ಪುಟ:Mysore-University-Encyclopaedia-Vol-1-Part-1.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಲಾಪೂರ್ವ ತರಬೇತಿ: ಮಗುವೊಂದರ ಬೌದ್ಧಿಕ ಬೆಳೆವಣಿಗೆ 2ರಿಂದ 6 ವರ್ಷಗಳೊಳಗೆ ಆರಂಭವಾಗುವುದೆಂದು ಸಂಶೋಧನ ವರದಿ ಹೇಳುತ್ತದೆ. ಈ ಕಾರಣದಿಂದ ಸಂವಹನ ಸಮಸ್ಯೆಯಿಂದ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಶಾಲಾ ಪೂರ್ವ ತರಬೇತಿ ಯೋಜನೆಯನ್ನು ಈ ಸಂಸ್ಥೆ ಆರಂಬಿsಸಿದೆ. ಇಂಗ್ಲಿಷ್, ಮಲೆಯಾಳಂ, ಹಿಂದಿಯೂ ಸೇರಿ ಒಟ್ಟು ಆರು ಭಾಷೆಗಳಲ್ಲಿ ಇಲ್ಲಿ ತರಬೇತಿ ನೀಡಲಾಗುತ್ತದೆ. ಭಾರತದಲ್ಲಿ ಪ್ರತಿಶತ ಮೂವರಿಗೆ ಮಾತಿನ ಅಥವಾ ಶ್ರವಣ ದೋಷವಿದೆ. ಇವರಲ್ಲಿ ಹೆಚ್ಚಿನ ಜನರು ಹಳ್ಳಿಗಳಲ್ಲಿ ವಾಸಮಾಡುತ್ತಾರೆ. ಅವರಿಗೆ ಹೊಸ ಜೀವನವನ್ನು ಕಲ್ಪಿಸಲು ಪಣತೊಟ್ಟಿರುವ ಈ ಸಂಸ್ಥೆ ರಾಜ್ಯದ ಹೊರಗೂ ಶಿಬಿರಗಳನ್ನು ಏರ್ಪಡಿಸಿ, ಗ್ರಾಮೀಣ ಜನರಿಗೂ ಈ ಸೌಲಭ್ಯ ಒದಗುವಂತೆ ಮಾಡಿದೆ. ಅಗತ್ಯವಿದ್ದವರಿಗೆ ಶಿಬಿರಗಳಲ್ಲಿ ಶ್ರವಣೋಪಕರಣಗಳನ್ನು ಉಚಿತವಾಗಿ ಸ್ಥಳದಲ್ಲೇ ವಿತರಿಸಲಾಗುತ್ತಿದೆ. ವಸತಿ ಸೌಕರ್ಯ: ಹೊರ ಊರು, ಹೊರ ರಾಜ್ಯಗಳಿಂದ ಚಿಕಿತ್ಸೆಗಾಗಿ ಬರುವ ರೋಗಿಗಳು ಉಳಿದುಕೊಳ್ಳಲು ಸೂಕ್ತ ವಸತಿ ಸೌಕರ್ಯವೂ ಸಂಸ್ಥೆಯಲ್ಲಿದೆ. ಇತ್ತೀಚೆಗೆ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಆಡಳಿತವು ನಿರ್ದೇಶಕರ ನೇರ ಉಸ್ತುವಾರಿಯಲ್ಲಿ ನಡೆಯುತ್ತಿದ್ದು ಅಧ್ಯಯನ ಮಂಡಳಿ ಹಾಗೂ ವಿವಿಧ ಸಮಿತಿಗಳು ಈ ಆಡಳಿತಕ್ಕೆ ಸಹಕಾರಿಯಾಗಿ ಸ್ಥಾಪಿತವಾಗಿವೆ. (ಎಂ.