ಮೂರು ಆಕಳ ಕರುಗಳು
ಮಾಗಿಯ ಕಾಲ. ಹಳ್ಳಿಯೊಳಗಿನ ಜನರೆಲ್ಲ ಹಗಲುಹೊತ್ತನ್ನು ಬಹುಶಃ ಹೊಲದಲ್ಲಿಯೇ ಕಳೆಯುವರು. ದನಗಳು ಸಹ ಅಡವಿಯಲ್ಲಿಯೇ ಉಳಿಯುವವು. ಹಿಂಡುವ ದನಗಳು ಮಾತ್ರ ಸಾಯಂಕಾಲಕ್ಕೆ ಮನೆಗೆ ಮರಳುವವು.
ಮಧ್ಯಾಹ್ನವಾಗಿದ್ದರೂ ಚಳಿ ಹಿಮ್ಮೆಟ್ಟಿದೆ. ಬಿಸಿಲು ಬೆಳದಿಂಗಳಾಗಿರುವಾಗ ಕಟ್ಟಿಹಾಕಿದ ಕರುಗಳನ್ನು, ತುಸು ಅಡ್ಡಾಡಿ ಬರಲೆಂದು ಕುಣಿಕೆ ಉಚ್ಚಿ ಬಿಡುವುದುಂಟು. ಹಾಗೆ ಹೊರಬಿದ್ದ ಮೂರು ಆಕಳ ಕರುಗಳು ಅಗಸೆಯ ಬಳಿಯಲ್ಲಿ ಕೂಡಿದವು. ಒಂದು ಕರು ಒಕ್ಕಲಿಗರದು; ಇನ್ನೊಂದು ಉಪಾಧ್ಯರದು; ಮೂರನೇದು ಗೌಳಿಗರದು.
ಮೂರೂ ಕರುಗಳು ಜೊತೆಗೂಡಿ ಅಗಸೆಯಿಂದ ಹೊರಬಿದ್ದವು. ಮುಂದೆ ಬಚ್ಚಲ ಮೋರೆಯ ನೀರು ಹೊರಬಿದ್ದು, ಹುದಿಲುಂಟುಮಾಡಿತ್ತು. ದಾರಿಹಿಡಿದು ಸಾಗುವವರು ಅದನ್ನು ದಾಟಬೇಕಾಗುತ್ತಿತ್ತು. ಎಲ್ಲಿಂದ ಹೇಗೆ ದಾಟಬೇಕು ಎಂದು ಯೋಚಿಸದೆ ಒಕ್ಕಲಿಗರ ಕರು ಬಾಲವನ್ನು ಎತ್ತರಿಸಿ ಟಣ್ಣನೆ ಜಿಗಿದು ಆಚೆಯ ಬದಿಯಲ್ಲಿ ನಿಂತಿತು. ಅದರಂತೆ ಜಿಗಿದು ಹೋಗುವ ಪ್ರಯತ್ನ ಮಾಡಿದರೂ ಉಪಾಧ್ಯರ ಕರುವಿನ ಹಿಂಗಾಲು ಕೆಸರು ತುಳಿದವು. ಇನ್ನುಳಿದದ್ದು ಗೌಳಿಗರ ಕರು. ಅದು ಜಿಗಿದು ಹೋಗುವ ವಿಚಾರವನ್ನೇ ಮಾಡಲಿಲ್ಲ. ಪಚಲ್ ಕಚಲ್ ಎಂದು ಹುದಿಲು ತುಳಿಯುತ್ತ ಅದನ್ನು ದಾಟಿಹೋಗಿ ಮುಂದಿನ ಕರುಗಳನ್ನು ಕೂಡಿಕೊಳ್ಳಲು ಧಾವಿಸಿತು.
ಅಷ್ಟರಲ್ಲಿ ಉಪಾಧ್ಯರ ಕರು ಕೇಳಿತು ಒಕ್ಕಲಿಗರ ಕರುವಿಗೆ—"ಏನೋ, ನೀನು ಕಾಲಿಗೆ ಕೆಸರು ಸೋಂಕದಂತೆ ಆ ಹುದಿಲು ಹರಿಯನ್ನು ಟಣ್ಣನೆ ಜಿಗಿದು ಬಂದೆಯಲ್ಲ! ಅಷ್ಟೊಂದು ಚಪಲತೆ ನಿನಗೆಲ್ಲಿಂದ ಬಂತು" ಎಂದು ಕೇಳಿತು.
ಒಕ್ಕಲಿಗರ ಕರು ಅಭಿಮಾನದಿಂದ ಹೇಳಿತು–"ನಮ್ಮವ್ವನಿಗಿರುವ ನಾಲ್ಕು ಮೊಲೆಗಳ ಹಾಲನ್ನೆಲ್ಲ ದಿನಾಲು ಎರಡೂ ಹೊತ್ತು ಕುಡಿಯುತ್ತೇನೆ. ಅದರಿಂದ ನನಗೆ ಅಷ್ಟೊಂದು ಕಸುವು ಬಂದಿದೆ."