ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದನಗಳು

ವಿಕಿಸೋರ್ಸ್ದಿಂದ

ದನಗಳು ಒಂದು ಅರ್ಥದಲ್ಲಿ ಈ ಪದ ಸಾಕಿದ ಹಸುಗಳಿಗೆ ಮಾತ್ರ ಅನ್ವಯವಾಗುತ್ತದಾದರೂ ವಿಶಾಲಾರ್ಥದಲ್ಲಿ ಎಮ್ಮೆಗಳನ್ನೂ ಒಳಗೊಳ್ಳುತ್ತದೆ. ಟಿಬೆಟ್ ಮುಂತಾದೆಡೆಯಲ್ಲಿ ಯಾಕ್ ಎಂಬ ಪ್ರಾಣಿಗಳಿಗೂ ಇದು ಅನ್ವಯವಾಗುತ್ತದೆ. ಕರಾವಿನ ಆಕಳುಗಳ ಬಗ್ಗೆ ಹಾಗೂ ಎಮ್ಮೆಗಳ ಬಗ್ಗೆ ಬೇರೆ ಸಂಪುಟಗಳಲ್ಲಿ ಈಗಾಗಲೇ ಲೇಖನಗಳು ಬಂದಿರುವುದರಿಂದ ಪ್ರಸಕ್ತ ಲೇಖನದಲ್ಲಿ ದನಗಳ (ಅಂದರೆ ಹಸುಗಳ) ಮಾಂಸದ ತಳಿಗಳನ್ನು, ದುಡಿಮೆಯ ತಳಿಗಳನ್ನು ಹಾಗೂ ದನಗಳ ರೋಗಗಳನ್ನು ಕುರಿತು ವಿವರಿಸಲಾಗಿದೆ.

ವ್ಯವಸಾಯದ ಉದ್ದೇಶಗಳಿಗಾಗಿ ಮಾನವ ಮೊತ್ತಮೊದಲು ಸಾಕತೊಡಗಿದ ಪ್ರಾಣಿಗಳಲ್ಲಿ ದನ ಸಹ ಒಂದೆಂದು ಹೇಳಲಾಗಿದೆ. ಯೂರೋಪಿನ ಪಶ್ಚಿಮ ಭಾಗಗಳಲ್ಲಿನ ಹಳೆಯ ಶಿಲಾಯುಗಕ್ಕೆ ಸಂಬಂಧಿಸಿದ ಕುರುಹುಗಳಲ್ಲಿ ದನಗಳ ಸಾಕಣೆಯ ಪುರಾವೆಗಳಿಲ್ಲವಾದರೂ ನವಶಿಲಾಯುಗದ ವೇಳೆಗೆ ಈ ಉದ್ಯಮ ಅಸ್ತಿತ್ವಕ್ಕೆ ಬಂದಿತ್ತೆಂಬುದಕ್ಕೆ ಸಾಕಷ್ಟು ಅಧಾರಗಳನ್ನು ಸ್ವಿಸ್ ಲೇಕ್ ನಿವಾಸಗಳಲ್ಲಿ ಕಾಣಬಹುದು. ಬ್ಯಾಬಿಲೋನಿಯ ಹಾಗೂ ಈಜಿಪ್ಟ್‍ಗಳಲ್ಲಿ ಕ್ರಿ.ಪೂ. 3,500ಕ್ಕೂ ಹಿಂದಿನಿಂದ ದನಗಳ ಸಾಕಣೆ ಇತ್ತೆಂದು ಹೇಳಲಾಗಿದೆ.

ಭಾರತದಲ್ಲಂತೂ ಬಹಳ ಹಿಂದಿನಿಂದಲೂ ದನಗಳು ಜನಜೀವನದಲ್ಲಿ ತುಂಬ ಪ್ರಮುಖಪಾತ್ರ ವಹಿಸಿವೆ. ಆರ್ಯರು ತಮ್ಮ ದನಗಳ ಯೊಗಕ್ಷೇಮಕ್ಕಾಗಿ ಅವುಗಳಿಗೆ ಹುಲ್ಲು ನೀರು ಯಥೇಚ್ಛವಾಗಿ ದೊರೆಯುತ್ತಿದ್ದ ಸ್ಥಾನಗಳಿಗೆ ವಲಸೆ ಹೋಗುತ್ತಿದ್ದುದಾಗಿ ವೇದಗಳಿಂದ ತಿಳಿದುಬರುತ್ತದೆ. ರಾಜಮಹಾರಾಜರುಗಳು ಪಶುಪಾಲನೆ ನಡೆಸುತ್ತಿದ್ದರು. ಜನಕ ಮತ್ತು ದಿಲೀಪ ಮುಂತಾದ ಮಹಾರಾಜರು ದನಗಳನ್ನು ಸಾಕುತ್ತಿದ್ದರು. ಶ್ರೀಕೃಷ್ಣನಿಗೆ ಗೋಪಾಲ ಎಂಬ ಹೆಸರೇ ಉಂಟು. ಕೌರವರ ಗೋಗ್ರಹಣ ಮಹಾಭಾರತದ ಯುದ್ಧಕ್ಕೆ ಮೂಲವಾಯಿತು. ಯಥೇಚ್ಛವಾಗಿ ಹಿಂಡುತ್ತಿದ್ದ ಕಾಮಧೇನುವಿಗಾಗಿ ಋಷಿ ವಶಿಷ್ಠರಿಗೂ ವಿಶ್ವಾಮಿತ್ರರಿಗೂ ಯುದ್ಧವೇ ಆಯಿತು. ಪಶುಪತಿ ಅಂದರೆ ಈಶ್ವರನಿಗೆ ಪಶುವೇ ವಾಹನ, ಭಾರತದ ಮೂಲೆ ಮೂಲೆಗಳಲ್ಲಿರುವ ಶಿವಾಲಯಗಳ ಮುಂದೆ ಬಸವನ ವಿಗ್ರಹ ಉಂಟು. ಬಸವನಿಗೆಂದೇ ದೇವಸ್ಥಾನಗಳನ್ನೂ ನಿರ್ಮಿಸಿದ್ದಾರೆ. ಬೃಹದಾಕಾರದ ಬಸವನ (ಹೋರಿ) ಶಿಲಾವಿಗ್ರಹಗಳು ಎಲ್ಲೆಡೆಗಳಲ್ಲಿಯೂ ಉಂಟು. ಭಾರತದಲ್ಲಿ ಪಶುಪಾಲನೆಯ ಉಚ್ಚಾಸ್ಥಾನವನ್ನು ಇದು ತೋರಿಸುತ್ತದೆ.

ಪಶುಪಾಲನೆಯ ವಿಚಾರಲ್ಲೂ ಮಹಾಗ್ರಂಥಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಮುಖ್ಯವಾದುವು ವರಾಹಮಿಹಿರನ ಬೃಹತ್ ಸಂಹಿತೆ, ಮತ್ಸ್ಯಪುರಾಣ, ಕಾತ್ಯಾಯನ ಸೂತ್ರದಲ್ಲಿ ಬೀಜದ ಹೊರಿಯ ಲಕ್ಷಣಗಳನ್ನು ತಿಳಿಸಿದೆ. ಸುಮಾರು 5000 ವರ್ಷಗಳ ಹಿಂದೆ ಪಶುಪಾಲನೆ ನಡೆಯುತ್ತಿತ್ತು ಎಂದು ಹರಪ್ಪ, ಮೊಹೆಂಜೊದಾರೊ ಅವಶೇಷಗಳಿಂದ ತಿಳಿದುಬಂದಿದೆ. ಕ್ರಿಸ್ತಪೂರ್ವ 300ರ ಸುಮಾರಿನಲ್ಲಿ ಅರ್ಥಶಾಸ್ತ್ರದಲ್ಲಿ ಕೌಟಿಲ್ಯ ದನಕರುಗಳ ಆಹಾರವನ್ನು ಅವುಗಳ ವಯೋಗುಣಗಳಿಗನುಸಾರವಾಗಿ ಕೊಡುವ ಬಗ್ಗೆ ಹೇಳಿದ್ದಾನೆ. ಅಶೋಕ ಚಕ್ರವರ್ತಿ ತನ್ನ ದೇಶಾದ್ಯಂತ ದನಗಳಿಗೆ ಔಷಧೋಪಚಾರ ಮಾಡಲು ಆಸ್ಪತ್ರೆಗಳನ್ನು ಸ್ಥಾಪಿಸಿದ ಎಂದು ಇತಿಹಾಸ ತಿಳಿಸುತ್ತದೆ.

ಪೂರ್ವಿಕರು ಜನರ ಸಿರಿವಂತಿಕೆಯನ್ನು ಅವರಲ್ಲಿದ್ದ ದನಗಳಿಂದ ಅಳೆಯುತ್ತಿದ್ದರು. ರಾಜಮಹಾರಾಜರುಗಳು ಸಾವಿರಾರು ದನಗಳನ್ನು ಸಾಕುತ್ತಿದ್ದರು. ಮಹಾವೀರನ ಶಿಷ್ಯನಾದ ರಾಜಗೃಹದ ಮಹಾಶಟಕನು 80,000 ದನಗಳನ್ನೂ ಚಂಪಾದೇಶದ ಕಾಮದೇವ, ಕಾಸಿಯ ಸುರದೇವ, ಕಾಂಪೀಲ್ಯದ ಕುಂಡಕೋಕಿಲ, ಅಲಂಬಿಯ ಚೋಳ ಸಿಟಕ ಇವರು ತಲಾ 60,000 ದನಗಳನ್ನೂ ಇಟ್ಟಿದ್ದರಂತೆ. ವಾಣಿಯ ಗ್ರಾಮದ ಆನಂದನೂ ಶರವಸ್ತಿಯ ನಂದಿನೀಪಿತನೂ 40,000 ದನಗಳನ್ನು ಇಟ್ಟಿದ್ದರಂತೆ. ಮಹಾಶಟಕನ ಹೆಂಡತಿ ರೇವತಿ 80,000 ದನಗಳನ್ನು ಬಳುವಳಿಯಾಗಿ ತಂದಳಂತೆ. ಭಾರತದ ಮೇಲೆ ದಂಡೆತ್ತಿ ಬಂದಿದ್ದ ಅಲೆಗ್ಸಾಂಡರ್ 2000 ದನಗಳನ್ನು ಭಾರತದಿಂದ ಗ್ರೀಸ್‍ಗೆ ಸಾಗಿಸಿದನಂತೆ.