ಜೆಎ.) ಅಖಿಲಭಾರತ ವೈದ್ಯವಿಜ್ಞಾನಗಳ ಸಂಸ್ಥೆ : ದೇಶಕ್ಕೆ ಒಂದು ಪ್ರಗತಿಪರ, ವೈದ್ಯಶಿಕ್ಷಣಕ್ಕೆ ಮಾದರಿ ಎನಿಸಿರುವ, ಒಂದು ಕೇಂದ್ರವನ್ನು ಸ್ಥಾಪಿಸಬೇಕೆಂದು ಭೋರ್ ಸಮಿತಿ (1946) ಸಲಹೆ ಕೊಟ್ಟಿತ್ತು. ಭಾರತ ಸ್ವತಂತ್ರವಾದ ಮೇಲೆ, ನ್ಯೂಜಿûಲೆಂಡ್ ಸರ್ಕಾರ ಕೊಲಂಬೊ ಯೋಜನೆಯ ಮೂಲಕ ದತ್ತಿಯಾಗಿ ಕೊಟ್ಟ ಹತ್ತುಲಕ್ಷ ಪೌಂಡುಗಳನ್ನು ಭಾರತ ಸರ್ಕಾರ ಸ್ವೀಕರಿಸಿದಾಗ (1956) ಈ ಸಂಸ್ಥೆಯ (ಆಲ್ ಇಂಡಿಯ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಯೋಜನೆ ಮೊಳೆಯಿತು. ಭಾರತದ ಲೋಕಸಭೆ ಅದೇ ವರ್ಷದ ಶಾಸನದಂತೆ, ಸ್ವಯಂ ಅಧಿಕಾರದ ಸಂಸ್ಥೆಯೊಂದು ನಾಡಿಗೇ ಪ್ರಧಾನ ವಿಶ್ವವಿದ್ಯಾನಿಲಯವಾಯಿತು. ಭಾರತದ ವೈದ್ಯರು ಪರದೇಶಗಳಿಗೆ ಹೆಚ್ಚಿನ ಕಲಿಕೆಗಾಗಿ ಹೋಗುವುದನ್ನು ತಪ್ಪಿಸಿ, ಮಹೋನ್ನತ ಮಟ್ಟದ ಸ್ನಾತಕೋತ್ತರ ವೈದ್ಯವಿದ್ಯೆ, ಶಿಕ್ಷಕರ ಶಿಕ್ಷಣ, ಸಂಶೋಧನೆ, ವೈದ್ಯಚಿಕಿತ್ಸೆಗಳಿಗೆ ಇಲ್ಲೇ ಎಲ್ಲ ಅವಕಾಶಗಳನ್ನು ಕಲ್ಪಿಸುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶ. ಶಿಕ್ಷಕರ ಶಿಕ್ಷಣಕ್ಕಾಗಿ ವೈದ್ಯವಿದ್ಯಾರ್ಥಿಗಳ ಕಾಲೇಜು ವಿಭಾಗದಲ್ಲಿ ಪ್ರತಿವರ್ಷವೂ ಭಾರತದ ಎಲ್ಲೆಡೆಗಳಿಂದಲೂ ಹೊರನಾಡುಗಳಿಂದಲೂ ಆಯ್ಕೆಯಾಗಿ ಬರುವ, ಕೇವಲ 50 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳಲಾಗುವುದು. ದಕ್ಷಿಣ ದೆಹಲಿಯಲ್ಲಿ 150 ಎಕರೆಯ ಹರವಿನಲ್ಲಿರುವ ವೈದ್ಯಶಿಕ್ಷಣ ಕೇಂದ್ರವಿದು. ವೈದ್ಯಶಿಕ್ಷಣದ ಎಲ್ಲ ವಿಭಾಗಗಳೂ ಇಲ್ಲಿದ್ದು, ಸಂಶೋಧನೆಗೆ ಪ್ರಪಂಚದಲ್ಲೇ ಹೆಸರಾಗಿದೆ. ಹೊರ ರೋಗಿಗಳ ಚಿಕಿತ್ಸೆಗಾಗಿ ಚೆನ್ನಾಗಿ ವ್ಯವಸ್ಥೆ ಇರುವಂತೆ, 650 ಹಾಸಿಗೆಗಳ ಆಸ್ಪತ್ರೆ ಒಂದಿದೆ. ಆಸ್ಪತ್ರೆ ದಾದಿಯರ ಕಾಲೇಜೂ ಇದೆ. ವಿದ್ಯಾರ್ಥಿಗಳು, ಶಿಕ್ಷಕರು, ಕೆಲಸಗಾರರು, ಎಲ್ಲರಿಗೂ ತಕ್ಕ ವಸತಿಗಳಿವೆ. ಪ್ರಾಧ್ಯಾಪಕರು ಸದಸ್ಯರಾಗಿರುವ ಸಮಿತಿಯೊಂದು ಆಡಳಿತ ನಡೆಸುತ್ತದೆ. ಅಮೆರಿಕ ಗೋದಿ ನಿಧಿಯಿಂದ (ಪಿ.