ಎಂದು ನಿಟ್ಟುಸಿರುಬಿಟ್ಟನು. ದೇವಿಯು ಗಂಡನನ್ನು ಕೆರಳಿಸುವಂತೆ ಕೇಳಿದಳು : “ಪ್ರವಾಹ ಬಂದಾಗ ನದಿಯು ದಡಗಳನ್ನು ಕೇಳುವುದೇನು ?”
“ಹಾಗಾದರೆ ತತ್ವವನ್ನು ಕೇಳು : ಸ್ತ್ರೀಪೂರ್ವವಾದ ವ್ಯಾಪಾರವೆಲ್ಲ ಕಾಮವ್ಯಾಪಾರ. ಅದು ಪುಂಪೂರ್ವವಾಗಿ ನಡೆಯಬೇಕಾದಾಗ ಸ್ತ್ರೀಯು ಕಾಮಪತ್ನಿಯಾದರೆ ಸ್ವಚ್ಛಂದ. ಹಾಗಿಲ್ಲದೆ ಧರ್ಮಪತ್ನಿಯಾದರೆ ಅಲ್ಲಿ ನಿಯಮ. ಅದರಿಂದಲೇ ‘ಶಯ್ಯಾಸು ವೇಶ್ಯಾ’ ಎನ್ನುವುದು.”
“ಹಾಗಾದರೆ ನಾನು ವೇಶ್ಯೆಯಾಗಬೇಕೆ ?”
“ವೇಶ್ಯೆಯಂತಾಗಬೇಕು. ಎಂದರೆ ಗಂಡನ ಸೂಳೆಯಾಗಬೇಕು.”
“ದೇವ ಧರ್ಮಿಷ್ಠರೂ ಧರ್ಮಜ್ಞರೂ ಒಗಟಿನಲ್ಲಿಯೇ ಮಾತನಾಡ ಬೇಕೇನು?”
ನಹುಷನು ಸಣ್ಣಗೆ ನಕ್ಕು ಗಲ್ಲವನ್ನು ಮೆಲ್ಲಗೆ ಒತ್ತಿ ವಕ್ಷಸ್ಥಳದಲ್ಲಿ ತಲೆಯಿಟ್ಟು ಪತ್ನಿಯನ್ನು ಅರ್ಧಾಲಿಂಗನದಿಂದ ಆರಾಧಿಸುತ್ತಾ ಹೇಳಿದನು ; “ಧರ್ಮಪತ್ನಿಯನ್ನು ಆರಾಧಿಸುವುದು ಧರ್ಮಸಂತಾನವನ್ನು ಪಡೆದು ಪಿತೃಋಣವನ್ನು ಕಳೆದುಕೊಳ್ಳುವುದಕ್ಕೆ. ಸಂತಾನದ ಯೋಚನೆಯೇ ಇಲ್ಲದೆ ಕಾಮತೃಪ್ತಿಯನ್ನು ಪಡೆಯುವುದಕ್ಕೆ ಕಾಮಪತ್ನಿಯ ಸೇವನೆ. ಈಗ ಅರ್ಥವಾಯಿತೆ ? ಅದರಿಂದ ಹೇಳಿದೆ. ಕಾಮತೃಪ್ತಿಯೆನ್ನುವುದಾದರೆ ಅದು ನಿನ್ನ ಪ್ರಪಂಚ. ಆಗ ನಿನ್ನ ದಯೆಯಿಂದ ನಮಗೂ ಅಷ್ಟು ವಿನೋದ. ಅದರಿಂದ, ಬೇಕು ಎನ್ನುವುದು ನಿನ್ನ ಕಡೆಯಿಂದ ಬರಲಿ ಎಂದು ಧರ್ಮಪತ್ನಿ ಕಾಮಪತ್ನಿಯರ ಮಾತನ್ನು ಎತ್ತಿದೆ.”
“ದೇವಾ, ನೆನಪಿರಲಿ. ತಾವು ಇಲ್ಲಿಗೆ ಬಂದಿರುವುದು ನನ್ನ ಪ್ರಾರ್ಥನೆಯಿಂದ. ನನ್ನನ್ನು ಅನುಗ್ರಹಿಸುವುದಕ್ಕೆ.”
“ಒಂದು ನಿಜ ಇನ್ನೊಂದು ಸುಳ್ಳು.”
ದೇವಿಯು ಅದನ್ನು ಅರ್ಥಮಾಡಿಕೊಳ್ಳಲಾರದೆ ಕೈಯಲ್ಲಿದ್ದ ಲೀಲಾಕಮಲದಿಂದ ಗಂಡನ ಮುಖಪದ್ಮವನ್ನು ನೇವರಿಸುತ್ತಾ ಕೇಳಿದಳು: “ಹಾಗೆಂದರೆ ?”
ನಹುಷನು ಆ ಲೀಲಾಕಮಲದ ಸೋಂಕನ್ನು ಅನುಭವಿಸಿಯೋ ಎಂಬಂತೆ ಕಣ್ಣನ್ನು ಅರೆಮುಚ್ಚಿ ಅದನ್ನು ತಣ್ಣಗೆ ನಿವಾರಿಸುತ್ತ ಕೊಂಕುದನಿಯಲ್ಲಿ ಹೇಳಿದನು, “ನಿನ್ನ ಪ್ರಾರ್ಥನೆಯಿಂದ ಬಂದಿದ್ದೇನೆ ನಿಜ. ಅದರೆ, ಬಂದಿರುವುದು ನಿನ್ನನ್ನು ಅನುಗ್ರಹಿಸುವುದಕ್ಕಲ್ಲ, ನಿನ್ನಿಂದ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕೆ.”