸುತ್ತದೆ. ಸುರಂಗದೊಳಗೆ ಕೆಲಸ ಮಾಡುವವರು, ಸಮುದ್ರದ ಆಳದಲ್ಲಿ ಮುಳುಗುವವರು ಹಾಗೂ ವಿಮಾನದಲ್ಲಿ ಹಾರಾಡುವರು ಒತ್ತಡದ ಏರುಪೇರನ್ನು ಅನುಭವಿಸಬೇಕಾಗುವುದು ಸಾಮಾನ್ಯ. ಆದ್ದರಿಂದ ಈ ಕೆಲಸಗಾರರಲ್ಲಿ ಈ ರೀತಿಯ ಅಘಾತವನ್ನು ಕಾಣಬಹುದು. ಎಲ್ಲ ಪೂತಿನಾಶಕ ಕ್ರಮಗಳು ಅನುಸರಿಸಿ ಯೂಸ್ಟೇಕಿಯನ್ ನಾಳದಿಂದ ಗಾಳಿ ನಡುಗಿವಿಗೆ ಸೇರುವಂತೆ ಸಂಪರ್ಕ ಕಲ್ಪಿಸಿ ತಜ್ಞರು ಚಿಕಿತ್ಸೆ ಕೊಡುತ್ತಾರೆ.
ನಡುಗಿವಿಯಲ್ಲಿ ದ್ರವಸ್ರಾವ : ನಡುಗಿವಿಯಲ್ಲಿ ಸೇರುವ ಈ ದ್ರವ ನೀರಿನಂತೆ ತೆಳ್ಳಗಿರಬಹುದು. ಅಥವಾ ಇನ್ನೂ ಗಟ್ಟಿಯಾದ ಅಂಟಿನಂತಿರಬಹುದು. ವ್ಯಕ್ತಿಯ ಯಾವ ವಯಸ್ಸಿನಲ್ಲಾದರೂ ಈ ರೋಗ ಕಾಣಬಹುದು. ಬಾರೋಟ್ರಾಮ ಆಘಾತವೇ ಅನೇಕ ವೇಳೆ ಈ ರೊಗಕ್ಕೆ ಕಾರಣ. ದ್ರವ ಕ್ರಮೇಣ ಸಂಗ್ರಹವಾಗಿ ನಡುಗಿವಿಯನ್ನು ತುಂಬಬಹುದು. ಅಥವಾ ಒಂದೇ ವೇಳೆಗೆ ಸ್ರವಿಸಿಯೂ ತುಂಬಬಹುದು. ದ್ರವದೊಳಗೆ ರಕ್ತಸ್ರಾವ ಸಾಮಾನ್ಯ. ಈ ಸ್ಥಿತಿ ಯೂಸ್ಟೇಕಿಯಸ್ಸನ ನಾಳ ಮುಚ್ಚಿರುವುದರ ಪರಿಣಾಮ. ಈ ನಾಳ ಮುಚ್ಚುವ ಸಂದರ್ಭಗಲು ಯಾವುದೆಂದರೆ ನಾಳದ ಉರಿಯೂತ. ಒಗ್ಗದಿರೆ ಗಂಟಲಿನ ದುಗ್ಧ ಗ್ರಂಥಿಗಳು ಉರಿಯೂತದ ಪರಿಣಾಮವಾಗಿ ದಪ್ಪವಾಗುವುದು. ಈ ರೋಗದಲ್ಲಿ ಕಿವಿಮಾಂದ್ಯವಿದ್ದು ಯಾವಾಗಲೂ ಕಿವಿಯಲ್ಲಿ ಕೂಗು ಕೇಳಿಸುತ್ತಿದ್ದು ನಡುಗಿವಿ ತುಂಬಿರುವಂತೆ ಅನುಭವವಾಗುತ್ತದೆ. ನೋವು ವಿರಳ. ಮಕ್ಕಳಲ್ಲಿ ಈ ರೋಗವನ್ನು ಕಿವಿಯ ಮಾಮೂಲು ಪರೀಕ್ಷೆ ನಡೆಸುವಾಗ ವೈದ್ಯ ಕಂಡುಕೊಳ್ಳಬಹುದು. ಯೂಸ್ಟೇಕಿಯಸ್ಸನ ನಾಳದ ಸಂಪರ್ಕವನ್ನು ಕಲ್ಪಿಸವುದು ಎಂದರೆ ದುಗ್ಧ ಗ್ರಂಥಿಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಸುವುದು, ನಾಳದ ಉರಿಯೂತಕ್ಕೆ ಚಿಕಿತ್ಸೆಮಾಡಿ ಸರಿಪಡಿಸುವುದು, ಪ್ರಾರಂಭದಲ್ಲೇ ಪತ್ತೆ ಮಾಡಿ ಪ್ರತಿಜೀವಕಗಳನ್ನು ಕೊಡುವುದು ಈ ರೋಗದ ಚಿಕಿತ್ಸಾಕ್ರಮಗಳಲ್ಲಿ ಕೆಲವು.
