ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೌತಮೀಪುತ್ರ ಶಾತಕರ್ಣಿ

ವಿಕಿಸೋರ್ಸ್ದಿಂದ

ಗೌತಮೀಪುತ್ರ ಶಾತಕರ್ಣಿ- ಶಾತವಾಹನಕುಲದ ಅರಸ. ಈತನ ಆಳ್ವಿಕೆಯ ಕಾಲ ಕ್ರಿ.ಶ. 62-82 ಎಂದೂ 106-130 ಎಂದೂ ವಾದಗಳಿವೆ. ಈತನ ಆಳ್ವಿಕೆಯ ಕಾಲ 106-130 ಎಂಬ ಅಭಿಪ್ರಾಯವನ್ನು ಬಹಳ ಜನ ಪಂಡಿತರು ಒಪ್ಪಿದ್ದಾರೆ. ಈತನ ಶಾಸನಗಳು ನಾಸಿಕದ ಗುಹೆಗಳಲ್ಲಿ ದೊರೆತಿವೆ. ಇವನ ಮಗನಾದ ವಾಸಿಷ್ಠೀಪುತ್ರ ಪುಳುಮಾವಿಯ ಶಾಸನದಲ್ಲಿ ಈತನ ಸಾಧನೆಗಳನ್ನು ಕುರಿತಾದ ವಿವರಗಳು ಲಭ್ಯವಾಗಿವೆ. ಪುರಾಣಗಳಲ್ಲಿ ಹಾಗೂ ಗ್ರೀಕ್ ಭೂಗೋಳಶಾಸ್ತ್ರಜ್ಞ ಟಾಲಮಿನಿಯ ಪರಿಪ್ಲಸ್ ಗ್ರಂಥದಲ್ಲಿ ಕಂಡು ಬರುವ ಉಲ್ಲೇಖಗಳಿಂದ ಈ ಶಾತವಾಹನ ಅರಸನಿಗೆ ಸಂಬಂಧಿಸಿದ ಅನೇಕ ವಿವರಗಳು ತಿಳಿದಿವೆ. ಭಾರತದ ಪಶ್ಚಿಮಕ್ಕೆ, ಈಗಿನ ಮಹಾರಾಷ್ಟ್ರಕ್ಕೆ ಸೇರಿದ ತೀರಪ್ರದೇಶಗಳು ಶಾತವಾಹನರ ಆಳ್ವಿಕೆಗೊಳಪಟ್ಟಿದ್ದುವು. ಕ್ರಿಸ್ತಶಕಾರಂಭದಲ್ಲಿ (ಅಥವಾ ಎರಡನೆಯ ಶತಮಾನದ ಆರಂಭದಲ್ಲಿ) ಗೌತಮೀಪುತ್ರ ಪಟ್ಟಕ್ಕೆ ಬರುವ ಮೊದಲು ಶಾತವಾಹನರು ಕ್ಷಹರಾತರ ದಾಳಿಗೆ ತುತ್ತಾಗಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಂಡಿದ್ದರು. ಗೌತಮೀಪುತ್ರ ಪಟ್ಟಕ್ಕೆ ಬಂದಾಗ ದುಃಸ್ಥಿತಿಯಲ್ಲಿದ್ದ ರಾಜ್ಯವನ್ನು ಭದ್ರಗೊಳಿಸಲು ಶತ್ರುಗಳ ದಮನ ಅತ್ಯಾವಶ್ಯಕವಾಗಿತ್ತು. ಆದ್ದರಿಂದ ಅದಕ್ಕೆ ಬೇಕಾದ ಸಕಲ ಸನ್ನಾಹಗಳನ್ನೂ ಮಾಡಿಕೊಂಡು 80 ರಲ್ಲಿ ಅಥವಾ 124 ಈತ ಕ್ಷಹರಾತರ ವಿರುದ್ಧ ದಂಡೆತ್ತಿದ್ದ. ಈತ ತನ್ನ ವಿಜಯಸ್ಕಂಧಾವಾರವೆನಿಸಿದ ಗೋವರ್ಧನ ನಗರದ ನೆಲೆವೀಡಿನಲ್ಲಿದ್ದಾಗ ಇವನ ನಾಸಿಕ ಹಾಗೂ ಕಾರ್ಲೆ ಶಾಸನಗಳು ಅಸ್ತಿತ್ವಕ್ಕೆ ಬಂದುವು. ಮೊದಲು ದೊತರೆ ಸಣ್ಣಪುಟ್ಟ ವಿಜಯಗಳು ಇವನನ್ನು ಹುರಿದುಂಬಿಸಿದುವು. ವೈಜಯಂತೀ ಸೈನ್ಯ ಈ ಕದನಗಳಲ್ಲಿ ಶ್ಲಾಘನೀಯವಾಗಿ ಹೋರಾಡಿತು. ಆದರೆ ಇಷ್ಟರಿಂದ ಗೌತಮೀಪುತ್ರನಿಗೆ ತೃಪ್ತಿಯುಂಟಾಗಲಿಲ್ಲ. ಶಾತವಾಹನರ ಗತವೈಭವವನ್ನು ಪುನಃ ಪ್ರತಿಷ್ಠಾಪಿಸುವುದು ಇವನ ಉದ್ದೇಶವಾಗಿತ್ತು.