ಎಲ್.-180) 290 ಲಕ್ಷ ರೂಪಾಯಿಗಳೂ ವಿದೇಶೀವಿನಿಮಯ ಹಣಕ್ಕಾಗಿ ರಾಕ್‍ಫೆಲರ್ ಪ್ರತಿಷ್ಠಾನದಿಂದ ಹತ್ತು ಲಕ್ಷ ಪೌಂಡುಗಳ ದತ್ತಿ ದಯಪಾಲಿಸಿದೆ. ನ್ಯೂಜಿಲೆಂಡ್ ಸರ್ಕಾರ ಒಂದು ಲಕ್ಷ ಪೌಂಡುಗಳ ದತ್ತಿ ನೀಡಿದೆ. ಸಂಸ್ಥೆಯ ಒಟ್ಟು ಯೋಜನೆಯ ಖರ್ಚು 9 ಕೋಟಿ ರೂಪಾಯಿಗಳು. ವರುಷದ ಖರ್ಚು ಒಂದು ಕೋಟಿ ರೂಪಾಯಿಗಳು. (ಡಿ.ಎಸ್.ಎಸ್.) ಅಗಪಾಂತಸ್ : ಹೂಬಿಡುವ ಲಶುನ (ಬಲ್ಬ್) ಸಸ್ಯಗಳಲ್ಲಿ ಬಹುಮುಖ್ಯ ಬಗೆಯದಾಗಿದ್ದು, ಲಿಲಿಯೇಸೀ ಕುಟುಂಬಕ್ಕೆ ಸೇರಿದೆ. ಇದೊಂದು ಜನಪ್ರಿಯ ಅಲಂಕಾರ ಸಸ್ಯ. ಇದನ್ನು ವಿಶಾಲವಾದ ಕುಂಡಗಳಲ್ಲಿ ಬೆಳೆಸಿ ದಾರಿ ಪಕ್ಕದಲ್ಲಿ ಮತ್ತು ಉದ್ಯಾನದ ಹಸಲೆಯ ತುದಿಗಳಲ್ಲಿ ಇಟ್ಟಾಗ ಬಹು ಸುಂದರವಾಗಿ ಕಾಣುತ್ತದೆ. ಅಗಪಾಂತಸ್ ಒಂದು ಋತುವಿನಲ್ಲಿ ತನ್ನ ಹಸಿರು ಭಾಗವನ್ನು ಹೊರವಾಗಿ ಬೆಳೆಸಿಕೊಂಡು, ಇನ್ನೊಂದು ಋತುವಿನಲ್ಲಿ ಸುಂದರವಾಗಿ ಹೂಬಿಡುವ ದ್ವೈವಾರ್ಷಿಕ ಸಸ್ಯ. ಈ ಸಸ್ಯದಲ್ಲಿ ಭೂಗತ ಗುಪ್ತಕಾಂಡವೂ ಉದ್ದವಾದ ಮತ್ತು ಕಿರಿದಾದ ಎಲೆಗಳೂ ಇವೆ. ಹೂಗೊಂಚಲು ಅಂಬೆಲ್ ಮಾದರಿಯದು. ಆರು ಕೇಸರಗಳೂ ಮೂರು ಕೋಶದ ಉನ್ನತಸ್ಥಿತಿಯ ಅಂಡಾಶಯವೂ ಇರುತ್ತವೆ. ಫಲ ಕ್ಯಾಪ್‍ಸೂಲ್ ಮಾದರಿಯದು. ಅಗಪಾಂತಸ್ ಆಫ್ರಿಕ್ಯಾನಸ್: ಎಂಬುದು ಆಫ್ರಿಕದ ಮೂಲವಾಸಿ. ಇದರ ನೀಳಾಕಾರದ ಹಸಿರು ಕೊಳವೆ ಎಲೆ ನೋಡಲು ಅಂದವಾಗಿ ಕಾಣುತ್ತದೆ. ಹೂಗೊಂಚಲು ಅನೇಕ ಹೂಗಳನ್ನೊಳಗೊಂಡ ಅಂಬೆಲ್ ಮಾದರಿಯದು. ಪತ್ರಪುಷ್ಪಗಳೂ ದಳಗಳೂ ಸಂಯುಕ್ತರಚನೆಯನ್ನು