ನಡುಗಿವಿಯ ಧ್ವನಿವಾಹಕಾಂಗಗಳ ಅಚಲಸ್ಥಿತಿ : ಧ್ವನಿ ತರಂಗಗಳನ್ನು ಹೊರಗಿನಿಂದ ಒಳಗಿವಿಗೆ ಸಾಗಿಸಲು ಸಂಬಂಧಪಟ್ಟ ಎಲ್ಲ ಅಂಗಾಂಶಗಳೂ ಸಾಕಷ್ಟು ಸಡಿಲವಾಗಿರಬೇಕಾದದ್ದು ಆವಶ್ಯಕ. ಈ ಧ್ವನಿವಾಹಕ ಅಂಗಾಂಶಗಳು ಚಲಿಸದೇ ಅಚಲಸ್ಥಿತಿ ಉಂಟಾದರೆ ವ್ಯಕ್ತಿ ಕಿವುಡಾಗುತ್ತಾನೆ. ಇದು ಚಿಕ್ಕವಯಸ್ಸಿನಲ್ಲೇ ಪ್ರಾರಂಭವಾಗಿ ಕ್ರಮೇಣ ಮುಂದುವರಿಯವ ಕಿವುಡು ರೋಗ. ಈ ರೋಗ ಗಂಡಸರಿಗಿಂತ ಹೆಂಗಸರಲ್ಲಿ ಅಧಿಕ. ಋತುಮತಿಯಾದ ಅನಂತರ ಪ್ರಾರಂಭವಾದರೂ ರೋಗದ ಅರಿವು ಅನೇಕ ವರ್ಷಗಳ ಅನಂತರ ಆಗಬಹುದು. ಆನುವಂಶಿಕವಾಗಿ ಒಂದೇ ಸಂಸಾರದವರಲ್ಲೇ ಈ ರೋಗ ಅನೇಕ ವೇಳೆ ಕಂಡುಬರುತ್ತದೆ. ಅಲ್ಪ ಕಿವುಡಿನಿಂದ ಪ್ರಾರಂಭವಾದರೂ ಪೂರ್ಣ ಕಿವುಡಿನಲ್ಲಿ ಕೊನೆಗೊಳ್ಳಬಹುದು. ಈ ರೋಗಿಗಳು ಬಹಳ ಮೃದುವಾಗಿ ಮಾತನಾಡುವುದು ವಾಡಿಕೆ. ಅದೇ ಇತರ ಕಿವುಡು ರೋಗಗಳಲ್ಲಿ ರೋಗಿ ಎತ್ತರ ಧ್ವನಿಯಲ್ಲಿ ಕೂಗಿಕೊಂಡು ಮಾತನಾಡುತ್ತಾನೆ. ಕಿವುಡಿನ ಜೊತೆಗೆ ಕಿವಿಯಲ್ಲಿ ಕೂಗು, ಕೆಲವರಲ್ಲಿ ಆಗಾಗ್ಯೆ ತಲೆಸುತ್ತೂ ತೋರಬಹುದು. ಈ ರೋಗಕ್ಕೆ ಅನೇಕ ವಿಧದ ಶಸ್ತ್ರ ಚಿಕಿತ್ಸೆಗಳಿವೆ. ಶಸ್ತ್ರಚಿಕಿತ್ಸೆ ಉಪಯೊಗವಾಗದ ಸಂದರ್ಭದಲ್ಲಿ ಶ್ರವಣಸಾಧನವನ್ನೂ ಉಪಯೋಗಿಸಬಹುದು. ಈ ರೋಗಿಗಳಿಗೆ ತುಟಿಯೋದನ್ನು ಕಲಿಸುವುದೊಳಿತು.
