ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಬಲಾ ಸಚ್ಚರಿತ್ರ ರತ್ನ ಮಾಲೆ. ಬ್ರಾಹ್ಮಣರಿಗೆ ದಾನವನ್ನು ಮಾಡುವುದು ಮಾತ್ರವಲ್ಲದೆ, ಶೂದ್ರರಿಗೂ, ಚಂಡಾಲ ರಿಗೂ, ಪಶುಪಕ್ಷಿಗಳಿಗೂ, ಈಕೆಯು ಸರ್ವದಾ ಹಿತಪ್ರಡೆಯಾಗಿದ್ದಳು. ಮೃತ ರಾದ ಪುತ್ರಾದಿಗಳ ನೆನಪು ಬಂದು ವ್ಯಸನವುಂಟಾದಾಗ “ ಸತ್ತು ಹೋದ ಪುತ್ರ ನೊಬ್ಬನಲ್ಲದೆ ನಿನ್ನ ದುಃಖಕ್ಕೂ, ಉದ್ವೇಗಕ್ಕೂ, ಪ್ರೇಮಕ್ಕೂ ಪಾತ್ರವಾದ ಸುತ ಸಂಘವು ಈ ವಿಶ್ವದಲ್ಲಿ ಅಸಂಖ್ಯವಾಗಿದೆ. ಈ ಜಗತ್ತಿನಲ್ಲಿ ಎಷ್ಟು ಜನರ ದುಃಖ ವನ್ನು ನಿವಾರಿಸುವೆಯೋ, ಎಷ್ಟು ಜನರನ್ನು ಸುಖಿಗಳನ್ನಾಗಿ ಮಾಡುವೆಯೋ, ಎಷ್ಟು ಜನರನ್ನು ಲಾಲಿಸುವೆಯೋ, ಎಷ್ಟು ಜನರನ್ನು ಪಾಲಿಸುವೆಯೋ, ಅವರೆಲ್ಲರೂ ನಿನಗೆ ಮಕ್ಕಳೇ ! ಆದ್ದರಿಂದ ನೀನು ವಕ್ಷ್ಯವಿಷಯಿಕ ದುಃಖವನ್ನು ಬಿಡು. ಹೀಗೆ ಮಾಡಿದರೆ ದುಃಖಿತರ ದುಃಖವನ್ನು ಹಂಚಿಕೊಳ್ಳುವುದಕ್ಕೂ, ಸುಖಿಗಳ ಸೌಖ್ಯವನ್ನು ವೃದ್ಧಿ ಪಡಿಸುವುದಕ್ಕೂ ನಿನಗೆ ಅವಕಾಶ ದೊರೆವುದು,” ಎಂದು ತನಗೆ ತಾನೇ ಹೇಳಿಕೊಂಡು ಇತರರ ದುಃಖವನ್ನು ಪರಿಹರಿಸುವುದರ ಮೂಲಕ ತನ್ನ ದುಃಖವನ್ನು ಮರೆಯುತಲಿದ್ದಳು. ಅನೇಕ ಅನ್ನಸತ್ರಗಳನ್ನು ಸ್ಥಾಪಿಸಿ ದುದು ಮಾತ್ರವಲ್ಲದೆ ಪ್ರತಿದಿನವೂ ,ದೀನರಾದ ಸಕಲ ಜಾತೀಯರಿಗೂ ಅನ್ನದಾನ ವನ್ನು ಮಾಡುತಲಿದ್ದಳು. ಒಕ್ಕಲಿಗರು ತಮ್ಮ ಹೊಲಗಳ ಮೇಲೆ ಹಕ್ಕಿಗಳು ಬಾರದಂತೆ ಕವಣಿ ಕಲ್ಲುಗಳನ್ನು ಬೀಸುವರೆಂದು ತಿಳಿದು, ಪಕ್ಷಿಗಳ ಮೇಲೆ ಕರು ಣಿಸಿ ಧಾನ್ಯವು ಚನ್ನಾಗಿ ಬಲಿತಿರುವ ಹೊಲಗಳನ್ನು ಸ್ವಂತವಾಗಿ ಕೊಂಡು ಕೊಂಡು ಅವುಗಳಿಗೆ ಬಿಟ್ಟು ಕೊಡುತಲಿದ್ದಳು. ಒಕ್ಕಲಿಗರು ಉಳುವಾಗ ತಮ್ಮ ಎತ್ತುಗಳನ್ನು ಬಹಳ ಬಾಧಿಸುವರೆಂದು ಅವುಗಳ ಮೇಲೆ ಕನಿಕರವುಳ್ಳವಳಾಗಿ ಉಳುವ ನೇಗಿಲುಗಳನ್ನು ನಿಲ್ಲಿಸಿ ಎತ್ತುಗಳಿಗೆ ಹುಲ್ಲು ನೀರನ್ನು ಕೊಡುವಂತೆ ಸೇವಕರನ್ನು ನಿಯಮಿಸಿದಳು, ಮಾಲೀರಾಯನು ಗತಿಸುವಾಗ ನಾಲ್ಕು ಕೋಟ ರೂಪಾಯಿಗಳು ಭಂಡಾರದಲ್ಲಿತ್ತು. ಇದಲ್ಲದೆ ಅಹಲ್ಯಾಬಾಯಿಯ ಸ್ವಂತಖರ್ಚಿಗೆ ನಾಲ್ಕು ಲಕ್ಷ ರೂಪಾಯಿಗಳ ಆದಾಯವುಳ್ಳ ಅಗ್ರಹಾರವು ಬೇರೆ ಇತ್ತು. ಈ ದ್ರವ್ಯವನ್ನೆಲ್ಲ ಅಹಲ್ಯಾಬಾಯಿಯು ಧರ್ಮಕಾರ್ಯಗಳಿಗೆ ವೆಚ್ಚ ಮಾಡುತಲಿದ್ದಳು. “ಆತ್ಮ' ಶಬ್ದ ವನ್ನು ತ್ಯಜಿಸಿ, 'ವಿಶ್ವ' ಶಬ್ದ ವನ್ನು ಧರಿಸಿ, ಸ್ವಕುಟುಂಬವನ್ನು ಮರೆತು, ವಿಶ್ವವನ್ನೇ ಕುಟುಂಬವಾಗೆಣಿಸಿ, ಸ್ವಬಾಲಕರಲ್ಲಿರುವ ಮಮತೆಯನ್ನು ಕಡಮೆ ಮಾಡಿ, ವಿಶ್ವದಲ್ಲಿರುವ ಸಮಸ್ತ ಪ್ರಾಣಿಕೋಟಿಗಳನ್ನು ತನ್ನ ಬಾಲಕರೆಂ ದೆಣಿಸಿ, ಆತ್ಮ ವಿಷಯಕ ದುಃಖಕ್ಕೆ ಅಳದೆ ವಿಶ್ವವಿಷಯ ದುಃಖಕ್ಕೆ ಅಶ್ರು ಬಿಂದು ಗಳನ್ನು ಸುರಿಸಿ, ಜಗತ್ತಿನಿಂದ ತನಗೆ ಉಂಟಾಗುವ ಮಾನಾವಮಾನಗಳನ್ನು ಗಣನೆಗೆ ತಾರದೆ, ಅದರ ಹಿತಾರ್ಥವಾಗಿ ಜನ್ಮವನ್ನು ವ್ಯಯಮಾಡುವ ವಿಶ್ವಕು ಟುಂಬಿಗಳಾದ ಮಹಾತ್ಮರಲ್ಲಿ ಒಬ್ಬಳಾದ ಅಹಲ್ಯಾಬಾಯಿಯ ನಾಮವನ್ನು ಸ್ಮರಿಸಿದ ಮಾತ್ರದಿಂದ ಸರ್ವಪಾಪಗಳೂ ನಾಶವಾಗುವುದೆಂದು ಮಹಾರಾಷ್ಟರು ಎಣಿಸುತ್ತಾರೆ.