ಇವನ ಈ ಉದ್ದೇಶ ಪೂರ್ಣಗೊಂಡಿಂತೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇದನ್ನು ಈತನ ತಾಯಿ ಗೌತಮೀ ಬಾಲಶ್ರೀ ನೆಲೆಗೊಳಿಸಿದ ಶಾಸನದಲ್ಲಿ ಸ್ಟಷ್ಟಗೊಳಿಸಿದ್ದಾಳೆ. ಈತನ ರಾಜ್ಯ ಅಸಿಕ, ಅಸಕ, ಮುಳಕ, ಸುರಠ, ಕುಕುರ, ಅಪರಾಂತ, ಅನೂಪ, ವಿದರ್ಭ, ಆಕರ ಮತ್ತು ಅವಂತಿ ರಾಜ್ಯಗಳನ್ನು, ವಿಂಧ್ಯ, ಋಕ್ಷಮತ್, ಪಾರಿಯಾತ್ರ, ಸಹ್ಯ, ಕಣ್ವಗಿರಿ, ಮತ್ಸ್ಯ, ಶ್ರೀಸ್ಥಾನ, ಮಲಯ, ಮಹೇಂದ್ರ, ಸೇತ ಮತ್ತು ಚಕೋರ ಪರ್ವತ ಪ್ರದೇಶಗಳನ್ನು ಒಳಗೊಂಡಿತ್ತೆಂದು ಆ ಶಾಸನ ವರ್ಣಿಸಿದೆ. ಹೀಗೆ ವಿಸ್ತಾರವಾದ ಈತನ ರಾಜ್ಯ ತ್ರಿಸಮುದ್ರ ಪರ್ಯಂತ ಹಬ್ಬಿತ್ತು. ಇವನ ವಾಹನ-ಅಶ್ವ-ಮೂರು ಸಮುದ್ರಗಳ ನೀರನ್ನು ಕುಡಿದಿತ್ತಂತೆ ! ಶಾಸನಗಳಲ್ಲಿ ಹೇಳಿರುವ ಪ್ರದೇಶಗಳನ್ನು ಗುರುತಿಸುವುದರಲ್ಲಿ ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳಿವೆಯೇ ಹೊರತು ಹೆಚ್ಚಿನ ಸಂದೇಹಗಳಿಲ್ಲ.