ಒಳಗಿವಿಯ ಹಾಗೂ ಕಿವಿಯ ಇತರ ರೋಗಗಳು. ಮೆನಿಯೆರನ ರೋಗ: ಈ ರೋಗದ ಚಿಹ್ನೆಗಳೆಲ್ಲವೂ ಒಳಗಿವಿಯ ಕುಹರ ಹಾಗೂ ಕರ್ಣಶಂಖಕ್ಕೆ (ಕಾಕ್ಲಿಯ) ಸಂಬಂಧಿಸಿದವು. ತಲೆಸುತ್ತು, ವಾಂತಿ, ಕಿವುಡು, ಕಿವಿ ಕೂಗು, ಕಣ್ಣುಗಳ ಅದಿರುವಿಕೆ-ಇವು ರೋಗದ ಮುಖ್ಯ ಲಕ್ಷಣಗಳು. ಮೊದಮೊದಲು ಈ ಘಟನೆಗಳು ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಬಹಳ ದಿವಸಗಳಿಗೆ ಒಂದೊಂದು ಸಲ ಕಾಣಿಸಿಕೊಳ್ಳುತ್ತದೆ ಬರುಬರುತ್ತ ಈ ಹಿಂಸೆಗಳೆಲ್ಲ ತೀವ್ರವಾಗುತ್ತವೆ. ರಾತ್ರಿ ಮಲಗಿ ನಿದ್ರಿಸುತ್ತಿರುವಾಗಲೇ ಈ ಲಕ್ಷಣಗಳೆಲ್ಲ ಪ್ರಾರಂಭವಾಗಿ ಬೆಳಗ್ಗೆ ಎಚ್ಚರವಾಗುವಾಗಲೇ ತೀವ್ರಸ್ಥಿತಿಗೆ ತಿರುಗಿರಬಹುದು. ಈ ಘಟನೆಗಳು ಕ್ರಮೇಣ ಬೇಗಬೇಗ ಕಾಣಿಸಿಕೊಂಡು ಅನಂತರ ಸದಾಕಾಲದಲ್ಲಿಯೂ ಇದ್ದೇ ಇರುತ್ತವೆ. ಸಾಮಾನ್ಯವಾಗಿ ಒಂದೇ ಕಿವಿ ಈ ರೋಗಕ್ಕೆ ತುತ್ತಾಗುತ್ತದೆ. ಎರಡು ಕಿವಿಗಳಲ್ಲಿಯೂ ಈ ರೋಗ ಸಂಭವಿಸಿದರೆ ರೋಗಿಯ ಸ್ಥಿತಿ ಬಹಳ ಶೋಚನೀಯ. ರೋಗಿಗೆ ಲಕ್ಷಣಗಳ ಅರಿವಾದೊಡನೆ ಹಾಸಿಗೆಯಲ್ಲಿ ಮಲಗಿರಬೇಕು. ವೈದ್ಯರು ನಿದ್ರೆಗೆ ಔಷಧಗಳನ್ನು ಕೊಡುತ್ತಾರೆ. ನಕ್ಷತ್ರದಂತಿರುವ ನರಜೀವ ಕಣ ಪುಂಜದ ಮೂಲಕ ಚೇತನ ಪ್ರವಾಹಗಳಿಗೆ ಅಡ್ಡಿ ಮಾಡುವ ಔಷಧಗಳನ್ನು ನೇರವಾಗಿ ಪುಂಜಕ್ಕೆ ಕೊಟ್ಟರೆ ರೋಗದ ತತ್‍ಕ್ಷಣ ಮಾಯವಾಗುತ್ತದೆ. ತಜ್ಞರಿಂದ ರೋಗಿಗೆ ದೀರ್ಘಾವಧಿ ಚಿಕಿತ್ಸೆ ಅಗತ್ಯ.
