ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಯಿ ಮನೋರೋಗ

ವಿಕಿಸೋರ್ಸ್ದಿಂದ

ನಾಯಿ ಮನೋರೋಗ - ನಾಯಿಗಳನ್ನು ಬಾಧಿಸುವ ಒಂದು ಅಂಟು ರೋಗ (ಕ್ಯಾನೈನ್ ಡಿಸ್ಟೆಂಪರ್). ಇದನ್ನು ಹದಿನೆಂಟನೆ ಶತಮಾನದ ಅಂತ್ಯದಿಂದಲೂ ಗುರುತಿಸಲಾಗಿದೆ. ಹತ್ತೊಂಬತ್ತನೆ ಶತಮಾನದ ಮಧ್ಯದಲ್ಲಿ ಈ ರೋಗವನ್ನು ಪ್ರಯೋಗ-ಶಾಲೆಯಲ್ಲಿ ನಿಶ್ಚಿತವಾಗಿ ಪತ್ತೆಹಚ್ಚಲಾಯಿತು. 1905ರಲ್ಲಿ ಕಾರ್ ಎಂಬ ವಿಜ್ಞಾನಿ ವೈರಸ್ ರೊಗಾಣು ಈ ರೋಗಕ್ಕೆ ಕಾರಣವೆಂದು ಕಂಡುಹಿಡಿದ. 1926ರಲ್ಲಿ ವಿಜ್ಞಾನಿಗಳಾದ ಲೈಡಲೋ ಮತ್ತು ಡಂಕಿನ್ ಇವರುಗಳು ಕಾರ್ ಕಂಡುಹಿಡಿದ ವೈರಸ್ಸೇ ಇದಕ್ಕೆ ಕಾರಣವೆಂದು ದೃಢಪಡಿಸಿದರು.

ಈ ರೋಗದ ಮುಖ್ಯ ಲಕ್ಷಣಗಳೆಂದರೆ ಲೋಳೆಪೊರೆಗಳ ತೀಕ್ಷ್ಣ ರಕ್ತವಿರೋಧ, ಜ್ವರ ಬರುವುದು ಮತ್ತು ಬಿಳಿ ರಕ್ತಕಣಗಳು ಕ್ಷೀಣಿಸುವುದು. ಕೆಲವು ಸಲ ಈ ರೋಗ ಕೆಲವು ದಿನಗಳವರೆಗೆ ಮುಂದೂಡಬಹುದು. ಇಂಥ ಪ್ರಸಂಗಗಳಲ್ಲಿ ದೇಹದ ಉಷ್ಣತೆಯ ಏರಿಳಿತಗಳು, ಮೂಗಿನ ಹೊಳ್ಳೆಗಳಿಂದ ಕೀವಿನಂಥ ಸಿಂಬಳ ಸುರಿಯುವುದು ಮತು ಕಣ್ಣುಗಳಿಂದ ದಟ್ಟವಾದ ಪಿಚ್ಚು ಹೊರಬೀಳುವುದು, ಭೇದಿಯಾಗುವುದು ಕಂಡುಬರುತ್ತದೆ. ಅನಂತರ ನರಗಳಿಗೆ ಧಕ್ಕೆಯಾಗಿ ಅದರಲ್ಲಿಯೂ ನಾಯಿಕುನ್ನಿಗಳಿಗೆ ನಡುಗು ಹುಟ್ಟುತ್ತದೆ. ನಡುಗುವಿಕೆ ಶಾಶ್ವತವಾಗಿ ಉಳಿಯುತ್ತದೆ. ಈ ರೋಗದಿಂದ ಉಂಟಾಗುವ ಮರಣದ ದರ ಬಳಲುವ ಪ್ರಾಣಿಯ ಮನಸ್ಸು ಮತ್ತು ರೋಗದ ಉಗ್ರತೆಯನ್ನು ಅವಲಂಬಿಸುತ್ತದೆ.

