ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೯

ಯುಕ್ತಿಗೊಂದು ಪ್ರತಿಯಕ್ತಿ

ಅತ್ತೆಯನ್ನು ಮಾತನಾಡಿಸಿ ಬರಬೇಕೆಂದು ಅಳಿಯನು ಅತ್ತೆಯೂರಿಗೆ ಹೋದನು. ಆಕೆ ಹೆಣ್ಣು ಕೊಟ್ಟ ಅತ್ತೆ ಮಾತ್ರ ಆಗಿರದೆ, ಸೋದರತ್ತೆಯೂ ಆಗಿದ್ದಳು. ಚಿಕ್ಕಂದಿನಿಂದಲೂ ಅಳಿಯನಿಗೆ ತಿನ್ನಿಸಿ ಉಣ್ಣಿಸಿದವಳಾಗಿದ್ದಳು. ಆದರೂ ಆಕೆಯ ಕೈಬಿಗಿತ; ಜೀನಳೇ ಆಗಿದ್ದಳು.

ಅಳಿಯಬಂದನೆಂದು ಅಕ್ಕರೆಯಿಂದ ಅತ್ತೆಯು, ಆತನ ಊಟಕ್ಕೆ ಪಾಯಸ ಮಾಡಿದಳು. ತುಪ್ಪದ ಪಾತ್ರೆ ನೋಡಿದರೆ ಅದರಲ್ಲಿ ತುಪ್ಪ ಹೆರತಿತ್ತು. ಅದನ್ನೆಲ್ಲ ಕರಗಿಸಿ, ಪಾತ್ರೆ ಬಗ್ಗಿಸಿ ಸುರುವಿದರೆ ಪಾತ್ರೆಯೊಳಗಿನ ತುಪ್ಪವೆಲ್ಲ ಗಂಗಾಳದಲ್ಲಿ ಬಿದ್ದು ಬಿಡುವುದಲ್ಲ! ಪಾತ್ರೆಯಿಂದ ತುಪ್ಪವನ್ನು ಸುರುವಿದಂತೆಯೂ ಆಗಿರಬೇಕು; ತುಪ್ಪವೂ ಕಡಿಮೆಬಿದ್ದಿರಬೇಕು - ಎನ್ನುವುದಕ್ಕೆ ಒಂದು ಯುಕ್ತಿ ತೆಗೆದಳು. ಏನಂದರೆ - ಸಣ್ಣಗಿನ ಸೂಜಿಯನ್ನು ಕಾಸಿ, ಹೆತ್ತ ತುಪ್ಪಿನಲ್ಲಿ ಚುಚ್ಚಿ ಪಾತ್ರೆ ಬಗ್ಗಿಸಿದರೆ, ಸೂಜಿಯಿಂದ ಕರಗಿದಷ್ಟೇ ಸಣ್ಣಗಿನ ಧಾರೆಯಾಗಿ ತಾಬಾಣದಲ್ಲಿ ಸುರಿಯುವದು. ಅದಕ್ಕಾಗಿ ಸೂಜಿಯನ್ನು ಒಲೆಯ ಬಿಸಿಬೂದಿಂಯಲ್ಲಿ ತುರುಕಿದಳು.

"ಒಳಗೆ ನೋಡುತ್ತಿರಪ್ಪ ಬೆಕ್ಕುಗಿಕ್ಕು. ನಾನೊಂದು ಕೊಡ ಸಿಹಿ ನೀರು ಎಳೆದುಕೊಂಡು ಬರುವೆನು" ಎಂದು ಹೇಳಿ ಅತ್ತೆ ಕೊಡ ತೆಗೆದುಕೊಂಡು ಬಾವಿಗೆ ಹೋದಳು.

ಚಿಕ್ಕಂದಿನಿಂದಲೂ ಪರಿಚಯದ ಮನೆಯೇ ಆಗಿದ್ದರಿಂದ, ಅತ್ತೆ ತನಗಾಗಿ ಏನೇನು ಅಡಿಗೆ ಮಾಡಿದ್ದಾಳೆ, ನೋಡಬೇಕೆಂದು ಅಡಿಗೆ ಮನೆಂಹನ್ನು ಹೊಕ್ಕು ನೋಡಿದರೆ ಪಾಯಸ ಸಿದ್ಧವಾಗಿದೆ. ತುಪ್ಪದ ಪಾತ್ರೆ ಹೆತ್ತ ತುಪ್ಪದಿಂದ ತುಂಬಿ ಒಲೆಯಿಂದ ತುಸು ದೂರ ಇದೆ. ಒಲೆಯಲ್ಲಿ ಒತ್ತಿದ ಸೂಜಿಯ ಅರ್ಧಭಾಗವು ಹೊರಗೆ ಕಾಣುತ್ತಿತ್ತು. ಅದನ್ನೆಲ್ಲ ಕಂಡು ಅಳಿಯನಿಗೆ ಸಂಶಯವೇ ಬಂತು. ಅತ್ತೆ ಸಾಕಷ್ಟು ಜಿಪುಣೆಯೆನ್ನುವುದನ್ನೂ ಆತನು ಎಂದೋ ಅರಿತಿದ್ದನು. ತುಪ್ಪದ ಪಾತ್ರೆಯನ್ನು ಒಂದರೆಕ್ಷಣ ಕಿಚ್ಚದ ಮೇಲಿಟ್ಟು ಕೆಳಭಾಗವು ಕರಗುವಂತೆ ಮಾಡಿ, ಅದನ್ನು ಮತ್ತೆ ಮೊದಲಿನ ಸ್ಥಳದಲ್ಲಿಯೇ ಇರಿಸಿ ಹೊರಗೆ ಬಂದು ಕುಳಿತನು.