ಶ್ರವಣ ನರದ ಗೆಡ್ಡೆ : ಈ ರೋಗದಲ್ಲಿ ನರ, ಕ್ರಮೇಣ ನಾಶಾವಾಗುತ್ತ ಬರುತ್ತದೆ. ಆದ್ದರಿಂದ ಕಿವುಡಿನಿಂದಲೇ ಈ ರೋಗವಿದೆ ಎಂಬುದರ ಮೊದಲರಿವು. ತಲೆ ತಿರುಗುವುದಷ್ಟಿರುವುದಿಲ್ಲ; ಓಡಾಡುವುದರಲ್ಲಿ ನಯನಾಜೋಕು ಮಾಯವಗುತ್ತದೆ. ರೋಗ ಮುಂದುವರಿದಾಗ ಮುಖದ ಮಾಂಸಖಂಡಗಳ ನಿರ್ಬಲತೆ ಹೆಚ್ಚುತ್ತದೆ. ಸ್ವಾಭಾವಿಕವಾಗಿ ಕಣ್ನಿನ ಕರೀಗುಡ್ಡೆಯನ್ನು ಬೆರಳಿಂದ ಮುಟ್ಟಲು ಹೋದರೆ ಅಥವಾ ಏನಾದರೂ ಬಿದ್ದರೆ ರೆಪ್ಪೆಗಳು ತತ್‍ಕ್ಷಣ ಮುಚ್ಚಬೇಕಷ್ಟೆ. ಈ ರೋಗದಲ್ಲಿ ಈ ರೀತಿಯ ಪ್ರತಿಕ್ರಿಯೆ ಮಾಯವಾಗುತ್ತದೆ. ರೋಗ ನಿರ್ಧರವಾದ ತತ್‍ಕ್ಷಣ ಶಸ್ತ್ರ ಚಿಕಿತ್ಸೆಯಿಂದ ಗೆಡ್ಡೆಯನ್ನು ತೆಗೆಯುವುದು ಈ ರೋಗದ ಚಿಕಿತ್ಸೆ.
ವಿಕಂಪನ ಕಿವುಡು : ತಲೆಗೆ ಏಟು ಬೀಳುವುದರಿಂದ ತತ್‍ಕ್ಷಣ ಪ್ರಜ್ಞೆ ತಪ್ಪಿಯೋ ಹಾಗೇಯೋ ಚಿಪ್ಪಿನ ಎಲುಬು ಮುರಿಯಲು ಸಾಧ್ಯ. ಈ ಸಂದರ್ಭಗಳಲ್ಲಿ ಕೆಲವು ವೇಳೆ ಕಿವುಡೂ ತಲೆಹಾಕಬಹುದು. ಈ ಕಿವುಡು, ಪೆಟ್ಟು ತಗುಲಿದ ಆರು ತಿಂಗಳೊಳಗೆ ಗುಣವಾಗದಿದ್ದರೆ ಖಾಯಂ ಕಿವುಡೆಂದೇ ಪರಿಗಣಿಸಬೇಕು.
ಧ್ವನಿತರಂಗಗಳ ಅಪ್ಪಳಿಸುವಿಕೆಯಿಂದ ಪೆಟ್ಟು : ಅತ್ಯಂತ ಹೆಚ್ಚಿನ ಧ್ವನಿ ಉತ್ಪತ್ತಿಯಾದಾಗ ಈ ಘಾತ ಉಂಟಾಗಬಹುದು. ಒಂದೇ ಸಲ ಅತಿ ಹೆಚ್ಚಿನ ಶಬ್ದದಿಂದಲೂ ಅಥವಾ ಕೆಲವು ಕಸಬುಗಳಲ್ಲಿರುವಂತೆ ಯಾವಾಗಲೂ ಹೆಚ್ಚಿನ ಶಬ್ದದಲ್ಲಿ ಕೆಲಸ ಮಾಡುವುದರಿಂದಲೂ ಈ ಅಪಾಯ ಒದಗಬಹುದು. ಒಳಗಿವಿಯ ಕಾರ್ಟಿ ಅಂಗದಲ್ಲಿರುವ ಕೇಶ ಜೀವಕೋಶಗಳು ನಾಶವಾಗುವುದು ಈ ರೋಗಕ್ಕೆ ಮೂಲ. ಮೊಟ್ಟಮೊದಲ ರೋಗಿಗೆ ಕಿವಿಕೂಗು ತೋರುವುದರ ಜೊತೆಗೆ ಶ್ರವಣನಾಳದೊಳಗೆ ಹತ್ತಿಯಿಟ್ಟಂತೆ ಭಾಸವಾಗುವುದು, ರೋಗಿಗೆ ಮತ್ತೊಬ್ಬರು ಮಾತನಾಡಿದಾಗ ಕೆಲವು ಶ್ರೇಣಿಯ ಶಬ್ದತರಂಗಗಳು ಕೇಳಿಸುವುದಿಲ್ಲ. ಬರಬರುತ್ತ ಕಿವುಡು ಹೆಚ್ಚುವುದು. ಈ ಸ್ಥಿತಿಗೆ ಚಿಕಿತ್ಸೆ ಏನೂ ಇಲ್ಲ. ಅದೇ ಶ್ರೇಣಿಯ ಶಬ್ದ ತರಂಗಗಳಿರುವ ಕಡೆಗಳಿಗೆ ಪುನಃ ಹೋಗದಂತೆ ಎಚ್ಚರ ವಹಿಸಬೇಕು. ಮುಂಜಾಗ್ರತೆ ವಹಿಸುವುದರಿಂದ ಈ ಆಘಾತವನ್ನು ಪೂರ್ಣವಾಗಿ ತಪ್ಪಿಸಬಹುದು.