ಈ ರೋಗ ವೈರಸ್ಸನಿಂದ ಬರುವಂಥದು. ಈ ರೋಗಾಣುವಿನ ಸಂಗಡ ಬೇರೆ ಕೆಲವು ಕ್ರಿಮಿಗಳು ಸೇರಿ ರೋಗವನ್ನು ಉಲ್ಬಣಗೊಳಿಸುವುವು. ಈ ರೋಗ ಮರಿಗಳಲ್ಲಿ ಹೆಚ್ಚಿಗೆ ಕಂಡುಬಂದು ನಾಯಿಗಳು ಒಂದು ವರುಷದವುಗಳಾದಲ್ಲಿ ಈ ರೋಗಾಣು ಅಂಟಿಕೊಳ್ಳುವ ಸಂಭವ ಇದೆ. ಈ ರೋಗದಿಂದ ನರಳುವ ಪ್ರಾಣಿಗಳ ಸಿಂಬಳ, ಕಣ್ಣೀರು ಅಥವಾ ಮಲದಲ್ಲಿರುವ ರೋಗಾಣುಗಳು ಆಹಾರದೊಡನೆ ಮಿಶ್ರಿತವಾಗಿ ಇತರ ಪ್ರಾಣಿಗಳಿಗೆ ರೋಗ ಹರಡುವುದು. ರೋಗದ ಲಕ್ಷಣಗಳು : ಮರಿಗಳು ತಿನ್ನುವುದು ಬಿಟ್ಟು ನೆಗಡಿಯ ಲಕ್ಷಣಗಳನ್ನು ತೋರಿಸಿ ಸ್ವಲ್ಪ ದಿನಗಳಲ್ಲಿ ಸಾಯುತ್ತವೆ. ಕೆಲವು ಸಲ ಭೇದಿಯಾಗಿ ಕಣ್ಣೊಳಗಿಂದ ಕಣ್ಣೀರು ಸೋರುತ್ತದೆ. ಯಾವಾಗಲೂ ಮೂರು ತಿಂಗಳ ಮರಿಗಳು ಈ ರೋಗವನ್ನು ಹೆಚ್ಚಾಗಿ ಅನುಭವಿಸುತ್ತವೆ.

ಈ ರೋಗದಿಂದ ಬಳಲುವ ನಾಯಿಗಳಲ್ಲಿ 104 ಡಿಗ್ರಿ ಈ ಜ್ವರ ಬರುತ್ತದೆ. ಏನೂ ತಿನ್ನದೇ ಇರುತ್ತವೆ, ಕಣ್ಣುಗಳು ಕೆಂಪಾಗುತ್ತವೆ. ಮೂಗಿನಿಂದ ಸಿಂಬಳ ಮತ್ತು ಕಣ್ಣಿನಿಂದ ನೀರು ಸೋರುತ್ತಿರುತ್ತದೆ. ಎರಡು ಅಥವಾ ಮೂರು ದಿನಗಳ ಅನಂತರ ಜ್ವರ ಕಡಿಮೆಯಾಗುತ್ತದೆ. ಕೆಮ್ಮು ಹೆಚ್ಚಾಗಿದ್ದು ಉಸಿರಾಡಲು ತೊಂದರೆಯಾಗುತ್ತದೆ. ಭೇದಿ ಇದ್ದು ನೆಲದಲ್ಲಿ ಆಮು ಬೀಳುವುದುಂಟು. ಕೊನೆಗೆ ನರಗಳಿಗೆ ಧಕ್ಕೆಯಾಗಿ ನಡುಗಲಿಕ್ಕೆ ಹತ್ತುತ್ತದೆ. ಇಂಥ ಪ್ರಸಂಗಗಳಲ್ಲಿ ಪ್ರಾಣಿಯು ಮೆತ್ತಗಾಗಿ ನಡೆಯುವಾಗ ಜೋಲಿ ಹೊಡೆಯುವುದು, ಸುತ್ತಲೂ ತಿರುಗುವುದು ಮುಂತಾಗಿ ಮಾಡುತ್ತದೆ. ಕ್ರಮೇಣ ನಡುಗುವಿಕೆ ಹೆಚ್ಚಾಗಿ ಗಾಢ ನಿದ್ರೆಯಲ್ಲಿ ತೊಡಗಿ ಕೊನೆಗೆ ಸಾವನ್ನಪ್ಪುತ್ತದೆ. ಈ ನಡುಗುವಿಕೆ ದೇಹದ ಕೆಲವು ಸ್ನಾಯುಗಳಿಗೆ ಅಂಟಿರಬಹುದು. ಇದರಿಂದಾಗಿ ಕೆಲವೊಮ್ಮೆ ನಾಯಿ ರೋಗದಿಂದ ಗುಣಹೊಂದಿದಂತೆ ಕಂಡುಬಂದರೂ ಈ ನಡುಗು ನಾಯಿಯ ಆಯುಷ್ಯದ ಕೊನೆಯವರೆಗೂ ಉಳಿಯುತ್ತದೆ.