ದನಗಳು ಮಾನವನ ಮುನ್ನಡೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆಯೆಂದು ಹೇಳಲಾಗಿದೆ. ಆಧುನಿಕ ಸಾಧನಗಳು ಬರುವ ಮುನ್ನ ಗಾಡಿ ಎಳೆಯುವ ಎತ್ತಿನ ಸಹಾಯದಿಂದ ಮಾನವನು ದೇಶದಿಂದ ದೇಶಕ್ಕೆ ವಲಸೆ ಹೋಗಲು ಅನುಕೂಲವಾಯಿತು. ಉಳುಮೆ ಮಾಡುವುದನ್ನು ಕಲಿತಮೇಲೆ ಮಾನವಕುಲ ಊರುಗಳನ್ನು ಕಟ್ಟಿ ಒಂದು ಸ್ಥಳದಲ್ಲಿ ನೆಲೆಸಲು ಸಾಧ್ಯವಾಯಿತು. ಹಾಲು ಮತ್ತು ಬೆಣ್ಣೆಗಳ ಉಪಯೋಗ ಆರಂಭವಾಯಿತು. ದನಗಳ ಗೊಬ್ಬರ ಭೂಮಿಗೆ ಸಾರವನ್ನು ಒದಗಿಸಿ ಆಹಾರ ಉತ್ಪತ್ತಿಯ ಹೆಚ್ಚಳದ ಸಾಧನವಾಯಿತು.

ಭಾರತದಲ್ಲಿ ಅಪಾರಸಂಖ್ಯೆಯಲ್ಲಿ ದನಗಳುಂಟು. 1961-62ರ ಪ್ರಪಂಚದಲ್ಲಿ 1,115 ದಶಲಕ್ಷ ಆಕಳು ಮತ್ತು ಎಮ್ಮೆಗಳಿದ್ದುವೆಂದೂ ಇದರಲ್ಲಿ ಭಾರತವೊಂದರಲ್ಲೇ 226.8 ದಶಲಕ್ಷ ಇದ್ದುವೆಂದೂ ಹೇಳಲಾಗಿದೆ. ಆದರೆ ಪಶುಸಂಪತ್ತಿನ ಉತ್ಪಾದನಾಸಾಮಥ್ರ್ಯ ಮಾತ್ರ ಇದರ ಗಾತ್ರಕ್ಕೆ ಅನುಗುಣವಾಗಿಲ್ಲ. ಹಣದ ಲೆಕ್ಕದಲ್ಲಿ ಇದು ಕೇವಲ 11,6000 ದಶಲಕ್ಷ ರೂಪಾಯಿಗಳಷ್ಟಿತ್ತೆಂದು ಅಂದಾಜು ಮಾಡಲಾಗಿದೆ.

ಭಾರತದಲ್ಲಿ ಸಂಖ್ಯೆಗಳ ದೃಷ್ಟಿಯಿಂದ ದನಗಳು ಹೆಚ್ಚಾಗಿದ್ದರೂ ಜನಸಂಖ್ಯೆಗೂ ದನಗಳ ಸಂಖ್ಯೆಗೂ ಇರುವ ಅನುಪಾತ ಬೇರೆ ರಾಷ್ಟ್ರಗಳಿಗೆ ಹೋಲಿಸಿ ನೋಡಿದರೆ ಭಾರತದಲ್ಲಿ ಬಲು ಕಡಿಮೆ ಇದೆ. ಉದಾಹರಣೆಗೆ, ಅರ್ಜಂಟೀನ, ನ್ಯೂಜಿóೀಲೆಂಡ್, ಆಸ್ಟ್ರೇಲಿಯ, ಕೆನಡ, ಡೆನ್‍ಮಾರ್ಕ್, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪ್ರತಿ 100 ಮಂದಿಗೆ ದನಗಳ ಸಂಖ್ಯೆ ಅನುಕ್ರಮವಾಗಿ 241, 268, 199, 90, 79, 58 ಇದ್ದರೆ ಭಾರತದಲ್ಲಿ ಕೇವಲ 44 (1961).

ಭಾರತದ ವಾಯುಗುಣ ವೈವಿಧ್ಯಮಯವಾಗಿರುವುದರಿಂದ ದನಗಳ ಆಕಾರ, ಸ್ವಭಾವ, ಲಕ್ಷಣಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು. ಉದಾಹರಣೆಗೆ ಪಂಜಾಬ್, ರಾಜಸ್ಥಾನ, ಮಹಾರಾಷ್ಟ್ರ, ಕಾರ್ನಾಟಕ, ಆಂಧ್ರಪ್ರದೇಶಗಳ ದನಗಳು ಅತ್ಯುತ್ತಮ ಬಗೆಯವಾಗಿದ್ದರೆ ಅಸ್ಸಾಂ, ಕೇರಳ, ಬಂಗಾಳ, ಒರಿಸ್ಸಗಳಲ್ಲಿನವು ಕೆಳದರ್ಜೆಯವೆನಿಸಿವೆ. ಮಲೆನಾಡು ಪ್ರದೇಶಗಳಲ್ಲಿನ ದನಗಳು ಸಾಮಾನ್ಯವಾಗಿ ತೀರ ಸಾಧಾರಣ ಬಗೆಯವು. ಭಾರತದಲ್ಲಿ ಸುಮಾರು 26 ಬಗೆಯ ದನದ ತಳಿಗಳಿವೆ ಎಂದು ತಿಳಿಯಲಾಗಿದೆ. ಇವುಗಳಲ್ಲಿ ಕೆಲವನ್ನು ಮಾತ್ರ ವಿವರಿಸಲಾಗಿದೆ.

ದನಗಳ ತಳಿಗಳು : ಪ್ರಪಂಚದ ದನಗಳನ್ನು ಎರಡು ಮುಖ್ಯ ಬಗೆಗಳನ್ನಾಗಿ ವಿಂಗಡಿಸಲಾಗಿದೆ : 1. ಹಿಣಿಲು ಇರುವ ದನಗಳು, 2. ಹಿಣಿಲು ಇಲ್ಲದ ದನಗಳು.

ಭಾರತದ ದನಗಳು ಹಿಣಿಲು ಇರುವ ದನಗಳ ಗುಂಪಿಗೆ ಸೇರಿವೆ. ಇದನ್ನು ಪರದೇಶಗಳಲ್ಲಿ ಜಿóೀಬು ಅಥವಾ ಬ್ರಾಹ್ಮಣಿ ಜಾತಿಯ ದನಗಳೆಂದು ಕರೆಯುವುದುಂಟು. ಇವಕ್ಕೆ ಪರದೇಶಗಳಲ್ಲಿ ಪುರಸ್ಕಾರ ದೊರೆತಿದೆ. ಇದಕ್ಕೆ ಕಾರಣ ಇವುಗಳ ಕಷ್ಟಸಹಿಷ್ಣುತೆ, ಸಾಧುತನ, ಮೈಚರ್ಮವನ್ನು ಅಲುಗಿಸಿ ಕ್ರಿಮಿಕೀಟಗಳನ್ನು ಓಡಿಸುವ ಸಾಮಥ್ರ್ಯ, ಉಷ್ಣದೇಶದ ರೋಗಗಳನ್ನು ಬಿಸಿಲು ಬೇಗೆಯನ್ನೂ ತಡೆಯುವ ಅಲ್ಲದೆ ಸೊಪ್ಪುಸೆದೆಗಳನ್ನು ಜೀರ್ಣೀಸಿಕೊಳ್ಳುವ ಸಾಮಥ್ರ್ಯ. ಅಮೆರಿಕದಲ್ಲಿ ಭಾರತದ ಹೋರಿಗಳನ್ನು ಅಲ್ಲಿನ ಹರ್‍ಫರ್ಡ್ ಮತ್ತು ಷಾರ್ಟ್ ಹಾರ್ನ್ ಜಾತಿಯ ದನಗಳೊಂದಿಗೆ ಅಡ್ಡಹಾಯಿಸಿ ಸಾಂಟಾ ಗರ್‍ಟ್ರೂಡಿಸ್ ಎಂಬ ಒಂದು ಹೊಸ ತಳಿಯನ್ನು ಪಡೆಯಲಾಗಿದೆ.

ಭಾರತದ ದನಗಳನ್ನು ಐದು ಬಗೆಗಳಾಗಿ ವಿಂಗಡಿಸಬಹುದು :
	1. ಹೈನದ ತಳಿಗಳು (ಡ್ರೇರಿ ಬ್ರೀಡ್ಸ್)

2. ದುಡಿಮೆಯ (ಎಳೆಯುವ) ತಳಿಗಳು (ಡ್ರಾಫ್ಟ್ ಬೀಡ್ಸ್) 3. ದ್ವೈತೋದ್ದೇಶ ತಳಿಗಳು (ಡ್ಯುಯಲ್-ಪರ್‍ಪಸ್ ಬ್ರೀಡ್ಸ್) 4. ಬೆಟ್ಟಗಾಡಿನ ತಳಿಗಳು (ಹೀಲ್ ಬ್ರೀಡ್ಸ್) 5. ಅಡ್ಡತಳಿಗಳು (ಕ್ರಾಸ್ ಬ್ರೀಡ್ಸ್)

1. ಹೈನದ ತಳಿಗಳು : ಈ ತಳಿಗಳು ಹೆಚ್ಚು ಹಾಲು ಕರೆಯುತ್ತವೆ. ಈ ಜಾತಿಯ ದನಗಳ ಬೆನ್ನು ಅಗಲವಾಗಿ ನೇರವಾಗಿ ಸಮವಾಗಿರುವುದಲ್ಲದೆ ಎದೆ ವಿಶಾಲವಾಗಿರುತ್ತದೆ. ಕೆಚ್ಚಲು ದಪ್ಪನಾಗಿ ಹಿಂದಿನ ಕಾಲಿನ ತೊಡೆಗಳಿಂದ ಮುಂದೆ ಹೊಟ್ಟೆಗೆ ಆತುಕೊಂಡಿರುತ್ತದೆ. ಮೊಲೆಗಳು ದಪ್ಪನಾಗಿ ನೀಳವಾಗಿ ಸರಿಯಾದ ಅಂತರದಲ್ಲಿರುತ್ತವೆ.

