ಸಣ್ಣದಾಗಿ ಮೃದುವಾಗಿ ಶೃಂಗನಾದವಾಗಿ ಚಕ್ರವರ್ತಿಯ ಆಗಮನವನ್ನು ಸೂಚಿಸಿತ್ತು. ಮರ್ಯಾದೆಗೆಂದು ಹಿಡಿದಿರುವ ಕರ್ಪೂರದೀಪಿಕೆಯು ತನ್ನದೂ ಕಾಣಿಕೆಯಿರಲಿ ಎಂಬಂತೆ, ಆ ಬಿಸಿಲುಮಚ್ಚಿನಲ್ಲಿ ರಂಗವಲ್ಲಿಯಾಗಿ ಇಟ್ಟಿರುವ ಕೇಸರ, ಪಚ್ಚಕರ್ಪೂರ, ಕಸ್ತೂರಿಗಳ ಹುಡಿಗಳ ವಾಸನೆಯ ಜೊತೆಗೆ ತನ್ನ ಸುವಾಸನೆಯನ್ನೂ ಅಷ್ಟು ಒಪ್ಪಿಸುತ್ತಿದೆ. ಪರಾಕ್ರಮವನ್ನು ಪ್ರದರ್ಶಿಸಿ ಹಿಡಿದು ತಂದು ಸೆರೆಯಲ್ಲಿಟ್ಟಿರುವ ಶತ್ರುಗಳ ಹೃದಯದ ದ್ವೇಷದಾವಾನಲಗಳಿಂದ ಏಳುವ ಕೃಷ್ಣಧೂಮದ ನಿಷ್ಫಲ ಮೇಘಗಳಂತೆ, ಚಕ್ರವರ್ತಿಯ ಪಕ್ಕದಲ್ಲಿ ಹಿಡಿದು ತರುತ್ತಿರುವ ಧೂಪದಾನಿಯಿಂದ ಹೊರಬೀಳುವ ದಪ್ಪ ಹೊಗೆಯು ಚಾಮರಗಳ ಗಾಳಿಯಿಂದ ಆಹತವಾಗಿ ಸುತ್ತಿನ ಗಾಳಿಯಲ್ಲಿ ಸೇರಿಹೋಗಿ ಅದೃಶ್ಯವಾಗುತ್ತಿದೆ.
ಚಕ್ರವರ್ತಿಯು ಬಂದನು. ಆತನು ತನ್ನ ಪಾದಗಳಲ್ಲಿ ಧರಿಸಿರುವ ಪಾದುಕೆಗಳ ಚರ್ಮಕ್ಕಿಂತ ಮೃದುವಾದ ರತ್ನಗಂಬಳಿಯ ಮೇಲೆ ನಡೆದು ಬಂದನು. ಬಾಗಿಲಲ್ಲಿದ್ದ ಪ್ರಹರಿಣಿಯು ಮಂಡಿಯೂರಿ ಮಣಿದು ದಾರಿ ತೋರಿಸಿಕೊಂಡು ಚಕ್ರವರ್ತಿನಿಯಿರುವೆಡೆಗೆ ಕರೆತಂದಳು. ಅರಸನ ಹಿಂದೆ ಬರುತ್ತಿರುವ ಮುಖ್ಯ ವೀಣಾವಾದ್ಯದ ಮೃದು ಮಂಗಳರವವು ಚಕ್ರವರ್ತಿನಿಯ ಬಳಿ ನುಡಿಯುತ್ತಿದ್ದ ವೀಣೆಯ ನಿನಾದದೊಡನೆ ಸುಖವಾಗಿ ಬೆರೆತು ಪರಸ್ಪರ ಕುಶಲಪ್ರಶ್ನಗಳ ಮಂಗಳ ಕಾರ್ಯವನ್ನು ನಿರ್ವಹಿಸಿ ಸ್ವಾಗತವನ್ನು ಆಚರಿಸಿತು. ಅರಸಿತಿಯು ಆಸನದಿಂದೆದ್ದು ಮೂರು ಹೆಜ್ಜೆ ಮುಂದೆ ಹೋಗಿ ಅರಸನನ್ನು ಎದುರುಗೊಂಡು, ಮಂಡಿಯೂರಿ ಬಗ್ಗಿ ಆತನ ಪಾದಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡಳು. ಅರಸನು ಜಲಭಾರ ನಮ್ರವಾದ ಮೇಘರಾಜನು ಬಗ್ಗಿ ಶಿಖರಿಣಿಯನ್ನು ಆಲಿಂಗಿಸುವಂತೆ, ಬಗ್ಗಿ ಆಕೆಯನ್ನು ಮೇಲಕ್ಕೆತ್ತಿ ಆಲಿಂಗಿಸಿಕೊಂಡು ಜೊತೆಯಲ್ಲಿ ನಡೆದುಹೋಗಿ, ಸುಖಾಸನವನ್ನು ಸಹಪತ್ನೀಕನಾಗಿ ಅಲಂಕರಿಸಿದನು. ಪರಿಜನರು ಒಬ್ಬೊಬ್ಬರಾಗಿ ಬಂದು ಮುಜುರೆ ಮಾಡಿ ಹೋಗಿ ದೂರದಲ್ಲಿ ನಿಂತರು. ತಿರಸ್ಕರಣಿಯು ನಿಶ್ಯಬ್ದವಾಗಿ ಮುಂದೆ ಸರಿದು ಅವರಿಬ್ಬರೂ ಕುಳಿತಿರುವ ಮೂಲೆಯನ್ನು ಒಂದು ಕೋಣೆಯನ್ನಾಗಿ ಮಾಡಿತು.
ವಿರಜಾದೇವಿಯು ಅಲ್ಲಿ ಸಿದ್ಧವಾಗಿದ್ದ ರಸಾಯನವನ್ನೂ, ಆಸನವನ್ನೂ ಪತಿದೇವನಿಗೊಪ್ಪಿಸಿ ಉಪಚಾರಮಾಡಿದಳು. ಅರಸನು ಸಕಾಮನಾಗಿ ಆಕೆಯನ್ನು ಬರಸೆಳೆದು ಗಾಢವಾಗಿ ಆಲಿಂಗನ ಮಾಡಿಕೊಂಡು ಸಸೀತ್ಕಾರವಾಗಿ ಚುಂಬಿಸಿ, “ನನಗೆ ನಿನ್ನಲ್ಲಿ ಎಷ್ಟೋ ಚೇಷ್ಟೆ ಮಾಡಬೇಕೆಂದು ಆಸೆ. ಆದರೆ ನೀನು ಧರ್ಮಪತ್ನಿ. ಕಾಮಪತ್ನಿಯ ಚೇಷ್ಟೆಯನ್ನು ಧರ್ಮಪತ್ನಿಯಲ್ಲಿ ಮಾಡಬಾರದು. ಏನುಮಾಡಲಿ?”