ಕಿವಿಯ ಹರ್ಪಿಸ್ (ರ್ಯಾಮ್ಸೆ ಹಂಟರನ ಲಕ್ಷಣಾವಳಿ) : ತಂಡತಂಡವಾಗಿ ಗುಳ್ಳೆಗಳೇಳುವ ಒಂದು ಬಗೆಯ ರೋಗ. ಸೀತಾಳ ಸಿಡುಬಿನ ರೋಗಾಣು ಈ ರೋಗಕ್ಕೆ ಕಾರಣವೆಂದು ನಂಬಲಾಗಿದೆ. ಮಿದುಳಿನಲ್ಲಿರುವ ಜೆನಿಕುಲೇಟ್ ನರ ಜೀವಕೋಶದ ಪುಂಜ ಹಾಗೂ ಇತರ ನೇರವಾಗಿ ಬರುವ ಮಿದುಳು ನರಗಳ ಜೀವಕೋಶ ಪುಂಜಗಳ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮವೇ ಹರ್ಪೀಸ್. ಹೊರಗಿವಿಯ ಉಪಪರ್ಣ ಹಾಗೂ ಶ್ರವಣನಾಳಗಳಲ್ಲಿ ಈ ಗುಳ್ಳೆಗಳೆದ್ದು ಉರಿಯೂತಕ್ಕೆ ಕಾರಣವಾಗುತ್ತದೆ. ಮಿದುಳಿನ ಏಳು ಮತ್ತು ಎಂಟನೆಯ ನರಗಳು ಅಂದರೆ ಮುಖನರ ಹಾಗೂ ಶ್ರವಣನರಗಳೂ ಈ ರೋಗಕ್ಕೆ ಸಾಮಾನ್ಯವಾಗಿ ತುತ್ತಾಗುತ್ತದೆ. ಇದರಿಂದ ಮುಖನರದ ಹತೋಟಿನಲ್ಲಿರುವ ಮಾಂಸಖಂಡಗಳು ಪಾಶ್ರ್ವ ವಾಯುವಿಗೊಳಗಾಗುತ್ತವೆ. ಇದರೊಂದಿಗೆ ವಾಂತಿ, ತಲೆಸುತ್ತು, ಕಣ್ಣದಿರಿಕೆ ಮತ್ತು ಕಿವುಡು ಸಹ ತೋರಬಹುದು. ಇದಕ್ಕೆ ನಿರ್ದಿಷ್ಟ ಚಿಕಿತ್ಸೆಯಿಲ್ಲ. ರೋಗಿಗೆ ಯಾವ ಚಿಕಿತ್ಸೆಯಿಂದ ನೆಮ್ಮದಿ ದೊರೆಯುತ್ತದೋ ಆ ಚಿಕಿತ್ಸೆ ಮಾಡಬೇಕು.
ಕಿವಿ ಕ್ಷಯ : ಮಕ್ಕಳಲ್ಲಿ ಈ ರೋಗ ವಿಶೇಷ. ರೋಗ ನಿಧಾನವಾಗಿ ಮುಂದುವರಿಯುತ್ತದೆ. ಒಳಗಿನ ಮೂಳೆಗೆ ಹರಡಿ ಹೊರಗೆ ಯಾವ ಚಿಹ್ನೆಗಳೂ ಇರದಿರಬಹುದು. ಇತರ ಅಂಗಗಳ ಕ್ಷಯ ಕಿವಿ ಕ್ಷಯಕ್ಕೆ ಸೋಂಕಿನ ಮೂಲ. ಯೂಸ್ಟೇಕಿಯನ್ ನಾಳದ ಮೂಲಕ ಸೋಂಕು ಬರುವುದು ಸಾಮಾನ್ಯ. ರಕ್ತದಿಂದಲೂ ಕಿವಿಗೆ ಸೋಂಕು ತಗಲಬಹುದು. ಕ್ಷಯ ರೋಗಿಗಳಿಗೆ ಕೊಡುವಬೇಕಾಗಬಹುದು; ಮ್ಯಾಸ್ಟಾಯಿಡ್ ಶಸ್ತ್ರಚಿಕಿತ್ಸೆ ಅಗತ್ಯವೆನಿಸಬಹುದು.