ಈ ತಳಿಗಳ ಹೊರಿಗಳು ಮತ್ತು ಎತ್ತುಗಳು ಮುಂದಗಾಮಿಗಳೂ ಸೋಮಾರಿಗಳೂ ಆಗಿದ್ದು ದುಡಿಮೆಗೆ ಹೆಚ್ಚು ಪ್ರಯೋಜನವೆನಿಸಿಲ್ಲ.

2. ದುಡಿಮೆಯ ತಳಿಗಳು : ನಮ್ಮ ದೇಶದಲ್ಲಿ ದುಡಿಯುವ ರಾಸುಗಳಿಗೆ ಪ್ರಮುಖ ಸ್ಥಾನವಿದೆ. ದೇಶದ ವ್ಯವಸಾಯ ಮತ್ತು ಕಾಳುಕಡ್ಡಿಗಳ ಸಾಗಾಣಿಕೆಯ ಸೇ. 90 ಭಾಗ ಈ ಬಗೆಯ ದನಗಳಿಂದಲೇ ಸಾಗುತ್ತಿದೆ. ಈ ಜಾತಿಯ ಹಸುಗಳು ಹೆಚ್ಚು ಹಾಲು ಕೊಡುವುದಿಲ್ಲ. ಅವುಗಳ ಹಾಲು ಕರುಗಳಿಗೆ ಮಾತ್ರ ಸಾಕಾಗುತ್ತದೆ. ಇವುಗಳ ದೇಹ ಗಟ್ಟಿಯಾಗಿಯೂ ತೆಳ್ಳಗೂ ಕಾಲುಗಳು ದುಂಡಗು ನೀಳವಾಗಿಯೂ ಮುಂಡ ಉದ್ದವಾಗಿಯೂ ಕತ್ತು ಮೊಟಕಾಗಿಯೂ ಇದೆಯಲ್ಲದೆ ಚರ್ಮ ಶರೀರಕ್ಕೆ ಅಂಟಿಕೊಂಡು ನೋಟದಲ್ಲಿ ಚುರುಕು ಮತ್ತು ಹುಮ್ಮಸ್ಸು ಎದ್ದು ಕಾಣುತ್ತಿರುತ್ತದೆ.

3. ದ್ವೈತೋದ್ದೇಶ ತಳಿಗಳು : ಪಾಶ್ಚಿಮಾತ್ಯ ದೇಶಗಳಲ್ಲಿ ದ್ವೈತೋದ್ದೇಶ ತಳಿಗಳೆಂದರೆ ಹಸು ಹಾಲಿಗೂ ಮತ್ತು ಗೂಳಿಗಳು ಮಾಂಸಕ್ಕೂ ಉಪಯುಕ್ತವಾದ ಪ್ರಾಣಿಗಳೆಂದು ಅರ್ಥಮಾಡುತ್ತಾರೆ. ಭಾರತದಲ್ಲಾದರೋ ಈ ತೆರನ ರಾಸುಗಳೆಂದರೆ ಹಸು ಹಾಲು ಕರೆಯಲೂ ಗಂಡು ರಾಸುಗಳು ದುಡಿಮೆಗೂ ಯೋಗ್ಯವಾದ ಬಗೆಗಳೆಂದು ಭಾವಿಸಲಾಗಿದೆ. ಈ ತೆರನ ದನಗಳಲ್ಲಿ ಮೊದಲಿನ ಎರಡು ರೀತಿಯ ತಳಿಗಳ ಒಳ್ಳೆಯ ಗುಣಗಳು ಅಡಕವಾಗಿವೆ. ಹರಿಯಾಣ, ಕಾಂಕ್ರೇಜ್ ಮತ್ತು ಓಂಗೋಲ್ ಜಾತಿಯ ದನಗಳು ಈ ಗುಂಪಿನ ತಳಿಗಳಲ್ಲಿ ಹೆಸರಾಗಿವೆ.

4. ಬೆಟ್ಟಗಾಡಿನ ತಳಿಗಳು : ಈ ದನಗಳು ಯಾವುದೊಂದು ನಿರ್ದಿಷ್ಟ ತಳಿಗೆ ಸೇರಿದ ದನಗಳೆಂದು ಹೇಳಲಾಗುವುದಿಲ್ಲ. ಇವು ಗಾತ್ರದಲ್ಲಿ ಸಣ್ಣವು. ಮಲೆನಾಡು ಗಿಡ್ಡಗಳೆಂದು ಇವನ್ನು ಸಾಮಾನ್ಯವಾಗಿ ಕರೆಯಲಾಗುತ್ತದೆ. ಇವುಗಳ ಮೈ ಬಣ್ಣ ಕಪ್ಪು, ಅಥವಾ ಕೆಂಪು ಬಿಳಿ, ಬಣ್ಣಗಳ ಮಿಶ್ರಣ. ಈ ರಾಸುಗಳು ಹಾಲಿಗೂ ಪ್ರಯೋಜನವಿಲ್ಲ. ದುಡಿಮೆಗೂ ಪ್ರಯೋಜನವಿಲ್ಲ. ಮಲೆನಾಡು ರೈತರು ಗೊಬ್ಬರಕ್ಕಾಗಿ ಈ ದನಗಳನ್ನು ಸಾಕುತ್ತಾರೆ.

5. ಅಡ್ಡತಳಿಗಳು : ಇತ್ತೀಚಿನ ಭಾರತದ ತಳಿಗಳ ಹಾಲು ಹೆಚ್ಚುವಂತೆ ಮಾಡಲು ಪರದೇಶಗಳಲ್ಲಿ ಹಾಲಿಗೆ ಹೆಸರಾದ ಹಾಲ್‍ಸ್ಟೀನ್, ಜರ್ಸಿ ರೆಡ್ ಡೇನ್, ಬ್ರೌನ್‍ಸ್ವಿಸ್, ಮೊದಲಾದ ದನಗಳನ್ನು ಆಮದು ಮಾಡಿಕೊಂಡು ಈ ಜಾತಿಯ ಹೋರಿಗಳನ್ನು ನಮ್ಮ ಹಸುಗಳಿಗೆ ಅಡ್ಡಹಾಯಿಸಿ ಅಡ್ಡತಳಿಗಳನ್ನು ಉತ್ಪಾದಿಸುವ ಕಾರ್ಯಕ್ರಮವನ್ನು ದೇಶದ ನಾನಾ ಭಾಗಗಳಲ್ಲಿ ಕೈಗೊಳ್ಳಲಾಗಿದೆ. ಹೀಗೆ ಪಡೆಯಲಾದ ಹಸುಗಳು ಹೆಚ್ಚು ಹಾಲು ಕರೆಯುತ್ತವೆ.

	ಈ ಐದು ಮುಖ್ಯ ಗುಂಪುಗಳಿಗೆ ಸೇರಿದ ಕೆಲವು ಪ್ರಧಾನ ಬಗೆಗಳನ್ನು ಕೆಳಗೆ ವಿವರಿಸಿಲಾಗಿದೆ.

i ಸಿಂಧಿ : ಇದರ ಬಣ್ಣ ಕೆಂಪು. ಗಾತ್ರ ಮಧ್ಯಮ. ಕೊಂಬು ಮೋಟು. ಸ್ವಭಾವ ಸಾಧು. ಈ ಜಾತಿಯ ಹಸುಗಳು ಸಾಮಾನ್ಯವಾಗಿ ಒಂದು ಸೂಲಿನಲ್ಲಿ 1750-5500 ಕೆಜಿ ಹಾಲು ಕರೆಯುತ್ತವೆ. ಈ ಜಾತಿಯ ದನಗಳು ಎಲ್ಲ ಹವಾಮಾನಕ್ಕೂ ಒಗ್ಗುವುದರಿಂದ ಭಾರತದ ಎಲ್ಲ ಭಾಗಗಳಲ್ಲೂ ತಳಿ ಅಭಿವೃದ್ಧಿಗಾಗಿ ಉಪಯೋಗಿಸಲಾಗುತ್ತಿದೆ. ಅಲ್ಲದೆ ಮಲಯ, ಕೊರಿಯ, ಬ್ರಜಿóಲ್, ಕ್ಯೂಬ, ಮೊದಲಾದ ಹೊರದೇಶಗಳವರೆಗೂ ಆಮದು ಮಾಡಿ ಕೊಂಡಿದ್ದಾರೆ. ಸಿಂಧಿ ದನಗಳ ಮೂಲನೆಲೆ ಪಾಕಿಸ್ತಾನದ ಕರಾಚಿ ಮತ್ತು ಹೈದರಾಬಾದು ಡಿಸ್ಟ್ರಿಕ್.

ii ಷಾಹಿವಾಲ್ : ಇದರ ಬಣ್ಣ ಕೆಂಪು ಮಿಶ್ರಿತ ಬಿಳುಪು. ಗಾತ್ರ ದೊಡ್ಡದು. ಮೋಟಾದ ದಪ್ಪನೆಯ ಕೊಂಬು, ಸಡಿಲವಾದ ಚರ್ಮ ಮತ್ತು ನುಣುಪಾದ ಕೂದಲು ಇದರ ಇನ್ನು ಕೆಲವು ಲಕ್ಷಣಗಳು. ಹಸುಗಳ ಕೆಚ್ಚಲು ದಪ್ಪವಾಗಿಯೂ ಹೆಚ್ಚು ಹಾಲು ಹಿಡಿಯುವಂತಹದೂ ಆಗಿದ್ದು ಮೊಲೆಗಳು ನೀಳವಾಗಿವೆ. ಇದು ಉತ್ತಮ ಹೈನದ ಜಾತಿ. ಒಂದು ಸೂಲಿನಲ್ಲಿ ಸರಾಸರಿ 2750-4550 ಕೆಜಿ ಹಾಲು ಕರೆಯುತ್ತವೆ. ಈ ಜಾತಿಯ ಎತ್ತುಗಳು ಸೋಮಾರಿಗಳು, ಮಂದಗಾಮಿಗಳು. ಹೋರಿಗಳ ಹಿಣಿಲು ಕಡಿದಾಗಿಯೂ ದಪ್ಪವಾಗಿಯೂ ಇದೆ. ಗಂಗೆದೊಗಲು ದಪ್ಪ ಮತ್ತು ವಿಶಾಲ. ಈ ತಳಿ ಉತ್ತರ ಭಾರತದಲ್ಲಿ ಹೆಚ್ಚಾಗಿದೆ.

