ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೪

ಜನಪದ ಕಥೆಗಳು

ಕೊಂಡರಾಯಿತು” ಕುದುರೆಯವನಿಗೆ ಮತ್ತೆ ನಾಲ್ಕಾಣೆಕೊಟ್ಟು ಮೂರನೇ ಮಾತು ಕೇಳಿದನು.

“ಹೆಂಡತಿಯ ಮುಂದೆ ನಿಜ ಹೇಳಬಾರದು” ಇದೇ ಆತನು ಹೇಳಿಕೊಟ್ಟ ಮೂರನೇಮಾತು. ಸಮಗಾರನಿಗೆ ಸಂತೆಯಲ್ಲಿ ಮಾಡಬೇಕಾದ ಯಾವಕೆಲಸವೂ ಇರಲಿಲ್ಲ. ನೇರವಾಗಿ ಹಳ್ಳಕ್ಕೆ ಹೋಗಿ ಹೆಂಡತಿಕಟ್ಟಿಕೊಟ್ಟ ಎರಡು ರೊಟ್ಟಿಗಳನ್ನು ತಿಂದು, ಊರ ಚಾವಡಿ ಮುಂದಿನ ಕಟ್ಟೆಯಮೇಲೆ ಕುಳಿತುಕೊಂಡನು. ಅಷ್ಟರಲ್ಲಿ ಓಲೆಕಾರನು ಬ೦ದು - “ನಿನ್ನನ್ನು ಗೌಡರು ಕರೆಯುತ್ತಾರೆ” ಎನ್ನಲು ಸಮಗಾರನು ಗೌಡನ ಬಳಿಗೆ ಹೋದನು. ಗೌಡ ಹೇಳಿದನು ಆತನಿಗೆ - “ಇಗೋ, ಇಲ್ಲಿ ಯಾವ ಊರಿನವನೋ ಏನೋ, ಮಲಗಿಕೊಂಡಲ್ಲಿಯೇ ಸತ್ತಿದ್ದಾನೆ. ಆತನನ್ನು ಹೊತ್ತೊಯ್ದು ಹುಗಿದು ಬಾ, ಎರಡು ರೂಪಾಯಿ ಕೊಡುತ್ತೇನೆ.”

ಸಮಗಾರನಿಗೆನಿಸಿತು - ನಾಲ್ಕಾಣೆಗೆ ಕೊಂಡ ಒಂದು ಮಾತು ಎರಡು ರೂಪಾಯಿ ಗಳಿಸಿಕೊಡುತ್ತಿರುವಾಗ ಒಲ್ಲೆನೆನ್ನಬಾರದು. ಗೌಡನಿಂದ ಎರಡು ರೂಪಾಯಿ ಇಸಗೊಂಡು ಮಲಗಿದವನ ಬಳಿಗೆ ಹೋಗಿ, ಅವನನ್ನು ಎತ್ತಿ ಕುಳ್ಳಿರಿಸುವಷ್ಟರಲ್ಲಿ ಒಂದು ಹಮ್ಮಿಣಿಯೇ ಸಿಕ್ಕಿತು. ಅದನ್ನು ಭದ್ರವಾಗಿರಿಸಿಕೊಂಡು ಹೆಣವನ್ನು ಹೊತ್ತು ಹುಗಿದುಬಂದನು ಸಂತೆಗೆ.

ಜೀವ ಬೇಡಿದ್ದನ್ನು ಮೊದಲು ಕೊಂಡು ತಿಂದು, ಆ ಬಳಿಕ ಒಂದು ಕುದುರೆಯನ್ನು ಕೊಂಡು ಅದರ ಮೇಲೆ ಕುಳಿತುಕೊಂಡು ತನ್ನೂರ ಹಾದಿ ಹಿಡಿದನು. ದಾರಿ ನೋಡುತ್ತ ಕುಳಿತ ಹೆಂಡತಿಯು ದೂರದಿಂದಲೇ ಗಂಡನನ್ನು ಗುರುತಿಸಿ, “ಕುದುರೆ ಎಲ್ಲಿಂದ ತಂದಿ” ಎಂದು ಕೇಳಿದಳು. “ತಡೆ, ಹೇಳುತ್ತೇನೆ” ಎಂದು ಕುದುರೆ ಕಟ್ಟಿ ಹಾಕಿ ಒಳಗೆ ಹೋಗಿ ಹೆಂಡತಿಯ ಕೈಯಲ್ಲಿ ಹಮ್ಮೀಣಿಕೊಟ್ಟು ತೆಗೆದು ಇಡಲು ಹೇಳಿದನು.

“ಇದೆಲ್ಲಿ ಸಿಕ್ಕಿತು ?" ಹೆಂಡತಿಯ ಪ್ರಶ್ನೆ.

“ನೀನು ಕಟ್ಟಿಕೊಟ್ಟ ಎರಡು ರೊಟ್ಟಿಯಿಂದ ಹೊಟ್ಟೆತುಂಬಲಿಲ್ಲ. ಒಂದು ಎಕ್ಕೆಲೆ ಗಿಡದ ಬಳಿಗೆ ಹೋಗಿ ಅದರ ಹಾಲು ತೆಗೆದುಕೊಂಡು ಕುಳಿತಾಗ ಈ ಹಮ್ಮೀಣಿ ಕಾಣಿಸಿತು” ಎಂದು ಸುಳ್ಳುಸುಳ್ಳೇ ಹೇಳಿದನು. ಹೆ೦ಡತಿಯ ಮುಂದೆ ನಿಜ ಹೇಳಬಾರದು - ಎ೦ಬ ಮಾತು ಕೊಂಡಿದ್ದನಲ್ಲವೇ ?

ಹಮ್ಮೀಣಿಯ ಸಹಾಯದಿಂದ ಸಮಗಾರನು ಹೊಸಮನೆ ಕಟ್ಟಿಸಿದನು. ಎತ್ತುಗಳನ್ನು ಕೊಂಡನು. ಗಾಡಿ ಮಾಡಿಸಿದನು. ಹಯನಿಗೆ ಎಮ್ಮೆ ಕಟ್ಟಿದನು. ಹೆಂಡತಿಗೆ ಒಳ್ಳೊಳ್ಳೆಯ ಸೀರೆ ಕುಪ್ಪಸ ಕೊಟ್ಟನು. ಆಭರಣಗಳನ್ನು ತಂದನು.