ಕಿವಿಮೇಹ : ಶಿಶು ಗರ್ಭದಲ್ಲಿರುವಾಗಲೇ ತಾಯಿ ತಂದೆಯರಿಂದ ಈ ಸೋಂಕುಂಟಾಗುತ್ತದೆ. ಹುಟ್ಟುವಾಗಲೇ ಶಿಶು ಕಿವುಡಾಗಿ ಹುಟ್ಟಬಹುದು. ಕೆಲವು ವೇಳೆ 10-14 ವಯಸ್ಸಿನವರಿಗೆ ಕಿವುಡು ಕಾಣಿಸಿಕೊಳ್ಳದಿರುವುದೂ ಸಾಧ್ಯ. ಇದೇ ರೋಗದ ಇತರ ಚಿಹ್ನೆಗಳು ದೇಹದಲ್ಲಿ ಕಂಡುಬರುತ್ತದೆ. ಕಣ್ಣುಗಳಲ್ಲಿ, ಹಲ್ಲುಗಳಲ್ಲಿ ಮುಖ್ಯವಾಗಿ ಈ ರೋಗದ ವಿಶಿಷ್ಟ ಚಿಹ್ನೆಗಳನ್ನು ಕಾಣಬಹುದು.
ದೊಡ್ಡವರಾದ ಮೇಲೆ ಮೇಹ ಅಂಟಿಸಿಕೊಂಡವರಲ್ಲಿ ಎರಡನೆಯ ಹಂತದಲ್ಲಿ ನಡುಗಿವಿಯ ಉರಿಯೂತ ಹಾಗೂ ಕಡೆ ಹಂತಗಳಲ್ಲಿ ಒಳಗಿವಿಯ ನರ ಹಾಗೂ ಸಂಕೀರ್ಣಕುಹರದ ಉರಿಯೂತ ಉಂಟಾಗಿ ಕಿವಿಕೂಗು, ತಲೆಸುತ್ತು ಹಾಗೂ ಕಿವುಡು ಆಗಾಗ್ಯೆ ಕಾಣಿಸಿಕೊಳ್ಳಬಹುದು. ಮೇಹ ರೋಗಿಗೆ ಕೊಡುವ ಚಿಕಿತ್ಸೆಯೇ ಕಿವಿಮೇಹಕ್ಕೂ ಅನ್ವಯಿಸುತ್ತದೆ.
ಮಕ್ಕಳಲ್ಲಿ ಕಿವುಡು : ಮಕ್ಕಳಿಗೆ ಸರಿಯಾಗಿ ಕಿವಿ ಕೇಳಿಸದಿದ್ದರೆ ಮಾತು ಬರುವುದೂ ತಡವಾಗುತ್ತದೆ. ಪೂರ್ಣ ಕಿವುಡಿದ್ದರೆ ಮಾತೇ ಬರುವುದಿಲ್ಲ. ಆದ್ದರಿಂದ ಮಕ್ಕಳಿಗೆ ಮಾತು ಬರುವುದು ತಡವಾದರೆ ತತ್‍ಕ್ಷಣ ಕಿವಿರೋಗ ತಜ್ಞರಿಂದ ಪರೀಕ್ಷೆ ನಡೆಸಿ ಅವರ ಸಲಹೆ ಪಡೆಯುವುದು ಆವಶ್ಯಕ. ಮೂರು ತಿಂಗಳಿನ ಶಿಶು ಶಬ್ದ ಮಾಡಿದರೆ ಅದು ಎಲ್ಲಿಂದ ಎಂಬುದನ್ನು ಗ್ರಹಿಸಬೇಕು, ಎರಡು ವರ್ಷದ್ದು ಹೇಳಿದ್ದನ್ನು ಅರ್ಥ ಮಾಡಿಕೊಂಡು ಅದರಂತೆ ನಡೆಯಬೇಕು ಹಾಗೂ ಮಾತನಾಡುವಾಗ ಶಬ್ದಗಳನ್ನು ಜೋಡಿಸಬೇಕು. ಈ ಕೆಳಗಿನ ಸಂದರ್ಭಗಳಲ್ಲಿ ಮಕ್ಕಳ ಕಿವಿಯ ಕಡೆ ವಿಶಿಷ್ಟ ಗಮನ ಕೊಡಬೇಕು.