iii ಥರ್‍ಪಾರ್ಕರ್ : ಇದರ ಬಣ್ಣ ಬಿಳಿ ಅಥವಾ ಬೂದು. ಗಾತ್ರ ಮಧ್ಯಮ. ಇದಕ್ಕೆ ಮುಂದಕ್ಕೆ ಬಗ್ಗಿರುವ ಸಣ್ಣ ಕೊಂಬುಗಳುಂಟು. ಒಳ್ಳೆಮೈಕಟ್ಟಿನಿಂದ ಕೂಡಿ ಸಡಿಲವಾದ ಚರ್ಮವನ್ನು ಪಡೆದಿದೆ. ಈ ತಳಿಯ ಹಸುಗಳು ಹಾಲಿಗೂ ಎತ್ತುಗಳು ದುಡಿಮೆಗೂ ಹೆಸರಾಗಿವೆ. ಹಸುಗಳು ಒಂದು ಸೂಲಿನಲ್ಲಿ 1600-2000 ಕೆಜಿ ಹಾಲು ಕರೆಯುತ್ತವೆ. ಈ ದನಗಳ ಮೂಲ ಸ್ಥಾನ ಪಾಕಿಸ್ತಾನದ ಥರ್‍ಪಾರ್ಕರ್ ಜಿಲ್ಲೆ. ಆದರೆ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಇವನ್ನು ಕಾಣಬಹುದು.

iv ಗಿರ್ : ಈ ತಳಿಯ ಬಣ್ಣ ಕೆಂಪು. ಬಿಳಿ ಅಥವಾ ಕಪ್ಪು ಚುಕ್ಕೆಗಳಿಂದ ಕೂಡಿರುತ್ತದೆ. ಅಲ್ಲದೆ ಅಗಲವಾದ ಕೆಂಪು ಮತ್ತು ಕಪ್ಪು ಪಟ್ಟೆಗಳಿಂದ ಕೂಡಿರುವುದುಂಟು. ದೊಡ್ಡ ದೇಹ, ಎತ್ತರವಾದ ಕಾಲುಗಳು, ದೊಡ್ಡತಲೆ, ಉಬ್ಬಿದ ಮತ್ತು ಅಗಲವಾದ ಹಣೆ, ಗುಳಿ ಬಿದ್ದಿರುವ ಕಣ್ಣು, ಹಿಂದಕ್ಕೆ ಸುರುಳಿ ಸುತ್ತಿರುವ ಕೊಂಬುಗಳು. ನೀಳವಾಗಿ ಜೋಲುಬಿದ್ದಿರುವ ಕಿವಿಗಳಿಂದ ಕೂಡಿದ್ದು ನೋಡಿದರೆ ಅರೆ ನಿದ್ರೆಯಲ್ಲಿರುವಂತೆ ಕಾಣುವ ಸೋಮಾರಿ ದನಗಳು. ಈ ದನಗಳು ಹಾಲಿಗೆ ಪ್ರಸಿದ್ಧಿಯಾಗಿವೆ. ವರ್ಷದಲ್ಲಿ ಸರಾಸರಿ 1600 ಕೆಜಿ ಗಳಷ್ಟು ಹಾಲು ಕರೆಯುತ್ತವೆ. ಎತ್ತುಗಳು ಮಂದಗಾಮಿಗಳಾದರೂ ಕೆಲಸಕ್ಕೆ ಯೋಗ್ಯವಾಗಿವೆ.

v ಹರಿಯಾಣ : ಬಣ್ಣ ಬಿಳಿ ಅಥವಾ ಕಂದು. ಗಾತ್ರ ಮಧ್ಯಮ, ಸಣ್ಣ ತಲೆ, ಚಪ್ಪಟೆಯಾದ ಹಣೆಯ ಮೇಲ್ಭಾಗದ ನೆತ್ತಿಯ ತುದಿ ಎರಡು ಕೋಡುಗಳ ಮಧ್ಯೆ ಎದ್ದು ಕಾಣುತ್ತದೆ. ಈ ಉಬ್ಬು ಹರಿಯಾಣ ಜಾತಿಯ ವೈಶಿಷ್ಟ್ಯ. ಕೊಂಬುಗಳು 6-9ಗಳಷ್ಟು ಬೆಳೆಯುತ್ತವೆ. ಈ ಜಾತಿಯ ದನಗಳು ದ್ವೈತೋದ್ದೇಶದ ತಳಿಗಳ ಗುಂಪಿಗೆ ಸೇರಿವೆ. ಎತ್ತುಗಳು ಬಿರುಸಿನಿಂದ ಚುರುಕಾಗಿ ಕೆಲಸಮಾಡುತ್ತವೆ. ಹಸುಗಳು ಚೆನ್ನಾಗಿ ಹಾಲು ಕರೆಯುತ್ತವೆ. ಒಂದು ಸೂಲಿನಲ್ಲಿ 1000-1500 ಕೆಜಿಗಳಷ್ಟು ಹಾಲು ಕರೆಯುತ್ತವೆ.

vi ಕಾಂಕ್ರೇಜ್ : ಬಣ್ಣ ಬೂದು ಅಥವಾ ಬಿಳಿ. ದೃಢಕಾಯದ ದೊಡ್ಡ ಗಾತ್ರದ ತಳಿ ಇದು. ಸುರುಳಿ ಸುತ್ತಿ ನೆಟ್ಟಗೆ ಮೇಲೆದ್ದು ಹಿಂದಕ್ಕೆ ಬಾಗಿರುವ ದಪ್ಪನೆಯ ಕೊಂಬುಗಳು. ಹಸನ್ಮುಖದ ಎತ್ತಿದ ತಲೆಯ ರಾಜಠೀವಿಯ ನಡಗೆಯ ಈ ದನಗಳು ಗುಜರಾತಿನಲ್ಲಿ ಜನಪ್ರಿಯವಾಗಿವೆ. ಇವುಗಳ ಮೂಲ ಸ್ಥಾನ ಗುಜರಾತಿನ ಕಚ್ ಮತ್ತು ಬನಾಸ್- ಸರಸ್ವತಿ ನದಿಗಳ ತೀರ. ಈ ಜಾತಿಯ ಹಸುಗಳು ಸೂಲಿಗೆ ಸರಾಸರಿ 1600 ಕೆಜಿ ಹಾಲನ್ನು ಕೊಡುತ್ತವೆ. ಎತ್ತುಗಳು ಚುರುಕಾಗಿ ನಡೆಯುವುದಲ್ಲದೆ ಹೆಚ್ಚು ಭಾರವನ್ನು ಎಳೆಯುವುವು.

vii ಓಂಗೋಲ್ : ಮೈ ಬಣ್ಣ ಬಿಳಿ, ತೊಡೆಗಳ ಮೇಲೆ ಬೂದು ಬಣ್ಣವುಂಟು. ದೃಢಕಾಯದ ದೊಡ್ಡ ರಾಸು ಇದು. ಆದಾಗ್ಯೂ ಮೃದು ಮತ್ತು ಸಾಧುಸ್ವಭಾವವುಳ್ಳದ್ದು. ಕೊಂಬುಗಳು ದಪ್ಪಗೂ ಮೋಟಾಗಿಯೂ ಇವೆ. ಈ ತಳಿ ಕೂಡ ದ್ವೈತೋದ್ದೇಶದ್ದು. ಎತ್ತುಗಳು ಮಂದಗಾಮಿಗಳಾದರೂ ಎರೆಭೂಮಿ ಉಳುಮೆಗೂ ಹೆಚ್ಚು ಭಾರವನ್ನು ಎಳೆಯುವುದಕ್ಕೂ ಹೆಸರಾಗಿವೆ. ಹಸುಗಳು ಸಾಮಾನ್ಯವಾಗಿ ಒಂದು ಸೂಲಿನಲ್ಲಿ 1600 ಕೆಜಿ ಹಾಲು ಕರೆಯುತ್ತವೆ. ಈ ತಳಿಯ ಮೂಲಸ್ಥಾನ ಆಂಧ್ರಪ್ರದೇಶದ ಓಂಗೋಲ್ ಜಿಲ್ಲೆ.

viii ಕಂಗಾಯಮ್ : ಬಣ್ಣ ಕರುಗಳಲ್ಲಿ ಕೆಂಪು, ವಯಸ್ಸಿಗೆ ಬಂದ ಮೇಲೆ ಬೂದು ಅಥವಾ ಬಿಳಿ. ಗಾತ್ರ ಮಧ್ಯಮ. ಕೋಡು ತಲೆಯ ಮೇಲೆ 1/2 m. ಉದ್ದಕ್ಕೆ ಬೆಳೆದು ಚೂಪಾಗಿದೆ. ಈ ಜಾತಿ ಕರ್ನಾಟಕದ ಹಳ್ಳಿಕಾರ್ ದನಗಳನ್ನು ಹೋಲುತ್ತದೆ. ಆದರೆ ಮೈಕಟ್ಟು ಹಳ್ಳಿಕಾರ್ ರಾಸುಗಳಿಗಿಂತ ಸ್ವಲ್ಪ ದಪ್ಪ. ಹಸುಗಳು ದಿನ ಒಂದಕ್ಕೆ 1.1/2-2.1/2 ಕೆಜಿ ಗಳವರೆಗೆ ಕರೆಯುತ್ತವೆ. ಈ ದನಗಳ ಮೂಲಸ್ಥಾನ ಚೆನ್ನೈ ರಾಜ್ಯದ ಕೊಯಮತ್ತೂರು ಜಿಲ್ಲೆ. ಎತ್ತುಗಳು ದುಡಿಮೆಯ ಸಾಮಥ್ರ್ಯಕ್ಕೆ ಹೆಸರಾಗಿವೆ.

ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ತಳಿಗಳು : 1. ಅಮೃತಮಹಲ್ : ಬಣ್ಣ ಬೂದು ಮತ್ತು ಬಿಳುಪು. ಹೋರಿಗಳ ಮೈ ಸಾಮಾನ್ಯವಾಗಿ ಬೂದು ಬಣ್ಣ, ತೊಡೆ, ಮುಖ ಮತ್ತು ಕತ್ತು ಕಪ್ಪು ಬಣ್ಣದವು. ಗಾತ್ರ ಮಧ್ಯಮ. ಕೋಪೋದ್ರೇಕ ಸ್ವಭಾವದವು. ಅಗಲವಾದ ಹಣೆ, ನೀಳಾದ ಮುಖ, ಕೊಂಬುಗಳು ನೆತ್ತಿಯ ಮೇಲೆ ಒಂದರ ಪಕ್ಕದಲ್ಲೊಂದು ಹೊರಟು 2 ಅಥವಾ 21/2ಗಳ ತನಕ ಬೆಳೆದು ಬಿಲ್ಲಿನಂತೆ ಮುಂಭಾಗಕ್ಕೆ ಬಾಗಿರುವುದು ಹಾಗೂ ಬಾಲದ ಕೂದಲು ಕಾಲ್ಗೊರಸಿನ ವರೆಗೆ ನೀಳವಾಗಿ ಬೆಳೆದಿರುವುದು, ಇವುಗಳ ಮುಖ್ಯ ಲಕ್ಷಣ.