ತಳೆದಿವೆ. ಪರಾಗಕೋಶಗಳು ಮೊದಲು ಹಳದಿಬಣ್ಣವಾಗಿದ್ದು ಅನಂತರ ಕಂದುಬಣ್ಣಕ್ಕೆ ತಿರುಗುವುದರಿಂದ ಬಹಳ ಆಕರ್ಷಕವಾಗಿ ಕಾಣುತ್ತವೆ. ಅಗಪಾಂತಸ್ ಸಸ್ಯಗಳನ್ನು ಚಿಕ್ಕ ಲಶುನಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಇದನ್ನು ಬೀಜಗಳಿಂದ ವೃದ್ಧಿಸ ಬಹುದಾದರೂ ಸಾಮಾನ್ಯವಾಗಿ ಲಶುನಗಳಿಂದಲೇ ಬೆಳೆಸುವುದು ವಾಡಿಕೆ. ಅನ್ಯಪರಾಗಸ್ಪರ್ಶದಿಂದ ಗರ್ಭಧಾರಣೆಯಾಗಿ ಉತ್ಪತ್ತಿಯಾಗುವ ಬೀಜಗಳಿಂದ ಬೆಳೆದರೆ ಮುಂದಿನ ಪೀಳಿಗೆಯ ಗಿಡಗಳಲ್ಲಿ ಮೂಲ ಗಿಡದ ಸೊಗಸು ಮಾಯವಾಗಬಹುದಾದ್ದರಿಂದ ಬೀಜಗಳ ಮೂಲಕ ಬೆಳೆಸುವುದು ವಾಡಿಕೆಯಲ್ಲಿಲ್ಲ. ಅಗಪಾಂತಸ್ ಸಸ್ಯಗಳು ಸಮುದ್ರಮಟ್ಟದಿಂದ 1000ಮೀ-2000ಮೀ ಎತ್ತರ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ದೃಢವಾಗಿ ಮತ್ತು ಆಳವಾಗಿ ಬೇರು ಬಿಡುವುದರಿಂದ, ಇವುಗಳ ಬೇಸಾಯಕ್ಕೆ ಹೆಚ್ಚಿನ ತೇವ ಅವಶ್ಯವಾದದ್ದರಿಂದ, ಇವುಗಳಿಗೆ ಕಾಲಕ್ಕೆ ಸರಿಯಾಗಿ ನೀರು ಕೊಡುವುದು ಅಗತ್ಯ. ಆದರೆ ಇವು ಜೌಗನ್ನು ಸಹಿಸುವ ಶಕ್ತಿಯನ್ನು ಪಡೆದಿಲ್ಲ. ಅಗಪಾಂತಸ್ ಸಸ್ಯಗಳು ಪಾಶ್ರ್ವನೆರಳಿನಲ್ಲಿ ಸಮೃದ್ಧಿಯಾಗಿ ಬೆಳೆದು ಹೂಬಿಡುತ್ತವೆ. ಜೊತೆಗೆ ಅವಕ್ಕೆ ಧಾರಾಳವಾದ ಗಾಳಿ ಬೆಳಕು ಅಗತ್ಯ. ಇವು ಫಲವತ್ತಾಗಿಲ್ಲದ ಮಣ್ಣಿನಲ್ಲಿ ಬೆಳೆಯಲಾರವಾದ್ದರಿಂದ ದ್ರಾವಣ ಗೊಬ್ಬರವನ್ನು ಎರಡು ವಾರಗಳಿಗೊಮ್ಮೆ ಕೊಡುತ್ತಿರಬೇಕು. ಕುಂಡದ ಮಣ್ಣನ್ನು ಕೊನೆಯಪಕ್ಷ ಮೂರು ವರ್ಷಗಳಿಗೆ ಒಂದು ಸಾರಿಯಾದರೂ ಬದಲಾಯಿಸಬೇಕು. ಅಗಪಾಂತಸ್ ಸಸ್ಯಗಳು ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಹೂ ಬಿಡುತ್ತವೆ. (ಡಿ.