1 ಆನುವಂಶಿಕ ರೋಗ-ಉದಾಹರಣೆಗೆ ಕರ್ಣಶಂಖದ ವಿಕಾರ
2 ಗರ್ಭಿಣಿಯಾದಾಗ ಅಪಾಯಕರ ರೋಗಗಳು-ಜರ್ಮನ್ ದಡಾರ, ಆರ್ ಎಚ್ ಅಸಮಂಜಸ, ಮೇಹ, ಅಪಾಯ ಸಂಭವಿಸಬಹುದಾದ ಔಷಧಿಗಳ ಸೇವನೆ.
3 ಹೆರಿಗೆ ಸಮಯದಲ್ಲಿ-ಶಿಶುವಿಗೆ ಆಮ್ಲಜನಕದ ಕೊರತೆ, ಪೆಟ್ಟು ಹಾಗೂ ತಾಯಿಗೆ ಅಪಸ್ಮಾರರೋಗ.
4 ಕೆಲವು ರೋಗಗಳು ವಯಸ್ಸು ಎಷ್ಟೇ ಆದರೂ ಕಿವುಡು ಉಂಟುಮಾಡಬಹುದು. ಉದಾಹರಣೆಗೆ ದಡಾರ, ಮಂಗಬಾವು, ಮಿದುಳಿನ ಹೊರಪದರಗಳ ಉರಿಯೂತ, ನಡುಗಿವಿಯ ಉರಿಯೂತ, ಮ್ಯಾಸ್ಟಾಯಿಡ್ ಎಲುಬಿನ ಉರಿಯೂತ ಇತ್ಯಾದಿ. ಎಳೆ ವಯಸ್ಸಿನಲ್ಲೇ ಈ ರೋಗಗಳು ಬಂದರೆ ಮಾತನಾಡುವುದು ಸಹ ಸರಿಯಾಗಿ ಬರಲಾರದು.
5. ರಕ್ತಸಂಬಂಧದಲ್ಲಿ ಮದುವೆಗಳಾದರೆ.
ಮೇಲೆ ಹೇಳಿದ ಯಾವ ಸಂದರ್ಭಗಳೂ ಇಲ್ಲದೆ ಮಗುವಿಗೆ ಕೇಳಿಸುವುದೋ ಇಲ್ಲವೋ ಎಂಬ ಅನುಮಾನವೂ ಬರಬಹುದು. ಉದಾಹರಣೆಗೆ ಹೇಳಿದ ಮಾತಿಗೆ ಮಗು ಲಕ್ಷ್ಯ ಕೊಡದಿರುವುದು-ಇತ್ಯಾದಿ.
ಮಕ್ಕಳಲ್ಲಿ ಯಾವ ರೀತಿಯ ಕಿವುಡಾದರೂ ಒಂದು ವರ್ಷ ತುಂಬುವ ಮುನ್ನ ತಿಳಿದು ಚಿಕಿತ್ಸೆಗೆ ಒಳಪಡಿಸಿದರೆ ಪರಿಣಾಮ ಆಶಾದಾಯಕ. ಒಂದು ವೇಳೆ ಮಕ್ಕಳು ಕಿವುಡಾದರೂ ಅವರ ಭವಿಷ್ಯ ಈ ದಿನ ಬರಡಲ್ಲ. ಅಂಥವರಿಗೆ ಶ್ರವಣಸಾಧನಗಳಿವೆ, ವಿಶೇಷ ಶಿಕ್ಷಣವಿದೆ.
ಇತರ ವಿಧದ ಕಿವುಡುಗಳು ಹೀಗಿವೆ : 1 ವಯಸ್ಸಾದಂತೆಲ್ಲ ಕಿವಿಮಾಂದ್ಯ ಅಭಿವೃದ್ಧಿಗೊಳ್ಳುವುದು.
2 ಕೆಲವು ರೋಗಾಣುಗಳಿಂದ ಪ್ರೇರಿತವಾದ ರೋಗಗಳಲ್ಲಿ-ಉದಾಹರಣೆಗೆ ಮಂಗಬಾವು, ಇನ್‍ಫ್ಲುಎನ್‍ಜಾó ಇತ್ಯಾದಿ-ಅವುಗಳ ಪರಿಣಾಮದಿಂದ ಉಂಟಾಗುವಂಥದು ಪೂರ್ಣ ಕಿವುಡು ಹಾಗೂ ಖಾಯಂ ಕಿವುಡು.