ಅಮೃತಮಹಲ್ ದನಗಳು ದೇಶವಿದೇಶಗಳಲ್ಲಿ ವಿಖ್ಯಾತವಾಗಿವೆ. ಮೈಸೂರು ರಾಜ ಮನೆತನದ ಆಶ್ರಯದಲ್ಲಿ ಬೆಳೆದು ಹೈದರ್ ಟಿಪ್ಪುಸುಲ್ತಾನರ ಸೈನ್ಯದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದ್ದವೆಂದು ಹೇಳಲಾಗಿದೆ. ಈ ಜಾತಿ ಎತ್ತುಗಳು ಕುದುರೆಯಂತೆ ಓಡಬಲ್ಲವಾದ್ದರಿಂದ ಫಿರಂಗಿಗಳನ್ನು ಶೀಘ್ರವಾಗಿ ಸ್ಥಳದಿಂದ ಸ್ಥಳಕ್ಕೆ ಸಾಗಿಸಲು ಬ್ರಿಟಿಷರು ಸೈನ್ಯದಲ್ಲಿ ಇವನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಈಗಲೂ ಈ ಎತ್ತುಗಳು ಒಂದು ಗಂಟೆ ಕಾಲದಲ್ಲಿ 10 ಕಿಮೀ ದೂರ ನಡೆಯಬಲ್ಲವು. ಈ ದನಗಳು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಇವೆ. ಈ ಜಾತಿಯ ಹಸುಗಳು ಹಾಲಿಗೆ ಪ್ರಯೋಜನವಿಲ್ಲ. ಅವುಗಳ ಹಾಲು ಕರುಗಳಿಗೆ ಮಾತ್ರ ಸಾಕಾಗುತ್ತದೆ.

2 ಹಳ್ಳಿಕಾರ್ : ಹಳ್ಳಿಕಾರ್ ದನಗಳಿಗೂ, ಅಮೃತಮಹಲ್ ದನಗಳಿಗೂ ಬಣ್ಣ ಮತ್ತು ಗಾತ್ರದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಕೋಡುಗಳು ಅಮೃತಮಹಲ್ ದನಗಳಿಗಿಂತ ಸ್ವಲ್ಪ ಸಣ್ಣ; ಕೊಂಬಿನ ಉದ್ದ 1-2. ಈ ದನಗಳ ಮುಖದ ಮೇಲೆ ಅದರಲ್ಲೂ ಕಣ್ಣಿನ ಮೇಲ್ಗಡೆ ರೆಪ್ಪೆಯ ಬಳಿ ಮತ್ತು ಕೆಳ ರೆಪ್ಪೆಗಳ ಬಳಿ ಬಿಳಿ ಮಚ್ಚೆಯ ಕೂದಲುಗಳು (ಬಿಳಿಸೋಗೆ) ಇರುವುದುಂಟು. ಬಾಲ ಹಿಂಗಾಲಿನ ಮೊಳಕಾಲಿನ ಕೆಳಗೆ ಕುಚ್ಚಾಗಿ ನಿಂತಿರುತ್ತದೆ. ಅಮೃತಮಹಲ್ ದನಗಳಲ್ಲಿರುವಂತೆ ಗೊರಸಿನ ವರೆಗೆ ಇಳಿಬಿದ್ದಿರುವುದಿಲ್ಲ. ಇವು ಅತಿ ಚುರುಕಾದ ಪ್ರಾಣಿಗಳು. ಅಮೃತಮಹಲ್‍ನಷ್ಟು ಸಿಟ್ಟಿನ ಸ್ವಭಾವದವಲ್ಲ. ಹಸುಗಳು ಕರಾವಿಗೆ ಯೋಗ್ಯವಿಲ್ಲ. ಈ ದನಗಳು ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೇರಳವಾಗಿವೆ.

3 ಖಿಲ್ಲಾರಿ : ಇವುಗಳ ಬಣ್ಣ ಬೂದು ಅಥವಾ ಬಿಳಿ. ಅಮೃತಮಹಲ್ ದನಗಳನ್ನು ಹೋಲುತ್ತವೆ. ಎತ್ತುಗಳು ಹುರುಪಿನಿಂದ ಕೆಲಸ ಮಾಡುತ್ತವೆ. ಹಸುಗಳು ಕರಾವಿಗೆ ಯೋಗ್ಯವಿಲ್ಲ. ಇವುಗಳ ಮೂಲಸ್ಥಾನ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸತಾರ ಜಿಲ್ಲೆ. ಕರ್ನಾಟಕದ ಬೆಳಗಾಂವಿ, ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಈ ದನಗಳು ಹೇರಳವಾಗಿವೆ.

4 ದೇವಣಿ : ಮೈಬಣ್ಣ ಬೂದು. ಕಪ್ಪು ಮಚ್ಚೆಗಳಿಂದ ಅಥವಾ ಕೆಂಪು ಮತ್ತು ಕರಿ ಮಚ್ಚೆಗಳಿಂದ ಕೂಡಿದೆ. ನೀಳವಾದ ಕಪ್ಪು ಕಿವಿಗಳುಂಟು. ಗಾತ್ರ ಸಾಮಾನ್ಯವಾಗಿ ದೊಡ್ಡದು. ಎತ್ತುಗಳು ಉಳುಮೆಗೂ ಹಸುಗಳು ಕರಾವಿಗೂ ಹೆಸರಾಗಿವೆ. ಈ ದನಗಳ ಮೂಲಸ್ಥಾನ ಆಂಧ್ರಪ್ರದೇಶದ ಪಶ್ಚಿಮ ಜಿಲ್ಲೆಗಳು. ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಇವನ್ನು ಕಾಣಬಹುದು.

5 ಕೃಷ್ಣ : ಕೃಷ್ಣಾನದೀ ತೀರದ ದನಗಳು ಇವು. ಆ ನದಿಯ ಇಕ್ಕೆಡೆಯಲ್ಲಿ ಹೇರಳವಾಗಿವೆ. ಇವುಗಳ ಬಣ್ಣ ಬೂದು ಅಥವಾ ಬಿಳುಪು. ಎತ್ತರವಾದ ದಪ್ಪನೆಯ ಕಾಲು ಅಗಲವಾದ ಗೊರಸು, ದಪ್ಪ ಚರ್ಮ, ಮೊಟಕು ಕೊಂಬಿನ ರಾಸುಗಳಿವೆ. ಹಸುಗಳು 1.1/2 ಕೆಜಿಯಿಂದ 3 ಕೆಜಿ ವರೆಗೆ ಹಾಲು ಕರೆಯುತ್ತವೆ. ಎತ್ತುಗಳು ನಿಧಾನವಾಗಿ ಎರೆಭೂಮಿಯ ಉಳುಮೆಗೆ ಸರಿಯಾಗಿವೆ.

6 ಅಲಂಬಾಡಿ ಮತ್ತು ಬರಗೂರು : ಈ ದನಗಳು ಅಮೃತಮಹಲ್ ಮತ್ತು ಹಳ್ಳಿಕಾರ್ ದನಗಳನ್ನು ಹೋಲುತ್ತವೆ. ಬಣ್ಣ ಕಪ್ಪು, ಕೆಂಪು ಅಥವಾ ಮಿಶ್ರ ಬಣ್ಣಗಳಿಂದ ಕೂಡಿರುವುದುಂಟು. ಈ ದನಗಳನ್ನು ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಮೈಸೂರು ಜಿಲ್ಲೆಗಳಲ್ಲಿ ಕಾಣಬಹುದು. (ಆರ್.ಆರ್.)

ಮಾಂಸದ ತಳಿಗಳು : ಭಾರತದ ಎಲ್ಲಾ ಭಾಗಗಳಲ್ಲಿಯೂ ಗೋವು ಪೂಜ್ಯನೀಯವೆಂದು ಪರಿಗಣಿತವಾಗಿದ್ದು ಗೋಮಾತೆ ಎನ್ನಿಸಿಕೊಂಡಿದೆ. ಹಾಲು ಕೊಡುವ ಹಸುಗಳು ಕಾಮಧೇನುಗಳೆಂದೂ ಕೆಲಸ ಮಾಡುವ ಹಾಗೂ ಸಂತಾನ ವೃದ್ಧಿಗಾಗಿ ಇಟ್ಟಿರುವ ಹೋರಿಗಳು ಬಸವಗಳೆಂದೂ ಪರಿಗಣಿತವಾಗಿದೆ. ಭಾರತದ ಜನಗಳಿಗೆ ಈ ದನಕರುಗಳ ಉಪಯೋಗ ಇಷ್ಟೇ ಎಂದು ಹೇಳಲಾಗದು. ಜನಜೀವನದಲ್ಲಿ ವಿವಿಧ ರೀತಿಯಲ್ಲಿ ಉಪಯೋಗದ ಪ್ರಾಣಿಗಳಾಗಿ ಆದಿಕಾಲದಿಂದಲೂ ಬಂದುದರಿಂದ, ಗೋಹತ್ಯೆ ಪಾಪವೆಂದು ಪರಿಗಣಿಸಲಾಗಿದೆ. ಆದರೂ ವಯಸ್ಸಾದ, ಕೆಲಸಕ್ಕೆ ಬಾರದ ದನಗಳನ್ನು ಮಾತ್ರ ಕಸಾಯಿ ಖಾನೆಯಮರು ಕಡಿದು ಮಾಂಸವನ್ನು ವಿಕ್ರಯಿಸುವರು. ಇದರಿಂದಾಗಿ ಮಾಂಸಕ್ಕೆಂದೇ ಯಾವ ತಳಿಯೂ ಭಾರತ ದೇಶದಲ್ಲಿ ಬೆಳೆದು ಬರಲಿಲ್ಲ. ಆದರೆ ಪರದೇಶಗಳಲ್ಲಿ ಅದರಲ್ಲಿಯೂ ಯುರೋಪು, ಅಮೆರಿಕಗಳಲ್ಲಿ ಮಾಂಸಕ್ಕಾಗಿಯೇ ಅನೇಕ ರೀತಿಯ ತಳಿಗಳನ್ನು ಬೆಳೆಸಲಾಗಿದೆ. ಅಲ್ಲಿನ ಕೆಲವು ಸಿರಿವಂತ ಪಶುಪಾಲಕರು ಅನೇಕ ಗೋಮಾಂಸ ತಳಿಗಳನ್ನು ಹಲವು ವರುಷಗಳ ಸಾಧನೆಯಿಂದ ರೂಪಿಸಿರುವರು. ರೈತಾಪಿ ಜನ ಬರಿಯ ಮಾಂಸಕ್ಕೆಂದೇ ದನಗಳನ್ನು ಸಾಕದೆ ಮಾಂಸ ಹಾಗೂ ಹಾಲು ಎರಡಕ್ಕೂ ಉಪಯೋಗವಾಗುವ ಇಬ್ಬಗೆ ತಳಿಗಳನ್ನು ಸಾಕುತ್ತಾರೆ. ಮಾಂಸದ ತಳಿಗಳನ್ನು ರೂಪಿಸುವ ಸಲುವಾಗಿ ಅನೇಕ ವರುಷಗಳ ಕಾಲ ಆ ದೇಶದ ಮೂಲ ತಳಿಗಳ ಜತೆಗೆ ಬೇರೆ ಬಗೆಯ ತಳಿಗಳನ್ನು ಅಡ್ಡ ಹಾಯಿಸಿ ಅಪಾರ ಸಾಧನೆ ಹಾಗೂ ಸಂಶೋಧನೆಗಳಿಂದ ವಿನೂತನ ರೀತಿಯ ತಳಿಗಳನ್ನು ಪಡೆಯಲಾಗಿದೆ. ಇಂಥವುಗಳಲ್ಲಿ ಮುಖ್ಯವಾದುವನ್ನು ಮುಂದೆ ವಿವರಿಸಲಾಗಿದೆ :