ಅಸಿಕ ಕೃಷ್ಣಾ ನದೀತೀರದಲ್ಲಿ ಹಿಂದಿನ ಋಷಿಕ ನಗರದ ಸುತ್ತಲೂ ಇದ್ದ ಪ್ರದೇಶ. ಅಸಕ (ಅಶ್ಮಕ) ಗೋದಾವರೀ ತೀರದಲ್ಲಿ ಪೌದನ್ಯವನ್ನು ರಾಜಧಾನಿಯಾಗಿ ಹೊಂದಿದ್ದ ದೇಶ. ಈಗಿನ ನಿಜಾಮಾಬಾದ್ ಜಿಲ್ಲೆಯಲ್ಲಿರುವ ಬೋಧನವೇ ಪೌದನ್ಯವೆಂದು ಗುರುತಿಸಲಾಗಿದೆ. ಮುಳಕಕ್ಕೆ ಈಗಿನ ಪೈಠಣ ರಾಜಧಾನಿಯಾಗಿತ್ತು. ಸುರಠವೆಂಬುದು ಸೌರಾಷ್ಟ್ರ. ಉತ್ತರ ಕಾಠಿಯಾವಾಡವೇ ಕುಕುರ, ಉತ್ತರ ಕೊಂಕಣವೇ ಅಪರಾಂತ. ಈಗಿನ ನಿಮಾರ್ ಜಿಲ್ಲೆಯ ಮಾಂಧಾತಾದ (ಮಾಹಿಷ್ಮತೀನಗರ) ಸುತ್ತಲಿನ ದೇಶ ಅನೂಪ. ಆಕರ, ಅವಂತಿಗಳು ಕ್ರಮವಾಗಿ ವಿದಿಶಾ ಮತ್ತು ಉಜ್ಜಯಿನಿಗಳು ರಾಜಧಾನಿಯಾಗಿದ್ದ ಪೂರ್ವ ಮತ್ತು ಪಶ್ಚಿಮ ಮಾಲವಾ. ವಿದರ್ಭ ಸುಪರಿಚಿತ. ಇವೆಲ್ಲ ಇವನ ಸ್ವಾಧೀನದಲ್ಲಿದ್ದುವೆಂಬುದನ್ನು ಗಮನಿಸಿದರೆ ಇವನ ರಾಜ್ಯ ದಕ್ಷಿಣೋತ್ರವಾಗಿ ಕೃಷ್ಣಾನದಿಯಿಂದ ಮಾಲವ, ಸೌರಾಷ್ಟ್ರದವರೆವಿಗೂ, ಪೂರ್ವಪಶ್ಚಿಮವಾಗಿ ವಿದರ್ಭದಿಂದ (ಬೀರಾರ) ಸಮುದ್ರ ಪರ್ಯಂತವೂ ಹಬ್ಬಿತ್ತೆಂಬುದು ಸ್ಪಷ್ಟವಾಗುತ್ತದೆ. ಪರ್ವತಪ್ರದೇಶಗಳನ್ನು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಸಹ್ಯವೆಂಬುದು ನೀಲಗಿರಿಯ ಉತ್ತರಕ್ಕಿರುವ ಪಶ್ಚಿಮ ಘಟ್ಟ ಪ್ರದೇಶ. ಮಲಯ, ತಿರುವಾಂಕೂರಿನ ಬೆಟ್ಟಗಳಿಗಿದ್ದ ಹೆಸರು. ಮಹೇಂದ್ರವೆಂಬುದು ಪೂರ್ವ ಘಟ್ಟ. ಕಣ್ಹಗಿರಿ(ಕೃಷ್ಣ ಗಿರಿ) ಈಗಿನ ಕನ್ಹೇರಿ. ಶ್ರೀಶೈಲವೇ ಶ್ರೀಸ್ಥಾನ. ಚಕೋರವೆಂಬುದು ಅದರ ಸಮೀಪದಲ್ಲಿಯ ಇನ್ನೊಂದು ಗಿರಿಪ್ರದೇಶ. ಸೇತ ಎಂಬುದನ್ನು ಗುರುತಿಸಲಾಗಿಲ್ಲ. ಈ ಎಲ್ಲ ಪ್ರದೇಶಗಳನ್ನೂ ಸೇರಿಸಿದರೆ ಇಡೀ ದಕ್ಷಿಣ ಭಾರತವೇ ಇವನ ಆಳ್ವಿಕೆಗೊಳಪಟ್ಟಿತ್ತೆನ್ನಬೇಕಾದೀತಾದರೂ ಬಹುಶಃ ಈ ಪರ್ವತ ಪ್ರದೇಶಗಳು ಇವನ ಪ್ರಭಾವಕ್ಕೊಳಪಟ್ಟಿದ್ದು, ಇವನ ಸಾರ್ವಭೌಮತ್ವವನ್ನು ಒಪ್ಪಿದ್ದುವು ಎಂದು ಅರ್ಥೈಸುವುದು ಹೆಚ್ಚು ಸಮಂಜಸವಾದೀತು. ಅಂತೂ ತ್ರಿಸಮುದ್ರತೋಯಪೀತವಾಹನ ಎಂಬ ಬಿರುದು ಇವನಿಗೆ ಅನ್ವರ್ಥವಾಗಿದೆ.

