ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೯

ಚೋಟಪ್ಪನ ಗೆಳೆಯರು

ಚೋಟಪ್ಪನೆಂಬುವನು ಹೆಸರಿಗೆ ತಕ್ಕಂತೆ ಚೋಟುದ್ದವಾಗಿಯೇ ಇದ್ದನು. ಅವನು ದಿನಾಲು ಎತ್ತುಗಳನ್ನು ಬಿಟ್ಟುಕೊಂಡು ಹೊಲಕ್ಕೆ ಹೋಗುವನು. ಅಲ್ಲಿ ಗಳೆ ಹೊಡೆಯುವ ಕೆಲಸ ಮುಗಿಸಿ ಸಂಜೆಗೆ ಮರಳಿ ಮನೆಗೆ ಬರುವನು.

ಒಂದು ದಿನ ಜೋಟಪ್ಪನು ಗಳೆ ಹೊಡೆಯುತ್ತಿರುವಾಗ ಮೋಡಮುಸುಕಿ ಮಳೆ ಬರುವ ಲಕ್ಷಣಗಳು ಕಾಣತೊಡಗಿದವು. ಚೋಟಪ್ಪನು ಅವಸರವಾಗಿ ಎತ್ತುಗಳ ಕೊರಳು ಬಿಡುವ ಹೊತ್ತಿಗೆ ಮಳೆ ಆರಂಭವಾಗಿಂಹೀ ಬಿಟ್ಟಿತು. ಅದರೊಡನೆ ಗಾಳಿಯೂ ಭರದಿಂದ ತೀಡತೊಡಗಿತು. ಸುರಕ್ಷಿತವಾಗಿ ಎಲ್ಲಿ ನಿಲ್ಲಬೇಕೆಂದು ಯೋಚಿಸಿ ಚೋಟಪ್ಪನು ನೀರಿನ ಬಿಂದಿಗೆಯನ್ನು ಬೋರಲು ಹಾಕಿ ನೀರು ಚೆಲ್ಲಿದನು. ಅದು ಬರಿದಾಗಲು ಅದರಲ್ಲಿ ಸೇರಿಕೊಂಡು, ಮಳೆಯ ಇರಸಲು ಸಹ ತಗುಲಬಾರದೆಂದು ಬಿಂದಿಗೆಯ ಮೇಲೆ ಮಗಿ ಸರಿಸಿಕೊಂಡನು.

ಮಳೆಯು ರಪರಪನೆ ಸುರಿಯ ತೊಡಗಿದ್ದು, ಸಂಜೆಗೂ ಬಿಡಲಿಲ್ಲ; ನಡುರಾತ್ರಿಗೂ ಬಿಡಲಿಲ್ಲ. ಬೆಳ್ಳಬೆಳತನಕ ಹೊಡೆಯಿತು. ಎಲ್ಲೆಲ್ಲಿಯೂ ಮಳೆಯ ನೀರು ನಿಂತು ತುಳುಕಾಡಿತು. ಮಳೆಯ ಲಕ್ಷಣವು ಕಡಿಮೆಯಾದುದನ್ನು ತಿಳಿದು ಚೋಟಪ್ಪನು ಮಗಿ ಉರುಳಿಸಿ ಬಿಂದಿಗೆಯೊಳಗಿಂದ ಕಡೆಗೆ ಬಂದನು. ಆದರೆ ಅವನ ಎತ್ತುಗಳು ಕಾಣಿಸಲಿಲ್ಲ. ಸುತ್ತಲೂ ನೋಡಿದನು. ಒಡ್ಡಿನ ಮೇಲೆ, ಒಡ್ಡಿನ ಬದಿಗೆ, ಗಿಡದ ಕೆಳಗೆ ಮರಡಿಯ ಹತ್ತಿರ ಎಲ್ಲಿಯೂ ಎತ್ತುಗಳು ಕಾಣಿಸಲಿಲ್ಲ. ಹುದಿಲಲ್ಲಿ ಹೆಜ್ಜೆಗಳು ಅಸ್ಪಷ್ಟವಾಗಿ ಮೂಡಿದ್ದವು. ಅವು ಎತ್ತುಗಳ ಹೆಜ್ಜೆ ಮಾತ್ರವಲ್ಲದೆ, ಅವುಗಳೊಂದಿಗೆ ಮನುಷ್ಯ ಹೆಜ್ಜೆಗಳೂ ಕಾಣಿಸಿದವು. ತನ್ನ ಎತ್ತುಗಳನ್ನು ಯಾರೋ ಕದ್ದೊಯ್ದಿದ್ದಾರೆಂದು ಜೋಟಪ್ಪನು ನಿರ್ಣಯಿಸಿದನು. ಆ ಹೆಜ್ಜೆಯ ಹೊಳಹು ಹಿಡಿದು ಎತ್ತುಗಳನ್ನು ಹುಡುಕುತ್ತ ಮುಂದೆ ಸಾಗಿದನು.

ಕೆಲವೊಂದು ದಾರಿ ನಡೆದ ಬಳಿಕ ಅಲ್ಲೊಂದು ಚೇಳು ಸಂಧಿಸಿತು. ಕೇಳಿತು - "ಜೋಟಪ್ಪಾ ಎಲ್ಲಿ ಹೊರಟಿರುವಿ?"

"ನನ್ನ ಎತ್ತುಗಳನ್ನು ಕಳ್ಳರು ಒಯ್ದಿದ್ದಾರೆ. ಅವುಗಳನ್ನು ಹುಡುಕಿಕೊಂಡು ತರಬೇಕಾಗಿದೆ, ಹೊರಟಿದ್ದೇನೆ."