1 ಆಬರ್ಡಿನ್ ಆ್ಯಂಗಸ್ : ಇದರ ತವರು ಸ್ಕಾಟ್ಲೆಂಡಿನ ಈಶಾನ್ಯ ಭಾಗ. ಅಲ್ಲಿನ ಆಬರ್ಡಿನ್, ಕಿನ್ ಕಾರ್ಡೀನ್ ಮತ್ತು ಫೊರ್‍ಫಾರ್ ಪ್ರದೇಶಗಳಲ್ಲಿ ಇದರ ಮೂಲತಳಿ ಇತ್ತು. ಈ ಸ್ಥಳಗಳಲ್ಲಿ ಇದನ್ನು ``ಬ್ಯೂಕನ್ ಹೋಮ್ಲಿಸ್ ಹಾಗೂ `ಆ್ಯಂಗಸ್ ಡೊಡ್ಡೀಸ್ ಎನ್ನುವರು. ಈ ತಳಿಯ ಬಣ್ಣ ಕಪ್ಪು; ಕೂದಲು ನಯವಾಗಿರುವುದು. ಇದಕ್ಕೆ ಕೊಂಬಿಲ್ಲ. ಹೊಕ್ಕುಳದ ಬಳಿ ಬಿಳಿ ಪಟ್ಟೆ ಉಂಟು. ಷಾರ್ಟ್‍ಹಾರ್ನ್ ಮತ್ತು ಹರ್‍ಫರ್ಡ್ ತಳಿಗಳಿಗಿಂತ ಇದು ಭಾರವಾಗಿದೆ. ಬೇರೆ ಯಾವ ತಳಿಗೂ ಇದರಷ್ಟು ಮಾಂಸದ ಮೈ ಇಲ್ಲ. ಶೀಘ್ರ ಬೆಳವಣಿಗೆ ಇದರ ಮುಖ್ಯ ಲಕ್ಷಣಗಳಲ್ಲೊಂದು. ಈ ತಳಿ ವಿಶ್ವದಾದ್ಯಂತ ಹರಡಿಕೊಂಡಿದೆ. ಉಷ್ಣತೆ ಹಾಗೂ ಚಳಿಯನ್ನು ತಡೆದುಕೊಳ್ಳಬಲ್ಲದು. ಈ ತಳಿಯಿಂದ ಪಡೆಯಲಾದ ಮಿಶ್ರ ತಳಿಗಳು ಬಹಳ ಉಪಯುಕ್ತವಾಗಿವೆ.

2 ಬಹರ್‍ಫರ್ಡ್ : ಇಂಗ್ಲೆಂಡಿನ ಹರ್‍ಫರ್ಡ್ ಪ್ರದೇಶವು ಇದರ ತವರು. ದಪ್ಪ ಚರ್ಮದ ಈ ತಳಿಯ ಬಣ್ಣ ವಿಶಿಷ್ಟವಾದುದು. ಬೆನ್ನ ಭಾಗ ತುಸು ಕೆಂಪು; ಮುಖ, ದೇಹದ ತಳಭಾಗ, ಕಿಬ್ಬೊಟ್ಟೆ, ಬಾಲದ ತುದಿ, ಎದೆ, ಕಾಲಿನ ಕೊನೆಗಳಲ್ಲಿ ಬಿಳಿಯಾಗಿವೆ. ಮೂಗಿನ ಮೇಲೆ ಕಪ್ಪು ಬಣ್ಣದ ಕಲೆಯುಂಟು. ಸಾಮಾನ್ಯವಾಗಿ ಇದನ್ನು `ಬಿಳಿಮುಖದ ದನ ಎನ್ನುವರು. ಅಂಗಸೌಷ್ಠವಕ್ಕೆ ಹೆಸರಾದ ಇದರ ಮಾಂಸಲ ಮೈ ಚಚ್ಚೌಕವಾಗಿ ಕಾಣುವುದು. ಈ ತಳಿ ಶಕ್ತಿಶಾಲಿ ಕೂಡ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಇದರ ಸಾಕಣೆ ಹೆಚ್ಚು.

3 ಷಾರ್ಟ್‍ಹಾರ್ನ್ : ಇದರ ಮೂಲಸ್ಥಾನ ಇಂಗ್ಲೆಂಡಿನ ಈಶಾನ್ಯ ಪ್ರದೇಶ. ನಾರ್ತಂಬರ್‍ಲ್ಯಾಂಡ್, ಡರ್‍ಹ್ಯಾಮ್. ಯಾರ್ಕ್ ಮತ್ತು ಲಿಂಕನ್ ಪ್ರದೇಶಗಳಲ್ಲಿ ಬೆಳೆದುದು ಈ ತಳಿ. ಬಹಳ ಫಲವತ್ತಾದ ಠೀಸ್ ಠೀಸ್ ಕಣಿವೆಯಲ್ಲಿ ಮೊದಲು ಈ ತಳಿ ಪ್ರಸಿದ್ಧಿಗೆ ಬಂತು. ಇಂಗ್ಲೆಂಡಿನ ಮೊದಲ ಆಕ್ರಮಣಕಾರರಾದ ರೋಮನ್ನರು ಹಾಗೂ ನಾರ್ಮನ್ನರು ಬರುವಾಗ ಅವರ ಜೊತೆ ತಂದ ಉದ್ದುದ್ದ ಕೊಂಬಿನ ದನಗಳು ಈ ತಳಿಗೆ ಮೂಲದನಗಳಾದವು. ಸಂವರ್ಧನೆ ಸಾಗುತ್ತ ಕಾಲಕ್ರಮೇಣ ಇವುಗಳ ಕೊಂಬುಗಳು ಮೊಟಗಾಗುತ್ತ ಬಂದು ಈ ತಳಿಗೆ ಷಾರ್ಟ್‍ಹಾರ್ನ್ ಎಂಬ ಹೆಸರು ಬಂದಿತು. ಮುಂದೆ ಗ್ರೇಟ್ ಬ್ರಿಟನ್ನಿನಲ್ಲೆಲ್ಲ ಈ ತಳಿಗಳು ಹರಡಿಕೊಂಡವು. ಬಗೆಬಗೆಯ ಬಣ್ಣದವು ಇವು. ಕೆಂಪು ಬಣ್ಣದೊಡನೆ ಬಿಳಿ ಬಣ್ಣದ ಕೂದಲುಗಳಿರುವುವು. ಕೆಂಪನೆಯ ಅಥವಾ ಕೆಂಪುಮಿಶ್ರಿತ ಬಿಳಿಯ ಬಣ್ಣದ ತಳಿಗಳು ಸಹ ಕಾಣಬರುವುವು. ಚೆನ್ನಾಗಿ ಹಾಲು ಕೊಡುವುವು. ಬಹಳ ಸಾಧುವಾಗಿರುವುವು. ಈ ತಳಿಗಳಲ್ಲಿ ಎರಡು ಬಗೆಗಳುಂಟು; `ಹಾಲಿನ ಷಾರ್ಟ್‍ಹಾರ್ನ್ ಹಾಗೂ ಮಾಂಸಕ್ಕೆ ಉಪಯುಕ್ತವಾಗಿರುವ ಸ್ಕಾಚ್ ಪ್ರಭೇದ.

4 ಗ್ಯಾಲೋವೆ : ಇದರ ಮೂಲ ಪ್ರದೇಶ ಸ್ಕಾಟ್ಲೆಂಡಿನ ನೈಋತ್ಯ ಭಾಗ. ಈ ಪ್ರದೇಶ ಪರ್ವತಮಯವಾದುದರಿಂದ ಇಲ್ಲಿ ಯಾವಾಗಲೂ ಚಳಿ ಹಾಗೂ ತೇವದ ವಾತಾವರಣವಿರುವುದು. ಇಂಥ ವಾತಾವರಣದಲ್ಲಿ ಗ್ಯಾಲೋವೆ ತಳಿ ಹುಟ್ಟಿ ಬಂದಿದೆ. ಈ ತಳಿಯ ಬಣ್ಣ ಕಪ್ಪು. ಕಂದು ಹಾಗೂ ಕೆಂಪು ಬಣ್ಣದ ಬಗೆಗಳೂ ಇವೆ. ಮೈಮೇಲೆ ಉದ್ದವಾದ ಹಾಗೂ ಗುಂಗುರಾದ ಕೂದಲು ಉಂಟು. ಕಾಲುಗಳ ಮೇಲೆ ಬಿಳಿ ಪಟ್ಟೆಗಳಿವೆ. ಕೊಂಬುಗಳಿಲ್ಲ. ಆಬರ್ಡೀನ್ ಆ್ಯಂಗಸ್‍ನೊಂದಿಗೆ ಹೋಲಿಸಿದರೆ ಇದರ ಕಾಲುಗಳು ಚಿಕ್ಕವು. ಚಪ್ಪಟೆಯಾದ ಪಕ್ಕೆಲುಬು ಹಾಗೂ ಉದ್ದವಾದ ದೇಹ ಇದರ ಪ್ರಧಾನ ಲಕ್ಷಣ. ಇದರ ಮಾಂಸ ಬಹಳ ಉತ್ಕøಷ್ಟ ಬಗೆಯದು ಎನಿಸಿದೆ.