ಎಂ.) ಅಗರ್ತಲ : ತ್ರಿಪುರ ರಾಜ್ಯದ ರಾಜಧಾನಿ ಹಾಗೂ ಮುಖ್ಯ ಪಟ್ಟಣ ಜನಸಂಖ್ಯೆ 189,327. ಶಿಕ್ಷಣ, ವ್ಯಾಪಾರ ವಾಣಿಜ್ಯ - ಮುಂತಾದುವುಗಳ ದೃಷ್ಟಿಯಿಂದ ಹಿಂದುಳಿದಿರುವ ಒಂದು ಚಿಕ್ಕ ಪಟ್ಟಣ. ಇಲ್ಲಿ ಹೋರಾ ನದಿ ಹರಿಯುತ್ತದೆ. ಇದು ಬಂಗ್ಲಾದೇಶ ಮತ್ತು ಭಾರತಗಳ ಗಡಿಯಾಗಿದೆ. ಕೃಷಿಗೆ ಫಲವತ್ತಾದ ಮೈದಾನ. ತ್ರಿಪುರ ಪ್ರಾಂತದಲ್ಲೇ ಪ್ರಮುಖ ರೈಲುನಿಲ್ದಾಣವುಳ್ಳ ಪಟ್ಟಣ. ಇಲ್ಲಿಂದ ಬ್ರಹ್ಮಪುತ್ರ ಪ್ರದೇಶದ ಕೆಲವು ಪಟ್ಟಣಗಳಿಗೆ ರೈಲು ಸಂಪರ್ಕವಿದೆ. ಭಾರತ ಮತ್ತು ಬಂಗ್ಲಾದೇಶ ಗಡಿಪ್ರದೇಶದಲ್ಲಿರುವ ಈ ಪಟ್ಟಣದಲ್ಲಿ ಸೇನಾಶಿಬಿರಗಳಿವೆ. ಈ ಪ್ರದೇಶದಲ್ಲಿ ಅಧಿಕವಾಗಿ ಮಳೆಯಾಗುವುದರಿಂದ ಹವಾಗುಣ ಅಷ್ಟು ಹಿತಕರವಾಗಿಲ್ಲ. ಪ್ರವಾಹಗಳಿಂದಾಗಿ ಜನ ಆಗಾಗ ತೊಂದರೆಗೊಳಗಾಗುತ್ತಾರೆ. ಇದೇ ಇಲ್ಲಿನ ಅಲ್ಪ ಜನಸಂಖ್ಯೆಗೆ ಕಾರಣ. ಗುಡ್ಡಗಾಡಿನ ಪ್ರದೇಶದಲ್ಲಿರುವ ಈ ಪಟ್ಟಣದ ನಿವಾಸಿಗಳಿಗೆ ಇತ್ತೀಚೆಗೆ ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರದ ನೆರವು ಹೆಚ್ಚಾಗಿ ದೊರೆತಿದೆ. ವಾಣಿಜ್ಯ ಕೇಂದ್ರ ಕೋಲ್ಕೊತ ವಿಶ್ವವಿದ್ಯಾಲಯಕ್ಕೆ ಸೇರಿದ 4 ಕಾಲೇಜುಗಳಿವೆ. ಮಹಾರಾಜರ ಅರಮನೆ ಹಾಗೂ ಒಂದು ದೇವಾಲಯವಿದೆ. (ಡಿ.ಕೆ.) ಅಗಸೆ : ಮೃದುವಾದ ಸು. 3-6 ಮೀ ಎತ್ತರ ಬೆಳೆಯುವ ಪ್ಯಾಪಿಲಿಯೊನೇಸೀ ಜಾತಿಗೆ ಸೇರಿದ ವೃಕ್ಷ. ಸೆ. ಗ್ರಾಂಡಿಫ್ಲೋರ (ಸೆಸ್ಟೇನಿಯ) ಇದರ ವೈಜ್ಞಾನಿಕ ಹೆಸರು. ಇದರ ಪುಷ್ಪಗಳು ಬಿಳಿ ಅಥವಾ ಗುಲಾಬಿ ಬಣ್ಣದ್ದಾಗಿವೆ. ಒಂದೊಂದು ಪುಷ್ಪವೂ ಸು. 