ಮೈತೊಳಕೊಂಡರು. ಹಡಪ ತುಂಬಿ, ಕುದುರೆಯ ಮೇಲೆ ಹೇರಿದರು. ಕೋಮಟಿಗನು ಐದೂ ಬೆರಳಿಗೆ ಐದು ಉಂಗುರ ಹಾಕಿದನು. ಅವನು ಕೈ ಬೀಸುವಾಗ ಒಂದು ಉಂಗುರ ಬಿತ್ತು ಕೆಳಗೆ. ಇಕ್ಯಾ ಆ ಉಂಗುರವನ್ನು ಮಣ್ಣಿನಿಂದ ಮುಚ್ಚಿಟ್ಟನು. “ಏನೋ ಇಕ್ಯಾ ಮುಚ್ಚಿಟ್ಟದ್ದು” ಎಂದು ಕೇಳಿದರೆ, “ಏನೋ ಕೆಂಪು ಕಾಣಿಸಿತು. ಮುಚ್ಚಿಬಿಟ್ಟೆ” ಎಂದನು. “ಹಾದಿಯಲ್ಲಿ ಏನಾದರೂ ಬಿದ್ದರೆ ಅದನ್ನು ತೆಗೆದುಕೊಂಡು ಬರಬೇಕು” ಎಂದು ಕೋಮಟಿಗನು ಅವನಿಗೆ ಎಚ್ಚರಿಕೆಕೊಟ್ಟನು.
ಆ ಬಳಿಕ ಹಾದಿಯಲ್ಲಿ ಬಿದ್ದಿದ್ದನ್ನೆಲ್ಲ ಎತ್ತಿ ಹಡಪದಲ್ಲಿ ತುಂಬಿದನು. ನುಣ್ಣಗಿನ ಕಲ್ಲು ಹರಳುಗಳನ್ನೆಲ್ಲ ಹಡಪದಲ್ಲಿ ಹಾಕಿಟ್ಟನು.
“ಬಹಳ ದಿನಗಳಾದ ಬಳಿಕ ಮಾವನ ಮನೆಗೆ ಬಂದಿರುವಿರಿ. ಒಮ್ಮೆಲೆ ಮಾವನ ಮನೆಗೆ ಹೋಗಬೇಡಿರಿ. ನಾ ಹೇಳಿದಂತೆ ಈ ಗುಡಿಯಲ್ಲಿ ಕುಳಿತುಕೊಳ್ಳಿರಿ. ನಿಮ್ಮ ಸೂಟುಬೂಟು ನನಗೆ ಕೊಡಿರಿ. ನಾ ಹೋಗಿ ನೀವು ಬಂದ ಸಮಾಚಾರ ಹೇಳುತ್ತೇನೆ. ಊದಿಸುತ್ತ ಬಾರಿಸುತ್ತ ಬಂದು, ಅಳಿಯನನ್ನು ಕರೆದೊಯ್ದು ಮನೆ ಹೊಗಿಸಿ ಕೊಳ್ಳಲಿ” ಎಂದು ಇಕ್ಯಾ ಯುಕ್ತಿ ಹೇಳಿದನು.
ಮಾಲಕನ ಸೂಟುಬೂಟು ತಾನು ಹಾಕಿಕೊಂಡು, ತನ್ನ ಬಟ್ಟೆಗಳನ್ನು ಮಾಲಕನಿಗೆ ಕೊಟ್ಟು ಕೋಮಟಿಗನ ಮಾವನ ಮನೆಗೆ ಹೋಗಿ ಅಳಿಯನ ಸಮಾಚಾರ ಹೇಳಿದನು. ತಾನು ಅಳಿಯನ ಗೆಳೆಯನೆಂದು ತಿಳಿಸಿದನು -
“ನಿಮ್ಮ ಅಳಿಯನಿಗೆ ಹುಚ್ಚು ಹಿಡಿದಿದೆ. ಹನುಮಂತದೇವರ ಗುಡಿಯ ಕಟ್ಟೆಯ ಮೇಲೆ ಕುಳಿತಿದ್ದಾನೆ.” ಎಂಬ ಸಮಾಚಾರ ಕೇಳಿ, ಅತ್ತಮಾವಂದಿರು ಚಿಂತಿಸುತ್ತ ಬಂದು ನೋಡಿದರೆ - ಅಳಿಯನು ಹರಿದ ಹಾಗೂ ಮಾಸಿದ ಬಟ್ಟೆ ಹಾಕಿಕೊಂಡಿದ್ದಾನೆ. ಅವನನ್ನು ಒತ್ತಾಯಮಾಡಿ ಮನೆಗೆ ಕರಕೊಂಡು ಹೋದರು.
ಇಕ್ಯಾ ಅಡಿಗೆ ಮನೆಗೆ ಹೋಗಿ ಹೇಳಿದನು -
“ನಿಮ್ಮ ಅಳಿಯ ನವಣಕ್ಕಿಯ ಬೋನ, ಮೂರುವರ್ಷದ ಹುಣಿಸೆ ಹಣ್ಣಿನ ಸಾರು ಮಾತ್ರ ಉಣ್ಣುತ್ತಾನೆ. ಮತ್ತೇನೂ ಉಣ್ಣುವುದಿಲ್ಲ.”
“ಈಗಲಾದರೂ ನನ್ನ ಬಟ್ಟೆ ಕೊಡೋ ಇಕ್ಯಾ” ಎಂದು ಕೋಮಟಿಗ ಕೇಳಿದರೆ “ನಾಳೆ ಮುಂಜಾನೆ ಹೊತ್ತರಳಿ ಕೊಡತೀನಿ. ಎಂದಾರೆ ಬಟ್ಟೆ ಕಂಡಿದ್ಯೋ ಇಲ್ಲೋ ?” ಎಂದನು ಇಕ್ಯಾ.
“ಬಯಲುಕಡೆಗೆ ಹೋಗಬೇಕು ನಡೆಯೋ ಇಕ್ಕಾ” ಎಂದು ರಾತ್ರಿಯಲ್ಲಿ ಕೋಮಟಿಗ ಕೇಳಿದನು.