5 ಕೊಂಬಿಲ್ಲದ ಹರ್‍ಫರ್ಡ್ : ಅಮೆರಿಕ ಸಂಯುಕ್ತ ಸಂಸ್ಥಾನದ ಅಯೋವ ನಗರದ ವಾರೆನ್ ಗ್ಯಾಮನ್ ಎಂಬಾತ 1902ರಲ್ಲಿ ಈ ತಳಿಯನ್ನು ಅಮೆರಿಕ ಹರ್‍ಫರ್ಡ್ ಸಂಘದಾಶ್ರಯದಲ್ಲಿ ರೂಪಿಸಿದ. ಇದು ಹರ್‍ಫರ್ಡ್ ಬಗೆಯಂತೆಯೇ ಇದೆಯಾದರೂ ಕೊಂಬುಗಳು ಮಾತ್ರ ಇಲ್ಲ. ಅಮೆರಿಕದ ಹಲವಾರು ಕಡೆ ನೊಣಗಳ ಮುಸುರಿಕೆ ಹೆಚ್ಚಾಗಿರುವುದರಿಂದ ಅಲ್ಲಿ ದನಗಳಿಗೆ ಮರಿನೊಣ ಬೇನೆ ಬಹಳವಾಗಿದೆ. ಆದರೆ ಈ ತಳಿಗಳಿಗೆ ಇಂಥ ಬೇನೆಯನ್ನು ತಡೆದುಕೊಳ್ಳುವ ಶಕ್ತಿಯುಂಟು. ಆದ್ದರಿಂದ ಈ ನೊಣಹಾವಳಿಯ ಪ್ರದೇಶಗಳಲ್ಲಿ ಈ ತಳಿ ಬಹಳ ಜನಪ್ರಿಯವಾಗಿದೆ.

6 ಕೊಂಬಿಲ್ಲದ ಷಾರ್ಟ್‍ಹಾರ್ನ್ : ಮಾಂಸಕ್ಕೆಂದೇ ರೂಪಿಸಲಾದ ತಳಿಗಳಿಗೆ ಕೊಂಬಿನ ಉಪಯೋಗ ಅಷ್ಟಾಗಿ ಇರದು. ಕೊಂಬಿಲ್ಲದಿರುವಿಕೆ ಮಾಂಸದ ತಳಿಗಳ ಪ್ರಮುಖ ಲಕ್ಷಣ. ಈ ದೃಷ್ಟಿಯಿಂದ ರೂಪಿತವಾದ ತಳಿಯಿದು. ಅಮೆರಿಕ ಸಂಯುಕ್ತ ಸಂಸ್ಥಾನ ಒಹೈಯೊ ಹಾಗೂ ಇಂಡಿಯಾನ ರಾಜ್ಯಗಳಲ್ಲಿ ಇದನ್ನು ಪ್ರಥಮವಾಗಿ ರೂಪಿಸಲಾಯಿತು. 1919 ರ ತನಕ ಈ ತಳಿಯನ್ನು `ಕೊಂಬಿಲ್ಲದ ಡರ್‍ಹ್ಯಾಮ್ ತಳಿ ಎಂದು ಕರೆಯಲಾಗುತ್ತಿತ್ತು. ಇದರ ಆಕಾರ ಷಾರ್ಟ್‍ಹಾರ್ನ್ ತಳಿಯಂತೆಯೇ ಇದೆ. ಆದರೆ ಆಕಾರ ಒಂದೇ ತೆರನಾಗಿರುವುದಿಲ್ಲ. ಅಲ್ಲದೆ ಇದಕ್ಕೆ ಕೊಂಬುಗಳಿಲ್ಲ. ಮೈಮೇಲೆ ಅಲ್ಲಲ್ಲಿ ಚುಕ್ಕಿಗಳು ಕೂಡ ಕಾಣಬರುವುವು.

7 ಬ್ರಾಹ್ಮಣಿ (ಹಿಣಿಲು ದನದ ಜಾತಿ) : ಟರ್ಕಿ ಸುಲ್ತಾನರಿಗೆ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದ ಜೇಮ್ಸ್ ಬೋಲ್ಟನ್ ಡೇವಿಸ್ ಎಂಬಾತ 1846ರಲ್ಲಿ ಒಂದು ಹಸು ಹಾಗೂ ಒಂದು ಹೋರಿಯನ್ನು ಭಾರತದಿಂದ ಕೊಂಡೊಯ್ದ. ಅಮೆರಿಕದಲ್ಲಿ ಭಾರತದ ಹಿಣಿಲು ದನಗಳನ್ನು `ಬ್ರಾಹ್ಮಣ್ ಜಾತಿಯ ದನಗಳೆಂದು ಕರೆಯುತ್ತಾರೆ. 1849 ರಲ್ಲಿ ಈ ದನಗಳನ್ನು ಅಮೆರಿಕದ ದಕ್ಷಿಣ ಕ್ಯಾರಲೈನ ರಾಜ್ಯಕ್ಕೆ ಸಾಗಿಸಲಾಯಿತು. 1904 ರಲ್ಲಿ ಜರ್ಮನಿಯ ಕಾರ್ಲ್ ಹೆಗೆನ್‍ಬೆಕ್ ಎಂಬಾತ ಈ ತಳಿಯ ಒಂದು ಹೋರಿ ಹಾಗೂ ಒಂದು ಹಸುವನ್ನು ಸೇಂಟ್ ಲೂಯಿಸ್‍ನಲ್ಲಿ ಪ್ರದರ್ಶಿಸಿದ. 1906ರ ಹೊತ್ತಿಗೆ ಟೆಕ್ಸಾಸಿನ ಎ.ಪಿ. ಬೊರ್ಡೆನ್ ಆಫ್ ಮ್ಯಾಕ್‍ಕಾಯ್ ಎಂಬಾತ 30 ಹೋರಿ ಹಾಗೂ 3 ಹಸುಗಳನ್ನು ಭಾರತದಿಂದ ಆಮದು ಮಾಡಿಕೊಂಡ. ಮುಂದೆ ಅನೇಕ ರೀತಿಯಲ್ಲಿ ಈ ಆಮದು ಸಾಗಿ ಅನೇಕ ಹಿಣಿಲು ದನಗಳು ಅಮೆರಿಕವನ್ನು ಸೇರಿದವು.

ಈ ದನಗಳಿಗೆ ಒಳ್ಳೆಯ ಭುಜವಿರುವುದು. ಮಾಂಸಲವಾದ ಗಂಗೆದೊಗಲು ಸಹ ಉಂಟು. ಇವುಗಳದ್ದು ಎದ್ದುಕಾಣುವ ರೂಪ. ಮೈ ಬೂದಿ ಬಣ್ಣದ್ದು. ಕೆಂಪು ಹಾಗೂ ಇತರ ಬಣ್ಣಗಳ ಬಗೆಗಳೂ ಉಂಟು. ಅಲ್ಲಲ್ಲಿ ಬಿಳಿ ಚುಕ್ಕೆಗಳು ಕೂಡ ಕಾಣಬರುವುವು. ಈ ದನಗಳನ್ನು ಉಪಯೋಗಿಸಿಕೊಂಡು ಅನೇಕ ರೀತಿಯ ಮಾಂಸತಳಿಗಳನ್ನು ಅಮೆರಿಕದಲ್ಲಿ ರೂಪಿಸಲಾಗಿದೆ. ಸಾಮಾನ್ಯವಾಗಿ ಎಲ್ಲವೂ ಮಿಶ್ರತಳಿಗಳೇ. ಅಲ್ಲಿನ ವಾಯುಗುಣಕ್ಕೆ ಬಹಳ ಚೆನ್ನಾಗಿ ಹೊಂದಿಕೊಂಡಿರುವುದಲ್ಲದೆ ಹೆಚ್ಚಿನ ಉಷ್ಣತೆಯನ್ನು ತಡೆದುಕೊಳ್ಳುವುವು. ಮೇಲಾಗಿ ಉಣ್ಣಿ, ನೊಣ ಹಾಗೂ ಸೊಳ್ಳೆಗಳ ಹಾವಳಿಗೆ ಇವು ಬೆದರುವುದಿಲ್ಲ. ಟೆಕ್ಸಾಸಿನ ಸ್ಥಳೀಯ ದನಗಳನ್ನು ಪೀಡಿಸುವ ಬೇನೆಯನ್ನು ಸಹ ತಡೆದುಕೊಳ್ಳುವುವು.