ಕ್ಷಹರಾತರ ನಹಪಾಣನನ್ನು ಸೋಲಿಸಿದ ಅನಂತರ ಇವನು ಆತ ಅಚ್ಚು ಹಾಕಿಸಿದ ನಾಣ್ಯಗಳ ಮೇಲೆ ತನ್ನ ಹೆಸರನ್ನು ಮುದ್ರಿಸಿ ಅವೇ ನಾಣ್ಯಗಳನ್ನು ಚಲಾವಣೆಗೆ ತಂದನೆಂಬುದು ಜೋಗಲ್ಥೆಂಬಿಯ ನಾಣ್ಯಸಂಗ್ರಹದಿಂದ ಸ್ಪಷ್ಟವಾಗಿದೆ. ಈ ಸಂಗ್ರಹದಲ್ಲಿ 13,270 ನಾಣ್ಯಗಳು ದೊರೆತಿವೆ. ಇವುಗಳಲ್ಲಿ 9,270 ನಾಣ್ಯಗಳ ಮೇಲೆ ಗೌತಮೀಪುತ್ರನ ಹೆಸರನ್ನು ನಹಪಾಣನ ಹೆಸರಿನ ಮೇಲೆ ಮುದ್ರಿಸಲಾಗಿದೆ ಈ ಅರಸ ನಹಪಾಣನನ್ನಲ್ಲದೆ ಶಕ, ಯವನ, ಪಹ್ಲವರನ್ನೂ ಸೋಲಿಸಿದ.

ಆದರೆ ಇವನ ಈ ವಿಜಯಗಳು ಶಾಶ್ವತವಾಗಿರಲಿಲ್ಲ. ಗಿರಿನಗರದಲ್ಲಿ (ಜುನಾಗಢ) ಆಳುತ್ತಿದ್ದ ಕಾರ್ದಮಕ ಮನೆತನದ ರುದ್ರದಾಮ ಇವನ್ನು ಸೋಲಿಸಿ ನಹಪಾಣನಿಂದ ಇವನ ವಶವಾಗಿದ್ದ ಬಹುತೇಕ ಪ್ರದೇಶಗಳನ್ನು ಕಸಿದುಕೊಂಡ. ಮುಲಕ ದೇಶ ಮತ್ತು ಗೋವರ್ಧನ ನಗರಗಳು ಮಾತ್ರ ಶಾತಕರ್ಣಿಯ ವಶದಲ್ಲೇ ಉಳಿದುವು. ದಕ್ಷಿಣದಲ್ಲಿ ಹಬ್ಬಿದ್ದ ಇವನ ಪ್ರಭಾವ ಕುಂಠಿತವಾಯಿತು. ರುದ್ರದಾಮನೊಡನೆ ಗೌತಮೀಪುತ್ರ ರಕ್ತಸಂಬಂಧ ಬೆಳೆಸಿ, ಆಗಬಹುದಾಗಿದ್ದ ಸರ್ವನಾಶವನ್ನು ಆ ರೀತಿ ತಪ್ಪಿಸಿಕೊಂಡಂತೆ ತೋರುತ್ತದೆ. ರುದ್ರದಾಮನ ಮಗಳನ್ನು ಇವನ ಕಿರಿಯ ಮಗ ವಾಸಿಷ್ಠೀಪುತ್ರ ಶಾತಕರ್ಣಿ ಮದುವೆಯಾದಂತೆ ಕಾಣುತ್ತದೆ.