7 ಸೆಂಮೀ ಉದ್ದವಿರುತ್ತದೆ. ಸಾಮಾನ್ಯವಾಗಿ ಇದು ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಹೂ ಬಿಡುತ್ತದೆ. ಹೂವಿನ ರಚನೆ ಬಣ್ಣ ಮತ್ತು ಮಕರಂದ-ಇವೆಲ್ಲ ಚಿಟ್ಟೆಗಳಿಂದ ಅನ್ಯಪರಾಗಸ್ಪರ್ಶಕ್ಕೆ ಅನುಕೂಲಿಸುವಂತೆ ಮಾರ್ಪಟ್ಟು ವೈಶಿಷ್ಟ್ಯಪೂರ್ಣವಾಗಿವೆ. ಇದರ ಕಾಯಿ, ಎಲೆ ಮತ್ತು ಹೂವನ್ನು ಅಡುಗೆಗೂ ಕಾಯಿ ಮತ್ತು ಎಲೆಯನ್ನು ದನಗಳಿಗೆ ಮೇವಾಗೂ ಉಪಯೋಗಿಸುತ್ತಾರೆ. ಈ ಮರವನ್ನು ತೋಟಗಳಲ್ಲಿ ಎಲೆಯಬಳ್ಳಿ ಹಬ್ಬಿಸುವ ಸಲುವಾಗಿ ಬೆಳೆಸುತ್ತಾರೆ. ಇದರ ಎಲೆ ಮತ್ತು ತೊಗಟೆಗಳಿಗೆ ಔಷಧೀಯ ಗುಣವುಂಟು. (*) ಅಗಸೆಎಣ್ಣೆ : ಅಗಸೆಯ (ನಾರಗಸೆಯ) ಬೀಜದಿಂದ ಪಡೆಯಲಾಗುವ ಉಪಯುಕ್ತವಾದ ಎಣ್ಣೆ (ಲಿನ್‍ಸೀಡ್ ಆಯಿಲ್). ಇದು ಒಂದು ಬಗೆಯ ಎಣ್ಣೆ, ಮೆರುಗು ಎಣ್ಣೆ. ನಾರಗಸೆಯ ಉತ್ಪನ್ನಗಳಲ್ಲಿ ಇದೇ ಅತ್ಯಂತ ಮುಖ್ಯವಾದುದು. ಈ ಗಿಡವನ್ನು ಸಮಶೀತೋಷ್ಣ ಪ್ರದೇಶಗಳಲ್ಲಿ ನಾರು, ಎಣ್ಣೆಗಳೆರಡರ ಸಲುವಾಗಿಯೂ ಟರ್ಕಿ, ಆಫ್ಘಾನಿಸ್ತಾನ ಮತ್ತು ಭಾರತಗಳಲ್ಲಿ ಬರಿ ಎಣ್ಣೆಗಾಗಿಯೂ ಬೆಳೆಯುತ್ತಾರೆ. ಭಾರತದಲ್ಲಿ ಮೂರು ನಾಲ್ಕು ಜಾತಿಯ ನಾರಗಸೆ ಗಿಡಗಳು ಬೆಳೆಯುತ್ತವೆ. ಇವುಗಳಲ್ಲಿ ಲಿನಮ್ ಯುಸಿಟಾಟಿಸಿಮಮ್ ಎಂಬ ಬಗೆಯನ್ನು ಬಹುವಾಗಿ ಬೆಳೆಯುತ್ತಾರೆ. ಇದರಲ್ಲಿ ಶೇ88. ಭಾಗ ಎಣ್ಣೆ ತೆಗೆಯಲು ಉಪಯೋಗವಾಗುತ್ತದೆ. ಬೀಜಗಳನ್ನು ಮುಂಚೆ ನಯವಾಗಿ ಅರೆದು, ಎತ್ತಿನ ಗಾಣಗಳಿಂದ ಅಥವಾ ಯಂತ್ರಶಕ್ತಿಯಿಂದ ನಡೆಯುವ ಉರುಳೆಯಂತ್ರಗಳಿಂದ ಎಣ್ಣೆ ತೆಗೆಯುತ್ತಾರೆ. ಹಸಿ ಬೀಜದಿಂದಾಗಲೀ ಬೀಜವನ್ನು ಬಿಸಿಮಾಡಿಯಾಗಲಿ ಎಣ್ಣೆ ತೆಗೆಯಬಹುದು. ಬೀಜದ ಪುಡಿಯನ್ನು 1600 ಉಷ್ಣತೆಯಲ್ಲಿ ಕಾಯಿಸಿದರೆ ಹೆಚ್ಚು ಎಣ್ಣೆ (ಬೀಜದ ತೂಕದ ಶೇ.33 ಭಾಗ) ಸಿಗುತ್ತದೆ. ಬೀಜದ ತೂಕದ ಶೇ.23 - ಶೇ.36ವರೆಗೆ ಎಣ್ಣೆ ಸಿಗಬಹುದು. ಭಾರತದಲ್ಲಿ ಸರಾಸರಿ ಉತ್ಪತ್ತಿ ಶೇ.33.