8 ಸಾಂತಾ ಗಟ್ರ್ರುಡಿಸ್ : ಅಮೆರಿಕ ಸಂಯುಕ್ತ ಸಂಸ್ಥಾನದ ಟೆಕ್ಸಾಸಿನ ಕಿಂಗ್ಸ್ ವಿಲೆಯ ಕಿಂಗ್ ದನಗಾವಲು ಸಂಸ್ಥೆಯಿಂದ ಇದು ರೂಪಿತವಾಯಿತು. ಈ ಸಂಸ್ಥೆ ಅಮೆರಿಕದಲ್ಲಿಯೇ ಅತಿ ದೊಡ್ಡದೆನಿಸಿದೆ. ಈ ತಳಿಯನ್ನು ಬೆಳೆಸಿದ ಕತೆ ವಿಶ್ವದಲ್ಲಿ ಪಶು ಸಂವರ್ಧನಾ ರಂಗದ ವಿಸ್ಮಯವೆನ್ನಬಹುದು. ಸಾಂತಾ ಗಟ್ರ್ರುಡಿಸ್ ದನಕಾವಲು ಮೊದಲು ಸ್ಪೇನಿನ ರಾಜಮನೆತನದವರಿಂದ ಬಳುವಳಿಯಾಗಿ ಬಂತು. ಈ ಕಾವಲಿನಲ್ಲಿ ಮೂರು ವರ್ಷದ 52 ಬ್ರಾಹ್ಮಣ್ ಹೋರಿಗಳನ್ನು 2500 ಷಾರ್ಟ್‍ಹಾರ್ನ್ ಹಸುಗಳೊಂದಿಗೆ ಅಡ್ಡಹಾಯಿಸಿ ಇವುಗಳಲ್ಲಿ ಹುಟ್ಟಿದ ಒಳ್ಳೆಯ ಕಡಸು ಹಾಗೂ ಹೋರಿಗಳನ್ನು ಮುಂದಿನ ತಲೆಮಾರಿನ ತಳಿ ಸಂವರ್ಧನೆಯಲ್ಲಿ ಬಳಸಿಕೊಂಡಾಗ ಒಂದು ಒಳ್ಳೆಯ ಹೋರಿ ಹುಟ್ಟಿಬಂದಿತು. ಈ ಹೋರಿಗೆ ಮಂಕಿ (ಕೋತಿ) ಎಂಬ ಹೆಸರಿಟ್ಟಿದ್ದರು. ಈ ಮಂಕಿಯೇ ಸಾಂತಾ ಗಟ್ರ್ರುಡಿಸ್ ತಳಿಯ ಮೂಲಪ್ರಾಣಿ. ಈ ತಳಿ ಕೆಂಪು ಬಣ್ಣದ್ದು. ಚೆರಿ ಹಣ್ಣಿನ ಬಣ್ಣದ ದೊಗಲೆ ತೊಗಲಿನ ಮೇಲೆ ಮಾಟವಾದ ಕೂದಲು ಕಾಣುವುವು. ಮೂಲತಃ ಭಾರತದ ದನಗಳಿಂದ ರೂಪಿತವಾಗಿರುವುದರಿಂದ ಸ್ವಲ್ಪ ಭುಜ ಕೂಡ ಕಾಣಬರುವುದು. ಇವು ಬಹಳ ಚಟುವಟಿಕೆಯಿಂದಿರುವುವು. ಈ ತಳಿಗಳು ಬೆದರುವುದಿಲ್ಲ.

ಮೇಲೆ ಹೇಳಿದ ತಳಿಗಳು ಪ್ರಧಾನವಾಗಿ ಮಾಂಸಕ್ಕಾಗಿಯೇ ರೂಪಿತವಾದಂಥವು. ಇವಲ್ಲದೆ ಕಾಲಕಾಲಕ್ಕೆ ಹಾಲನ್ನು ಕೊಡುವಂಥ ಮತ್ತು ಮಾಂಸಕ್ಕೂ ಉಪಯುಕ್ತವಾಗಿರುವ ಕೆಲವಾರು ಇಬ್ಬಗೆ ತಳಿಗಳೂ ಉಂಟು. ಇವನ್ನು ಸಾಮಾನ್ಯವಾಗಿ ರೈತಾಪಿ ಜನ ಬಹಳವಾಗಿ ಸಾಕುವುದರಿಂದ ಇವಕ್ಕೆ ರೈತನ ಹಸುಗಳೆಂಬ ಹೆಸರೂ ಉಂಟು. ಇಂಥವುಗಳಲ್ಲಿ ಬಲುಮುಖ್ಯವಾದುವು;

1 ಡೆವೋನ್ : ಇದು ಬಹಳ ಹಳೆಯ ತಳಿ. ಮೂಲಸ್ಥಾನ ಇಂಗ್ಲೆಂಡಿನ ಡೆವೋನ್ ಕೌಂಟಿ. ದಕ್ಷಿಣ ಹಾಗೂ ಉತ್ತರ ಡೆವೋನ್ ದನಗಳೆಂಬ ಎರಡು ಬಗೆಗಳುಂಟು. ಇವುಗಳ ಬಣ್ಣ ಕೆಂಪು. ಒಳ ಚರ್ಮ ಹಳದಿ. ಸಾಮಾನ್ಯವಾಗಿ ಕೊಂಬುಗಳಿವೆ. ಹಸುಗಳಲ್ಲಿ ಕೊಂಬುಗಳು ಮೇಲಕ್ಕೆ ತಿರುಗಿವೆಯಾದರೆ ಹೋರಿಗಳಲ್ಲಿ ನೇರವಾಗಿವೆ. ಮಧ್ಯಮ ಗಾತ್ರದ ತಳಿಗಳು ಇವು. ಬೆನ್ನು ಶಕ್ತಿಯುತವಾಗಿದೆ. ರೊಂಡಿ ಬಿಗಿಯಾಗಿದೆ. ದೇಹ ಮಾಂಸಲವಾಗಿರುವುದು. ಅಚ್ಚುಕಟ್ಟಾದ ದೇಹವನ್ನು ಪಡೆದಿದೆ. ಹಸುಗಳು ಸಾಕಷ್ಟು ಹಾಲನ್ನು ಕೊಡುವುವು.

2 ಹಾಲು ಕೊಡುವ ಷಾರ್ಟ್‍ಹಾರ್ನ್ : ಷಾರ್ಟ್‍ಹಾರ್ನ್ ತಳಿಯಲ್ಲಿನ ಒಂದು ಬಗೆ. ಸುಮಾರು ಒಂದು ಶತಮಾನದ ಹಿಂದೆ ಇಂಗ್ಲೆಂಡಿನ ಯಾರ್ಕ್‍ಷೈರಿನ ಕಿರ್ಕಲ್‍ವಿಂಗ್‍ಟನ್ನಿನ ಥಾಮಸ್ ಬೇಟ್ಸ್ ಎಂಬಾತನಿಂದ ರೂಪಿತವಾದ್ದು. ಸಾಧಾರಣವಾಗಿ ಮಾಂಸಕ್ಕೆ ಉಪಯೋಗವಾದರೂ ಹಾಲಿಗೂ ಒಳ್ಳೆಯ ತಳಿ ಎನಿಸಿದೆ. ಈ ತಳಿಯ ಬಣ್ಣ ಕೆಂಪು, ಬಿಳಿ ಇಲ್ಲವೆ ಮಿಶ್ರಿತ ರೀತಿಯದು. ಇದಕ್ಕೆ ಮಾಟವಾದ ಕೊಂಬುಗಳುಂಟು.

3 ರೆಡ್‍ಪೋಲ್ : ಮಾಂಸಕ್ಕೆ ಹೆಸರಾದ ನಾರ್‍ಫೋಕ್ ದನಗಳೊಡನೆ ಹಾಲಿಗೆ ಹೆಸರಾದ ಸಫೋಕ್ ದನಗಳನ್ನು ಅಡ್ಡಹಾಯಿಸಿ ಬೆಳೆಸಿದ ತಳಿ ಇದು. ಬಣ್ಣ ಕೆಂಪು. ಕೊಂಬಿಲ್ಲ. ಮಧ್ಯಮ ಗಾತ್ರದ ತಳಿಗಳಿವು. ಇತ್ತೀಚಿನ ದಿನಗಳಲ್ಲಿ ಸಂಕರಕ್ರಿಯೆಯಿಂದ ಸುಧಾರಿತವಾದ ತಳಿಗಳು ಈ ರೀತಿ ಇವೆ :

ಬೀಫ್ ಮಾಸ್ಟರ್ : ಅಮೆರಿಕ ಸಂಯುಕ್ತ ಸಂಸ್ಥಾನದ ಟೆಕ್ಸಾಸಿನ ಲಸಾಟರ್ ದನಗಾವಲಿನಲ್ಲಿ ಬೆಳೆಸಿದ ತಳಿ. ದೇಹ ಕಡು ಕೆಂಪು ಬಣ್ಣದ್ದು, ಹಸುಗಳು ತಕ್ಕಮಟ್ಟಿಗೆ ಹಾಲನ್ನು ಕೊಡುವುವು.

ಒಡಲುಪಟ್ಟಿಯ ಗ್ಯಾಲೋವೆ : ಸ್ಕಾಟ್ಲೆಂಡಿನ ನೈಋತ್ಯ ಭಾಗ ಇದರ ಮೂಲ ಪ್ರದೇಶ. ಒಡಲಿನ ಕೆಳಭಾಗದಲ್ಲಿ ಬಿಳಿಯ ಪಟ್ಟೆಯುಂಟು. ಈ ತಳಿಗಳಿಗೆ ಕೊಂಬಿಲ್ಲ.

ಬ್ರ್ಯಾಂಗಸ್ : ಅಮೆರಿಕದ ಕ್ಲಿಯರ್ ಕ್ರೀಕ್ ದನಗಾವಲಿನ ಫ್ರಾಂಕ್ ಬಟ್ರಮ್ ಎಂಬಾತನಿಂದ ರೂಪಿತವಾದದ್ದು, ಕಪ್ಪು ಬಣ್ಣದ್ದು. ಕೊಂಬಿಲ್ಲ.

ಷಾರ್‍ಬ್ರೆ : ಟೆಕ್ಸಾಸಿನ ರಿಯೊಗ್ರಾಂಡ್‍ವಿಲೆಯಲ್ಲಿ ರೂಪಿತವಾದ್ದು. ಹುಟ್ಟಿದಾಗ ಚಿನ್ನ ಹಾಗೂ ಬಿಳಿ ಬಣ್ಣದ್ದಾಗಿರುವುದು. ಬೆಳೆದ ಹಾಗೆಲ್ಲ ಬಾದಾಮಿ ಬಣ್ಣವನ್ನು ತಳೆಯುವುದು. ಇದಕ್ಕೆ ಕೊಂಬು ಹಾಗೂ ಸ್ವಲ್ಪ ಭುಜ ಉಂಟು.

ಷಾರ್‍ಲಾಯ್ಸ್ : ಮಧ್ಯ ಫ್ರಾನ್ಸಿನ ಷಾರೊಲ್ಲ್ಯೆ ಪ್ರಾಂತ್ಯದ ದನ. ಮೈ ಬಣ್ಣ ಬಿಳಿಯಿಂದ ಬಾದಾಮಿಯ ವರೆಗೆ ವ್ಯತ್ಯಾಸವಾಗುತ್ತದೆ. ಕೊಂಬಿದೆ. (ಬಿ.ಆರ್.ಆರ್.ಎಸ್.)