3 ಕೆಲವು ಔಷಧಗಳ ಸೇವನೆ ವಿಷವಾಗಿ ಪರಿಣಮಿಸಿ ಒಳಗಿವಿಯ ಕೇಶ ಕೋಶ ಅಥವಾ ನರಜೀವ ಕೋಶಗಳ ನಾಶಕ್ಕೆ ಕಾರಣವಾಗಿ ಕಿವುಡು ಸಂಭವಿಸಬಹುದು. ಉದಾಹರಣೆಗೆ ಕ್ವಿನೈನ್ ಮತ್ತು ಸಲಿಸಿಲೇಟ್ಸ್ ಸೇವನೆ. ಈ ಔಷಧಗಳನ್ನು ಮೊದಲಲ್ಲೇ ತ್ಯಜಿಸಿದರೆ ಕಿವುಡು ಮುಂದುವರಿಯುವುದಿಲ್ಲ; ಶ್ರವಣಶಕ್ತಿ ಹಿಂದಿರುಗಬಹುದು. ಸ್ಟ್ರೆಪ್ಟೊಮೈಸಿನ್, ಕ್ಯಾನಮೈಸಿನ್‍ಗಳ (ಕ್ಷಯ ರೋಗ ಚಿಕಿತ್ಸಾ ಔಷಧಿಗಳು) ಸೇವನೆಯಿಂದಲೂ ಈ ರೀತಿ ಕಿವುಡು ಉಂಟಾಗಬಹುದು. ಔಷಧಿಗಳಿಂದ ಚಿಕಿತ್ಸೆ ಪಡೆಯುವಾಗ ಜಾಗರೂಕತೆ ಆವಶ್ಯಕ.
4 ಮಾನಸಿಕ, ಕಿವುಡು ಯುದ್ಧ ಸಮಯದಲ್ಲಿ ಈ ಕಿವುಡನ್ನು ಗಮನಿಸಲಾಯಿತು. ಉದ್ರೇಕಾಘಾತ ಈ ಸ್ಥಿತಿಗೆ ಕಾರಣ. ಶ್ರವಣಾಂಗಗಳಲ್ಲಿ ಯಾವ ಮಾರ್ಪಾಡಾಗಲೀ ರೋಗವಾಗಲೀ ಕಂಡುಬರುವುದಿಲ್ಲ.
ಕಿವಿ ಕೂಗು : ಯಾವ ಶಬ್ದದ ಪ್ರಚೋದನೆಯೇ ಇಲ್ಲದೆ ಕಿವಿಯಲ್ಲಿ ಶಬ್ದ ಕೇಳಿದರೆ ಅದಕ್ಕೆ ಕಿವಿ ಕೂಗು ಅನ್ನುತ್ತಾರೆ. ಕೆಲವು ವೇಳೆ ಶ್ರವಣ ನಾಳದಲ್ಲಿ ಪರವಸ್ತು ಅಥವಾ ಗುಗ್ಗೆ ಕರ್ಣಪೊರೆಗಂಟಿ ಈ ಸ್ಥಿತಿ ಉಂಟಾಗಬಹುದು. ನಡುಗಿವಿಯ ರೋಗದಿಂದಲೂ ಮದ್ಯ, ತಂಬಾಕು. ಆಸ್ಪಿರಿನ್‍ಗಳಿಂದಲೂ ಈ ಜುಗುಪ್ಸೆ ಉಂಟಾಗಬಹುದು.
ಔಷಧಗಳಿಂದಲೇ ಆಗಲಿ ಅಥವಾ ಶಸ್ತ್ರಚಿಕಿತ್ಸೆಯಿಂದಲೇ ಆಗಲಿ ಈ ರೋಗದ ಮೇಲೆ ಪರಿಣಾಮವಿಲ್ಲ.
ಗೋಚರವಾಗುವ ಕಿವಿಕೂಗು : ವ್ಯಕ್ತಿ ಜಾಗರೂಕತೆಯಿಂದ ಗಮನಿಸಿದರೆ ಶಬ್ದವೆಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆಮಾಡಬಹುದು. ರಕ್ತನಾಳದ ಊತ, ದವಡೆ ಕೀಲುಗಳ ರೋಗ ಇತ್ಯಾದಿ ಈ ಕೂಗಿಗೆ ಕಾರಣವಾಗಿರಬಹುದು. ಕಾರಣ ಕಂಡುಹಿಡಿದು ಸೂಕ್ತ ಚಿಕಿತ್ಸೆಯಿಂದ ಗುಣ ಹೊಂದಬಹುದು.
(ಆರ್.ಎಸ್.ವಿ.)