ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೫

ಯಾರಿಗೆ ಕೊಡಬೇಕು ಕನ್ಯೆ

ಹೀಂಗ ಒಂದು ಊರಿತ್ತು. ಆ ಊರಲ್ಲಿ ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಒಬ್ಬಳೇ ಮಗಳು. ಬಹಳ ಚೆಲುವೆ; ಕಡ್ಡಿಯಿಂದ ಕೊರೆದಂತೆ ರೂಪು; ಮೈಬಣ್ಣ ಬಂಗಾರದ್ದು; ಏನು ಆ ಮೂಗು ಸಂಪಿಗೆ ತೆನೆ; ಏನು ಆ ಹಲ್ಲು ದಾಳಿಂಬರ ಬೀಜ; ಆಕೆಯನ್ನು ಯಾರು ಬೇಡವೆಂದಾರು? ಆಕೆಗಿದ್ದ ಮೂವರೂ ಸೋದರ ಮಾವಂದಿರು ಕೇಳುತ್ತಿದ್ದರು—ಆಕೆ ನನಗೆ ಬೇಕು, ನನಗೆ ಬೇಕು ಎಂದು.

ಅಕ್ಕನಿಗೆ ಇದ್ದವಳು ಒಬ್ಬಳೇ ಮಗಳು. ಕೇಳುವವರು ಮೂವರು ತಮ್ಮಂದಿರು. ಯಾರಿಗೆ ಕೊಡಬೇಕು?

ಎಲ್ಲರೂ ಒಳ್ಳೆಯವರೇ ಆಗಿದ್ದರು; ಚಲುವರೂ ಆಗಿದ್ದರು. ಒಬ್ಬನಿಗೆ ಕೊಟ್ಟರೆ ಇಬ್ಬರು ಸಿಟ್ಟಾಗುತ್ತಾರೆ. ಏನು ಮಾಡುವುದು ಯುಕ್ತಿ?

ಮಾವರೂ ತಮ್ಮಂದಿರನ್ನು ಕರೆದು ಅಕ್ಕನು, ತಲೆಗೆ ನೂರುನೂರು ರೂಪಾಯಿ ಕೊಟ್ಟಳು. "ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಿರಿ. ಯಾರು ತೀವ್ರವಾಗಿ ಹೆಚ್ಚು ಗಳಿಸಿಕೊಂಡು ಬರುವಿರೋ ಅವರಿಗೆ ನನ್ನ ಮಗಳನ್ನು ಕೊಡುವೆನು" ಎಂದು ಹೇಳಿದಳು.

ಆ ಮಾತಿಗೆ ಮೂವರೂ ಒಪ್ಪಿ ದೇಶಾಂತರಕ್ಕೆ ನಡೆದರು. ಕೆಲವು ದಿನಗಳಲ್ಲಿ ಅವರು ಮೈಸೂರಿನಂಥ ಪಟ್ಟಣಕ್ಕೆ ಹೋದರು. ಊರತುಂಬ ದೊಡ್ಡದೊಡ್ಡ ಅಂಗಡಿಗಳು! ಪ್ರತಿಯೊಂದು ಅಂಗಡಿಯಲ್ಲಿ ತರತರದ ಬದುಕು! ನೋಡುತ್ತ ನೋಡುತ್ತ ಒಂದು ಅಂಗಡಿಯನ್ನು ಪ್ರವೇಶಿಸಿದರು. ಅಲ್ಲೊಂದು ಕನ್ನಡಿಯಿತ್ತು. ಅದರಲ್ಲಿ ನೋಡಿದರೆ ಜಗತ್ತೆಲ್ಲ ಕಣ್ಣಮುಂದೆ ಬರುತ್ತಿತ್ತು. ಹಿರಿಯಣ್ಣನು ತನ್ನ ಬಳಿಯಲ್ಲಿದ್ದ ನೂರು ರೂಪಾಯಿಕೊಟ್ಟು ಅದನ್ನು ಕೊಂಡುಕೊಂಡನು.

ಇನ್ನೊಂದು ಅಂಗಡಿಂಯಲ್ಲಿ ವಿಚಿತ್ರವಾದ ತೊಟ್ಟೆಲು ಕಂಡರು. ಅದರಲ್ಲಿ ಕುಳಿತು ಮನಸ್ಸು ಹರಿದಲ್ಲಿ ಹೋಗಲು ಬರುವಂತಿತ್ತು. ನಡುವಿನಣ್ಣನು ಅದನ್ನು ನೂರು ರೂಪಾಯಿಗಳಿಗೆ ಖರೀದಿಮಾಡಿದನು.