ಗೌತಮೀಪುತ್ರನನ್ನು ನಾಸಿಕದ ಶಾಸನ ಮುಕ್ತಕಂಠದಿಂದ ಹೊಗಳಿದೆ. ಈತನ ರೂಪಲಾವಣ್ಯಗಳಿಗೆ ಸಂಬಂಧಿಸಿದಂತೆ ಇವನನ್ನು ಪರಿಪೂರ್ಣಚಂದ್ರಮಂಡಲಸಶ್ರೀ ಕಪ್ರಿಯದರ್ಶಕನೆಂದು, ಭುಜಗಪತಿಭೋಗಪೀನವೃತ್ತ ವಿಪುಲ ದೀರ್ಘಸುಂದರಭುಜ ಉಳ್ಳವನೆಂದು ಹೇಳಿದೆ. ಆಡಳಿತಕ್ಕೆ ಸಂಬಂಧಿಸಿದಂತೆ ಪ್ರಜಾನುರಾಗಿಯೂ ಅವರ ಸುಖದುಃಖಗಳಲ್ಲಿ ಸಮಭಾಗಿಯೂ ಆಗಿದ್ದವನೆಂದೂ, ಧರ್ಮಶಾಸ್ತ್ರದಲ್ಲಿ ಸಮ್ಮತವಾದಂತೆ ಪ್ರಜೆಗಳ ಮೇಲೆ ಕರಾಕರಣೆಮಾಡುತ್ತಿದ್ದನೆಂದೂ ವರ್ಣಸಂಕರವನ್ನು ತಡೆದವನೆಂದೂ ವರ್ಣಿಸಿದೆ. ಶೌರ್ಯಕ್ಕೆ ಸಂಬಂಧಿಸಿದಂತೆ, ಕ್ಷತ್ರಿಯರ ದರ್ಪವನ್ನು ಮುರಿದವನೆಂದೂ ಕ್ಷಹರಾತವಂಶನಿರವಶೇಷಕನೆಂದೂ ಶಾತವಾಹನಕುಲಯಶಪ್ರತಿಷ್ಠಾಪನಕರನೆಂದೂ ವರ್ಣಿಸಿದೆ. ಸತ್ಪುರುಷರಿಗೆ ಆಶ್ರಯದಾತನೂ ವೇದಶಾಸ್ತ್ರಾದಿ ಜ್ಞಾನಗಳಿಗೆ ಆಧಾರನ ಏಕಾಂಕುಶ-ಏಕಶೂರ-ಏಕಬ್ರಾಹ್ಮಣನೂ ಆಗಿದ್ದ ಈತ ಶುಭದಿವನಸಗಳಲ್ಲಿ ಪ್ರಜೆಗಳ ರಂಜನೆಗಾಗಿ ಮಹೋತ್ಸವಗಳನ್ನು ಏರ್ಪಡಿಸಿ ಪ್ರಜಾನುರಾಗವನ್ನು ಸಂಪಾದಿಸಿದ್ದ. ತ್ರಿವರ್ಗ (ಧರ್ಮಾರ್ಥಕಾಮ) ಲಾಭಕ್ಕಾಗಿ ಸ್ಥಾನ ಕಾಲಗಳಿಗೆ ಸಮನಾಗಿ ವ್ಯವಹರಿಸುತ್ತಿದ್ದ ಈತ ಅಪರಾಧಿಗಳಾದ ಶತ್ರುಗಳನ್ನು ಸಹ ಪ್ರಾಣಹಿಂಸೆಗೆ ಈಡುಮಾಡಲು ಹಿಂಜರಿಯುತ್ತಿದ್ದ.

ಆಳ್ವಿಕೆಯ ಕೊನೆಯ ಕಾಲದಲ್ಲಿ ರುದ್ರದಾಮನಿಂದ ಸೋಲಿಸಲ್ಪಟ್ಟ ಈತ ಸ್ವಲ್ಪಕಾಲ ಅನಾರೋಗ್ಯದಿಂದ ಬಳಲಿದ. ಈತನ ಆಳ್ವಿಕೆಯ 24 ನೆಯ ವರ್ಷದ ನಾಸಿಕದ ಶಾಸನದಲ್ಲಿ ಈತನ ತಾಯಿಯನ್ನು ಜೀವಸುತಾ ಎಂದು ವರ್ಣಿಸಲಾಗಿದೆ. ಜೀವದಿಂದಿದ್ದ ಮಗನ ತಾಯಿ ಎಂಬ ಅರ್ಥ ಬರುವ ಈ ಮಾತು, ಪ್ರಜೆಗಳಿಗೆ ರಾಜನ ಆರೋಗ್ಯವನ್ನು ಕುರಿತು ನೀಡಿದ ಆಶ್ವಾಸನೆಯ ಮಾತುಗಳಾಗಿರಬಹುದುದೆಂದು ಹೇಳಲಾಗಿದೆ. ಆದರೆ ಈ ಅನಾರೋಗ್ಯದಿಂದ ಗೌತಮೀಪುತ್ರ ಚೇತರಿಸಿಕೊಳ್ಳಲೇ ಇಲ್ಲ. (ಜಿ.ಬಿ.ಆರ್.)