ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣೀಗರೀ ಲಕ್ಷ್ಮೀಬಾಯಿ. ೫೧ ಕೊಟ್ಟರೆ, ನಾನು ಸುಖವಾಗಿ ಪ್ರಾಣವನ್ನು ಬಿಡುವೆನು,” ಎಂದು ನುಡಿದಳು. ತನ್ನ ಪ್ರಿಯ ಸತಿಯ ಬಾಯಿಯಿಂದ ಹೊರಟ ಈ ನಿರಾಶಾವಚನಗಳನ್ನು ಕೇಳಿ, ರಾಜರಾಜವರ್ಮನು ಅತ್ಯಂತ ದುಃಖಿತನಾಗಿ, ನೇತ್ರಗಳಿಂದ ಸುರಿಯುವ ವಾರಿಧಾರೆಯಿಂದ ಸ್ವಲ್ಪ ಹೊತ್ತು ಮಾತನಾಡಲಾರದೆ ಸುಮ್ಮನಿದ್ದು ಅನಂತರ, “ ನಾನು ನಿನ್ನ ಅಭೀಷ್ಟವನ್ನು ನೆರವೇರಿಸುವೆನು” ಎಂದನು. ಆಮೇಲೆ ರಾಣಿಯು ತಂಗಿಯಾದ ಪಾರ್ವತೀಬಾಯಿಯನ್ನಿಕ್ಷಿಸಿ, “ ತಂಗೀ ಪಾರ್ವತೀ ! ನೀನು ಬಲು ಎಚ್ಚರದಿಂದ ರಾಜ್ಯವನ್ನು ಪಾಲಿಸಬೇಕು. ಈ ಮಕ್ಕಳನ್ನು ಚೆನ್ನಾಗಿ ಸಂರಕ್ಷಿಸು. ರಾಮವರ್ಮರಾಜನು ಯುಕ್ತವಯಸ್ಕನಾದೊಡನೆಯೇ ಆತನ ರಾಜ್ಯವನ್ನು ಆತನಿಗೆ ಕೊಟ್ಟು ಕೃತಾರ್ಥಳಾಗು. ನಾನಾದರೋ ಹೊರಟು ಹೋಗುವೆನು, ನನಗಾಗಿ ದುಃಖಿಸಬೇಡ, ” ಎಂದಳು, ಈ ಪ್ರಕಾರವಾಗಿ ಅಕ್ಕನಾದ ಲಕ್ಷ್ಮೀಬಾಯಿಯು ಅಂತ್ಯಕಾಲದಲ್ಲಿ ಉಪದೇಶವನ್ನು ಮಾಡಲು, ಆ ಕೋಮಲಾಂತಃಕರಣೆಯಾದ, ಹದಿನೇಳು ವರುಷದ ಅಬಲೆಯು ಶೋಕಾತಿ ಶಯದಿಂದ, ಗದ್ದ ದಕಂಠಯಾಗಿ, “ಅಕ್ಕಾ, ನೀನು ಹೇಳಿದಂತೆಯೇ ನಾನು ಮಾಡುವೆನು, ನಿನ್ನಾಜ್ಞೆಯಂತೆಯೇ ನಡೆದುಕೊಳ್ಳು ವೆನು. ನೀನು ಮಾತ್ರ ನನ್ನನ್ನು ಬಿಟ್ಟು ಹೋಗುವೆಯಾ !” ಎಂದು ರೋದಿಸಿದಳು. ಆಗ ಅಲ್ಲಿದ್ದವ ರೆಲ್ಲ ರೂ ದುಃಖಿಸಿದರು. ಈ ಪ್ರಸಂಗವೂ ನಡೆದ ಎರಡು ದಿವಸಗಳ ಅನಂತರ ಲಕ್ಷ್ಮಿಬಾಯಿಯು ನಶ್ವರ ಸುಖವನ್ನು ಬಿಟ್ಟು ಶಾಶ್ವತವಾದ ಸುಖವನ್ನು ಅನುಭವಿಸಲು ಹೊರಟು ಹೋದಳು. ಮಲಬಾರುದೇಶವೆಲ್ಲ ದುಃಖ ಸಮುದ್ರದಲ್ಲಿ ಮುಳುಗಿತು, ಪ್ರತಿ ಗೃಹದಲ್ಲಿಯೂ ತಾಯಿಗಾಗಿರೋದಿಸುವಂತೆ ರೋದಿಸುತಲಿದ್ದರು. ರಾಣಿ ಲಕ್ಷ್ಮೀಬಾಯಿಯು ನಾಲ್ಕು ವರ್ಷಗಳು ಮಾತ್ರವೇ ರಾಜ್ಯವನ್ನು ಪಾಲಿಸದರೂ, ಈಕೆಯ ಕಾಲದಲ್ಲಿ ಪ್ರಜೆಗಳು ಅನುಭವಿಸಿದ ಸೌಖ್ಯವನ್ನು ಹಿಂದೆ ಯಾವ ರಾಜನ ಅಥವಾ ರಾಣಿಯ ಕಾಲದಲ್ಲಿಯೂ ಅನುಭವಿಸಲಿಲ್ಲ. ಈಕೆಯು ಪ್ರಜೆಗಳನ್ನು ತನ್ನ ದೇಹಕ್ಕಿಂತಲೂ ಹೆಚ್ಚಾಗಿ ಕಾಪಾಡಿದಳು.