ಈ ರೋಗದಿಂದ ಬಳಲಿ ಗುಣಹೊಂದಿದ ಪ್ರಾಣಿಗಳು ತಮ್ಮ ಇಡೀ ಆಯುಷ್ಯ ಈ ರೋಗದಿಂದ ಮುಕ್ತವಾಗಿ ಉಳಿಯುತ್ತವೆ. ಕೋಳಿಮೊಟ್ಟೆಯಲ್ಲಿ ಈ ರೋಗಾಣುವನ್ನು ಪ್ರಯೋಗ ಶಾಲೆಯಲ್ಲಿ ಬೆಳೆಸಿ ಪಡೆದ ಚುಚ್ಚುಮದ್ದು ಈ ರೋಗಕ್ಕೆ ವಿರೋಧ ಶಕ್ತಿಯನ್ನು ಕೊಡುತ್ತದೆ. ಕೆಲವು ರಾಸಾಯನಿಕ ಪದಾರ್ಥಗಳಿಗೆ ಈ ರೋಗಾಣುವನ್ನು ಮಿಶ್ರ ಮಾಡಿದರೆ ಇಂಥ ಚುಚ್ಚುಮದ್ದು ಈ ರೋಗಕ್ಕೆ ನಿರೋಧಕ ಶಕ್ತಿಯನ್ನು ಕೊಡುವುದುಂಟು.

ಈ ರೋಗ ವೈರಸ್‍ನಿಂದ ಬರುವ ಕಾರಣ ಯಾವ ಔಷಧಿಗಳೂ ಉಪಯೋಗವಾಗುವುದಿಲ್ಲ. ಆದರೂ ರೋಗಾಣುವಿರೋಧಿಯನ್ನು ರೋಗ ಆರಂಭವಾದ ಸ್ವಲ್ಪ ಸಮಯದಲ್ಲಿ ಚುಚ್ಚುವ ರೂಢಿ ಇದೆ. ಇದಲ್ಲದೆ 200 ರಿಂದ 500 ಮಿಲೀ, 5% ಡೆಕ್ಸ್‍ಟ್ರೋನ್ ಮತ್ತು 5% ಪ್ರೋಲೀನ್ ಹೈಡ್ರೋಲೆಸೇಟ್‍ಗಳನ್ನು ದೇಹದ ನೀರಿನ ಪ್ರಮಾಣವನ್ನು ಸತತವಾಗಿ ಕಾಪಾಡಲು ಉಪಯೋಗಿಸಬಹುದು. ವಿಟಮಿನ್ ಬಿ ಮತ್ತು ಪ್ರಾಣಿದೇಹ ವಿಜ್ಞಾನ ರೀತಿ ತಯಾರಿಸಿದ ಉಪ್ಪಿನ ನೀರು ಮತ್ತು ಕ್ರಿಮಿವಿರೋಧಕಗಳಿಂದ ಪೆನಿಸಿಲಿನ್, ಸ್ಟ್ರೆಪ್ಟೊಪೆನಿಸಿಲಿನ್ ಇವನ್ನು ಕೂಡ ಉಪಯೋಗಿಸುವ ರೂಢಿ ಇದೆ. ನಡುಗುವಿಕೆಯ ಲಕ್ಷಣಗಳನ್ನು ತಡೆಯಲು ಉಪಯುಕ್ತ ಔಷಧಿಗಳನ್ನು ಪ್ರತಿ 6-12 ಗಂಟೆಯ ಅಂತರದಲ್ಲಿ ಉಪಯೋಗಿಸಲಾಗುತ್ತದೆ. (ಆರ್.ಎಫ್.ವಿ.)