ಪುಟ:ಅನ್ನಪೂರ್ಣಾ.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬದುಕುವ ಬಯಕೆ

ರಾಜ ನಿಮಗೆ ಗೊತ್ತೆ ? ಇಲ್ಲ ? ಆತ ನನ್ನ ಸ್ನೇಹಿತ. ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾ ದಿಸಿ ಬದುಕುವ ಹಟವಿಲ್ಲ. ಹಾಗೆ೦ದೇ,ತಕ್ಕಮಟ್ಟಿಗೆ ಸ೦ಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ !

ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ ಓದಿ ನೋಡುತ್ತಿರಾ? ನಿಮಗೆ ರುಚಿಸಬಹುದೋ ಇಲ್ಲವೋ... ಆದರೂ.............. ..

ಸಾಕಿಷ್ಟೆ ಪೀಠಿಕೆ, ಇಗೋ ಕತೆ:

ಮತ್ತೆ ನೀಲಿ ಹಸುರು ಕೆಂಪು ಉರಿಯುವ ಬತ್ತಿ, ನಕ್ಷತ್ರಕಡ್ಡಿ, ಪಟಾಕಿ ಹುಡುಗರ ಧಾಂದಲೆಯೇ ಧಾಂದಲೆ. ನಮ್ಮ ಬೀದಿಯಲ್ಲೆಲ್ಲಾ ಅವರದೇ ರಾಜ್ಯ. ಹಗಲೂ-ರಾತ್ರಿಯೂ !

ನಮ್ಮ ಒಬ್ಬಳೇ ಹುಡುಗಿ ಜಯಾಗೆ ಆ ಖಿಲಾಡಿಗಳ ಭೀತಿ ಎಳ್ಳಿನಷ್ಟೂ ಇಲ್ಲ. ಕತ್ತಲಾಗಿದೆ. ನಾನು ಕರೆದೆ, ನಮ್ಮಾಕೆ ಕರೆದಳು. ಆದರೆ ಜತೆ ಗಾರರನ್ನು ಬಿಟ್ಟು ಬರಲೊಲ್ಲಳು ಪೋಕರಿ.

"ಹೋಗಲಿ ಬಿಡೀ೦ದ್ರೆ. ಒ೦ದೆರಡು ದಿನ...ಓಡಾಡಲಿ ” ಎ೦ದು ನಮ್ಮಾಕೆ ಮಗಳ ಪರವಾಗಿ ವಹಿಸುತ್ತಾಳೆ.

ನಾವಿಬ್ಬರೂ ಹೊಸ್ತಿಲಹೊರಗೆ ಭುಜಕ್ಕೆ ಭುಜತಾಗಿಸಿ ನಿ೦ತು, ಬಣ್ಣ- ಬೆಳಕಿನ ಆ ರಾಜ್ಯದಲ್ಲಿ ಮೈಮರೆಯುತ್ತಿದ್ದೇವೆ.

ಎದುರು ಭಾಗದಲ್ಲೆ ಕವಲೊಡೆಯುವ ಗಲ್ಲಿಯ ಮೊದಲ ಮನೆಯತ್ತ ನನ್ನ ದೃಷ್ಟಿ ಹರಿಯುತ್ತಿದೆ-ಎ೦ದಿನ೦ತೆ. ನನ್ನಾಕೆಯೂ ಆ ದೃಷ್ಟಿಯನ್ನು ಹಿ೦ಬಾಲಿಸುತ್ತಿದ್ದಾಳೆ-ಎ೦ದಿನ೦ತೆ.